ಕರುಣಾ ಬಿ. ಎಸ್. | Feb 17, 2013
ನಮ್ಮ ಕಥಾನಾಯಕಿ 'ಸಣ್ಣಕ್ಕ'ಳ ಮೂಲ ನಾಮಧೇಯ 'ಸಂಗವ್ವ ಹಿರೇಮಠ' ಎಂದು. ಅವಳು ಓದುತ್ತಿದ್ದ ಶಾಲೆ ಧಾರವಾಡಕ್ಕೆ ಸೇರಿಕೊಂಡಂ ತೆಯೇ ಇದೆ. ಬ್ರಿಟಿಷರು ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿಸಿದ ಶಾಲೆಯದು. ಕ್ರೆ„ಸ್ತ ಧರ್ಮೀಯರೇ ಹೆಚ್ಚಾಗಿ ಶಿಕ್ಷಕ, ಆಡಳಿತ ವರ್ಗದಲ್ಲಿದ್ದುದರಿಂದಲೋ ಏನೋ ಶಾಲೆ ಶಿಸ್ತು, ಸ್ವತ್ಛತೆಯನ್ನು ಮೈಗೂಡಿಸಿಕೊಂಡಿತ್ತು. ಹಾಗೆಂದು, ಮಕ್ಕಳ ಮೇಲೆ ತಮ್ಮ ಧರ್ಮದ ನಂಬಿಕೆಯನ್ನು ಹೇರುವುದಾಗಲಿ, ಅವರ ಉಡುಗೆ ತೊಡುಗೆಗಳಲ್ಲಿ ಹಸ್ತಕ್ಷೇಪವನ್ನು ಮಾಡುವುದಾಗಲಿ ಎಂದೂ ಶಾಲೆಯ ಆಡಳಿತ ವರ್ಗ ಆಚರಿಸಿದ್ದಿಲ್ಲ. ಅದಕ್ಕೇ ಏನೋ ಸಣ್ಣಕ್ಕ ತನ್ನ ದೊಡ್ಡದಾದ ಹಣೆಯ ತುಂಬಾ ವಿಭೂತಿಯನ್ನು ಮೂರೂ ಬೆರಳುಗಳಿಂದ ಅಡ್ಡಡ್ಡವಾಗಿ ಧರಿಸುತ್ತಿದ್ದಳು.
"ಸಣ್ಣಕ್ಕ ನೀನ್ ಬಾಳ್ ತೆಳ್ಳಗದ್ದೀ, ನಿಂಗ್ ಹಿಂಗ ವಿಭೂತಿ ಹಚ್ಚಾದ ಸ್ವಲ್ಪನೂ ಚಲೋ ಕಾಣುದಿಲ್ಲ, ಹಿಂಗ ಬರಬ್ಯಾಡಲೇ' ಎಂದು ಗೆಳತಿಯರು ಅವಳನ್ನು ಅನೇಕ ಬಾರಿ ಮೂದಲಿಸಿದರೂ ಅವಳು ಬೇಸರ ಪಡದೇ ತನ್ನ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಳು.
ಸಂಗವ್ವ ಸಣ್ಣಕ್ಕಳಾದದ್ದೂ ಐದನೆಯ ತರಗತಿಯ ನಂತರವೇ. ಟೈಫಾಯಿಡ್ ಜ್ವರ ಬಂದು 10 ವರ್ಷದ ಹುಡುಗಿ 17 ಕೆ. ಜಿ. ಯಷ್ಟು ತೂಕವಾದಾಗ ಸಣ್ಣಕ್ಕ ಎನ್ನುವುದು ವಾಡಿಕೆಯಾಯಿತು. ಎಲ್ಲರಿಗೂ ಸಣ್ಣಕ್ಕ ಆಗಿ ಕೊನೆಗೆ ಸಂಗವ್ವಳು ಒಮ್ಮೊಮ್ಮೆ ತನ್ನ ಹೆಸರನ್ನು "ಸಣ್ಣಕ್ಕ' ಎಂದೇ ಪಠಿಸುತ್ತಿದ್ದಳು. ಸಣ್ಣಕ್ಕನ ಆಕಾರದ ಪರಿಣಾಮದಿಂದ ವಾರ್ಷಿಕ ಕ್ರೀಡಾಕೂಟದ ಸಮಯದಲ್ಲಿ ನಡೆಯುವ ವೈದ್ಯಕೀಯ ಪರೀಕ್ಷೆಯಲ್ಲಿ, ಅವಳ ಎತ್ತರ, ತೂಕ ಸಾಧಾರಣ ಮಟ್ಟಕ್ಕಿಂತ ಕಡಿಮೆ ಇರುತ್ತಿತ್ತು. ಪ್ರತಿವರ್ಷವೂ ಏಳನೆಯ ತರಗತಿಯವರೆಗೂ ಅವಳು "ಜ್ಯೂನಿಯರ್' ಪಟ್ಟವನ್ನು ಯಶಸ್ವಿಯಾಗಿ ಅಲಂಕರಿಸಿದ್ದಳು. ಅವಳ ಆಕಾರಕ್ಕೆ ವ್ಯತಿರಿಕ್ತವಾಗಿ ಸಣ್ಣಕ್ಕಳಿಗೆ ಆಸಕ್ತಿ ಇದ್ದುದು ಆಟ/ಕ್ರೀಡಾ ಚಟುವಟಿಕೆಗಳಲ್ಲಿ. ತಾನೂ ಒಂದು ದಿನ ದೊಡ್ಡ ಓಟಗಾರ್ತಿಯಾಗಬೇಕೆಂದು ಕನಸು ಕಾಣುತ್ತಿದ್ದಳು.
ಪ್ರತಿ ಶನಿವಾರವೂ ಮೂರನೇ ಪೀರಿಯಡ್ ಆಟಕ್ಕೆ ಮೀಸಲಾಗಿತ್ತು. ಶಾಲೆಯ ವಾರ್ಷಿಕ ಕ್ರೀಡಾಕೂಟಗಳಲ್ಲಿ 5- 6 ನೇಯ ತರಗತಿಯ ಹುಡುಗಿಯರಿಗೆ ಕುಂಟಾಟದ ಸ್ಪರ್ಧೆಯನ್ನೂ, 7ನೆಯ ತರಗತಿಯವರಿಗೆ ಖೊ-ಖೋ ಆಟವನ್ನು ಆಡಿಸುತ್ತಿದ್ದರು. ಅವಳ ತರಗತಿಯ 50 ವಿದ್ಯಾರ್ಥಿಯಿನಿಯರಲ್ಲಿ 16 ಜನರು 8 - 8 ಜನರ ಗುಂಪಾಗಿ ಕುಂಟಾಟವನ್ನು ಅಭ್ಯಾಸವನ್ನು ಮಾಡುತ್ತಿದ್ದರು. ಸಣ್ಣಕ್ಕಳು ಯಾವಾಗಲೂ ಜ್ಯೋತಿಯ ನಾಯಕತ್ವದ ಗುಂಪನ್ನೇ ಸೇರುತ್ತಿದ್ದಳು. ಏಕೆಂದರೆ, ಅವರ ವಿರೋಧಿ ಗುಂಪನ್ನು ಜಯಾ ಪ್ರತಿನಿಧಿಸುತ್ತಿದ್ದಳು. ಜಯಾಳ ಗುಂಪಿನಲ್ಲಿ ಸಣ್ಣಕ್ಕ ಕೆಲವರೊಡನೆ ಚಾಳಿ ಬಿಟ್ಟಿದ್ದಳು. ರೇಣು, ವಂದಿ, ಸುನ್ನಿ, ಪಪ್ಪಿ, ವಿಜ್ಜಿ, ಉಮಿ ಎಲ್ಲರೂ ಸಣ್ಣಕ್ಕ ಕುಂಟಲು ಶುರು ಮಾಡಲು, "ಇಕೀ ಇಷ್ಟ್ ತೆಳ್ಳಗದಾಳ ಅದೇನ್ ನಮ್ಮನ್ನ ಮುಡ್ತಾಳಲೇ. ನೋಡಲೇ ಅಕೀಗೆ ಒಂದು ಮಿನಿಟ್ ಕೂಡ ಕುಂಟಾಕ್ ಬರೂದಿಲ್ಲ... ಲಘೂನ ಕಾಲು ಬಿಟ್ಟ ಔಟ್ ಆಗ್ತಾಳ ಬಿಡ' ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿಸಿಕೊಳ್ಳುತ್ತಿದ್ದಳು.
ಅವರೆಲ್ಲರೂ ಜ್ಯೋತಿಗೂ ಹೇಳುತ್ತಿದ್ದರು, "ಜ್ಯೋತಿ ನೀನ ಆಕೀನ ಸೇರಿಸ್ಕೋ ಬ್ಯಾಡಲೇ ಒÇÉೆ ಅನ್ನಲೇ, ಅಕೀ ಅಳ್ಳಿಗುಂಡಿ ಆಗ್ತಾಳಷ್ಟ ' , "ಇರಲಿ ಬಿಡಲೇ ನಂಗ ಸಂಗಿ ಬಾಳ್ ಸೇರ್ತಾಳ' ಎಂದೇ ಜ್ಯೋತಿಯ ಉತ್ತರ!
ಸಣ್ಣಕ್ಕಳೂ ತಾನು ಚಾಳಿ ಬಿಟ್ಟವರ ಬಾಯಿ ಮುಚ್ಚಿಸಲು ಪ್ರತಿ ಶನಿವಾರವೂ ತನಗೆ ಮೀರಿದ ಪ್ರಯತ್ನವನ್ನು ಮಾಡುತ್ತಿದ್ದಳು. ಹೇಗಾದರೂ ರೇಣು, ವಂದಿ, ಸುನ್ನಿ, ವಿಜ್ಜಿ.... ಇವರನ್ನು ಮುಟ್ಟಲೇಬೇಕು. ಇಲ್ಲವೇ 3-4 ನಿಮಿಷವಾದರೂ ತಪ್ಪಿಸಿಕೊಳ್ಳಬೇಕು ಎಂದು. ಆದರೆ, ಅವಳು ಕುಂಟಲು ತೊಡಗಿದರೆ ಎದುರಾಳಿಗಳಿಗೆ ಹಬ್ಬದೂಟ ಇಲ್ಲವೇ ಅವಳು ತಪ್ಪಿಸಿಕೊಳ್ಳಲು ಬಂದರೆ ಸುಲಭವಾದ ಬಲಿ ಸಿಕ್ಕಂತೆ ಖುಷಿ !
ಆರನೆಯ ತರಗತಿಯ ಕೊನೆಯ ವೇಳೆಗೆ ಸಂಗವ್ವಳಿಗೆ ಕುಂಟಾಟ ತನಗೆ ಕಬ್ಬಿಣದ ಕಡಲೆ, ಅದು ಎಂದೂ ನಿಲುಕದ ಹುಳಿ ದ್ರಾಕ್ಷಿ ಎಂಬ ಮನವರಿಕೆಯಾಯಿತು. ಹೇಗಿದ್ದರೂ 7ನೆಯ- 8ನೆಯ ವರ್ಗದವರಿಗೆ ಖೋ- ಖೋ ಆಡಿಸುತ್ತಾರೆ. ಅದರÇÉೇ ತಾನು ಪ್ರವೀಣಳಾಗಬೇಕೆಂದು ಕನಸು ಕಾಣತೊಡಗಿದಳು. ಅದಕ್ಕೆ ಇನ್ನೂ ಒಂದು ಕಾರಣವಿತ್ತು. ಖೊ-ಖೊ ಆಟದಲ್ಲಿ ಜಾಣ್ಮೆಯಿಂದ ಎದುರಾಳಿಗಳನ್ನು ಹಿಡಿಯುವುದು, ತಪ್ಪಿಸಿಕೊಳ್ಳುವುದು.... ಕುಂಟಾಟದಷ್ಟು ಶ್ರಮವಿರಲಿಲ್ಲ. ಆದರೂ ಸಂಗವ್ವ ಳಿಗೆ ಈ ವಿಷಯದಲ್ಲೂ ಸಹ ಅಂತಹ ಅದೃಷ್ಟವಿದ್ದಂತೆ ಕಾಣಲಿಲ್ಲ. ಏಳನೆಗೆ ಸೇರಿದ ಕೆಲವೇ ವಾರಗಳಲ್ಲಿ ಫಿಲೋಮಿನಾ ಟೀಚರ್ "ಡ್ರಿಲ್' ಪೀರಿಯಡ್ ಸಮಯದಲ್ಲಿ "ಇನ್ನ ಖೋ- ಖೋ ಆಡ್ಲಿಕ್ಕ ಶುರು ಹಚೊRಳಿÅ, ಜ್ಯೋತಿ, ವಿಜ್ಜಿ ಕ್ಯಾಪ್ಟನ್ ಆಗ್ರವ್ವ , ಮಸ್ತ್ ಪ್ರಾಕ್ಟೀಸ್ ಮಾಡ್ರಿ' ಎಂದು ಹೇಳಿದ್ದೇ ಸಣ್ಣಕ್ಕಳಿಗೆ ಜ್ಯೋತಿಯ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಕಷ್ಟವಾಯಿತು. ಏಕೆಂದರೆ, ಸೀಮಾ, ರೂಪಾ ಒಮ್ಮೆ ತಪ್ಪಿಸಿಕೊಳ್ಳಲು ಶುರು ಮಾಡಿದರೆ ಆಟದ ಏಳು ನಿಮಿಷಗಳೂ ಎದುರಾಳಿ ಜಯಾಳ ತಂಡದವರಿಗೆ ತಲೆನೋವುಂಟು ಮಾಡುತ್ತಿತ್ತು!.
ಸಣ್ಣಕ್ಕನಿಗೆ ಇದೊಂದು ಯೋಚನೆಯಾಯಿತು. ಹೇಗಾದರೂ ಖೋ-ಖೋ ಪಂದ್ಯಾವಳಿಗಳÇÉಾದರೂ ತನ್ನ ಪ್ರತಿಭಾ (?) ಪ್ರದರ್ಶನ ಮಾಡಲೇಬೇಕೆಂದು ಕಾದಿದ್ದವಳಿಗೆ, ಅಳ್ಳಿಗುಂಡಿ (ಎಕ್ಸ್‌ಟ್ರಾ ಪ್ಲೇಯರ್) ಆಗಿ ತನಗೆ ಅವಕಾಶ ಸಿಗುವುದೇ ಎಂದು ಕಾಯುವಂತಾಗುತ್ತಿತ್ತು. ಇದರ ಜೊತೆಗೆ ಖೊ-ಖೋ ಆಟದಲ್ಲಿ ಎದುರಾಳಿಗಳನ್ನು ಹಿಡಿಯುವ, ಅವರಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಯಾಕೋ ಸಣ್ಣಕ್ಕಳಿಗೆ ಸರಿಯಾಗಿ ಅರ್ಥವಾಗುತ್ತಲೇ ಇರಲಿಲ್ಲ. ಒಮ್ಮೆ ಜ್ಯೋತಿಗೆ ಒಬ್ಬಳೇ ಏಕಾಂತದಲ್ಲಿ ಸಿಕ್ಕಿದಾಗ ಹೇಳಿದಳು ಕೂಡ. "ಜ್ಯೋತಿ, ನೋಡಲೇ ನಂಗ ಈ ಖೋ-ಖೋದ ರೂಲ್ಸ್ ಸರಿಯಾಗ ತಿಳೀವಲ್ತಲೇಪ್ಪ, ಹ್ಯಾಂಗ ತಪ್ಪಿಸಿಕೊಳ್ಳೂದ, ಹ್ಯಾಂಗ ಮುಟ್ಟೂದ ಸಲ್ಪ$ತಿಳಿಸಿಕೊಡಲೇ' ಎಂದಳು.
"ನೋಡಲೇ ಈ ಗೆರೀನಾಗ ಹಿಂಗ ಸ್ಟ್ರೇಯಟ್ ಬರಬೇಕ. ನೀ ಹಿಂಗ ಮುಟ್ಟಾಕತ್ತೀ, ನಾ ತಪ್ಪಸ್ಕೋತೀನಿ ಅನ್ಕೋ, ಆಗ ನೀ ಈ ಲೈನ್‌ನಾಗ ಬಂದ್ ಹಿಂಗ ನನ್ನ ಹಿಡೀ ಬೇಕ, ಆ ಬಾಜೂ ಈ ಬಾಜೂ ಹೋಗ್ಬಾರ್ದ. ಮತ್ತ ತಪ್ಪಿಸ್ಕೊಳ್ಳೂದ ಅಷ್ಟ, ಯಾರ ಹಿಡೀಲೀಕರ್ತಿರ್ತಾರÇÉಾ ಅವ್ರಿಗೇ ಮಸ್ತ್ ಆಟ ಆಡಿಸಬೇಕ, ಪೋಲ್ ಕಡಿ ಬಾಳ ಹೋಗಬ್ಯಾಡಲೇ...' ಎಂದೆÇÉಾ ಸಹನೆಯಿಂದ ಜ್ಯೋತಿ ಪ್ರಾತ್ಯಕ್ಷಿತೆಯೊಂದಿಗೆ ತರಬೇತಿ ನೀಡಿದಳು.
ಸಂಗವ್ವ ಮುಂದಿನ ಶನಿವಾರಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದಳು. ಶುಕ್ರವಾರ ರಾತ್ರಿಯೆಲ್ಲ ಆಟದಲ್ಲಿ ಹೀಗೆ ತಪ್ಪಿಸಿಕೊಳ್ಳಬೇಕು, ಹಾಗೆ ಮುಟ್ಟಬೇಕು, ತಾನು ಆಟದ ಅಷ್ಟೂ ಏಳು ನಿಮಿಷಗಳೂ ಒಬ್ಬಳೇ ತಪ್ಪಿಸಿಕೊಂಡಿದ್ದು ಔಟ್ ಆಗದೇ ಇದ್ದದ್ದು ಎಂದೆÇÉಾ ನಿಜವೆಂಬಂತೆ ಕನಸು ಬೇರೆ ಬಿದ್ದಿತ್ತು ಸಂಗವ್ವಳಿಗೆ !. ಬೆಳಿಗ್ಗೆ ಬೇಗ ಎದ್ದು ಮೋರೆ ತೊಳೆದು, ಜಳಕ ಮಾಡಿ, ಶಾಲೆಗೆ ಹೋಗುವವರೆಗೂ ಆಟದ ರಣತಂತ್ರ ರೂಪಿಸುವುದರÇÉೇ ಅವಳ ಗಮನ. ಅವಳಷ್ಟು ಕನಸು ಕಂಡಿದ್ದು ಅಂದು
ಸಾರ್ಥಕವಾಯಿತು. ಸೀಮಾ, ರೂಪಾ, ಸುಶೀಲಾ ಅಂದೆÇÉಾ ಒಂದÇÉಾ ಒಂದು ಕಾರಣದಿಂದ ಶಾಲೆಗೆ ಬಂದಿರಲಿಲ್ಲ. ಅಂತೂ ಕೊನೆಗೆ ಸಂಗವ್ವಳಿಗೆ ಅಳಿಗುಂಡಿಯಿಂದ ಮುಖ್ಯ ಆಟಗಾರ್ತಿಯಾಗಿ ಬಡ್ತಿ ದೊರೆಯಿತು. ಅವಳ ಕಿವಿಯಲ್ಲಿ ಹಿಂದಿನ ವಾರ ಜ್ಯೋತಿ ತನಗೆ ನೀಡಿದ ತರಬೇತಿಯ ಕೊರೆತ-ಮೊರೆತ.
ಹಾಗೂ ಹೀಗೂ ಒಂದು- ಒಂದೂವರೆ ನಿಮಿಷ ತಪ್ಪಿಸಿಕೊಳ್ಳುವದರಲ್ಲಿ ಸಾಕಾಯಿತು ಸಂಗವ್ವಳಿಗೆ.
ಎದುರಾಳಿ ವಿಜ್ಜಿ ಸಂಗವ್ವಳ ಉದ್ದ ಜಡೆಗೆ ಕೈಹಾಕಿ ಎಳೆದು ಮುಟ್ಟಿ ಔಟ್ ಮಾಡಿದಳು. ನಂತರ ಅವಳು ಜ್ಯೋತಿಗೆ ಕೇಳಿದ ಪ್ರಶ್ನೆ, "ಹ್ಯಾಂಗ ಆಡಿದೆಲೇ? ಚಲೋ ತಪ್ಪಿಸ್ಕೊಂಡೆ ಅÇÉಾ...' ಜ್ಯೋತಿ ಹೆಚ್ಚೇನೂ ಹೇಳದೇ ಹೂಂಗುಟ್ಟಿದಳಷ್ಟೇ. "ಈಗ ನಂಗ ಸಲ್ಪ, ಸಲ್ಪ$ ತಿಳೀಲಿಕ್ಕತ್ತದ, ಹ್ಯಾಂಗ ಆಡೂದಂತ... ನೀನ ಮುಂದಿನ ಆಟಾದಾಗೂ ನಂಗ ಚಾನ್ಸ ಕೊಡ, ನಾನ ಮಸ್ತ್ ಆಡ್ತೀನವಾ' ಎಂದಳು.
ಹೀಗಿರುವಾಗ ವಾರವಾರವೂ ಚಾನ್ಸ್ ಸಿಕ್ಕಿದರ ಸರಿ, ಇಲ್ಲದಿದ್ದರೆ ಬಹುತೇಕ ಬಾರಿ ಅಳ್ಳಿಗುಂಡಿಯಾಗಿ ಆಟವನ್ನು ಪ್ರೇಕ್ಷಕಿಯಾಗಿ ನೋಡು ವದೇ ಆಯಿತು. ಇತ್ತ ತಾನು ಖೋ-ಖೋ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ, ಏನೇ ಆದರೂ ಈಗ ತಂಡದಲ್ಲಿ ಇರುವವರೆಲ್ಲ ತನಗಿಂತ ಸಮರ್ಥರು. ತನಗೆ ಅವರಷ್ಟು ಶಕ್ತಿಯೂ ಇಲ್ಲ, ತಪ್ಪಿಸಿಕೊಳ್ಳುವ / ಹಿಡಿಯುವ ಉಪಾಯವೂ ಹೊಳೆಯುವದಿಲ್ಲ. ಖೋ-ಖೋ ಆಟವೂ ಸಹ ಕುಂಟಾಟದಂತೆ ಗಗನ ಕುಸುಮ ಎಂದು ರಾತ್ರಿ ಮುಸುಕು ಹೊದ್ದು ಮುಸು-ಮುಸು ಅಳುತ್ತಿದ್ದಳು. ಅವಳ ಅವ್ವ, "ಯಾಕವ್ವಾ ಸಂಗೀ ಅಳಲಿಕತ್ತೀ? ಕ್ಲಾಸ್‌ನಾಗ ಯಾರ್ ಕೂಡ ಜಗಳ ಹಚ್ಚೊ$Rಂಡಿ, ಇಲ್ಲ ಟೀಚರ ಏನಾರ ಅಂದ್ರೇನಾ?'ಎನ್ನಲು, "ಅವ್ವಾ , ನಾನ್ಯಾಕ ಇಷ್ಟ ತೆಳ್ಳಗದೀನ?, ನಂಗ ದಪ್ಪ, ಉದ್ದ ಆಗಬೇಕ ನೋಡ, ಎÇÉಾ ಜ್ಯೂನಿಯರ್ ಅದಿ ಅಂತ ನಗ್ತಾರ ನೋಡ ನಂಗ ಸಾಲಿನಾಗ...' ಎಂದು ಬಿಕ್ಕಲು ತೊಡಗಿದಳು. ಇದಾದ ಬಳಿಕ ಸಂಗವ್ವಳ ಅವ್ವ ಡಾಕ್ಟರ್‌ಗಳ ಬಳಿ ಹೋದಾಗಲೆಲ್ಲ "ನಮ್ಮ ಸಂಗವ್ವ ದಪ್ಪ ಅಗ್ಲೀಕ ಏನಾದ್ರೂ ಟಾನಿಕ್ ಬರಕೊಡ್ರೀಪಾ' ಎಂದು ಕೇಳುತ್ತಿದ್ದಳು. ಯಾವ ಟಾನಿಕ್‌ನಿಂದಲೂ ಸಂಗವ್ವ "ದಪ್ಪಕ್ಕ' ಆಗಲಿಲ್ಲ ! ಪ್ರೇಕ್ಷಕಳಾಗಿ ಖೋ-ಖೋ ತನ್ನ ಸಹಪಾಠಿಗಳು ಆಡುವುದನ್ನು ನೋಡುವುದು ತಪ್ಪಲಿಲ್ಲ.
ಒಂದು ಶನಿವಾರ ಇದ್ದಕ್ಕಿದ್ದಂತೆ ಎಲ್ಲ ಹುಡುಗಿಯರಿಗೂ ಒಂದು ಆಲೋಚನೆ ಬಂದಿತು. ವಾರವಾರವೂ ಖೋ-ಖೋ ಬಿಟ್ಟರೆ ಬೇರೆ ಆಟವಾಡದೇ ಬಹಳ ದಿನಗಳಾದವು. ಜ್ಯೋತಿ-ವಿಜ್ಜಿಯ ಗುಂಪಿನ ಮಧ್ಯೆ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಬಾರದೇಕೆ? ಎಂದು. ಸಂಗವ್ವಳು ಕ್ರಿಕೆಟ್‌ನ್ನು ಮಸ್ತಾಗಿ ನೋಡುತ್ತಾಳೆಂದು ಎಲ್ಲರಿಗೂ ತಿಳಿದೇ ಇತ್ತು. ಅವಳ ಬಳಿ ಒಂದು ಹಳೆಯ ಬ್ಯಾಟ್-ಬಾಲ್ ಸಹ ಇದ್ದಿದ್ದು ಗೊತ್ತಿತ್ತು.
ಸಂಗವ್ವಳನ್ನು ಸ್ವಲ್ಪ ಪುಸಲಾಯಿಸಿ ಬ್ಯಾಟ್, ಬಾಲ್ ತರುವಂತೆ ಮಾಡಿದರೆ ಹೇಗೆ ಎಂಬ ಯೋಚನೆ ಸುನ್ನಿಗೆ ಬಂದೇ ಬಿಡಬೇಕೇನು! "ಸಂಗೀ ನೀ ಬ್ಯಾಟ ತಂದ ಬಿಡಲೇ... ಮತ್ತ ನೀನ ಫಸ್ಟ ಬ್ಯಾಟ ಮಾಡಲೇ... ' ಎನ್ನುತ್ತಾ ಪ್ರತಿಕ್ರಿಯೆಗಾಗಿ ಜ್ಯೋತಿಯ ಮುಖ ನೋಡಿದಳು. ಜ್ಯೋತಿಗೆ ಇದರ ಸಂಚು ತಿಳಿಯದೇ ಅವಳು ಹೇಳಿದ್ದು ಸರಿಯೆನೆಸಿತು! ಒಟ್ಟಿನಲ್ಲಿ ಬ್ಯಾಟ್, ಬಾಲ್ ಬೇಕಿದ್ದರಿಂದ ಇತರ ಹುಡುಗಿಯರೂ ಸುನ್ನಿಯ ಮಾತನ್ನೇ ಅನುಮೋದಿಸಿದರು. ಸಂಗವ್ವಳಿಗೆ ಅಲ್ಲಿದ್ದ ಸಂಚು ತಿಳಿಯಲೇ ಇಲ್ಲ.
ಏಕಾಏಕೀ ತನಗೆ ಪ್ರಾಮುಖ್ಯ ಸಿಕ್ಕಿದ್ದು ಆಕಾಶದಲ್ಲಿ ಹಾರಾಡುವಂತಾಗಿತ್ತು. "ಆತಲೇ ನಾನ ಬ್ಯಾಟ, ಬಾಲ್ ತರ್ತೀನಲೆಪ್ಪಾ' ಎಂದು ಒಪ್ಪಿಗೆಕೊಟ್ಟಳು. ರಾತ್ರಿಯೆಲ್ಲ ಮತ್ತೆ ಮತ್ತೆ ಸಚಿನ್ ತೆಂಡೂಲ್ಕರ್‌ನಂತೆ ಸಿಕ್ಸರ್, ಫೋರ್‌ಗಳ ಮಳೆ ಸುರಿಸಿದಂತೆ ಕನಸಿನ ಮಹಾಪೂರ!
ಮೊದಲ ದಿನ ಬ್ಯಾಟ್, ಬಾಲ್ ಪ್ರಾಕ್ಟೀಸ್‌ಗಾಗಿ ಒಯ್ದು ಸಂಗವ್ವಳಿಗೆ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಅವಕಾಶ ದೊರೆಯಿತು. ಆದರೆ, ಐದು ರನ್ ಹೊಡೆಯುವುದರಲ್ಲಿ ಅವಳ ವಿಕೆಟ್ ಅಷ್ಟು ದೂರ ಬಿದ್ದಿತ್ತು. ಸಿಕ್ಸರ್, ಬೌಂಡರಿಗಳ ಮಳೆ ಸುರಿಸಬೇಕೆಂದುಕೊಂಡವಳಿಗೆ ಇಷ್ಟು ಬೇಗ ನಿರ್ಗಮಿಸುತ್ತಿರುವುದು ಬಹಳ ಕಸಿವಿಸಿಯಾುತು. ಮುಂದಿನ ಕೆಲವು ಪಂದ್ಯಗಳಲ್ಲೂ ಬಹುಬೇಗ ನಿರ್ಗಮಿಸಿದಳು ಸಂಗವ್ವ ! ಈಗ ಮೊದಲೇ ಅವಳನ್ನು ಹೊರಹಾಕಲು ಕಾಯುತ್ತಿದ್ದ ಜಯಾಳ ಕಡೆಯವರಿಗೆ ಇದೊಂದು ಒಳ್ಳೆಯ ಅವಕಾಶ ಒದಗಿ ಬಂದಿತು. ಕಡೆಗೆ, "ಸುನ್ನಿ ಸಂಗೀ ನೀ ಹಿಂಗ ಮಾಡಲೇ ಅಂಪೈರ್ ಆಗಿ ಬಿಡಲೇ, ಮಸ್ತ್ ಇರ್ತದ' ಎಂದಾಗ ಸಂಗವ್ವಳಿಗೂ ಇದು ಒಳ್ಳೆಯ ಆಲೋಚನೆ ಎಂದೆನಿಸಿತು!
ಸಂಗವ್ವಳ ಬ್ಯಾಟ್ ಆದುದರಿಂದಲೋ ಏನೋ, ಒಂದೆರಡು ಪಂದ್ಯಗಳಲ್ಲಿ ಸಂಗವ್ವಳ ಅಂಪೈರಿಂಗ್ ನಿರ್ಧಾರಗಳಿಗೆ ಮನ್ನಣೆ ಇದ್ದಿತು. ಆದರೆ, ನಂತರದ ಪ್ರಾಕ್ಟೀಸ್ ಪಂದ್ಯಗಳಲ್ಲಿ ಜಯಾಳ ಗುಂಪಿನವರ ಮೂಗು ತೂರಿಸುಕೆ ಆರಂಭವಾಯಿತು. ಕೊನೆಗೆ ಪಂದ್ಯ ನಾಳೆ ಇದೆ ಎಂದಾಗ ಸಂಗವ್ವಳ ಬ್ಯಾಟ್‌ನÇÉೇ ನಾವು ಆಟವಾಡುತ್ತಿದ್ದೇವೆ ಎಂದು ಮರೆತ ಹುಡುಗಿ ಯರು ವೀಣಾ ಪವಾರ್‌ಳನ್ನು ಅಂಪೈರ್‌ಳನ್ನಾಗಿ ತಂದು ಕೂಡಿಸಿದರು. ಇದರಿಂದ ಸಾಕಷ್ಟು ಘಾಸಿಗೊಂಡ ಸಂಗವ್ವ ಮಾರನೆಯ ದಿನ ಪಂದ್ಯ ನೋಡಲು ಹೋಗಲೂ ಇಲ್ಲ. ಇತ್ತ ಜ್ಯೋತಿಯ ಪ್ರತಿಭಟನೆಯೂ ಸಹ ನಡೆಯಲಿಲ್ಲ. ಸಂಗವ್ವಳ ಎಳೆಯ ಮನಸ್ಸು ಪದೇ ಪದೇ ತನ್ನ ಗೆಳತಿ ಯರ ನಡುವೆ ನಿರ್ಲಕ್ಷ éಕ್ಕೆ ಒಳಗಾಗುತ್ತಿರುವುದಕ್ಕೆ ಒಡೆದುಹೋಗಿತ್ತು. ಇನ್ನೆಂದೂ ಈ ಗುಂಪಿನ ಆಟ-ಪಾಠಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು. ವಾರ್ಷಿಕ ಪರೀಕ್ಷೆ ಮುಗಿಯುವುದರೊಳಗೆ ಜ್ಯೋತಿ, ಆಪ್ತರೊಡನೆ ಬಿಟ್ಟು ಎಲ್ಲರೊಡನೆ ಚಾಳಿ ಬಿಟ್ಟು ಬಿಟ್ಟಳು.
ಬೇಸಿಗೆ ರಜೆ ಮುಗಿಯಿತು!
ಬೇಸಿಗೆ ರಜೆ ಮುಗಿಯುವ ಸಮಯಕ್ಕೆ, ಸಂಗವ್ವಳ ತಂದೆಯವರಿಗೆ ಬೆಂಗಳೂರಿನ ಅವರ ಕಛೇರಿಯ ಮುಖ್ಯ ಶಾಖೆಗೇ ವರ್ಗವಾಯಿತು. ಒಂದು ಕಡೆ ಸಂಗವ್ವಳಿಗೆ ತನ್ನ ಮೆಚ್ಚಿನ ಶಾಲೆ ಬಿಟ್ಟು ಹೋಗುವ ದುಃಖ, ಮತ್ತೂಂದೆಡೆ ದೊಡ್ಡ ಪಟ್ಟಣವಾದ ಬೆಂಗಳೂರಿಗೆ ಹೋಗುವ ತವಕ, ಸಂಭ್ರಮ. ಏಳನೆಯ ತರಗತಿಯಲ್ಲಿ ಅತ್ತುÂತ್ತಮ ಅಂಕ ಗಳಿಸಿದ್ದ ಸಂಗವ್ವಳಿಗೆ ಬೆಂಗಳೂರಿನ ಉತ್ತಮ ಶಾಲೆಯÇÉೇ ಪ್ರವೇಶವೂ ದೊರೆಯಿತು. ಕೊನೆಯ ದಿನ ತನ್ನೆಲ್ಲ ಗೆಳತಿಯರನ್ನೆಲ್ಲ ಭೇಟಿಯಾಗಲು ಬಂದ ಸಂಗವ್ವಳಿಗೆ ಜ್ಯೋತಿ, ಸಂಗೀತಾ, ಮಮತಾ ಕೊನೆಯವರೆಗೂ ಜೊತೆಯಲ್ಲಿದ್ದು, ಹಾರ್ದಿಕ ಬೀಳ್ಕೊಡುಗೆ ನೀಡಿದರು. ಇನ್ನೊಂದಡೆ ಜಯಾಳ ತಂಡ ಯಥಾ ಪ್ರಕಾರ ಸಂಗವ್ವಳಿಗೆ ಕೊನೆಯ ದಿನವೂ ದ್ವೇಷದ ಗೆಳೆತನವನ್ನು ತೋರಿಸಲು ಮರೆಯಲಿಲ್ಲ...
ಬೆಂಗಳೂರಿನ ಕನ್ನಡ ಭಾಷೆ, ಅಲ್ಲಿನ ಆಂಗ್ಲ ಭಾಷಾ ಮೋಹ, ಸಂಸ್ಕೃತಿ, ಹುಡುಗಿಯರು ಎಲ್ಲವೂ ಸಂಗವ್ವಳಿಗೆ ಧಾರವಾಡಕ್ಕೆ ಹೋಲಿಸಿಕೊಂಡು ನೋಡಿದರೆ ಅಪಾರವಾದ ವ್ಯತ್ಯಾಸ ಗೋಚರಿಸತೊಡಗಿತು. ಎÇÉೆಲ್ಲೂ ಆಂಗ್ಲ ಮಿಶ್ರಿತ ಕಂಗ್ಲೀಷ್ ಭಾಷೆ, ಇಂಗ್ಲಿಷ್‌ನಲ್ಲಿ ಎದೆ ಸೀಳಿದರೂ ಒಂದೂ ವಾಕ್ಯ ರಚನೆ ಮಾಡಲು ಬರದ ಸಂಗವ್ವಳಿಗೆ ಎಲ್ಲವೂ ತಬ್ಬಿಬ್ಬು! ಹಾಗೂ ಹೀಗೂ ತನ್ನ ತರಗತಿಯಲ್ಲಿ ಐದು ಜನ ಕನ್ನಡದÇÉೇ ಮಾತನಾಡುವ ಗೆಳತಿಯರನ್ನು ಸಂಪಾದಿಸುವ ಹೊತ್ತಿಗೆ ಅಕ್ಟೋಬರ್ ತಿಂಗಳಿನ ಅರ್ಧ ವಾರ್ಷಿಕ ಪರೀಕ್ಷೆಯೂ ಮುಗಿದಿತ್ತು. ಈ ಶಾಲೆಯಲ್ಲಿ ಸಂಗವ್ವಳಿಗೆ ಒಂದು ಬಹು ದೊಡ್ಡ ಆಶ್ಚರ್ಯ ಕಾದಿತ್ತು. ಇಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತರಗತಿಯಲ್ಲಿ ಯಾರಿಗೂ ಅಂತಹ ಆಸಕ್ತಿ ಇದ್ದ ಹಾಗೆ ಕಾಣುತ್ತಲೇ ಇರಲಿಲ್ಲ. ಖೋ-ಖೋ ಆಟದಲ್ಲಂತೂ ಭಾಗವಹಿಸುವವರೇ ಇರಲಿಲ್ಲ! ಬತ್ತಿದ ಆಸೆ ಮತ್ತೆ ಚಿಗುರೊಡೆ ಯಿತು. ಹಾಳೂರಲ್ಲಿ ಉಳಿದವನೇ ಗೌಡ ಇಲ್ಲಿಯ ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಶ್ರೀಮತಿ ಮಿಸ್ ಅವರನ್ನು ಕಂಡು ತನ್ನ ಮನದಾಸೆಯನ್ನು ವ್ಯಕ್ತಪಡಿಸಿದಳು. ಶ್ರೀಮತಿ ಮಿಸ್, ಸುಮಾ ಭಟ್‌ಳ ನಾಯಕತ್ವದಲ್ಲಿ ಹೊಸ ತಂಡ ಕಟ್ಟುವ ಉಮೇದಿನಲ್ಲಿ ಇದ್ದರು. ಇಲ್ಲಿ ಅವಳ ಹಳೆಯ ಶಾಲೆಯಲ್ಲಿದ್ದ ಆಟಗಾರ್ತಿಯರಂತೆ ಪರಿಣಿತರು ಯಾರೂ ಇದ್ದಂತೆ ಸಂಗವ್ವಳಿಗೆ ಕಾಣಲಿಲ್ಲ!. ಸಂಗವ್ವಳ ಪ್ರತಿಭೆ ಓರೆಗೆ ಹಚ್ಚಿಕೊಳ್ಳಲು, ಆಸೆ ಈಡೇರಿಸಿಕೊಳ್ಳಲು ಅವಳಿಗೆ ಅದ್ಭುತ ಅವಕಾಶ ದೊರೆಯಿತು. ಎದುರಾಳಿಗಳು ಅವಳ ಹಳೆಯ ಶಾಲೆಯವರಂತೆ ಚಾಕಚಕ್ಯತೆ ಇಲ್ಲದೇ, ಬಲಿಷ್ಠರೂ ಅಲ್ಲದೇ ಇವಳು ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಇವಳ ಕೈಯಲ್ಲಿ ಬೇಗ ಔಟ್ ಕೂಡ ಆಗುತ್ತಿದ್ದರು! ಎದುರಾಳಿಗಳ ಮೂದಲಿಕೆ, ಟೀಕೆಗಳು ಇಲ್ಲಿ ಇಲ್ಲದೇ, ತನ್ನ ಮಾನಸಿಕ ಧೈರ್ಯ, ಸ್ಥೈರ್ಯಗಳು ಗಣನೀಯವಾಗಿ ಏರಿಕೆಯಾಗಿದ್ದವು.
ಮೂರು ತಿಂಗಳ ಬಳಿಕ...
ತನ್ನ ಎಂಟನೆಯ ತರಗತಿಯ ವಾರ್ಷಿಕ ಕ್ರೀಡಾಕೂಟದ ಖೋ- ಖೋ ಪಂದ್ಯಾವಳಿ ಗಳಲ್ಲಿ ಎರಡನೆಯ ಸ್ಥಾನ ಗಳಿಸಿದ್ದ ಸಂಗವ್ವಳಿಗೆ ಇದು ಸತ್ಯವೋ, ಭ್ರಮೆಯೋ ಎನ್ನುವ ಪರಿಸ್ಥಿತಿ!. ಹಳೆಯ ಶಾಲೆಯಲ್ಲಿ ಸಂಪೂರ್ಣವಾಗಿ ಮೂಲೆಗುಂಪಾದವಳಿಗೆ ಇಲ್ಲಿ ಗೆಲುವಿನ ರೂವಾರಿಯಾದಂತಾದರೆ ಹೇಗಿರಬೇಡ? ತನ್ನ ಗೆಲುವಿನ ಖುಷಿಯನ್ನು ಅವಳಿಗೆ ಹಳೆಯ ಶಾಲೆಯ ಸಹಪಾಠಿ ಜ್ಯೋತಿಯೊಡನೆ ಹಂಚಿಕೊಳ್ಳಬೇಕೆನಿಸಿತು. ಅವಳಿಗೆ ಪತ್ರ ಬರೆಯಬೇಕೆನಿಸಿತು.
ಪ್ರೀತಿಯ ಗೆಳತಿ ಜ್ಯೋತಿ,
ಹೇಗಿರುವೆ? ನಾನು ಕ್ಷೇಮ, ನೀನು ಕೂಡ ಕ್ಷೇಮವೆಂದು ಭಾವಿಸಿದ್ದೇನೆ. ನಿನಗೆ ನಾನು ಒಂದು ಸಂತೋಷದ ಸುದ್ದಿ ಕೊಡುತ್ತಿರುವೆ... ಯೋಚನೆ ಮಾಡು ಏನಿರಬಹುದು ಎಂದು? ನನಗೆ ಗೊತ್ತು, ನೀನು ಕನಸಿನಲ್ಲಿಯೂ ಯೋಚಿಸಲು ಸಾಧ್ಯವಿಲ್ಲ. ಈ ಹೊಸ ಶಾಲೆಯ ವಾರ್ಷಿಕ ಕ್ರೀಡಾಕೂಟಗಳಲ್ಲಿ ನಡೆದ ಖೋ- ಖೋ ಪಂದ್ಯಾವಳಿಗಳಲ್ಲಿ ನನ್ನ ತರಗತಿ ಎರಡನೆಯ ಸ್ಥಾನ ಪಡೆಯಿತು ನೋಡು. ಅತಿ ಹೆಚ್ಚು ಜನರನ್ನು ಔಟ್ ಮಾಡಿದ್ದಕ್ಕಾಗಿ ನನಗೆ ವಿಶೇಷ ಬಹುಮಾನವೂ ದೊರೆತಿದೆ. ಈ ಸಂತಸದ ವಿಷಯವನ್ನು ಪ್ರೀತಿಯ ಗೆಳತಿಯಾದ ನಿನ್ನಲ್ಲಿ ಹಂಚಿಕೊಳ್ಳಲು ನನಗೆ ಆಸೆಯಾಯಿತು. ಎಲ್ಲರೂ ನನ್ನನ್ನು ಕಡೆಗಣಿಸಿದರೂ ಸಹ ನೀನು ಮಾತ್ರ ಆಟದಲ್ಲಿ ಸೇರಿಸಿಕೊಳ್ಳುತ್ತಿ¨ªೆ. ನಿಂಗ ಭಾಳ ಥ್ಯಾಂಕ್ಸಲೇ...
ಎಲ್ಲ ಗೆಳತಿಯರೂ ಹೇಗಿ¨ªಾರೆ? ನನ್ನ ಸವಿನೆನಪುಗಳನ್ನು ಅವರಿಗೆ ತಿಳಿಸಿಬಿಡು. ವಿಶೇಷವಾಗಿ ವಿಜ್ಜಿಗೆ!
ಪತ್ರ ಬರೆ, ಇಲ್ಲವೇ ಫೋನ್ ಮಾಡು.
ಇತಿ ನಿನ್ನ ಪ್ರೀತಿಯ
ಸಣ್ಣಕ್ಕ (ಸಂಗವ್ವ)