ಕೆ. ಕೆ. | Feb 16, 2013
ಚಿತ್ರಾಳ ಪತಿ ಹೆಂಡತಿಯ ಜೊತೆಗೆ ಹೊರಹೋಗುವುದು ಕಡಿಮೆ. ಅನಿವಾರ್ಯವಾಗಿ ಹೋಗಬೇಕಾದರೂ ಆತ ಹತ್ತು ಹೆಜ್ಜೆ ಮುಂದೆ. ಈಕೆ ಹಿಂದೆ. ಎಷ್ಟೇ ವೇಗವಾಗಿ ಚಿತ್ರಾ ಹೆಜ್ಜೆ ಹಾಕಿದರೂ ಆತ ಅಂತರ ಕಾಯ್ದುಕೊಳ್ಳುತ್ತಾನೆ. ವಾಹನದಲ್ಲಿ ಹೋಗುವಾಗ ಅವಳಿಗೆ ಆ ಸಮಸ್ಯೆ ಇಲ್ಲ. ಜೊತೆಯಲ್ಲಿ ಕುಳಿತಿರುವುದಕ್ಕೆ ಅವನ ಆಕ್ಷೇಪವೇನೂ ಇಲ್ಲ.
""ಇಷ್ಟೆಲ್ಲ ಸಂಕೋಚ ಬೇಕಾ? ನಾವು ಪತಿ-ಪತ್ನಿ ಅಂತ ಎಲ್ಲರಿಗೂ ಗೊತ್ತಿದೆ. ಯಾಕೆ ಹಾಗೆ ಓಡುವುದು! ಜೊತೆಗೇ ಹೋದರೆ ಏನಾಗ್ತದೆ?'
ಅವಳೇನು ಹೇಳಿದರೂ ಆ ಕ್ಷಣ ತಲೆ ಆಡಿಸಿ ಒಪ್ಪಿಗೆ. ಮರುಕ್ಷಣ ಯಥಾಪ್ರಕಾರ. ಹೀಗೆಂದು ಅವರ ಮಧ್ಯೆ ಒಳ್ಳೆಯ ಅನ್ಯೋನ್ಯ ಇದೆ. ಪರಸ್ಪರ ಪ್ರೀತಿ, ಗೌರವವಿದೆ. ಆರೋಗ್ಯವಂತರಾದ ಮೂವರು ಮಕ್ಕಳಿದ್ದಾರೆ. ಸಮಸ್ಯೆಯ ಮೂಲ ಇರುವುದೇ ಎತ್ತರದಲ್ಲಿ.
ಚಿತ್ರಾಳಿಗೆ ಹದಿನೆಂಟು ತುಂಬುವುದನ್ನೇ ಕಾದು ತಾವಾಗಿ ಕೇಳಿ ಮಗನಿಗೆ ವಿವಾಹ ಮಾಡಿಸಿದ್ದರು. ಅವನಿಗೂ ಮದುವೆ ಆದರೆ ಅವಳನ್ನೇ ಎಂಬ ಮಧುರಾನುಭೂತಿ. ಚಿತ್ರಾಳೂ ಒಪ್ಪಿ ಹಿಗ್ಗಿನಿಂದಲೇ ವಿವಾಹವಾಗಿದ್ದಳು. ಪಿ.ಯು.ಸಿ. ಮುಗಿಸಿದ್ದವಳನ್ನು ಸಂತೋಷದಿಂದಲೇ ಕಾಲೇಜಿಗೆ ಕಳಿಸಿದ್ದರು ಪತಿ, ಅತ್ತೆ-ಮಾವ. ಎಲ್ಲೇ ಹೊರ ಹೊರಟರೂ ಮಡದಿಗೆ ಅಂಟಿಕೊಂಡೇ ನಡೆಯುತ್ತಿದ್ದ, ನಿಲ್ಲುತ್ತಿದ್ದ ಸಂದೀಪನಿಗೆ ಅವನ ಸ್ನೇಹಿತ ಲೇವಡಿ ಮಾಡಿದಾಗಲೇ ಅರ್ಥವಾಗಿದ್ದು.
""ಸಂದೀಪ, ಚಿತ್ರಾ ನಿನಗಿಂತ ಉದ್ದ ಬೆಳೆದಿದ್ದಾಳಲ್ಲೋ, ಗೇಣು ಉದ್ದ. ಗಿಡ್ಡ ಗಂಡ, ಉದ್ದ ಹೆಂಡ್ತಿ. ಪೇರ್ ಚೆನ್ನಾಗಿದೆ. ಉದ್ದ ಹೆಂಡ್ತಿ, ಗಿಡ್ಡ ಗಂಡ!'
ಅದೇ ಅಭಿಪ್ರಾಯ ಹಲವಾರು ಜನ ವ್ಯಕ್ತಪಡಿಸಿದ್ದುಂಟು. ಮನೆಯಲ್ಲಿಯೂ ಗಮನಿಸಿದ್ದರು. ಮದುವೆ ನಿಶ್ಚಯವಾಗಿ ವಧು ಪತಿ ಮನೆಗೆ ಬಂದಾಗ ಸಮ ಸಮ ಇದ್ದ ಎತ್ತರ. ಈಗ ಚಿತ್ರಾಳೇ ಉದ್ದ. ಗೇಣು ಉದ್ದ ಇರದಿದ್ರೂ ನಾಲ್ಕೈದು ಇಂಚು ಉದ್ದ ನಿಜ. ಅವಳದೇನು ತಪ್ಪಿಲ್ಲ. ಹೆತ್ತವರ ನಿಲುವು ಅವಳಿಗೆ ಬಂದಿತ್ತು. ಪತಿ ಮುಂದೆ ತಾನು ಎತ್ತರವಾಗಿ ಕಾಣುವುದಕ್ಕೆ ಅವಳೇನೂ ತಲೆಕೆಡಿಸಿಕೊಂಡಿರಲಿಲ್ಲ. ಅನೇಕ ಬಾರಿ ಸಂದೀಪನಿಗೆ ಅನ್ನಿಸಿತ್ತು - ಚಿತ್ರಾ ಪದವಿ ಮುಗಿಸಿದ ಮೇಲೆ ವಿವಾಹವಾಗಬಹುದಿತ್ತು. ಆಗ ಎತ್ತರ ಬೆಳೆದು ನಿಂತವಳನ್ನು ವಿವಾಹವಾಗಲು ಕಷ್ಟಸಾಧ್ಯವಿತ್ತೆಂದೂ ಗೊತ್ತು. ಮಡದಿಯನ್ನು ಪ್ರೀತಿಸುತ್ತಾನೆ,
ಅವಳಿಲ್ಲದಿದ್ದರೆ ತನ್ನ ಮನೆ, ಮನ ಅಪೂರ್ಣ ಎಂದೂ ಗೊತ್ತು. ಆದರೆ ಮನೆಯಲ್ಲಿ ಕಾಣಿಸದ ಈ ಕೀಳರಿಮೆ ಹೊರಗಡೆ ಹೋದಾಗ, ಮುಖ್ಯವಾಗಿ ಅವರಿವರು ಗಮನಿಸಿ ಎತ್ತಿ ಹಿಡಿದಾಗ ಬೆಳೆಯುತ್ತದೆ.
ನಮ್ಮಲ್ಲಿನ ಅಲಿಖೀತ ಕಾನೂನೆಂದರೆ ಅದರಲ್ಲಿ ಪತ್ನಿ ಪತಿಗಿಂತ ಕಡಿಮೆ ಎತ್ತರ ಇರಬೇಕು. ಮೊದಲಿನ ಕಾಲವಾದರೆ ಕಡಿಮೆ ಎತ್ತರದ ಜೊತೆಗೆ ಕಡಿಮೆ ವಿದ್ಯಾಭ್ಯಾಸ, ಕೆಳಗಿನ ನೌಕರಿ (ಇಲ್ಲವಾದರೇ ಒಳಿತು) ಕಡಿಮೆ ಜ್ಞಾನ ಹೊಂದಿರಬೇಕು. ವಧು ವೀಕ್ಷಣೆಯ ಸಂದರ್ಭದಲ್ಲಿ ಅನುಮಾನ ಬಂದರೆ ವರನ ಜೊತೆಗೆ ಬಂದ ಅಕ್ಕನೋ, ತಂಗಿಯೋ ಕನ್ಯೆಯ ಎತ್ತರವನ್ನು ತಾವೇ ಅಳೆಯುವುದೂ ಇತ್ತು. ಇದನ್ನು ಆಕ್ಷೇಪಿಸಿದವರೂ ಇಲ್ಲ. ಸಮ ಸಮ ಎತ್ತರ ಇದ್ದರೆ ನಿರಾಕರಣೆಯೇ ಹೆಚ್ಚು.
ಇಂದಿಗೆ ಉಳಿದೆಲ್ಲ ವಿಚಾರಗಳೂ ಗೌಣವಾಗಿದೆ. ಆದರೆ ತರುಣಿಯ ಎತ್ತರದ ಮಟ್ಟಿಗೆ ರಾಜೀಸೂತ್ರ ಇಲ್ಲ. ವಿವಾಹವಾಗಲಿರುವ ಯುವಕನ ಎತ್ತರಕ್ಕಿಂತ ತುಸು ಕಡಿಮೆಯೇ ಇರತಕ್ಕದ್ದು. ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲಾ ವಿಚಾರ ಹೊಂದಾಣಿಕೆಯಾಗಿ ಸಮಾನ ಎತ್ತರ ಯುವಕ- ಯುವತಿ ಇದ್ದರೆ ಆಕ್ಷೇಪ ಬಾರದು. ಎಲ್ಲದರಲ್ಲೂ ರಾಜಿ ಮಾಡಿಕೊಳ್ಳುವವರೂ ತಮಗಿಂತ ಉದ್ದ ಯುವತಿಯನ್ನು ಒಪ್ಪುವುದಿಲ್ಲ.
ತನಗಿಂತಲೂ ಉದ್ದವಾಗಿರುವ ಕನ್ಯೆಯನ್ನು ಒಪ್ಪಿ ವಿವಾಹವಾಗುವಷ್ಟು ಆಧುನಿಕತೆ ಎಷ್ಟೇ "ಆಧುನಿಕ'ರೆಂದು ಹೇಳಿಕೊಳ್ಳುವವರಿಗೂ ಇಲ್ಲ. ತನಗಿಂತ ಮೊಳ ಗಿಡ್ಡ ಇರುವ ಕನ್ಯೆಯನ್ನು ವಿವಾಹವಾಗುತ್ತಾನೆಯೇ ಹೊರತು ಎತ್ತರವಿರುವ ಯುವತಿಯನ್ನಲ್ಲ.
ಇಂಥ ವ್ಯತ್ಯಾಸವನ್ನು ವೈರುಧ್ಯವೆಂದು ತಿಳಿದು ಎದುರಿಗೇ ಆಡಿಕೊಳ್ಳುವವರೇ ಹೆಚ್ಚು.