Thursday, June 20, 2013
Last Updated: 5:20:14 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಶಿಷ್ಟ ಜನರ ವಿಶೇಷ ಉಡುಪು...
    • ಲೇಡಿ ಇರ್ವಿನ್‌ ಕಾಲೇಜಿನ ತರಗತಿಯಲ್ಲಿ ಡಾ. ದುರ್ಗಾ ಗಂಗೂಲಿ.

      • ನೇಮಿಚಂದ್ರ | Feb 17, 2013

        ಗಮನಿಸಿ... ಶಾಶ್ವತವಾಗಿ ಕೈ ಇಲ್ಲದವರು, ಕಾಲು ಇಲ್ಲದವರು, ಸೊಂಟ ಸ್ವಾಧೀನವಿಲ್ಲದವರು, ಹಾಸಿಗೆಯಲ್ಲಿಯೇ ಮಲಗಿದವರು, ಬಟ್ಟೆಗಳನ್ನು ಹೇಗೆ ಧರಿಸುತ್ತಾರೆ? ಇಂದು ಮಾರುಕಟ್ಟೆಯ ತುಂಬಾ ಝಗಮಗಿಸುವ ಥರಾವರಿ ಬಟ್ಟೆಗಳು ನಿಮಗೆ ಸಿಗುತ್ತವೆ. ಅಂಗದಲ್ಲಿ ಊನವಿರುವ "ಭಿನ್ನ ಚೇತನ'ದ ವ್ಯಕ್ತಿಗಳಿಗೆೆ ಸುಲಭವಾಗಿ ತೊಡಬಲ್ಲ ಉಡುಪುಗಳು ಇಲ್ಲವೇ ಇಲ್ಲ.

        ಅಪಘಾತದ ನಂತರ ಮೂರು ವಾರ ಪ್ರಯಾಸದಿಂದ ಕಳೆದಿತ್ತು. ಬೆನ್ನಿಗೆ ಬಿಗಿದ ಇಮ್ಮೊಬಲೈಸರ್‌ ತೆಗೆದಾಗ, ಮಣ ಭಾರ ಇಳಿದು ಹಕ್ಕಿಯಂತೆ ಹಗುರಾದ ಭಾವ. ಇನ್ನೂ ಕೈ ಸ್ಲಿಂಗ್‌ನಲ್ಲಿ ಕೆಲವು ವಾರ ಇರಬೇಕೆಂದು ವಿಧಿಸಿದ್ದರು. ಚಿಂತೆ ಇರಲಿಲ್ಲ, ಈಗ ಕಛೇರಿಗೆ ಹೋಗಲು ಸಾಧ್ಯವಿತ್ತು. ಆದರೆ, ಉದ್ದ ತೋಳಿನ ನನ್ನ ಕಾರ್ಖಾನೆಯ ಸಮವಸ್ತ್ರವನ್ನು ತೊಡುವುದು ಈಗ ಅಸಾಧ್ಯವಿತ್ತು. ಬಲಗೈ ಎತ್ತಲು ಆಗದ ಕಾರಣ, ಕೈ ಎತ್ತದೆಯೇ ತೊಡಬಲ್ಲ ಉಡುಪುಗಳು ಬೇಕಿತ್ತು.

        2004ರಲ್ಲಿ ನಾನು ಹೀಗೆಯೇ ಕೈ ಮುರಿದುಕೊಂಡಾಗ ಸಹಾಯಕ್ಕೆ ಬಂದವರು ಫಿಯಾಸ್‌ ಖಾನ್‌. ಕಮೀಸಿನ ತೋಳು ಕತ್ತರಿಸಿ ಭುಜದ ಮೇಲೆ ಹುಕ್‌ ಹಾಕಿ ಉಡುಪಿನ ಬದಲಾವಣೆ ಮಾಡಿಕೊಟ್ಟಿದ್ದರು. ನಾವು ಜಯನಗರಕ್ಕೆ ಬಂದು ನೆಲಸಿದ ಈ ಎರಡು ದಶಕಗಳೂ ನಾನು ಬಟ್ಟೆ ಹೊಲಿಸಿರುವುದು, ಅಪಾರ್ಟ್‌ಮೆಂಟಿನ ಮುಂದೆಯೇ ಹೊಲಿಗೆ ಅಂಗಡಿ ಇರುವ ಫಿಯಾಸ್‌ ಖಾನ್‌ ಅವರಿಂದ. ಆತ ಮತ್ತು ಅವರ ಪತ್ನಿ ಬೆಳಗ್ಗೆ ತಮ್ಮ ಅಂಗಡಿಗೆ ಬಂದು ಕುಳಿತರೆ, ರಾತ್ರಿಯವರೆಗೂ ಮಾತನಾಡುತ್ತಾ ಜೊತೆ ಜೊತೆಯಾಗಿ ಹೊಲಿಯುವುದನ್ನು ನೋಡಿ¨ªೆ. ಆಕೆ ಬಟ್ಟೆ ಕತ್ತರಿಸಿ ಕೊಡುವರು, ಈತ ಹೊಲಿಯುವರು.
        ಚಿಕ್ಕ ವಯಸ್ಸಿಗೇ ಮದುವೆ ಮಾಡಿದ ಕಾರಣ, ಆಕೆ ಗಂಡನಿಗಿಂತ ಒಂದು ಅಡಿ ಎತ್ತರ ಬೆಳೆದಿದ್ದರೂ, ಅವರದು ಅತ್ಯಂತ ಅನುಪಮ ಜೋಡಿ. ಅವರ ಅಂಗಡಿಯ ಮುಂದೆ ಹಾಯುವಾಗಲೆಲ್ಲ ಮಾತನಾಡಿಸುವುದು ರೂಢಿಯಲ್ಲಿತ್ತು. ಆದರೆ, ಮೂರು ವರ್ಷಗಳ ಹಿಂದೆ ಆಕೆ ಹುಟ್ಟಿನಿಂದಲೇ ಕಾಡಿದ ಹೃದಯದ ನ್ಯೂನತೆಯಿಂದ ತೀರಿಕೊಂಡಿದ್ದರು.  ಈಗ ಫಿಯಾಸ್‌ ಖಾನ್‌ ಒಬ್ಬರೆ ಕುಳಿತು ಹೊಲಿಯುತ್ತಾರೆ. 

        ಎತ್ತಲಾರದ ಕೈಯಿಂದ ತೂರಿಸಿಕೊಳ್ಳಬಲ್ಲ ಉಡುಪಿನ ವಿನ್ಯಾಸ ನನಗೀಗ ಸವಾಲಾಯಿತು. ಈ ಬಾರಿ ಕೊಂಚ ಹೆಚ್ಚೇ ಪೆಟ್ಟಾದ ಕಾರಣ, ಬರೀ ಭುಜದ ಮೇಲಿನ ಹುಕ್ಸ್‌ ಬಿಚ್ಚಿ ತಲೆಯ ಮೇಲಿಂದ ಕಮೀಸ್‌ ತೆಗೆಯುವುದು ಸುಲಭವಿರಲಿಲ್ಲ.

        ಫಿಯಾಸ್‌ ಖಾನ್‌ ಅವರ ಜೊತೆಗೂಡಿ, ಡ್ರೆಸ್‌ ಡಿಸೈನ್‌ ಮಾಡಿ¨ªಾಯಿತು. ಭುಜದ  ಮೇಲೆ ಎರಡೂ ಕಡೆ ಹುಕ್ಸ್‌, ಹಾಗೆಯೇ ಸುಲಭವಾಗಿ ತಲೆಯಿಂದ ತೂರಿಸಿಕೊಂಡು ಹಾಕಿಕೊಳ್ಳಲು, ಬಿಚ್ಚುವಾಗ ಕೆಳಗೆ ಸರಿದು ಬರಲು ಅನುಕೂಲವಾಗುವಂತೆ ಮುಂದುಗಡೆ ಉದ್ದನೆಯ ಜಿಪ್‌ ಇರಿಸಿ¨ªಾಯಿತು. ಆ ಜಿಪ್‌ ತತ್‌ಕ್ಷಣ ಕಾಣದ ಹಾಗೆ ಬಟ್ಟೆಯ ಪದರಿನಲ್ಲಿ ಮರೆಯಾಗಿಸಿ ಅಚ್ಚುಕಟ್ಟಾಗಿ ಹೊಲೆದು ತಂದರು. ಸಲ್ವಾರಿಗೆ ಲಾಡಿಯ ಬದಲು, ಒಂದೇ ಕೈಯಲ್ಲಿ ಹಾಕಿಕೊಳ್ಳಲು ಅನುಕೂಲವಾಗುವಂತೆ,  ಮೃದುವಾದ ಇಲಾಸ್ಟಿಕ್‌ ಇಟ್ಟು ಕೊಟ್ಟರು.

        ತಾತ್ಕಾಲಿಕ ಅಂಗವಿಕಲತೆ, ಅದೂ ಕೇವಲ ಒಂದು ಕೈಯ ನ್ಯೂನತೆ  ಇಷ್ಟೆಲ್ಲ ಉಡುಪಿನ ವಿನ್ಯಾಸದ ಬಗ್ಗೆ ಯೋಚಿಸುವಂತೆ ಮಾಡಿತ್ತು. ಕ್ಷಣ ಚಿಂತಿಸಿದೆ, ಶಾಶ್ವತವಾಗಿ ಕೈ ಇಲ್ಲದವರು, ಕಾಲು ಇಲ್ಲದವರು, ಸೊಂಟ ಸ್ವಾಧೀನವಿಲ್ಲದವರು, ಹಾಸಿಗೆಯಲ್ಲಿಯೇ ಮಲಗಿದವರು, ಬಟ್ಟೆಗಳನ್ನು ಹೇಗೆ ಧರಿಸುತ್ತಾರೆ? ಇಂದು ಮಾರುಕಟ್ಟೆಯ ತುಂಬಾ ಝಗಮಗಿಸುವ ಥರಾವರಿ ಬಟ್ಟೆಗಳು ನಿಮಗೆ ಸಿಗುತ್ತವೆ. ಆದರೆ ಗಮನಿಸಿ, ಅಂಗದಲ್ಲಿ ಊನವಿರುವ "ಭಿನ್ನ ಚೇತನ'ದ ವ್ಯಕ್ತಿಗಳಿಗೆೆ ಸುಲಭವಾಗಿ ತೊಡಬಲ್ಲ ಉಡುಪುಗಳು ಇಲ್ಲವೇ ಇಲ್ಲ. ತತ್‌ಕ್ಷಣ ನನಗೆ 13 ವರ್ಷಗಳ ಹಿಂದೆ, ದೆಹಲಿಯಲ್ಲಿ ನಾನು ಭೇಟಿಯಾದ ಡ್ರೆಸ್‌ ಡಿಸೈನರ್‌ ಡಾ. ದುರ್ಗಾ ಗಂಗೂಲಿ ನೆನಪಾದರು.

        ಭಾವನೆಗಳನ್ನು ಹೆಣೆಯುತ್ತ...

        "ಡ್ರೆಸ್‌ ಡಿಸೈನಿಂಗ್‌' ಎಂದೊಡನೆ ನಮಗೆ ಹೊಳೆಯುವುದು ಝಗಮಗಿಸುವ‌ ರೂಪದರ್ಶಿಗಳು, ಸೌಂದರ್ಯ ರಾಣಿಯರು, ಹೇರಳವಾಗಿ ಹಣ ತರುವ ಗ್ಲಾ éಮರ್‌ ಜಗತ್ತು. ಆದರೆ, 2000ದಲ್ಲಿ ದೆಹಲಿಗೆ ಹೋದಾಗ, ನಾನು ಓರ್ವ ಅಪರೂಪದ ಡ್ರೆಸ್‌ ಡಿಸೈನರ್‌ ಬಗ್ಗೆ ಕೇಳಿ¨ªೆ. ಅವರನ್ನು ಹುಡುಕಿ ಲೇಡಿ ಇರ್ವಿನ್‌ ಕಾಲೇಜಿಗೆ ಹೋಗಿ ಭೇಟಿಯಾಗಿ¨ªೆ. ಅನಂತರ ಒಂದು ಸಂಜೆ ಚಿತ್ತರಂಜನ್‌ ಪಾರ್ಕ್‌ನಲ್ಲಿನ ತುಂಬು ಕುಟುಂಬದ ಅವರ ಮನೆಯಲ್ಲಿ ಬಿಡುವಾಗಿ ಕುಳಿತು ಅವರು ವಿನ್ಯಾಸ ಮಾಡಿದ ವಿಶೇಷ ಉಡುಪುಗಳನ್ನು ನೋಡಿ¨ªೆ.

        ನಾನು ಭೇಟಿಯಾದ ಡ್ರೆಸ್‌ ಡಿಸೈನರ್‌ ಡಾ. ದುರ್ಗಾ ಗಂಗೂಲಿ, ಗ್ಲ್ಯಾಮರ್‌ ಜಗತ್ತಿನಿಂದ ಬಹುದೂರ ಉಳಿದವರು. ಈಕೆ ಭಿನ್ನ ರೀತಿಯ ವಿನ್ಯಾಸಕಿ. ಈಕೆಯ ಆಸಕ್ತಿ ಸೌಂದರ್ಯ ರಾಣಿಯರಿಗೆ ಉಡುಪು ವಿನ್ಯಾಸ ಮಾಡಿ ಕಿರೀಟ ಕೊಡಿಸುವುದಾಗಿರಲಿಲ್ಲ. ಈಕೆಯ ಉಡುಪುಗಳಿಗೆ ಅತ್ಯಂತ ಮಾನವೀಯ ಉದ್ದೇಶವಿತ್ತು. ಈಕೆ ಅಂಗವಿಕಲರಿಗೆ, ಬುದ್ಧಿಮಾಂದ್ಯರಿಗೆ ಉಡುಪನ್ನು ವಿನ್ಯಾಸ ಮಾಡುತ್ತಿದ್ದರು. ಈಕೆ "ಅಂಗವಿಕಲರು' ಎಂಬ ಪದವನ್ನು ಬಳಸುತ್ತಿರಲಿಲ್ಲ.  ಈಕೆಯ ಮಾತಿನಲ್ಲಿ ಅವರು "ಸ್ಪೆಷಲ್‌ ಪೀಪಲ್‌'. "ಶಿಷ್ಟ‌ ಜನರಿಗೆ ವಿಶೇಷ ಉಡುಗೆ' ಅವರ ಡ್ರೆಸ್‌ ಡಿಸೈನಿಂಗ್‌ನ ಉದ್ದೇಶವಾಗಿತ್ತು.

        ನನಗೀಗಲೂ ನೆನಪಿದೆ, ಆಗಷ್ಟೇ ಹುಟ್ಟಿದ ನನ್ನ ಪುಟ್ಟ ಮಗಳಿಗೆ ಯಾರೋ ಕಿರಿದಾದ ಕೊರಳಿನ ತುಂಬು ತೋಳಿನ ಫ್ರಾಕ್‌ ಕೊಟ್ಟಿದ್ದರು. ಆ ಸಣ್ಣ ರಂಧ್ರದಲ್ಲಿ ಮಗುವಿನ ತಲೆ ತೂರಿಸಿ ತುಂಬು ತೋಳುಗಳಿಂದ ಕೈ ಕಿತ್ತು ಹೊರತರುವಷ್ಟರಲ್ಲಿ ಸಾಕು ಸಾಕಾಗಿತ್ತು. ನನ್ನ ಗೆಳತಿ ಸ್ಪಾ$ಸ್ಟಿಕ್‌ ಮಗುವಿಗೆ ಬಟ್ಟೆ ತೊಡಿಸಲು ಪಡುವ ಪಾಡು ಕಂಡಿ¨ªೆ. ಕೈ ಮತ್ತು ಕಾಲುಗಳು ಸ್ವಾಧೀನವಿಲ್ಲದ ಆ ಮಗುವನ್ನು ಬಹಳಷ್ಟು ಬಾರಿ ಬರೀ ಬಟ್ಟೆಯಲ್ಲಿ ಸುತ್ತಿ ಇಟ್ಟದ್ದು ನೋಡಿ¨ªೆ. ಪ್ರತಿಬಾರಿ ಶೌಚಕ್ಕೆ ಚಡ್ಡಿ ಬಿಚ್ಚಿ ತೊಡಿಸುವ ಶ್ರಮವನ್ನು ವಿವರಿಸುವುದು ಕಷ್ಟವಿತ್ತು. "ಅಂಧರ ಸಂಸ್ಥೆ'ಯಲ್ಲಿ ಕುರುಡು ಮಕ್ಕಳು ಅನೇಕ ಬಾರಿ ಹಿಂದು ಮುಂದಾಗಿ ಬಟ್ಟೆ ತೊಟ್ಟದ್ದು ಕಂಡಿತ್ತು. ಯಾರಿಗೂ ಈ ಭಿನ್ನಚೇತನರಿಗೆ ಅನುಕೂಲಕರವಾದ, ಸುಲಭವಾಗಿ ಸ್ವತಃ ಹಾಕಿಕೊಳ್ಳಲು ಸಾಧ್ಯವಾಗುವಂಥ ಆರಾಮದ ಉಡುಗೆಯನ್ನು ವಿನ್ಯಾಸ ಮಾಡುವುದು ಹೊಳೆದಿರಲೇ ಇಲ್ಲ.
        ಸಿನೆಮಾ ತಾರೆಯರಿಗೋ, ರೂಪದರ್ಶಿಗಳಿಗೋ, ಸೌಂದರ್ಯ ರಾಣಿಯರಿಗೋ ವಿನ್ಯಾಸ ಮಾಡಿದ ಉಡುಗೆ ಪತ್ರಿಕೆಗಳ ಮುಖಪುಟಗಳ ವಿಷಯವಾಗುತ್ತದೆ, ಆದರೆ, ವಿಶೇಷ ಉಡುಪಿನ ಅಗತ್ಯ ವಿರುವ ವಿಶೇಷ ಜನರಿಗೆ ಉಡುಪು ವಿನ್ಯಾಸ ಮಾಡುವುದು ಸುದ್ದಿಯಾಗದು. ಈ ವಿಶೇಷ ವಿನ್ಯಾಸದ ಉಡುಗೆಗಳನ್ನು ಯಥೇತ್ಛ ಸಂಖ್ಯೆಯಲ್ಲಿ ತಯಾರಿಸಿ ಮಾರುಕಟ್ಟೆಗೆ ತಳ್ಳಲಾಗದು. ಹಣ, ಗ್ಲಾ éಮರ್‌ಎರಡೂ ಇಲ್ಲದ ಈ ರಂಗ ಬಹುಶಃ ಯಾರನ್ನೂ ಆಕರ್ಷಿಸಿರಲಿಲ್ಲ. ಇಂಥ ವಿಶೇಷ ಕಾರ್ಯಕ್ಕೆ ದುರ್ಗಾ ಬಾಲ್ಯದಲ್ಲಿಯೇ ಕೈ ಹಾಕಿದ್ದರು. ಹವ್ಯಾಸವಾಗಿ ಆರಂಭವಾದ ದುರ್ಗಾರವರ ಉಡುಪಿನ ವಿನ್ಯಾಸ, ನಂತರ ವೃತ್ತಿಯಾಗಿ ಹೊಸ ತಿರುವು ಕಂಡಿತ್ತು. 

        ದುರ್ಗಾ ಹುಟ್ಟಿ ಬೆಳೆದ¨ªೆಲ್ಲ ದೆಹಲಿಯಲ್ಲಿ. ಓದಿದ್ದು ಲೇಡಿ ಇರ್ವಿನ್‌ ಶಾಲೆಯಲ್ಲಿ. ನಂತರ ಸೇರಿದ್ದು ಲೇಡಿ ಇರ್ವಿನ್‌ ಕಾಲೇಜು. ಇಲ್ಲಿ ಗೃಹ ವಿಜ್ಞಾನದಲ್ಲಿ ಬಿ.ಎಸ್ಸಿ. ಮಾಡಿದರು. ಬಿ.ಎಸ್ಸಿ.ಯಲ್ಲಿ ಡಿಸ್ಟಿಂಕ್ಷನ್‌ ಪಡೆದ ದುರ್ಗಾ ಅವರಿಗೆ ಕಾಲೇಜು ಎಂ.ಎಸ್ಸಿ. ಮಾಡಲು ಅನುಕೂಲ ಒದಗಿಸಿತು. ಆಕಾಲದಲ್ಲಿ ದೆಹಲಿಯÇÉೆಲ್ಲೂ 'ಟೆಕ್ಸ್‌ಟೈಲ್‌ ಅಂಡ್‌ ಕ್ಲೋತಿಂಗ್‌' ವಿಷಯದಲ್ಲಿ ಸ್ನಾತಕೋತ್ತರ ಪದವಿ ಇರಲಿಲ್ಲ.
        ಬರೋಡಾದ "ಮಹಾರಾಜ ಸಯ್ನಾಜಿ ರಾವ್‌ ವಿಶ್ವದ್ಯಾಲಯ'ದಲ್ಲಿ ವಿದ್ಯಾರ್ಥಿವೇತನ ಪಡೆದು ದುರ್ಗಾ
        ಓದಲು ಹೋದರು. ಎಂ.ಎಸ್ಸಿ. ಮುಗಿಸಿ ಹಿಂತಿರುಗಿ ಬಂದು ತಾವು ಓದಿದ ಲೇಡಿ ಇರ್ವಿನ್‌ ಕಾಲೇಜಿನ "ಟೆಕ್ಸ್‌ಟೈಲ್‌ ಅಂಡ್‌ ಕ್ಲೋತಿಂಗ್‌' ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು.

        ಹನ್ನೆರಡು ಮಕ್ಕಳ ಮನೆಯಲ್ಲಿ ಹಿರಿಯ ಮಗಳಾಗಿ ಹುಟ್ಟಿದ ದುರ್ಗಾರವರದು ತುಂಬು ಕುಟುಂಬ. ಅವರ ಕೊನೆಯ ತಮ್ಮನಿಗೆ ಬಲ ಕೈ ಮತ್ತು ಕಾಲು ಸ್ವಾಧೀನವಿರಲಿಲ್ಲ. ಈ ತಮ್ಮ ಪ್ಯಾಂಟು, ಶರಾಯಿ ಮತ್ತು ಒಳ ಉಡುಪು ತೊಡಲು ಹೆಣಗುವುದನ್ನು ಕಂಡಿದ್ದರು. ಬೆಳೆದಂತೆ ಸಹಾಯಕ್ಕೆ ಇತರರನ್ನು ಅವಲಂಬಿಸುವುದು ಮತ್ತಷ್ಟು ಸಂಕೋಚ, ಮುಜುಗರದ ವಿಷಯವಾಗಿತ್ತು. ಭಿನ್ನ ಚೇತನರಿಗೆ ಸ್ವಾವಲಂಬನೆ ನೀಡಬಲ್ಲ ಉದ್ದೇಶ ಬಹುಶಃ ದುರ್ಗಾರವರ ಮನಸ್ಸಿನಲ್ಲಿ ಆಗಲೇ ಮೂಡಿತ್ತು. ಕೈಕಾಲು ನೆಟ್ಟಗಿರುವ ನಾವು ಉಡುಪು ತೊಡುವ ಕ್ರಿಯೆ ಕೈ ಕಾಲು ಇಲ್ಲದವರಿಗೆೆ, ಪಾರ್ಶ್ವವಾಯು ಪೀಡಿತರಿಗೆ, ಸೊಂಟದ ಮೇಲೆ  ಅಥವಾ ಕೆಳಗೆ ಸ್ವಾಧೀನ ಕಳಕೊಂಡವರಿಗೆ ಎಷ್ಟು ಪ್ರಯಾಸದ್ದು ಎಂದು ಊಹಿಸಲಾರೆವು.

        ಕೈಯ ಸ್ವಾಧೀನವಿಲ್ಲದ ಮಗುವಿಗೆ ಕೈ ತೂರಿಸುವುದು ಸುಲಭದ್ದಲ್ಲ. ಪ್ರತಿ ಬಾರಿ ಶೌಚಕ್ಕೆ ಹೋದಾಗ ಪ್ಯಾಂಟು ತೆಗೆದು ಮತ್ತೆ ಹಾಕುವುದು ಕಷ್ಟದ ಕೆಲಸ. ತಮ್ಮದೇ ಆದ ವೃತ್ತಿ ಹಿಡಿದು ಆರ್ಥಿಕವಾಗಿ ಸ್ವಾವಲಂಬಿಗಳಾದ ವಿಭಿನ್ನ ಚೇತನರನ್ನೂ ದಿನದಿನದ ಉಡುಪು ತೊಡುವ ಕ್ರಿಯೆ ಕಾಡಿಸುತ್ತದೆ, ಇತರರನ್ನು ಅವಲಂಬಿಸುವಂತೆ ಮಾಡುತ್ತದೆ. ಉಡುಪು ತೊಡಿಸುವಂಥಾ ಅತ್ಯಂತ ವೈಯಕ್ತಿಕ ಕೆಲಸಕ್ಕೆ ತನ್ನವರು ಜೊತೆ ಇರದೆ ವಿಭಿನ್ನ ಚೇತನರು ಹೊರ ಜಗತ್ತಿನಲ್ಲಿ ಮುನ್ನುಗ್ಗಲಾರದ ಪ್ರಸಂಗಗಳಿವೆ.
        ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುವವರಿಗೂ ಸಾಮಾನ್ಯ ಉಡುಗೆಗಳನ್ನು ತೊಡಿಸುವುದು, ತೆಗೆಯುವುದು ಅತಿ ಪ್ರಯಾಸದ ಕೆಲಸ. ವಿಭಿನ್ನ ಚೇತನರ ಅಗತ್ಯಗಳು ದುರ್ಗಾರವರಿಗೆ ಅತ್ಯಂತ ನಿಕಟವಾಗಿ ಪರಿಚಯವಾಗಿತ್ತು. "ಅಂಗವಿಕಲರ ಸಂಸ್ಥೆ'ಗಳಿಗೆ "ಸ್ಪಾಸ್ಟಿಕ್‌ ಸೊಸೈಟಿ'ಗಳಿಗೆ ಭೇಟಿಕೊಟ್ಟ ದುರ್ಗಾ, ಅವರ ಅಗತ್ಯಗಳನ್ನು ಮತ್ತಷ್ಟು ಸೂಕ್ಷ್ಮವಾಗಿ ಅರಿತರು.

        ದುರ್ಗಾ ವಿವಾಹವಾದದ್ದು ಬಂಗಾಲಿ ಯುವಕನನ್ನು. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುವ ಪತಿಯೊಡನೆ ಅವರಿಗೆ ಬೆಹರಿನ್‌, ಲಂಡನ್‌ಗಳಲ್ಲಿ ಕೆಲವು ವರ್ಷ ಕಳೆಯುವ ಅವಕಾಶ ದೊರೆಯಿತು. ಲಂಡನ್‌ನಲ್ಲಿ ಇದ್ದ ಸಮಯ, ದುರ್ಗಾ ಡಿಸೆಬಿಲಿಟಿ ಅವೇರ್‌ನೆಸ್‌ ಕೋರ್ಸ್‌ ಮಾಡಿದರು. ಲಂಡನ್‌ನಲ್ಲಿ ವಿಭಿನ್ನ ಚೇತನರ ಅಗತ್ಯಗಳ ಬಗ್ಗೆ ಇದ್ದ ಜಾಗೃತಿಯನ್ನು ಗಮನಿಸಿದಾಗ, ಅಂಥ ವಿಶೇಷ ಉಡುಪುಗಳು ಅಂಗಡಿಯಲ್ಲಿ ಸಿಗುವುದನ್ನು ನೋಡಿದಾಗ, ದುರ್ಗಾ ಅವರಿಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿತು. ಭಾರತದಲ್ಲೂ ಇಂಥ ಉಡುಪುಗಳ ಅಗತ್ಯವಿದೆ ಅನಿಸಿತು.

        ಭಾರತಕ್ಕೆ ಹಿಂತಿರುಗಿದ ದುರ್ಗಾ, ವಿಭಿನ್ನ ಚೇತನರಿಗೆ ವಿಶೇಷ ಉಡುಪು ಗಳನ್ನು ವಿನ್ಯಾಸ ಮಾಡುವತ್ತ ತಮ್ಮ ಗಮನವನ್ನು ಹರಿಸಿದರು. ಇವರು ಪಿ.ಎಚ್‌ಡಿ.ಗೆ ಆರಿಸಿಕೊಂಡ ವಿಷಯ, "ಸ್ಪೆಷಲ್‌ ವೇರ್‌ ಫಾರ್‌ ಸ್ಪೆಷಲ್‌ ಪೀಪಲ್‌'.

        ದುರ್ಗಾ ಅವರು ಉಡುಪನ್ನು ಕೋಣೆಯಲ್ಲಿ ಕುಳಿತು ವಿನ್ಯಾಸ ಮಾಡುತ್ತಿರಲಿಲ್ಲ. ಒಬ್ಬೊಬ್ಬ ವಿಭಿನ್ನ ಚೇತನರ ಅಗತ್ಯವೂ ಬೇರೆ ಬೇರೆಯಾಗಿರುತ್ತದೆ. ಯಾರಿಗೋ ಬಲ ಕೈ ಸ್ವಾಧೀನದಲ್ಲಿರಬಹುದು, ಇನ್ಯಾರಿಗೋ ಎಡಗೈ. ಯಾರಿಗೋ ಸೊಂಟದ ಕೆಳಗೆ ನಿಯಂತ್ರಣ ಇಲ್ಲದಿರಬಹುದು. ಯಾರಿಗೋ ಕೇವಲ ಎರಡು ಬೆರಳುಗಳಲ್ಲಿ ಕೊಂಚ ಶಕ್ತಿ ಉಳಿದಿರಬಹುದು. ಆಯಾ ವ್ಯಕ್ತಿಯ ದೈಹಿಕ ಬಲವನ್ನು ಮೊದಲು ಅಧ್ಯಯನ ಮಾಡುತ್ತಿದ್ದರು. ಆಯಾ ವ್ಯಕ್ತಿಯ ತಂದೆತಾಯಿಗಳೊಡನೆ, ವೈದ್ಯರು, ಥೆರಪಿಸ್ಟ್‌ ಜೊತೆಯಲ್ಲಿ ಮಾತನಾಡಿ ಅವರ ಅಗತ್ಯಗಳನ್ನು ಗುರುತು ಹಾಕಿಕೊಳ್ಳುತ್ತಿದ್ದರು. ನಂತರ ಆಯಾ ವ್ಯಕ್ತಿಯ ವಿಶೇಷ ಅಗತ್ಯಕ್ಕೆ ತಕ್ಕಂತೆ ಉಡುಪನ್ನು ವಿನ್ಯಾಸ ಮಾಡುತ್ತಿದ್ದರು. ಅವುಗಳನ್ನು "ಅಂಗವಿಕಲರ ಸಂಸ್ಥೆ'ಗಳಿಗೆ ಪರಿಶೀಲನೆಗೆ ಕೊಡುತ್ತಿದ್ದರು. ಅವರು ತಿಳಿಸಿದ ಅಗತ್ಯದ ಮಾರ್ಪಾಡುಗಳನ್ನು ಅಳವಡಿಸುತ್ತಿದ್ದರು. 

        ಅವರ ಮನೆಗೆ ನಾನು ಹೋಗಿದ್ದಾಗ, ದುರ್ಗಾ ತಮ್ಮ ಮಲಗುವ ಕೋಣೆಗೆ ಕರೆದೊಯ್ದಿದ್ದರು. ಅಲಮಾರಿನ ತುಂಬಾ ಒಟ್ಟಿದ್ದ ಉಡುಪುಗಳನ್ನು ನನ್ನ ಮುಂದೆ ಗುಡ್ಡೆ ಹಾಕಿದ್ದರು. ಒಂದು ಸ್ಕರ್ಟ್‌ ಎತ್ತಿಕೊಂಡಿದ್ದೆ. ನೋಡಲು ಸಾಧಾರಣವಾಗಿ ಕಾಣುವ ಈ ಸ್ಕರ್ಟಿನ ಹಿಂಭಾಗ ಮೇಲೆತ್ತಿ ಸಿಗಿಸುವಂತಿತ್ತು. ಚಡ್ಡಿಗಳಲ್ಲಿ ಶೌಚಕ್ಕೆ ಅನುಕೂಲವಾಗಿ, ತಳ ಭಾಗ ಮಾತ್ರ ತೆರೆದು ಮುಚ್ಚುವಂತಿತ್ತು. ಮಗುವಿಗೆ ಪ್ಯಾಂಟಿನಲ್ಲಿ, ಇಲ್ಲ ಲಂಗದಲ್ಲಿ ಹಿಂಭಾಗ ಅಥವಾ ಮುಂಭಾಗ ಪ್ಯಾಂಟ್‌ ಬಿಚ್ಚದೆಯೇ ಎತ್ತಿಕೊಳ್ಳುವಂತಿತ್ತು. ಉದ್ದನೆಯ ತೋಳಿನಲ್ಲಿ ಕೈ ತೂರಿಸಲಾಗದಿರುವ ವ್ಯಕ್ತಿಗಳಿಗೆೆ, ಬೇರ್ಪಡಬಲ್ಲ ತೋಳುಗಳಿದ್ದ ಶರಾಯಿಗಳಿದ್ದವು.
        ಎರಡು ತುಂಡುಗಳ ಫ್ರಾಕ್‌ ನೋಡಿದ್ದೆ. ಒಂದು ತುಂಡಿನ ಮೇಲೆ ಮಗುವನ್ನು ಮಲಗಿಸಿ, ಇನ್ನೊಂದನ್ನು ಹೊದೆಸಿ, ಪಕ್ಕೆಗಳಲ್ಲಿರುವ ಮೃದುವಾದ ವೆಲೊðà ಅಥವಾ ಒತ್ತು ಗುಂಡಿಗಳ ಸಹಾಯ ದಿಂದ ಜೋಡಿಸಬಹುದಿತ್ತು. ಗುಂಡಿ ಹಾಕಿಕೊಳ್ಳಲಾರದವರಿಗೆ ವಿಶೇಷ ದಾರದ ಲಾಡಿಗಳಿದ್ದವು, ಲೂಪ್‌ಗ್ಳಿದ್ದವು. ಎಳೆದು ತೆಗೆಯುವ, ಇಲ್ಲ ಮೃದುವಾದ ವೆಲೊðà ಬಳಸಿ ಒತ್ತಿದರೆ ಕೂಡಿಕೊಳ್ಳುವಂಥಾ ಉಡುಪುಗಳಿದ್ದವು.

        ಸಾಕಷ್ಟು ಪ್ರವಾಸ ಮಾಡಿದ್ದ ದುರ್ಗಾ ತಾವು ಹೋದಲ್ಲೆಲ್ಲಾ ಆ ಜಾಗದ ಉಡುಪುಗಳ ವೈಶಿಷ್ಟ್ಯವನ್ನು, ಅನುಕೂಲವನ್ನು ಗಮನಿಸುತ್ತಿದ್ದರು, ಗುರುತು ಹಾಕಿಕೊಳ್ಳುತ್ತಿದ್ದರು. ಒಮ್ಮೆ ಹಿಮಾಲಯದ ಗುಡ್ಡಗಾಡುಗಳ ಪಹಾಡಿ ಜನರು ಉದ್ದನೆಯ ನಿಲುವಂಗಿಯ ಒಳಗೆ ಹಾಕುವ ಪೈಜಾಮ ಗಮನಿಸಿದಾಗ, ಸಾಧಾರಣ ಕಾಣುವ ಅವರ ಪೈಜಾಮದಲ್ಲಿ ಶೌಚ ಭಾಗದಲ್ಲಿ ದೊಡ್ಡ ರಂಧ್ರವಿರುವುದನ್ನು ನೋಡಿದರು. ವಿಪರೀತ ಚಳಿಯ ಪರಿಸರದಲ್ಲಿ ಪೈಜಾಮ ಬಿಚ್ಚಿ ಶೌಚಕ್ಕೆ ಹೋಗುವುದು ಪ್ರಯಾಸದ ಕೆಲಸ. ಹಾಗಾಗಿ, ಈ ರೀತಿಯ ವಿನ್ಯಾಸ ಇರಬೇಕು. ದುರ್ಗಾರವರಿಗೆ ತಟ್ಟನೆ ಹೊಸ ಉಪಾಯ ಹೊಳೆದಿತ್ತು. ಇದೇ ವಿನ್ಯಾಸವನ್ನು ಸುಧಾರಿಸಿ, ರಂಧ್ರದ ಬದಲು ಬೇರ್ಪಡಿಸಬಲ್ಲ ಗುಂಡನೆಯ ತುಂಡನ್ನು ಆ ಭಾಗಕ್ಕೆ ಅಳವಡಿಸಿ ವಿನ್ಯಾಸ ಮಾಡಿದರು. ಇದೀಗ ವಿಭಿನ್ನ ಚೇತನರು ಪೈಜಾಮ ಬಿಚ್ಚದೆ, ಶೌಚಕ್ಕೆ ಹೋಗಬಹುದಾಯಿತು. ತೊಡಲು ಸುಲಭವಾದ, ತೊಟ್ಟಾಗ ಹಿಂಸೆಯಾಗದೆ ಆರಾಮವಿರುವ, ಶೌಚಕ್ಕೆ ಬಿಚ್ಚಬೇಕಿಲ್ಲದ ಅನುಕೂಲಕರ ಉಡುಪುಗಳನ್ನು ದುರ್ಗಾ ವಿನ್ಯಾಸ ಮಾಡಿದ್ದರು. ಕುರುಡರಿಗೆ ಸ್ಪರ್ಶದ ಮೂಲಕ ಬಟ್ಟೆಯ ಹಿಂಭಾಗ-ಮುಂಭಾಗ ತಿಳಿಯುವಂಥ ವಿನ್ಯಾಸಗಳನ್ನು ಅಳವಡಿಸಿದ್ದರು.

        ಇವರ ಉಡುಪುಗಳ ಇನ್ನೊಂದು ಮುಖ್ಯ ಗುಣ ಅವು ವಿಭಿನ್ನ ಚೇತನರಿಗೆ  ವಿನ್ಯಾಸ ಮಾಡಿದ್ದಾದರೂ, ಅವು ಸಾಧಾರಣ ವ್ಯಕ್ತಿ ತೊಡುವ ಉಡುಗೆಯಂತೆ ಕಾಣುತ್ತಿದ್ದವು. ಈ ಬಗ್ಗೆ ದುರ್ಗಾ ವಿಶೇಷ ಜಾಗರೂಕತೆ ವಹಿಸಿದ್ದರು. ಈ ಉಡುಪು ತೊಟ್ಟ ವ್ಯಕ್ತಿ ಹೊರಗೆ ತಿರುಗಾಡುವಾಗ ಆತನ ಬಟ್ಟೆಗಳು ಬೇರೆಯವರಿಗೆ ಭಿನ್ನವಾಗಿ ಕಾಣುತ್ತಿರಲಿಲ್ಲ. ಬರೀ ಉಡುಪುಗಳಷ್ಟೇ ಅಲ್ಲ, ಮಕ್ಕಳ ವಿಶೇಷ ಸಹಾಯಕ ಸಾಧನಗಳನ್ನು ದುರ್ಗಾ ವಿನ್ಯಾಸ ಮಾಡಿದ್ದರು. ಸೊಂಟದ ಮೇಲ್ಭಾಗ ಸ್ವಾಧೀನವಿಲ್ಲದ ಮಗುವಿಗೆ, ಕುರ್ಚಿಯಲ್ಲಿ ಕೂರಿಸಿ, ಕುರ್ಚಿಗೆ ಕಟ್ಟುವಂತೆ, ನೇರ ಕುಳಿತುಕೊಳ್ಳಲು ಅನುಕೂಲವಾದ, ಕಟ್ಟಿದರೆ ಹಿಂಸೆಯಾಗದ, ಮೃದುವಾದ ಪಟ್ಟಿಗಳನ್ನು ತೋರಿಸಿದ್ದರು.

        ದುರ್ಗಾ ಅವರು 2000ದಲ್ಲಿ ತಮ್ಮ ಪ್ರಾಧ್ಯಾಪಿಕೆಯ ಕೆಲಸದಿಂದ ನಿವೃತ್ತರಾದರೂ ತಮ್ಮ ವಿಶೇಷ ವಿನ್ಯಾಸದ ಕೆಲಸವನ್ನು ಸದಾ ಕಾಲಕ್ಕೂ ಮುಂದುವರೆಸುವುದಾಗಿ ಹೇಳಿದ್ದರು. ದುರ್ಗಾರೊಡನೆ ಕೆಲವು ಗಂಟೆಗಳನ್ನು ಕಳೆದು, ಆ ರಾತ್ರಿ ಹತ್ತು ಗಂಟೆಗೆ ಅವರ ಮನೆಯಿಂದ ಹೊರಬಿದ್ದಂತೆ, ಇಲ್ಲಿಯವರೆಗೂ ಪತ್ರಿಕೆಯಲ್ಲಿ ಸುದ್ದಿಯಾಗದ, "ಡ್ರೆಸ್‌ ಡಿಸೈನಿಂಗ್‌'ನ ಮತ್ತೂಂದು ಮಾನವೀಯ ಮುಖ ನನಗೆ ಪರಿಚಯವಾಗಿತ್ತು.

        ದುರ್ಗಾ ಅವರನ್ನು ಮತ್ತೆ ಭೇಟಿ ಮಾಡಲು ಮನಸ್ಸು ತುಡಿಯುತ್ತಿದೆ. "ಗೂಗಲ್‌', "ಫೇಸ್‌ ಬುಕ್‌', "ಲೇಡಿ ಇರ್ವಿನ್‌ ಕಾಲೇಜಿ'ನ ವೆಬ್‌ಸೈಟ್‌ ಎಲ್ಲಾ ಹುಡುಕಿ ನಿರಾಶಳಾದೆ. ಅವರು ತಪಸ್ಸಿನಂತೆ ಕೈಗೊಂಡ ಮಾನವೀಯ ಉದ್ದೇಶದ ಉಡುಪಿನ ವಿನ್ಯಾಸವನ್ನು ಮುಂದುವರೆಸುತ್ತಲೇ ಹೋಗಿದ್ದಾರೆಂದು ಊಹಿಸಲು ಇಚ್ಛಿಸುತ್ತೇನೆ. 

        ಇಂದು ಕಛೇರಿಗೆ ಫಿಯಾಸ್‌ ಖಾನ್‌ ಹೊಲೆದು ಕೊಟ್ಟ ಉಡುಗೆಯನ್ನು ತಲೆಯ ಮೇಲಿಂದ‌ ಸುಲಭವಾಗಿ ತೊಟ್ಟು, ಭುಜದ ಮೇಲೆ ಹುಕ್‌ಗಳನ್ನು ಹಾಕಿಸಿಕೊಂಡು,  ಜಿಪ್‌ ಕಾಣದಂತೆ ಮರೆಯಾಗಿಸಿದ ರೀತಿಗೆ ಮೆಚ್ಚಿ, ಕೊರಳಿಗೆ ಸ್ಲಿಂಗ್‌ ನೇತುಹಾಕಿ ಒಂದಿಷ್ಟೂ ತೊಂದರೆ ಇಲ್ಲದೆ ಹೊರಟೆ. ಹೊರಗೆ ಜಗತ್ತು ಕಾದಿತ್ತು ಕೌತುಕದಲ್ಲಿ, ನಾನು ಹೊರಟಿದ್ದೆ ಸಂಭ್ರಮದಲ್ಲಿ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus