Friday, May 24, 2013
Last Updated: 11:39:08 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೂರದೂರಿನಲ್ಲಿ ಕನ್ನಡದ ಕಂಪು ಬೀರಿದ ನಾಟಕ ಸ್ಪರ್ಧೆ
    • ಬೆಂಗಳೂರಿನ ರೂಪಾಂತರ ತಂಡದ ಹುಲಿ ಹಿಡಿದ ಕಡಸು...

      • ಧನಂಜಯ್‌ ಎನ್‌. | Feb 16, 2013

        ಕನ್ನಡ ರಂಗಭೂಮಿಯಲ್ಲಿ ಅನೇಕ ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಾ ವೈವಿಧ್ಯಮಯ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತಾ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಸಾಗುತ್ತಿದೆ ಮುಂಬಯಿ ಕರ್ನಾಟಕ ಸಂಘ. ನಮ್ಮ ನಾಡಿನಲ್ಲೇ ವಿವಿಧ ಕಾರಣಗಳಿಂದ ಏನನ್ನೂ ಮಾಡಲಾರದ ಪರಿಸ್ಥಿತಿಯಲ್ಲಿ ನಾವಿದ್ದರೆ, ಅತ್ತ ನೂರಾರು ಮೈಲಿ ಗಳ ಆಚೆ ಹೊರನಾಡಿನಲ್ಲಿ ಕನ್ನಡದ ಕೆಲಸವನ್ನು  ನಿರಂತರವಾಗಿ ಮಾಡುತ್ತಾ ಬಂದಿದೆ ಕರ್ನಾಟಕ ಸಂಘ. ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ಕರ್ನಾಟಕ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ 17ನೇ ಅಖೀಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ ಯನ್ನು ಮಾಟುಂಗದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಏರ್ಪಡಿಸಿತ್ತು. ಹೆಸರಾಂತ ರಂಗ ಕಲಾವಿದ ಗುಣಪಾಲ ಉಡುಪಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಒಟ್ಟು 13 ನಾಟಕಗಳು ಪ್ರದರ್ಶನಗೊಂಡವು. ಪ್ರತಿಯೊಂದು ನಾಟಕವೂ ವಿಭಿನ್ನವಾದ ಮತ್ತು ಹೊಸದಾದ ವಿಚಾರವೊಂದನ್ನು ಹೇಳು ವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದವು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಅಷ್ಟೇ ಶ್ರದ್ಧೆಯಿಂದ ತಮ್ಮ ಶಕöನುಸಾರ ಪ್ರದರ್ಶನ ನೀಡುವಲ್ಲಿ ಶ್ರಮ ವಹಿಸಿದ್ದವು. 50ಕ್ಕೂ ಹೆಚ್ಚು ತಂಡಗಳಿಂದ ಅರ್ಜಿಗಳು ಬಂದಿದ್ದರೂ ಆಯ್ದ ಕೆಲವು ನಾಟಕಗಳಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಒಂದು ಸ್ಪರ್ಧೆಗೆ, ಅದೂ ಹೊರನಾಡಿಗೆ ಇಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತವೆ ಎಂದರೆ ಅದು ಶ್ಲಾಘನೀಯ ವಿಚಾರವೇ ಸರಿ.

        ಈ ಬಾರಿ ಮುಂಬಯಿ, ಹೊಸದಿಲ್ಲಿ, ಬೆಂಗಳೂರು, ಮೈಸೂರು, ಹಾಸನ, ಮುದ್ರಾಡಿ, ಉಡುಪಿ, ತುಂಗಭದ್ರಾ ಡ್ಯಾಂ ಮುಂತಾದ ಕಡೆಗಳಿಂದ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮುಂಬಯಿ ಯಿಂದಲೇ ಮೂರು ನಾಟಕಗಳು ಪ್ರದರ್ಶನಗೊಂಡಿದ್ದು ವಿಶೇಷ ಮತ್ತು ಸ್ವಾಗತಾರ್ಹ ಕೂಡ. ಪ್ರಸಿದ್ಧ ನಾಟಕಕಾರರುಗಳಾದ ಬಾದಲ್‌ ಸರ್ಕಾರ್‌, ಎಚ್‌. ಎಸ್‌. ಶಿವಪ್ರಕಾಶ್‌, ಡಾ| ಚಂದ್ರಶೇಖರ ಕಂಬಾರ, ಡಿ. ಕೆ. ಚೌಟ, ಮಹಾಶ್ವೇತಾದೇವಿ ಅವರುಗಳ ನಾಟಕಗಳನ್ನು ನೋಡುವ ಸುವರ್ಣಾವಕಾಶ ರಂಗಾಸಕ್ತರ ಪಾಲಿಗೆ ಒದಗಿದ್ದು ಸಂತೋಷದ ವಿಷಯ.

        ಪ್ರದರ್ಶನಗೊಂಡ ನಾಟಕಗಳು: ಪಾಂಚಾಲಿ, ಅವತಾರಮ್‌, ಅಬ್ಬು, ಬಾಕಿ ಇತಿಹಾಸ, ಕನಸು, ಅಶ್ವಪರ್ವ, ನೀರು, ಚೌಕಟ್ಟಿನಾಚೆಯ ಚಿತ್ರ, ಓ ನನ್ನ ಕಾಡೀಲಿಯ, ನಾಯಿ ಕಥೆ, ಹುಲಿ ಹಿಡಿದ ಕಡಸು, ಹುತಾತ್ಮ ಭಗತ್‌ ಸಿಂಗ್‌, ಯುಯುತ್ಸು. ಕೆಲವು ಹೊಸ ನಾಟಕಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಮುಂಬಯಿಯ ಚುಕ್ಕಿ ಸಂಕುಲ ಪ್ರಸ್ತುತಪಡಿಸಿದ ಚೌಕಟ್ಟಿನಾಚೆಯ ಚಿತ್ರ ನಾಟಕವು ಹಿಜಡಾಗಳ ಬದುಕಿನ ಸಮಸ್ಯೆ ಮತ್ತು ನೋವು-ನಲಿವುಗಳನ್ನು ಸೆರೆಹಿಡಿಯುವಲ್ಲಿ ಪ್ರಯತ್ನಿಸಿತು. ಮುಂಬಯಿಯ ಕನ್ನಡ ಸೇವಾ ಸಂಘ, ಪೊವಾಯಿ ಪ್ರದರ್ಶಿಸಿದ ನಾಟಕ ಅಬ್ಬು ಹಿಂದೂ - ಮುಸ್ಲಿಂ ಕೋಮುಗಳ ನಡುವೆ ಸಾಮರಸ್ಯ ಬೆಸೆಯುವಂತೆ ಮಾಡುತ್ತದೆ. ಮುಂಬಯಿಯ ರಂಗಚಾವಡಿ ಪ್ರದರ್ಶಿಸಿದ ಪಾಂಚಾಲಿ ನಾಟಕವೂ ಕೂಡ ಪಾಂಚಾಲಿಯ ಅಂತರಂಗದ ದುಮ್ಮಾನಗಳನ್ನು ವಿಭಿನ್ನ ಶೈಲಿಯಲ್ಲಿ ಚಿತ್ರಿಸುತ್ತದೆ. ಈ ನಾಟಕಗಳಿಗೆ ಬಹುಮಾನಗಳು ಲಭಿಸದೆ ಇರಬಹುದು ಆದರೆ, ರಂಗಭೂಮಿಯ ಬೆಳವಣಿಗೆ ಮತ್ತು ವಿಸ್ತಾರದ ದೃಷ್ಟಿಯಿಂದ ಇಂಥ ಪ್ರಯೋಗಗಳನ್ನು ಪ್ರೋತ್ಸಾಹಿಸ ಬೇಕಾಗುತ್ತದೆ. ಈ ಮೂರು ನಾಟಕಗಳು ಮುಂಬಯಿಯಿಂದ ಬಂದಿರುವುದು ಸಂತಸದ ವಿಚಾರ.

        ಪ್ರಥಮ ಅತ್ಯುತ್ತಮ ನಾಟಕ ಬೆಂಗಳೂರಿನ ರೂಪಾಂತರ ತಂಡದ ಹುಲಿ ಹಿಡಿದ ಕಡಸು, ದ್ವಿತೀಯ ಟಿ. ಬಿ. ಡ್ಯಾಂ, ಕರ್ನಾಟಕ ಸಂಘದ ನೀರು  ಹಾಗೂ ತೃತೀಯ ಜಿ.ಪಿ.ಐ.ಇ.ಆರ್‌. ತಂಡದ ಓ ನನ್ನ  ಕಾಡೀಲಿಯಾ ಮತ್ತು ಹಾಸನದ ಅನಿಕೇತನ ತಂಡದ ಅವತಾರಮ್‌.

        ಇದರೊಂದಿಗೆ ರಂಗವಿನ್ಯಾಸ, ಶ್ರೇಷ್ಠ ನಟ-ನಟಿ, ಉತ್ತಮ ನಿರ್ದೇಶನ, ಉತ್ತಮ ಬೆಳಕು, ಉತ್ತಮ ಸಂಗೀತ ಮುಂತಾದ ವಿಭಾಗಗಳಿಗೆ ಮೀಸಲಾಗಿದ್ದ ಬಹುಮಾನಗಳನ್ನು ವಿಜೇತರಿಗೆ ಪ್ರದಾನ ಮಾಡಲಾಯಿತು.

        ಮೂರು ದಿನಗಳ ಸ್ಪರ್ಧೆಗೆ ಉಡುಪಿಯಿಂದ ಗುರುರಾಜ ಮಾರ್ಪಳ್ಳಿ  ಮತ್ತು ಪದ್ಮಾ ಕೊಡಗು ಹಾಗೂ ಮೈಸೂರಿನವರಾದ ಎನ್‌. ಧನಂಜಯ ತೀರ್ಪುಗಾರರಾಗಿ ಆಗಮಿಸಿದ್ದರು. 20-1-2013ರಂದು ಬಹುಮಾನ ವಿತರಣೆ ಸಮಾರಂಭದಲ್ಲಿ ಪ್ರಖ್ಯಾತ ರಂಗ ನಿರ್ದೇಶಕ ಸದಾನಂದ ಸುವರ್ಣ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಬಿ. ಜಿ. ನಾಟಕ್‌, ಗೌರವ ಕಾರ್ಯದರ್ಶಿ ಭರತ್‌ಕುಮಾರ್‌ ಪೊಲಿಪು ಮತ್ತು ಕೋಶಾಧಿಕಾರಿ ಓಂದಾಸ್‌ ಕಣ್ಣಂಗಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

        ಭರತ್‌ಕುಮಾರ್‌ ಪೊಲಿಪು ಅವರ ಸಾರಥ್ಯದಲ್ಲಿ ಯಶಸ್ಸಿನ ಹೆಜ್ಜೆಗಳ ನ್ನಿಡುತ್ತಾ ಸಾಗುತ್ತಿರುವ ಕರ್ನಾಟಕ ಸಂಘದ ರಂಗಕಾಯಕ ನಿರಂತರವಾಗಿ ನಡೆಯುತ್ತಿರಲಿ ಎಂದು ಆಶಿಸೋಣ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus