ವಸುಧಾ | Feb 16, 2013
ಒಂದೆಲಗ ಅಥವಾ ಬ್ರಾಹ್ಮಿà ಅಥವಾ ಉರಗ ಎಂದು ಕರೆಯಲಾಗುವ ನೆಲದ ಮೇಲೆ ಹಬ್ಬಿ ಬೆಳೆಯುವ ಬಳ್ಳಿ ಉತ್ತಮ ಸ್ಮರಣಶಕ್ತಿ ವರ್ಧಕ ಔಷಧಿ. ನೀರಿರುವ ಪ್ರದೇಶದಲ್ಲಿ ಶೀಘ್ರ ಹಬ್ಬಿ ಬೆಳೆಯುವ ಒಂದೆಲಗದ ಎಲೆಗಳು ಚಟ್ನಿ ಮತ್ತು ತಂಬುಳಿಗಳಿಗೆಂದು, ತಲೆಗೆ ಹಚ್ಚುವ ಎಣ್ಣೆಗೆಂದು ಮನೆಮನೆಗಳಲ್ಲಿ ಉಪಯೋಗಿಸುವ ಮೂಲಿಕೆ.
. ಒಂದೆಲಗ ಅಥವಾ ಉರಗದ ಸೊಪ್ಪಿನ ರಸವನ್ನು (2 ಚಮಚದಷ್ಟು) 1 ಚಮಚ ಶುದ್ಧ ಜೇನು ಬೆರೆಸಿ ನಿತ್ಯವೂ ಮಕ್ಕಳಿಗೆ ನೀಡಿದರೆ ಮಕ್ಕಳ ಸ್ಮರಣಶಕ್ತಿ, ಬುದ್ಧಿಶಕ್ತಿ ಹೆಚ್ಚುತ್ತದೆ. ಮಾತ್ರವಲ್ಲ , ಇದು ರಕ್ತಹೀನತೆಯನ್ನೂ ನಿವಾರಿಸುತ್ತದೆ. ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಹೀಗೆ ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅರ್ಧ ಚಮಚದಿಂದ ನಾಲ್ಕು ಚಮಚದವರೆಗೆ ಜೇನಿನೊಂದಿಗೆ ನಿತ್ಯವೂ ನೀಡುವುದರಿಂದ ದೇಹ ಮತ್ತು ಮನಸ್ಸು ಎರಡರ ಆರೋಗ್ಯವೂ ವರ್ಧಿಸುತ್ತದೆ.
.ಮನಸ್ಸನ್ನು ಶಾಂತಗೊಳಿಸಲು, ಸ್ಥಿರಗೊಳಿಸಲು, ಏಕಾಗ್ರತೆ ಹೆಚ್ಚಿಸಲು ಹಾಗೂ ಸಾತ್ವಿಕತೆ ವರ್ಧಿಸಲು ಒಂದೆಲಗ ಸಹಕಾರಿ. ಆದ್ದರಿಂದ ಆಧ್ಯಾತ್ಮ ಸಾಧಕರೂ ಪ್ರಾಚೀನ ಕಾಲದಿಂದ ಬಳಸುತ್ತಿರುವ ಈ ಗಿಡಮೂಲಿಕೆಗೆ ದಿವ್ಯಾ, ಸರಸ್ವತೀ ಎಂಬ ಹೆಸರುಗಳೂ ಇವೆ.
ಒಂದು ಕಪ್ ಹಸುವಿನ ತುಪ್ಪಕ್ಕೆ ಅಷ್ಟೇ ಪ್ರಮಾಣದಲ್ಲಿ ಒಂದೆಲಗದ ಎಲೆಯ ರಸವನ್ನು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ನೀರಿನ ಅಂಶ ಆರಿಬರುತ್ತಲೇ "ಪಟಪಟ' ಸದ್ದು ನಿಂತು, ತುಪ್ಪ ಮತ್ತು ಒಂದೆಲಗದ ರಸದ ಘೃತಪಾಕವು ಉಂಟಾಗುತ್ತದೆ. ಈ ತುಪ್ಪದ ನಿತ್ಯಸೇವನೆ ಮನಸ್ಸಿನ ದುಗುಡ, ಆತಂಕ, ಖನ್ನತೆಗಳನ್ನು ನಿವಾರಿಸಿ ಮನಸ್ಸನ್ನು ಶಾಂತಗೊಳಿಸುವುದು. ಸ್ಮರಣಶಕ್ತಿ, ಬುದ್ಧಿಶಕ್ತಿ ಪ್ರಚೋದಕ. 1-2 ಚಮಚದಷ್ಟು ಈ ತುಪ್ಪವನ್ನು (ಮಕ್ಕಳ ಅಥವಾ ವಯಸ್ಕರ ವಯಸ್ಸಿಗೆ ತಕ್ಕಂತೆ) ಬಿಸಿ ಹಾಲಲ್ಲಿ ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಪರಿಣಾಮಕಾರಿ.
.ಮಕ್ಕಳಿಗೆ ಚಹಾ ಕಾಫಿಯ ಬದಲಾಗಿ, ಈ ರುಚಿಕರ ಪೇಯವನ್ನು ನೀಡಿದರೆ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಹಿತಕರ.
ಒಂದೆಲಗದ ಎಲೆಗಳನ್ನು ತೊಳೆದು, ನೆರಳಲ್ಲಿ ಒಣಗಿಸ ಬೇಕು. ಅಷ್ಟೇ ಪ್ರಮಾಣದ ಬಾದಾಮಿಯನ್ನು ಹುರಿದು ಇಡಬೇಕು. ಬಳಿಕ ಎರಡನ್ನೂ ಮಿಕ್ಸರ್‌ನಲ್ಲಿ ಪುಡಿಮಾಡಿ, ಸ್ವಲ್ಪ ಯಾಲಕ್ಕಿ ಹುಡಿ, ಶುದ್ಧ ಕೇಸರಿ ದಳಗಳನ್ನು ಬೆರೆಸಬೇಕು. ಈ ಪುಡಿಯನ್ನು 2 ಚಮಚದಷ್ಟು 1 ಕಪ್ ಹಾಲಿಗೆ ಬೆರೆಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರೆಸಿ ನೀಡಬೇಕು. ಕಾದಾರಿದ ಹಾಲು ಅಥವಾ ತಂಪಾದ ಹಾಲಿಗೆ ಈ ಪುಡಿಯನ್ನು ಬೆರೆಸುವುದಾದರೆ ಕಲ್ಲುಸಕ್ಕರೆ ಅಥವಾ ಬೆಲ್ಲದ ಬದಲು ತಾಜಾ ಜೇನುತುಪ್ಪ ಬೆರೆಸಬಹುದು.
ನಿತ್ಯ ಬೆಳಿಗ್ಗೆ ಈ ಪೇಯ ಬೆಳೆಯುವ ಮಕ್ಕಳಿಗೆ ನೀಡಿದರೆ ಉತ್ತಮ ಆರೋಗ್ಯವರ್ಧಕ ಪೇಯ.
.ನಿದ್ದೆಗೊಂದು ಗುಳಿಗೆ -ಒಂದೆಲಗದ ಕೊಡುಗೆ !
ಹಾಂ, ಆಧುನಿಕ ಜೀವನಶೈಲಿಯ ಒತ್ತಡ ಧಾವಂತಗಳು ನಿದ್ರಾಹೀನತೆಯನ್ನು ಹೆಚ್ಚಿಸಿವೆ. ಮನೆಯ ಅಂಗಳದ ಒಂದೆಲಗವನ್ನು ಉಪಯೋಗಿಸಿ ಗುಳಿಗೆ ತಯಾರಿಸಿ ಸೇವಿಸಿದರೆ ಸವಿನಿದ್ದೆ ಸಹಜವಾಗಿಯೇ ಉಂಟಾಗುತ್ತದೆ!
ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದರೊಂದಿಗೆ ಹುರಿದ ಗಸೆಗಸೆಯನ್ನು ಬೆರೆಸಬೇಕು, ಬಳಿಕ ಕೆಂಪು ಕಲ್ಲುಸಕ್ಕರೆಯ ಎಳೆಪಾಕ ಮಾಡಿ ಅದರಲ್ಲಿ ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಹಸುವಿನ ತುಪ್ಪ ಸ್ವಲ್ಪ ಸೇರಿಸಿ ಗಟ್ಟಿಯಾಗುತ್ತಲೇ ಒಲೆಯಿಂದ ಕೆಳಗಿಳಿಸಬೇಕು.
ಈ ಮಿಶ್ರಣವು ಆರಿದ ಬಳಿಕ ಗಜ್ಜುಗದ ಗಾತ್ರದ ಗುಳಿಗೆಯನ್ನು ತಯಾರಿಸಬೇಕು. ನಿತ್ಯವೂ ಈ ಗುಳಿಗೆಯನ್ನು ಸೇವಿಸಿ ಹಾಲು ಕುಡಿದು ಮಲಗಿದರೆ ನಿದ್ರಾಹೀನತೆ ನಿವಾರಣೆಯಾಗುತ್ತದೆ.
.ನಿದ್ರಾಹೀನತೆಯಲ್ಲಿ ಒಂದೆಲಗದ ತೈಲವೂ ಪರಿಣಾಮಕಾರಿ. ಒಂದೆಲಗದ ಗುಳಿಗೆಯನ್ನು ಸೇವಿಸುವುದರ ಜೊತೆಗೆ, ಒಂದೆಲಗದ ತೈಲದಿಂದ ನಿತ್ಯವೂ ಶಿರೋಭಾಗವನ್ನು ಮಾಲೀಶು ಮಾಡಿ ಮಲಗಿದರೆ ಹಿತಕರ.
ಒಂದೆಲಗದ ತೈಲ ತಯಾರಿಸುವ ವಿಧಾನ ಹೀಗಿದೆ :
ಒಂದೆಲಗದ ರಸ ಒಂದು ಕಪ್, ಅಷ್ಟೇ ಪ್ರಮಾಣದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು. ಎರಡನ್ನೂ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಇಂಗುವವರೆಗೆ ಕಾಯಿಸಬೇಕು. ಈ ತೈಲವನ್ನು ನಿತ್ಯ ಕೂದಲಿಗೆ ಲೇಪಿಸಿ, ತುದಿ ಬೆರಳಿನಿಂದ ಮಾಲೀಶು ಮಾಡಿದರೆ ಶಿರೋಭಾಗದಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ. ಮನಸ್ಸೂ ಪ್ರಶಾಂತವಾಗಿ ನಿದ್ರಾಹೀನತೆ ನಿವಾರಣೆಯಾಗುತ್ತದೆ. ಈ ತೈಲ ನಿತ್ಯ ಹಚ್ಚಿದರೆ "ಕೇಶ್ಯ'ವೂ ಹೌದು-ಅಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ, ಹೊಟ್ಟು ನಿವಾರಣೆಯಾಗುತ್ತದೆ.
.ನರದೌರ್ಬಲ್ಯ, ಆತಂಕ, ಒತ್ತಡ ನಿವಾರಣೆಗೆ ಹಾಗೂ ತಲೆನೋವು ನಿವಾರಣೆಯಾಗಲು ಒಂದೆಲಗದ ಕಷಾಯ ಹಿತಕರ. ಒಂದೆಲಗದ ಎಲೆಗಳನ್ನು ಒಂದು ಮುಷ್ಟಿಯಷ್ಟು ತೆಗೆದುಕೊಂಡು ಚೆನ್ನಾಗಿ ಅರೆದು ನೀರು ಸೇರಿಸಿ ಕುದಿಸಬೇಕು. ಆರಿದ ಬಳಿಕ ಜೇನು ಹಾಗೂ ಮೆಣಸಿನಕಾಳಿನ ಹುಡಿ ಬೆರೆಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಹಿತಕರ.
.ಹಾಲಿನಲ್ಲಿ ಜೀರಿಗೆಪುಡಿ ಹಾಗೂ ಒಣಗಿಸಿ ಹುಡಿಮಾಡಿದ ಒಂದೆಲಗದ ಪುಡಿಯನ್ನು ಬೆರೆಸಿ ಸೇವಿಸಿದರೆ ಬಾಣಂತಿಯಲ್ಲಿ ಎದೆಹಾಲು ವೃದ್ಧಿಯಾಗುತ್ತದೆ.
.ಮೂತ್ರ ಉರಿ, ಮೂತ್ರಕಟ್ಟು ಉಂಟಾದಾಗ ಒಂದು ಕಪ್ ಎಳನೀರಿನಲ್ಲಿ 4 ಚಮಚ ಒಂದೆಲಗದ ರಸ, ಅರ್ಧ ಚಮಚ ಕೊತ್ತಂಬರಿ ಬೀಜದ ಹುಡಿ ಬೆರೆಸಿ ಕುಡಿದರೆ ಶಮನಕಾರಿ.
.ಅಪೌಷ್ಟಿಕತೆ ಹಾಗೂ ಪಿತ್ತದೋಷದ ದೃಷ್ಟಿಯಿಂದ ಅಧಿಕ ಕೂದಲು ಉದುರುವವರು ಒಂದೆಲಗದ ಕಾಂಡ ಸಹಿತ ಇಡೀ ಬಳ್ಳಿಯನ್ನು ತೊಳೆದು ಅರೆದು ಅದರ ರಸವನ್ನು ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಒಂದೆಲಗದ ತೈಲವನ್ನು ಕೂದಲಿಗೆ ಲೇಪಿಸುವುದೂ ಹಿತಕರ.