Udayavani | Feb 17, 2013
ಒಂದು ಪುಟ್ಟ ಊರಲ್ಲಿ ಏನೆಲ್ಲ ನಡೆಯುತ್ತಿರುತ್ತದೆ?
ಚಿಮ್ಮಲಗಿಯ ಆ ತರುಣ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕೆಂದೇ ಅತ್ಯುತ್ಸಾಹದಿಂದ ಬಂದಿದ್ದ. ಏಳನೇ ತರಗತಿಯ ತನಕ ಓದಿದ್ದ ಅವನು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದನಂತೆ. ಅವನಿಗೆ ಇಂಗ್ಲಿಷ್ ಬರುವುದಿಲ್ಲ ಅನ್ನುವ ಕಾರಣಕ್ಕೆ ಬಾರುಗಳಲ್ಲಿ ಕೆಲಸ ಸಿಕ್ಕಿರಲಿಲ್ಲ. ಅವನು ಕೆಲಸ ಮಾಡುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟಿನ ಮಾಲಿಕ, ತನ್ನ ಹಳೇ ಶೈಲಿಯ ಬಾರ್‌ಗೆ ಹೊಸ ರೂಪ ಕೊಟ್ಟಿದ್ದನಂತೆ.
ವೈಶಾಲಿ ಬಾರ್ ಅನ್ನುವ ಹೆಸರು ಹೋಗಿ, ವೈಶಾಲಿ ಫ್ಯಾಮಿಲಿ ರೆಸ್ಟುರಾಂಟ್ ಅನ್ನುವ ಹೊಸ ಹೆಸರಿಡುತ್ತಿದ್ದಂತೆಯೇ ಕೆಲಸ ಕಳಕೊಳ್ಳಬೇಕಾಗಿ ಬಂದದ್ದು ಚಿಮ್ಮಲಗಿಯ ಈ ಹತ್ತೂಂಬತ್ತರ ಹುಡುಗ.
ಬಾರ್‌ನ ಹೆಸರು ಬದಲಾಗುತ್ತಿದ್ದ ಹಾಗೆ ಅಲ್ಲಿಗೆ ಓದಿದವರು, ಸಾಫ್ಟ್ವೇರ್ ಮಂದಿಯೆಲ್ಲ ಬರೋದಕ್ಕೆ ಶುರು ಮಾಡಿದರು. ಅವರು ಇಂಗ್ಲಿಷಲ್ಲೇ ಮಾತಾಡುತ್ತಿದ್ದರು. ನನಗೆ ಇಂಗ್ಲಿಷ್ ಏನೇನೂ ಗೊತ್ತಿರಲಿಲ್ಲ. ನಮ್ಮ ಹೊಟೇಲಿಗೆ ಮೆನು ಬಂತು. ಅದರ ಜೊತೆಗೆ ಚೈನೀಸ್, ಕಾಂಟಿನೆಂಟಲ್ ತಿನಿಸುಗಳೆಲ್ಲ ಬಂದವು. ಅವುಗಳ ಹೆಸರು ಕೂಡ ನನಗೆ ಹೇಳ್ಳೋದಕ್ಕೆ ಬರುತ್ತಿರಲಿಲ್ಲ. ಕೆಲವರು ಯಾವುದಾದರೂ ತಿನಿಸಿನ ಹೆಸರು ಹೇಳಿ ಅದರಲ್ಲೇನಿದೆ ಅಂತ ಕೇಳುತ್ತಿದ್ದರು. ನಾನು ಕಂಗಾಲಾಗುತ್ತಿದ್ದೆ. ಅದೇ ಹೊತ್ತಿಗೆ ಒಬ್ಬರು ಜಗಳಾಡಿ, ಇಂಥ ವೇಟರ್‌ಗಳನ್ನು ಇಟ್ಟುಕೊಂಡರೆ ನೀವು ಉದ್ಧಾರ ಆಗೋದಿಲ್ಲ ಅಂತ ಬೈದರು. ಅದಾಗಿ ಒಂದೇ ತಿಂಗಳಿಗೆ ವೇಟರುಗಳ ಕೈಗೆ ಐಪ್ಯಾಡ್ ಬಂತು. ಗಿರಾಕಿಗಳು ಹೇಳಿದ ತಿಂಡಿತಿನಿಸುಗಳನ್ನು, ಡ್ರಿಂಕ್ಸ್‌ಗಳನ್ನು ನಾವು ಅದರಲ್ಲೇ ಆರ್ಡರ್ ಮಾಡಬೇಕಾಗಿತ್ತು. ನನಗೆ ಇಂಗ್ಲಿಷ್ ಬರದೇ ಇದ್ದದ್ದರಿಂದ ಯಾವುದೂ ಸರಿಹೋಗುತ್ತಿರಲಿಲ್ಲ. ನನ್ನನ್ನು ಪಾರ್ಸೆಲ್ ಕೌಂಟರಿಗೆ ಹಾಕಿದರು. ಟಿಪ್ಸ್ ಬರುವುದು ನಿಂತು ಹೋಯ್ತು.
ಅಲ್ಲೂ ಕೂಡ ಒಂದಿಬ್ಬರು ಜಗಳ ಆಡಿದರು. ಮಾಲಿಕರು ನಿನ್ನ ಕೈಲಾಗಲ್ಲ ಹೋಗು ಅಂತ ವಾಪಸ್ ಕಳಿಸಿಬಿಟ್ಟರು. ಕ್ಲೀನರ್ ಕೆಲಸ ಆದ್ರೂ ಕೊಡಿ ಅಂತ ಕೇಳಿಕೊಂಡೆ. ಹೊಸ ವ್ಯವಸ್ಥೆಯಲ್ಲಿ ವೇಟರ್‌ಗಳೇ ಕ್ಲೀನರ್ ಕೆಲಸ ಕೂಡ ಮಾಡುತ್ತಿದ್ದರು. ಟೇಬಲ್ಲಿನ ಮೇಲೊಂದು ಬಟ್ಟೆ ಹಾಕಿ, ಅದನ್ನು ಸೀದಾ ಲಾಂಡ್ರಿಗೆ ಹಾಕುವ ಪದ್ಧತಿ ಬಂದ ಮೇಲಂತೂ ಟೇಬಲ್ ಒರೆಸುವ ಕೆಲಸಕ್ಕೂ ಸಂಚಕಾರ ಬಂತು. ವಾಪಸ್ ಬಂದುಬಿಟ್ಟೆ. ಯಾಕೋ ಈ ಜಗತ್ತು ನಮ್ಮಿಂದ ದೂರ ಆಗ್ತಿದೆ.
ಹೀಗೆ ಅವನು ಬೇಸರದಿಂದ ಮಾತಾಡಿದ. ಆಧುನಿಕ ಜೀವನ ಶೈಲಿ ಹೇಗೆ ಕೆಲಸಗಳನ್ನು ಕಸಿದುಕೊಳ್ಳುತ್ತದೆ ನೋಡಿ. ಊರು ಬಿಟ್ಟು ಓಡಿಬರುವ ಮಕ್ಕಳು ಹೊಟೇಲ್ ಸೇರಿಕೊಳ್ಳುತ್ತಿದ್ದರು. ಸಪ್ಲೆ„ಯರ್ ಆಗಿ ದುಡಿಯುತ್ತಿದ್ದರು. ಅವರಿಗೆ ಉಳಕೊಳ್ಳುವುದಕ್ಕೆ ಮತ್ತು ಹೊಟ್ಟೆ ಹೊರೆಯುವುದಕ್ಕೆ ಸಮಸ್ಯೆ ಇರುತ್ತಿರಲಿಲ್ಲ. ಆ ಪುಟ್ಟ ಕೆಲಸದ ಮೂಲಕವೇ ಆ ಹುಡುಗ ನಗರವನ್ನು ನೋಡುತ್ತಿದ್ದ. ಅವನಿಗೆ ಪ್ರತಿಭೆ ಇದ್ದರೆ ಮತ್ತೂಂದು ಕೆಲಸ ಸಿಗುತ್ತಿತ್ತು. ಅವನೇ ವ್ಯಾಪಾರಕ್ಕೆ ಇಳಿಯುತ್ತಿದ್ದ. ನಗರಕ್ಕೆ ಕಾಲಿಡುವುದಕ್ಕೆ ಅವನಿಗೆ ಚಿಮ್ಮು ಹಲಗೆ ಆಗುತ್ತಿದ್ದದ್ದೇ, ಹೊಟೇಲು, ಶೆಟ್ಟರಂಗಡಿಗಳು. ಇವತ್ತು ಅಲ್ಲೂ ಕೂಡ ಇಂಗ್ಲಿಷೇ ಬೇಕು.
ವಿದ್ಯಾರ್ಥಿಗಳು ಹೆಚ್ಚಾಗಿ ಬರುವ ನಗರದ ಬಡಾವಣೆಗಳ ಹೊಟೇಲಿಗೆ ಹೋದರೆ ನಿಮಗೆ ಅಲ್ಲಿ ಸಿಗುವುದು ಬೇರೆ ದೇಶಗಳ ಮಾಣಿಗಳೇ. ನೇಪಾಳ, ಟಿಬೆಟ್, ಚೀನಾ, ಇಂಡೋನೇಷಿಯಾದ ಹುಡುಗರು ಬೇಕಾದಷ್ಟು ಮಂದಿ ಇಲ್ಲಿದ್ದಾರೆ. ಮಲೇಶಿಯಾ, ಥೈಲ್ಯಾಂಡ್‌ನ ಬಡವರು ಕೂಡ ಬೆಂಗಳೂರಿನ ಬಾರುಗಳಲ್ಲಿ ಎದುರಾಗುತ್ತಾರೆ. ಅವರಿಗೆ ಕನ್ನಡ ಗೊತ್ತಿಲ್ಲ, ಇಂಗ್ಲಿಷ್ ಅಷ್ಟಕ್ಕಷ್ಟೇ. ಆದರೆ ಫಾರಿನ್ ಎಂಬ ಚಹರೆ ಆ ಹೊಟೇ ಲನ್ನು ವಿಶಿಷ್ಟವಾಗಿಸುತ್ತದಂತೆ. ಹೊಟೇಲ್ ಮಾಲಿಕರ ಪ್ರಕಾರ, ನಮ್ಮ ಹಳ್ಳಿ ಹುಡುಗರಿಗೆ ಕೆಲಸ ಕೊಡೋದು ಅಂದರೆ ಅಪಾಯ ಎದುರುಹಾಕಿಕೊಂಡ ಹಾಗೆ. ಕೆಲಸ ಬಿಡೋದು, ಓಡಿ ಹೋಗೋದು, ಗುಂಪು ಕಟ್ಟೋದು, ಕಸ್ಟಮರ್ ಜೊತೆ ಜಗಳ ಆಡೋದು ಮಾಡ್ತಾರೆ. ವಿದೇಶಿ ಹುಡುಗರು ಅಂಥ ಕೆಲಸ ಮಾಡಲ್ಲ. ಭಯಭಕ್ತಿಯಿಂದ ಇರುತ್ತಾರೆ. ನಾಲ್ಕೇಟು ಕೊಟ್ಟರೂ ತಿಂದು ಕೊಂಡು ಸುಮ್ಮನಿರುತ್ತಾರೆ. ಹೀಗಾಗಿ ಉತ್ತರ ಭಾರತದ, ಈಶಾನ್ಯ ಭಾರತದ ಹುಡುಗರು ವಾಸಿ. ವಿದೇಶಿ ಹುಡುಗರು ಸಿಕ್ಕರೆ ಇನ್ನೂ ಅನುಕೂಲ.
ನಮ್ಮ ಸಾಮಾಜಿಕ ಹಂದರ ಹೇಗೆ ಬದಲಾಗುತ್ತಿದೆ ಅನ್ನುವುದನ್ನು ಇದು ಸೂಚಿಸುತ್ತದೆ. ಸರ್ಕಾರ ಇಂಗ್ಲಿಷ್ ಮಾಧ್ಯಮದ ಸ್ಕೂಲುಗಳಿಗೆ ಅನುಮತಿ ಕೊಟ್ಟಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ನೋಡುತ್ತಿದೆ. ಏಕರೂಪದ ಶಿಕ್ಷಣ ಬರದ ಹೊರತು ಎಂಥ ಅಪಾಯಗಳನ್ನು ಮುಂದಿನ ತಲೆಮಾರು ಎದುರಿಸಬೇಕಾಗುತ್ತದೆ ಎಂದು ಊಹಿಸಿದರೆ ಗಾಬರಿಯಾಗು ತ್ತದೆ. ಇವತ್ತು ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಮೇಷ್ಟ್ರುಗಳಿಲ್ಲ. ಖಾಸಗಿ ಶಾಲೆಗಳಲ್ಲೂ ಇಲ್ಲ. ಖಾಸಗಿ ಶಾಲೆಗಳಿಗೆ ನೂರಕ್ಕೆ ನೂರು ಫಲಿತಾಂಶ ಗಳಿಸುವ ಗೀಳು ಬೇರೆ ಅಂಟಿಕೊಂಡಿದೆ. ಹೀಗಾಗಿ, ಅವರಿಗೆ ಬಡವರ ಮಕ್ಕಳು ಬೇಕಾಗಿಲ್ಲ. ರೈಟ್ ಟು ಎಜುಕೇಷನ್ ಎಂಬ ಅಸ್ತ್ರ ಹುಸಿಹೋಗುವುದು ಇಂಥ ಹೊತ್ತಲ್ಲೇ. ಖಾಸಗಿ ಶಾಲೆಗಳು ಅಕ್ಷರ ಕಲಿಯ ಬಯಸುವ, ಬಡ ಹುಡುಗನೊಬ್ಬನಿಗೆ ಕಲಿಯುವುದಕ್ಕೆ ಅವಕಾಶ ಮಾಡಿಕೊಡುತ್ತದಾ? ಹಾಗೊಂದು ವೇಳೆ ಕೊಟ್ಟರೂ, ಅಲ್ಲಿ ನೂರೆಂಟು ರಗಳೆಗಳಿವೆ. ಯೂನಿಫಾರ್ಮು, ಶೂ, ಬ್ಯಾಗಿನಿಂದ ಹಿಡಿದು, ಯೂನಿಟ್ ಟೆಸ್ಟುಗಳ ತನಕ ಎಲ್ಲ ಕಡೆಯಲ್ಲೂ ಆತ ಸೋಲುತ್ತಲೇ ಹೋಗುತ್ತಾನೆ.
ಕೇವಲ ಸರ್ಕಾರಿ ಶಾಲೆಗಳೇ ಇದ್ದ ಕಾಲವೊಂದಿತ್ತು. ನಮ್ಮೂರಿನಲ್ಲಂತೂ ಎಲ್ಲರೂ ಸರ್ಕಾರಿ ಶಾಲೆಗೇ ಹೋಗುತ್ತಿ ದ್ದರು. ಎಲ್ಲರಿಗೂ ಒಂದೇ ಥರದ ವಿದ್ಯಾಭ್ಯಾಸ ಸಿಗುತ್ತಿತ್ತು. ಬುದ್ಧಿವಂತನಾದವನು ಚೆನ್ನಾಗಿ ಓದುತ್ತಿದ್ದ. ದಡ್ಡನಾದವನು ಫೇಲಾಗುತ್ತಿದ್ದ. ಈ ದಡ್ಡತನ ಮತ್ತು ಬುದ್ಧಿವಂತಿಕೆ ಎಂಬ ಎರಡೇ ಪ್ರಬೇಧಗಳು ಚಾಲ್ತಿಯಲ್ಲಿದ್ದವು. ಈಗ ಅದಕ್ಕಿಂತ ಭೀಕರವಾದ ಕಂದರವನ್ನು ಖಾಸಗಿ ಶಿಕ್ಷಣ ಕಲ್ಲಿಸಿದೆ. ಅದು ಕಲಿಕೆಯ ಮಾಧ್ಯಮ. ಸರ್ಕಾರಿ ಶಾಲೆಗಳು ಬಡವರಿಗೆ. ಖಾಸಗಿ ಶಾಲೆಗಳು ಮಧ್ಯಮ ವರ್ಗದವರಿಗೆ ಎಂಬುದು ನಿಶ್ಚಯವಾಗಿದೆ. ಜಾತಿಪದ್ಧತಿಯ ಜೊತೆ ವರ್ಣಬೇಧ ನೀತಿ ಕೂಡ ಭಾರತಕ್ಕೆ ಕಾಲಿಟ್ಟಿದೆ.
ಚಿಮ್ಮಲಗಿಯ ಹುಡುಗನಿಗೆ ಮುಂದೇನು ಮಾಡುತ್ತೀ ಅಂತ ಕೇಳಿದೆ. ನಮಗೆ ಹಳ್ಳಿಯೇ ವಾಸಿ, ಇಲ್ಲಿ ನೂರೆಂಟು ಯೋಜನೆಗಳಿವೆ. ಸರ್ಕಾರ ಏನೋ ಒಂದು ಮಾಡುತ್ತದೆ ಅನ್ನೋ ನಂಬಿಕೆ ಇದೆ. ನಮ್ಮಪ್ಪನಿಗೆ ಅಪಘಾತ ಆದಾಗ ಸರ್ಕಾರದ ವಿಮೆಯಿಂದಾಗಿ ಚಿಕಿತ್ಸೆ ನೀಡೋದು ಸಾಧ್ಯವಾಯಿತು. ಅದೇ ನಗರದಲ್ಲಿ ಇರುತ್ತಿದ್ದರೆ, ಅಂಥ ಯಾವ ವ್ಯವಸ್ಥೆಯೂ ಇರುತ್ತಿರಲಿಲ್ಲ. ನಾವು ಖಾಸಗಿ ಹೆಲ್ತ್ ಇನ್ಶೂರೆನ್ಸನ್ನು ನಂಬಿಕೊಳ್ಳಬೇಕಾಗುತ್ತಿತ್ತು. ನಾನೀಗ ಇಲ್ಲೊಂದು ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದೇನೆ. ನಮ್ಮೂರಿನ ಲೈಬ್ರರಿಯಲ್ಲಿ ಕತೆ ಕಾದಂಬರಿ ಓದುತ್ತೇನೆ. ಸಿನೆಮಾ ನೋಡೋದು ಬಿಟ್ಟು ಬಿಟ್ಟಿದ್ದೇನೆ. ಮತ್ತೆ ಬೆಂಗಳೂರಿಗೆ ಕಾಲಿಡೋದಿಲ್ಲ ಅಂತ ಖಡಾಖಂಡಿತವಾಗಿ ಹೇಳಿದ.
ಟೀವಿಗಳಲ್ಲಿ ಬರುವ ಜೆಮ್ಸ್ ಎಂಬ ಚಾಕಲೇಟಿನ ಜಾಹೀರಾತು ನೆನಪಾಗುತ್ತದೆ. ಆ ಪುಟ್ಟ ಶರಟು ಗುಂಡಿಯಂಥ ಚಾಕಲೇಟನ್ನು ಜೋಡಿಸಿ ಒಂದು ದೊಡ್ಡ ಹಕ್ಕಿಯನ್ನು ಮಾಡಿರುತ್ತಾರೆ. ಅದರಲ್ಲಿರುವ ಒಂದು ಚಾಕಲೇಟನ್ನು ಒಬ್ಬ ಕಿತ್ತು ತಿನ್ನುತ್ತಾನೆ. ಆಗ ಇಡೀ ಹಕ್ಕಿ ಜೊರ್ರನೆ ಸುರಿದು ಬಿಡುತ್ತದೆ. ಇಡೀ ಆಕೃತಿಯೇ ಮಾಯವಾಗುತ್ತದೆ. ನಮ್ಮ ಸಾಮಾಜಿಕ ನೇಯ್ಗೆ ಕೂಡ ಅಷ್ಟೇ ಸೂಕ್ಷ್ಮವಾಗಿದೆ. ಯಾರೋ ಗೊತ್ತಿಧ್ದೋ ಗೊತ್ತಿಲ್ಲದೆಯೋ ಒಂದು ನೂಲನ್ನು ಕಿತ್ತರೂ ಸಾಕು, ಇಡೀ ವಸ್ತ್ರವೇ ಕಿತ್ತುಹೋಗಿ, ಬರೀ ಸಿಕ್ಕುಸಿಕ್ಕಾದ ನೂಲಿನ ಉಂಡೆಯೊಂದು ಉಳಿಯುತ್ತದೆ. ಅದರ ಸಿಕ್ಕು ಬಿಡಿಸುವುದಕ್ಕೆ ಕೂಡ ಶತಮಾನಗಳೇ ಬೇಕಾಗಬಹುದು.
ನಾವೀಗ ಅಂತ ಸಿಕ್ಕು ಸಿಕ್ಕಾದ ನೂಲಿನುಂಡೆಯ ಮಧ್ಯೆ ನಿಂತಂತೆ ಭಾಸವಾಗುತ್ತಿದೆ.