Saturday, May 18, 2013
Last Updated: 4:08:31 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೆಲಸವೂ ಮನೆಗೆಲಸವೂ
    • ಕೆಲಸವೂ ಮನೆಗೆಲಸವೂ

      • ಜೇಬಿ | Feb 16, 2013

        ಮನೆಯೇ ಮಂತ್ರಾಲಯ ಮನಸೇ ದೇವಾಲಯ ಈ ರೀತಿಯ ಹಾಡುಗಳ ರಿಚ್‌ ಡಯಟ್‌ನಲ್ಲಿ ಬೆಳೆದ ಜಮಾನಾ ನಮ್ಮದಾಗಿತ್ತು. ಹಾಗೆ ನೋಡಿದಲ್ಲಿ ಓದಿಗಿಂತಲೂ ಮನೆಗೆೆಲಸದಲ್ಲಿ ಜಾಣೆಯಾದವರಿಗೇ ಜಾಸ್ತಿ ಮನ್ನಣೆ ಸಿಗುತ್ತಿದ್ದ ಕಾಲ. ತಕ್ಕಮಟ್ಟಿಗೆ ಸುಂದರಿಯಾಗಿದ್ದು ಎಷ್ಟು ಸಾಧ್ಯವೋ ಅಷ್ಟು ಸೌಮ್ಯವಾಗಿದ್ದವರಿಗೆ ಡಿಗ್ರಿ ಮುಗಿಯುವ ಮೊದಲೇ ಮದುವೆಯಾಗುತ್ತಿತ್ತು. (ಅದು ಅತ್ಯಂತ ಹೆಮ್ಮೆಯ ವಿಷಯವೂ ಆಗಿರುತ್ತಿತ್ತು). ಈಗ ನೋಡಿದರೆ ಕಾಲ ಬದಲಾಗಿದೆ. ಹೆಣ್ಣುಮಕ್ಕಳು ಇಪ್ಪತ್ತೈದಲ್ಲದೆ ಮದುವೆಯ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ಮನೆಗೆೆಲಸ ಬರುವುದಿಲ್ಲವೆಂದೋ, ಅಡುಗೆ ಮಾಡುವುದಿಲ್ಲವೆಂದೋ ಅವರನ್ನು ಚುಚ್ಚಿ ಚುಚ್ಚಿ ಹಂಗಿಸುವವರೂ ಇಲ್ಲ. ಬಹುಶಃ ಇದು ಮಹಿಳಾ ಸಬಲೀಕರಣ. ಹೆಚ್ಚಿದ ಉದ್ಯೋಗವಕಾಶಗಳ ಪರಿಣಾಮ ಇರಬೇಕು.

        ಗೃಹಿಣಿ-ಉದ್ಯೋಗಸ್ಥ ಮಹಿಳೆ ಇವರಲ್ಲಿ ಯಾರು ಶ್ರೇಷ್ಠ ಎಂದರೆ ಉತ್ತರಿಸುವುದು ತುಂಬ ಕಷ್ಟ . ಯಾರ ತ್ಯಾಗ ಮಿಗಿಲೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಡಿಗ್ರಿ, ಡಬ್ಬಲ್‌ ಡಿಗ್ರಿ ಮಾಡಿದ ಎಷ್ಟೋ ಮಹಿಳೆಯರು ಮನೆಯಲ್ಲೇ ಇರಲು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮನೆಯ ಸ್ವತ್ಛತೆ, ಅಡುಗೆ, ಮಕ್ಕಳ ಆರೈಕೆ, ಅತಿಥಿ ಸತ್ಕಾರ ಅವೆಲ್ಲ ಅವರ ಪ್ರಮುಖ ಆದ್ಯತೆ. ಮನೆಗೆಲಸದ ವಿಶಿಷ್ಟತೆ ಎಂದರೆ ಅದನ್ನು ಎಷ್ಟು ಶೀಘ್ರವಾಗಿ ಮುಗಿಸಬಹುದೋ ಅಷ್ಟೇ ನಿಧಾನವಾಗಿಯೂ ಪದೇಪದೇ ಕೂಡ ಮಾಡಬಹುದು.

        ಮೇಲ್ನೋಟಕ್ಕೆ ಕಾಣದ ಎಷ್ಟೋ ವಿಷಯಗಳನ್ನು ಗೃಹಿಣಿ ತುಂಬ ಅಚ್ಚುಕಟ್ಟಾಗಿ ಹಿನ್ನೆಲೆಯಲ್ಲಿದ್ದುಕೊಂಡು ಮಾಡಿರುತ್ತಾಳೆ. ಜೇಡನ ಬಲೆ, ಕರ್ಟನ್‌ನಲ್ಲಿ ಧೂಳು ಇವೆಲ್ಲ ತನ್ನ ಅದಕ್ಷತೆಯ ಸಂಕೇತವಾಗಿಯೇ ಆಕೆಗೆ ಕಾಣಿಸುತ್ತದೆ. ಹಾಗೆಯೇ ಇಡ್ಲಿ ಗಟ್ಟಿಯಾದದ್ದು, ಸಾರಿಗೆ ಉಪ್ಪು ಜಾಸ್ತಿಯಾದದ್ದು ಕೂಡ. ಫ‌ಳಫ‌ಳ ಹೊಳೆಯುವ ಕಿಟಕಿ ಗಾಜು, ಥಳಥಳಿಸುವ ಕಿಚನ್ನು , ಮಲ್ಲಿಗೆಯಷ್ಟು ಮೃದುವಾದ ಚಪಾತಿ ಇವೆಲ್ಲ ಅಪೇಕ್ಷಣೀಯವೇ ಆದರೂ ನನಗಿರುವ ಒಂದೇ ಒಂದು ಯೋಚನೆ ಈ ಎಲ್ಲ ಕೆಲಸಗಳಿಗೆ ಲೈಫ್ಟೈಮ್‌ ಎಚೀವ್‌ಮೆಂಟ್‌ ಅವಾರ್ಡ್‌ ಏನಾದರೂ ಸಿಗುತ್ತದೆಯೇ ಎಂದು. ಗೃಹಿಣಿಯ ಕೆಲಸಕ್ಕೆ ದುಡ್ಡು ಕೊಡಬೇಕೇ ಎಂದು ಸಾಕಷ್ಟು ವಾದ ವಿವಾದಗಳಾದವು. ಹಣ-ಪ್ರೀತಿ-ಕರ್ತವ್ಯ-ಸಾಧನೆ ಇವುಗಳನ್ನೆಲ್ಲ ಯಾವ ತಕ್ಕಡಿಯಲ್ಲಿಟ್ಟು ತೂಗಬೇಕು?

        ಈಗಿನ ಯುವತಿಯರನ್ನು ಕೇಳಿದರೆ ಅದಮ್ಯ ಉತ್ಸಾಹದಿಂದ ಎಲ್ಲವೂ ಬೇಕು ಎಂದು ಮುಗಿಲೆತ್ತರದ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಹೆಚ್ಚುತ್ತಿರುವ ವಿದ್ಯಾಭ್ಯಾಸ, ಆಯ್ಕೆಯ ಸ್ವಾತಂತ್ರ್ಯಗಳು, ಬಹುಶಃ ಅವರಲ್ಲಿ ಈ ಕೆಚ್ಚನ್ನು ತುಂಬಿವೆ. ಹಾಗೆಂದು ಜೈವಿಕ ಪ್ರಕೃತಿಯನ್ನು ಮೀರಲು ಹೆಣ್ಣಿಗೆ ಸಾಧ್ಯವಿಲ್ಲ. ಮದುವೆ, ಬಸಿರು ಬಾಣಂತನ, ಹಾಗೆಯೇ ಹೆಗಲೇರುವ ಜವಾಬ್ದಾರಿಗಳು ಸಾರ್ಥಕತೆಯನ್ನೋ, ಖನ್ನತೆಯನ್ನೋ ಅವರವರ ಮನಸ್ಥಿತಿಗನುಗುಣವಾಗಿ ನೀಡುತ್ತದೆ.

        ಗೃಹಿಣಿಯರನ್ನಾಗಲಿ ಉದ್ಯೋಗಸ್ಥ ಮಹಿಳೆಯರನ್ನಾಗಲಿ ಹೀಗಳೆಯುವ ಉದ್ದೇಶ ಈ ಲೇಖನಕ್ಕಿಲ್ಲ. ಮಹಾಲಕ್ಷ್ಮಿಯ ಸಾತ್ವಿಕ ಕಳೆಯ ಗೃಹಿಣಿಯಷ್ಟೇ ಆತ್ಮವಿಶ್ವಾಸದ ಖಣಿಯಂತಿರುವ ಕೆರಿಯರ್‌ ವುಮನ್‌ ಕೂಡ ಗೌರವಕ್ಕೆ ಅರ್ಹಳು. ಹಾಗೆಂದು ಇಬ್ಬರೂ ದ್ವಂದ್ವಗಳಿಗೆ ಅತೀತರಲ್ಲ. ನನಗೆ ಗೊತ್ತಿರುವ ಅನೇಕ ಗೃಹಿಣಿಯರು ಸಂಗೀತ, ಕವನ, ತ್ರೋಬಾಲ್‌ ಹೀಗೆ ಆಟೋಟಗಳಲ್ಲಿ , ಕಲೆಗಳಲ್ಲಿ ಪರಿಣತರಾಗಿದ್ದರು. ಈಗ ಅವರ ಕವನಗಳು, ವೀಣೆ, ನೃತ್ಯ ಪ್ರದರ್ಶನಗಳೆಲ್ಲ ಅಟ್ಟ ಸೇರಿವೆ. ಉದ್ಯೋಗಸ್ಥ ಮಹಿಳೆಯರಿಗೆ ಅವರ ಆದಾಯ, ಕಚೇರಿ, ಸಂಸ್ಥೆಯ ವಾತಾವರಣಕ್ಕನುಗುಣವಾಗಿ ಧಾವಂತ, ಒತ್ತಡ, ಸಂತಸ, ಸಾಧನೆಗಳನ್ನು ನಿಭಾಯಿಸಬೇಕಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಕಾಲಮಿತಿಯನ್ನು. ತಮ್ಮ ಮಕ್ಕಳ ಬಾಲ್ಯ, ಮುದ್ದಾದ ಆಟಪಾಠಗಳಲ್ಲಿ ಮನೆಯಲ್ಲಿರುವ ತಾಯಂದಿರಂತೆ ಉದ್ಯೋಗಸ್ಥ ಮಹಿಳೆಯರಿಗೆ ಪಾಲ್ಗೊಳ್ಳಲಾಗುವುದಿಲ್ಲ. ಹಾಗೆಂದು, ಜೀವಮಾನದ ಇಪ್ಪತ್ತು ವರ್ಷಗಳನ್ನು ಓದಿನಲ್ಲಿಯೊ ಮತ್ತೆ ಇಪ್ಪತ್ತು ವರ್ಷಗಳನ್ನು ಮನೆವಾರ್ತೆಯಲ್ಲಿಯೊ ತೊಡಗಿಸಿಕೊಂಡ ಗೃಹಿಣಿ ಹೊಸದಾಗಿ ಏನನ್ನಾದರೂ ಸಾಧಿಸುವುದು ಮಧ್ಯವಯಸ್ಸಿನಲ್ಲಿ ಕಷ್ಟಸಾಧ್ಯ.

        ಸಾಮಾಜಿಕ ಪದ್ಧತಿಗಳ ಬಗ್ಗೆ, ಅವುಗಳ ಔಚಿತ್ಯದ ಬಗ್ಗೆ ಅಪಾರ ಗೌರವವಿಟ್ಟುಕೊಂಡೇ ಈ ಎಲ್ಲ ನಿಯಮಗಳ ಒತ್ತಡ ಹೆಣ್ಣಿಗೆ ಮಾತ್ರ ಯಾಕೆ ಎಂದು ಪ್ರಶ್ನಿಸುವಂತಾಗುತ್ತದೆ. ಹೆಣ್ಣಿನ ಜೀವನದ ಗುರಿಯೇ ಮದುವೆ ಆಗಿಬಿಟ್ಟಿದ್ದರೆ ಗಂಡಿಗೆ ಅದು ಜೀವನದ ಭಾಗ ಮಾತ್ರ. ಇಪ್ಪತ್ತು ವರ್ಷದ ಕಾಲೇಜು ಹುಡುಗ ಉಮೇದಿನಲ್ಲಿ ಭವಿಷ್ಯದ ಬಗ್ಗೆ ಯೋಚನೆ ಹಾಕುತ್ತಿದ್ದರೆ ಅದೇ ವಯಸ್ಸಿನ ಹುಡುಗಿಯ ಮದುವೆ ಬಗ್ಗೆ ಪಾಲಕರು ಚಿಂತಿಸಿರುತ್ತಾರೆ. ಅವರು ಕಲಿಯುವ ಕೋರ್ಸ್‌ಗಳೂ ಹಾಗೆ ಹೆಚ್ಚು ಕಷ್ಟವಿರದ ಟೀಚಿಂಗ್‌, ನರ್ಸಿಂಗ್‌ ಹೀಗೆ. ರ್‍ಯಾಂಕ್‌ ಪಡೆಯುವ ಎಷ್ಟು ಹುಡುಗಿಯರು ಐಐಟಿಯಲ್ಲೋ, ವರ್ಲ್ಡ್ ಬ್ಯಾಂಕಿನಲ್ಲೋ ಜಾಗ ಗಿಟ್ಟಿಸಿಕೊಳ್ಳುತ್ತಾರೆ? ಕವಿತೆ ಬರೆಯುತ್ತಲೋ, ಭಾಷಣ ಬಿಗಿಯುತ್ತಲೋ ಎಲ್ಲರ ಕಣ್ಮಣಿ ಆಗಿರುವ ಎಷ್ಟು ಹುಡುಗಿಯರನ್ನು ಇನ್ನು ಇಪ್ಪತ್ತು ವರ್ಷದ ನಂತರ ಸಾಹಿತ್ಯವೇದಿಕೆಗಳಲ್ಲಿ ಕಾಣಬಹುದು. ಮನೆ, ಮನೆಗೆಲಸ ಇವೆಲ್ಲ ತಾನು ಮನೆಯನ್ನು ಬೆಳಗುವ ನಂದಾದೀಪವಾಗುವ ಭರದಲ್ಲಿ  ಹೆಣ್ಣಿನ ಜೀವನವನ್ನು ನಿಯಂತ್ರಿಸುತ್ತಿರುತ್ತದೆ.

        ಕ್ಷುಲ್ಲಕ ಎಂದು ಕಾಣಿಸಿದರೂ, ಮನೆಗೆಲಸ ಎನ್ನುವುದು ಸಿಂದಾಬಾದನಂತೆ ಹೆಣ್ಣಿನ ಹೆಗಲೇರುವ ಪೆಡಂಭೂತ. ಅದಕ್ಕೆ ರಿಟೈರ್‌ವೆುಂಟ್‌ ಎನ್ನುವುದಿಲ್ಲ. ಬೋನಸ್‌, ಪ್ರಾವಿಡೆಂಟ್‌ ಫ‌ಂಡ್‌ ಇತ್ಯಾದಿ ಲಾಭಗಳೂ ಇಲ್ಲ. ಸಾಮಾಜಿಕ ಸುಭದ್ರತೆ, ಸಾಮರಸ್ಯದ ಬದುಕು ಎಲ್ಲವೂ ನಮಗೆ ಹಣಕ್ಕಿಂತಲೂ ಹೆಚ್ಚು ಹೌದಾದರೂ ಹೆಣ್ಣು ಇದಕ್ಕೆ ತೆರಬೇಕಾದ ಬೆಲೆ ಜಾಸ್ತಿ ಎಂದು ಹೆಚ್ಚಿನ ಮಹಿಳೆಯರ ಭಾವನೆ. ಅದನ್ನು ಹೇಳಲು ಕೂಡ ಅವರು ಹಿಂಜರಿಯುವುದು ಇಂದಿನ ವಿಪರ್ಯಾಸ.

        *****

        ಬದುಕಿನ ಸೋಜಿಗಗೊಳಿಸುವ ಹಾಸ್ಯಗಳಲ್ಲಿಯೂ ಸತ್ಯಾಂಶವಿದೆ. ಪ್ರತಿನಿತ್ಯ ಪತ್ರಿಕೆಗಳಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿ ಪ್ರಕಟಗೊಂಡಿರುವುದು ಸರ್ವೇಸಾಮಾನ್ಯವಾಗಿದೆ. ಆದರೆ, ಪ್ರತಿಯೊಂದು ಕಾರ್ಯಕ್ಷೇತ್ರಗಳನ್ನು ಒಳಗೊಂಡಂತೆ ಮನೆ ನಿಭಾಯಿಸುವ ಗೃಹಿಣಿಗೇಕೆ ಯಾವ ಪ್ರಶಸ್ತಿಯೂ ಇಲ್ಲ? ಇದರ ಬಗ್ಗೆ ಜಿಜ್ಞಾಸೆ  ಯಾರಲ್ಲೂ ಮೂಡಿಲ್ಲವೆ? ಗಂಡ, ಮಕ್ಕಳು ಸೇರಿದಂತೆ ಮನೆಯ ಆಶೋತ್ತರಗಳ ಬಯಕೆಗಾಗಿಯೇ ಮುಡುಪಾಗಿಟ್ಟ ಈ ಜೀವದ ಬೆಲೆ ಬಲ್ಲವರು ಯಾರು? ಕನ್ನಡದ ಖ್ಯಾತ ಲೇಖಕಿಯೊಬ್ಬರು ಹೀಗೆ ಬರೆದುಕೊಂಡಿದ್ದರು - ಹೆಣ್ಣು ಎಷ್ಟು ಕಲಿತರೇನು? ಬೆಳಗಾಗೆದ್ದು ಒಲೆಯ ಬೂದಿ ತೆಗೆಯುವುದು ತಪ್ಪುವುದೆ? ಹೆಣ್ಣು ಪ್ರಧಾನಿಯಾದರೂ ಮುಂಜಾನೆ ಗಂಡನಿಗೆ ಚಹಾ ಕೊಡಲೇಬೇಕು ಎಂಬುದಾಗಿ. ಇದನ್ನೇ ಪರಾಮರ್ಶಿಸಿದಾಗ ಗೃಹಿಣಿಯ ಕಾರ್ಯವೈಖರಿ ಸಂಪೂರ್ಣ ಅರಿವಾಗುತ್ತದೆ.

        ಮನೆಯಿಂದ ಮನೆಯೆನಿಸುವುದಿಲ್ಲ

        ಮಡದಿಯಿಂದ ಮನೆ ಕಾಣಾ |

        ಕಲ್ಲು ಕಟ್ಟಿಗೆಗಳಿಂದ ಮನೆಯಾಗುವುದಿಲ್ಲ

        ಮನೆಯೊಳಗೆ ಮಡದಿಯಿದ್ದರೆ ಮಾತ್ರ ಮನೆ ನೋಡಾ |

        ಖಂಡಿತವಾಗಿಯೂ ಮನೆಯ ಶುಭೋದಯವೆಂದರೆ ಅದು ಗೃಹಿಣಿ. ಸುಪ್ತಭಾವನೆಗಳು ಸಾವಿರಗಳಿದ್ದರೂ ತಪ್ಪದ ಮನೆಕೆಲಸದಿಂದ ಭಾವನೆಗಳು ಭಾವನೆಗಳಾಗಿಯೇ ಉಳಿದುಬಿಟ್ಟಿವೆ. ಬೆಳಗಾಗೆದ್ದು ಉರಿಸಿದ ಬೆಂಕಿಯೊಂದಿಗೆ ಸುಟ್ಟುಹೋಗುವ ಆಕೆಯ ಕನಸುಗಳು, ಅನ್ನದೊಂದಿಗೆ ಬೇಯುವ ಕನವರಿಕೆಗಳು, ಒಗೆದ ಬಟ್ಟೆಯೊಂದಿಗೆ ಹಿಂಡಿ ಹಿಪ್ಪೆಯಾಗುವ ಆಲೋಚನೆಗಳು, ತೊಳೆದ ಪಾತ್ರೆಯ ನೀರಿನಲ್ಲಿ ಕಳೆದುಹೋಗುವ ಬಯಕೆಗಳು, ಗುಡಿಸಿ ಸಾರಿಸಿ ತೆಗೆದ ಆಸೆಗಳು, ಮಕ್ಕಳ ಆಟದ ಪರಿಕರಗಳನ್ನೆಲ್ಲಾ ಎತ್ತಿಟ್ಟ ಭಾವದೊಳಗೆ ನಿಟ್ಟುಸಿರು, ಮೆಗಾಧಾರಾವಾಹಿಗಳ ಅಂತ್ಯವಿಲ್ಲದ ಕಥೆಯು ಆವರಿಪ ಶೂನ್ಯಭಾವ, ಮಹೋತ್ಸವದಲ್ಲೇ ಕಣೆºಳಕು ತೋರಿ ಬೆಳಗಾದರೆ ಕತ್ತಲಾಗುವ ಹೊಂಗಿರಣಗಳು, ಮನೆಪಾಠವು, ಖರ್ಚುವೆಚ್ಚವು ಸರಿದೂಗಿಸಿ ಹೈರಾಣಾದ ಹೃದ್ಯ ಕಂಗಳು, ಗಂಡ-ಮಕ್ಕಳ ಬರುವಿಕೆಯ ಕಾಯುವಿಕೆಯೊಂದಿಗೆ ಕಳೆದುಹೋಗುವ ಕಾಲವೂ...!?

        ಇಂತಹ ಹಲವಾರು ಕಾರ್ಯವೈಖರಿಯ ನಡುವೆಯೂ ಸದಾ ತೃಪ್ತಿ ಕಂಡ ಬದುಕು. ವ್ಯಾಸ ಮಹರ್ಷಿ ಮಹಾಭಾರತದ 233ನೇ ಪರ್ವದಲ್ಲಿ ಹೇಳಿದ್ದನ್ನು ಈಗಲೂ ಇಲ್ಲಿ ಸ್ಮರಿಸೋಣ. ""ಭಾರತೀಯ ಮಹಿಳೆ ಸುಖದಲ್ಲಿ ಸುಖವನ್ನು ಕಾಣುವವ‌ಳಲ್ಲ; ದುಃಖದಲ್ಲಿ ಸುಖವನ್ನು ಕಾಣಬಲ್ಲವಳು'. ಕಾಲಚಕ್ರ ಸದ್ದಿಲ್ಲದೆ ತಿರುಗುವ ನಿಲ್ಲದ ನಿಬಂಧನೆ. ಇದರೊಳಗೆ ಮನೆವಾಳೆ¤ಯೆಂದರೆ ಅಡ್ಡಿ ಆತಂಕಗಳಿಲ್ಲದ ಸಣ್ಣ ಕೆಲಸವೆಂದೇ ಭಾವಿಸಿದವರು ಹೆಚ್ಚು. ಯಾಂತ್ರಿಕ ಜೀವನದ ಯಂತ್ರ ದೇಹವಿದು. ಬಾಹ್ಯದ ಅಣಿಮುತ್ತು ಅಳಿಸೋದೆ ಇಲ್ಲವೆಂಬಂತೆ ಕೆಲಸವಾದರೆ ಅಂತರಂಗದೊಳು ಅಂತಹುದೇ ಧಾವಂತ, ಸುಸ್ತಾಗದ ಸಹಿಷ್ಣುತೆ. ಇವೆಲ್ಲದರಿಂದ ಸಹನೆ ಕಳೆದುಹೋಗಿದೆ ಎಂಬ ಮನೋಭಾವವಿಲ್ಲ. ಬದಲಿಗೆ ತನ್ನ ತಾಳ್ಮೆಯ ಮಿತಿ ಹೆಚ್ಚಿನದಾಗಿದೆ ಎನ್ನುವ ಸಾಧ್ವಿ. ಹೀಗಿರುವಾಗ ವಿದೇಶಿಯರು, ಭಾರತೀಯ ದಂಪತಿ ಜೀವನಪೂರ್ತಿ ಜೊತೆಗಿರಲು ಹೇಗೆ ಸಾಧ್ಯ ಎಂಬುದಾಗಿ ಆಶ್ಚರ್ಯಪಡುವುದರಲ್ಲಿ ತಪ್ಪೇನಿಲ್ಲ.

        ಅಪ್ಪ ಎಂದರೆ ನಂಬಿಕೆ, ಅಮ್ಮ ಎಂದರೆ ಸತ್ಯ ಎಂಬ ಭಾವನೆಯ ಹುರುಳಿರುವ ಆತ್ಮಸಾಕ್ಷಾತ್ಕಾರದಲ್ಲಿ ಬೆಳೆಯುತ್ತಿರುವ ಮಕ್ಕಳಿಗೂ ಮುಂದೆ ಇದೇ ಸಂಸ್ಕಾರ ಬೆಳೆದಿರುತ್ತದೆ. ಬಯಲಾಗುತ್ತಿರುವ ಕಾಲಘಟ್ಟದಲ್ಲಿ ಗೃಹಿಣಿಯ ಪಾತ್ರ ಅಲ್ಪಸ್ವಲ್ಪ ಬದಲಾವಣೆ ಹೊಂದಿದ್ದರೂ ಭಾರತೀಯ ಬಾಳ್ವೆಯೊಳಗೆ ಹೇಳಲಾಗದ ಅವಿನಾಭಾವ ಸಂಬಂಧ ಇದ್ದೇ ಇದೆೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಮನೆವಾಳೆ¤ಯ ಮಹಿಳೆಗ್ಯಾಕೆ ಯಾವ ಪ್ರಶಸ್ತಿಯೂ ಇಲ್ಲ ಎಂಬ ಪ್ರಶ್ನಾರ್ಥಕಕ್ಕೆ ಉತ್ತರವೆಂಬಂತೆ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದ ಕೈಂಕರ್ಯಕ್ಕೆ ಯಾಕೆ ಬೇಕು ಪುರಸ್ಕಾರ? ಇಂತಹ ಪ್ರಶಸ್ತಿ ಇದ್ದರೂ ಅರ್ಜಿ ಗುಜರಾಯಿಸಲು ಯಾರು ಮುಂದೆ ಬಾರದ ಲೋಕ ಗೃಹಿಣಿಯರದ್ದು.

        ಗೃಹಿಣಿಯರ ಬಿಡುವಿಲ್ಲದ ವ್ಯಕ್ತಿತ್ವಕ್ಕೆ ಅಕ್ಷರ ರೂಪ ಕೊಡುವ ಹೊತ್ತಿಗೆ ಅದೇನು ಕಾಕತಾಳೀಯವೋ ತಿಳಿಯದು, ಸರಕಾರ ಮಡದಿಯರಿಗೆ ಸಂಭಾವನೆ ನೀಡುವ ವರದಿ ನೀಡಿತು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಯಿತು. ಇದರಲ್ಲೇ ಅರಿವಾಗುತ್ತದೆ ಬಾಂಧವ್ಯದ ಮಿತಿ. ಎಣೆಯಿಲ್ಲದ ಕೆಲಸಕ್ಕೆ ಎಣೆಯಿಲ್ಲದ ಪ್ರೀತಿ ದಕ್ಕಿದರೆ ಅದುವೇ ಗೃಹಿಣಿಗೆ ಶೋಭೆ. ಈ ಪ್ರಶಸ್ತಿ ಪುರಸ್ಕಾರ, ಸಂಭಾವನೆಗಳು ಎಂದಿಗೂ ಪ್ರೀತಿಗಿಂತ ಮಿಗಿಲಾಗದು ಎಂಬ ಅರಿವು ಇರುವವರೆಗೂ ಗೃಹಿಣಿ ಗೃಹಲಕ್ಷ್ಮಿ.

        -ಸಂಗೀತಾ ರವಿರಾಜ್‌

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus