Udayavani | Feb 17, 2013
ರಕ್ಷಣಾ ಪರಿಕರಗಳ ಖರೀದಿಯಲ್ಲಿ ಹಗರಣ ನಡೆಯುವುದು, ನಡೆಯುತ್ತಿರುವುದು ಇದು ಮೊದಲೇನಲ್ಲ. ದೇಶದ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ ಇಂತಹ ಸಾಲು ಸಾಲು ಹಗರಣಗಳೇ ಕಣ್ಣಿಗೆ ರಾಚುತ್ತವೆ. ಕಳೆದ ಸಾಲಿನ ಕೇಂದ್ರ ಬಜೆಟ್‌ನಲ್ಲಿ 1.95 ಲಕ್ಷ ಕೋಟಿ ರೂ. ಅನುದಾನ ಪಡೆದುಕೊಂಡಿರುವ, ಪ್ರತಿ ಬಾರಿ ಆಯವ್ಯಯದಲ್ಲೂ ಹೆಚ್ಚು ಹಣ ಗಿಟ್ಟಿಸಿಕೊಳ್ಳುವ ರಕ್ಷಣಾ ಇಲಾಖೆ, ನಮ್ಮನ್ನಾಳುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು, ಸೇನಾ ಸಿಬ್ಬಂದಿ, ಅಂತಾರಾಷ್ಟ್ರೀಯ ರಕ್ಷಣಾ ಉಪಕರಣ ಉತ್ಪಾದಿಸುವ ಕಂಪನಿಗಳು ಹಾಗೂ ದೇಶ-ವಿದೇಶಿ ದಲ್ಲಾಳಿಗಳಿಗೆ ಒಂದು ರೀತಿ ಬತ್ತದ ಗಂಗೆ ಇದ್ದಂತೆ. ಅದರಿಂದ ಸಾಧ್ಯವಾದಷ್ಟನ್ನೂ ಹೀರಿಕೊಳ್ಳಲು ಈ ಎಲ್ಲರೂ ಯತ್ನಿಸುತ್ತಿರುತ್ತಾರೆ. ಆ ಸಾಲಿಗೆ ಹೆಲಿಕಾಪ್ಟರ್ ಖರೀದಿ ಹಗರಣ ಹೊಸ ಸೇರ್ಪಡೆ.
ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವುದಕ್ಕೆ ಹೆಸರುವಾಸಿ. ಅದರ ಒಡೆತನ ಹೊಂದಿರುವ ಇಟಲಿಯ ಫಿನ್‌ಮೆಕ್ಕಾನಿಕಾ ಕಂಪನಿಯ ಸಿಇಒ ಭಾರತಕ್ಕೆ ಹೆಲಿಕಾಪ್ಟರ್ ಪೂರೈಸುವ ಗುತ್ತಿಗೆ ಪಡೆದುಕೊಳ್ಳಲು ಲಂಚ ನೀಡಿದ ಆಪಾದನೆ ಮೇಲೆ ಕಳೆದ ಸೋಮವಾರ ಇಟಲಿಯಲ್ಲಿ ಬಂಧನಕ್ಕೊಳಗಾಗಿದ್ದೇ ತಡ, ಭಾರತದಲ್ಲಿ ಕಾಪ್ಟರ್ ಹಗರಣ ದೊಡ್ಡ ಪ್ರಕರಣವಾಗಿ ರೂಪಾಂತರಗೊಂಡಿದೆ. ಈ ಹಗರಣವನ್ನು ಯಾರು ಮೊದಲು ಪ್ರಸಾರ/ಪ್ರಕಟ ಮಾಡಿದ್ದು ಎಂಬ ವಿಚಾರವಾಗಿ 'ಪ್ರಮುಖ ಸುದ್ದಿಗಳನ್ನು ಎಲ್ಲರಿಗಿಂತ ಮೊದಲು ನೀಡುವುದನ್ನೇ ಅಭ್ಯಾಸ ಮಾಡಿಕೊಂಡಿರುವ' ಒಂದು ಪತ್ರಿಕೆ ಹಾಗೂ ದೇಶದ ಎಲ್ಲ ಪ್ರಮುಖ ಹಗರಣಗಳನ್ನು ತಾನೇ ಮೊದಲು ಪ್ರಸಾರ ಮಾಡಿದ್ದು ಎಂದು ಬಿಂಬಿಸಿಕೊಳ್ಳುವ ಚಾನೆಲೊಂದರ ನಡುವೆ ಜಟಾಪಟಿ ಆರಂಭವಾಗಿದೆ.
ಸದ್ಯದ ಮಟ್ಟಿಗೆ ಕಾಪ್ಟರ್ ಹಗರಣದಲ್ಲಿ ಪ್ರಮುಖವಾಗಿ ಆರೋಪಿ ಸ್ಥಾನದಲ್ಲಿ ನಿಂತಿರುವವರು ವಾಯುಪಡೆ ನಿವೃತ್ತ ಮುಖ್ಯಸ್ಥ ಶಶೀಂದ್ರ ಪಾಲ್ ತ್ಯಾಗಿ ಅಲಿಯಾಸ್ ಎಸ್.ಪಿ. ತ್ಯಾಗಿ. ಲಂಚದಾಸೆಗೆ ಅವರು ಹಾಗೂ ಅವರ ಬಂಧುಗಳೆಲ್ಲಾ ಸೇರಿ ಅಗಸ್ಟಾ ಕಂಪನಿಗೆ ಹೆಲಿಕಾಪ್ಟರ್ ಪೂರೈಕೆ ಗುತ್ತಿಗೆ ಕೊಡಿಸಿದ್ದಾರೆ ಎಂಬುದು ಆರೋಪ. ರಕ್ಷಣಾ ಇಲಾಖೆಯ ಬಗ್ಗೆ ಅರಿವಿರುವವರು ತ್ಯಾಗಿ ಅವರನ್ನೊಬ್ಬರನ್ನೇ ದೂಷಿಸಲಾರರು. ಮೂರೂ ಸೇನಾ ಪಡೆಗಳಿಗೆ ಮೂವರು ಮುಖ್ಯಸ್ಥರಿದ್ದರೂ ಯಾವುದೇ ರಕ್ಷಣಾ ಸಾಮಗ್ರಿ ಖರೀದಿ ವಿಚಾರದಲ್ಲಿ ಅವರಿಗೆ ಪರಮಾಧಿಕಾರವೇನೂ ಇಲ್ಲ. ಇಂತಹ ಉಪಕರಣ ಬೇಕು ಎಂದು ಅವರು ರಕ್ಷಣಾ ಸಚಿವಾಲಯಕ್ಕೆ ಶಿಫಾರಸು ಮಾಡುತ್ತಾರೆ. ಅದನ್ನು ಆದ್ಯತೆ ಮೇಲೆ ತೆಗೆದುಕೊಂಡು ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಇದಕ್ಕೆ ಹಸಿರು ನಿಶಾನೆ ತೋರುತ್ತದೆ. ಈ ಪ್ರಕ್ರಿಯೆಯಲ್ಲಿ ರಕ್ಷಣಾ ಇಲಾಖೆ ಕಾರ್ಯದರ್ಶಿ ಪ್ರಮುಖ ಪಾತ್ರ ವಹಿಸುತ್ತಾರೆ. ಆನಂತರವಷ್ಟೇ ಖರೀದಿ ಪ್ರಕ್ರಿಯೆ. ಆದರೆ ತ್ಯಾಗಿ ಹಾಗೂ ಅವರ ಬಂಧುಗಳ ಮೇಲಷ್ಟೇ ಆರೋಪ ಮಾಡಿ, ಅವರ ನಂತರದಲ್ಲಿ ಹೊಣೆ ಹೊತ್ತುಕೊಳ್ಳಬೇಕಾದ ರಕ್ಷಣಾ ಮಂತ್ರಿ, ರಕ್ಷಣಾ ಕಾರ್ಯದರ್ಶಿ, ಸಚಿವ ಸಂಪುಟ, ಅದರ ಮುಖ್ಯಸ್ಥರಾದ ಪ್ರಧಾನಿಯನ್ನು ಜವಾಬ್ದಾರಿಯಿಂದ ತಪ್ಪಿಸಲಾಗುತ್ತಿದೆ.
ಯುದ್ಧ ವಿಮಾನ, ಕ್ಷಿಪಣಿ, ಸಬ್‌ಮರಿನ್ ಸೇರಿದಂತೆ ರಕ್ಷಣಾ ಇಲಾಖೆಗೆ ಅತ್ಯಗತ್ಯವಾಗಿ ಬೇಕಾಗಿರುವ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟಿವೆ. ತಮ್ಮ ಉತ್ಪನ್ನಗಳು ಜಗತ್ತಿನಲ್ಲಿ ಎಷ್ಟೇ ಅತ್ಯುತ್ತಮವಾಗಿದ್ದರೂ ಅದನ್ನು ಒಂದು ದೇಶಕ್ಕೆ ಮಾರಾಟ ಮಾಡಲು ಈ ಕಂಪನಿಗಳು ಮಧ್ಯವರ್ತಿಗಳ ಮೊರೆ ಹೋಗುತ್ತವೆ. ರಕ್ಷಣಾ ಇಲಾಖೆಯ ಖರೀದಿ ಗುತ್ತಿಗೆ ಸಾಮಾನ್ಯವಾಗಿ ಸಹಸ್ರಾರು ಕೋಟಿ ರೂ.ಗಳ ಲೆಕ್ಕದಲ್ಲೇ ಇರುವುದರಿಂದ ಇದು ಸಣ್ಣ ವ್ಯವಹಾರವೇನಲ್ಲ. ಹೀಗಾಗಿ ಕಂಪನಿಗಳು ದಲ್ಲಾಳಿಗಳಿಗೆ ಶೇ.10ರಿಂದ ಶೇ.12ರವರೆಗೂ ಕಮೀಷನ್ ನೀಡಲು ತಯಾರಿರುತ್ತವೆ. ಈ ಮಧ್ಯವರ್ತಿಗಳು ರಕ್ಷಣಾ ಇಲಾಖೆ ಆಧುನೀಕರಣಕ್ಕೆ ಮುಂದಾಗುವ ಭಾರತದಂತಹ ರಾಷ್ಟ್ರಗಳ ನೀತಿ ನಿರೂಪಕರನ್ನು ಸಂಪರ್ಕಿಸಿ ಅವರಿಗೆ ಎಲ್ಲ ರೀತಿಯ ಆಮಿಷ ಒಡ್ಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದು ಇಂದು, ನಿನ್ನೆಯಿಂದಲ್ಲ, ಮೊದಲಿನಿಂದಲೂ ನಡೆದುಕೊಂಡಿರುವ ಪ್ರಕ್ರಿಯೆ. ಕೆಲವು ದೇಶಗಳು ಮಧ್ಯವರ್ತಿಗಳ ಲಂಚದ ಹಾವಳಿ ತಡೆಯಲಿಕ್ಕಾಗಿ ಕಂಪನಿಗಳ ಪರ ಲಾಬಿ ಮಾಡುವುದನ್ನು ಕಾನೂನುಬದ್ಧಗೊಳಿಸಿವೆ. ಭಾರತದಲ್ಲಿ ಅದನ್ನು ಅಪರಾಧದಂತೆ ಕಾಣುವುದರಿಂದ ಲಂಚದ ಹಾವಳಿ ವಿಪರೀತವಾಗಿದೆ. ಅದೂ ಅಲ್ಲದೆ 'ರಾಷ್ಟ್ರೀಯ ಭದ್ರತೆ ವಿಷಯ' ಎಂಬ ಫಲಕವನ್ನು ತಗುಲಿಸಿ ನಡೆಯುವ ರಕ್ಷಣಾ ಇಲಾಖೆಯ ವ್ಯವಹಾರಗಳನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಪ್ರಶ್ನಿಸಿದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದೊಡ್ಡಿ ಬಾಯಿ ಮುಚ್ಚಿಸಲಾಗುತ್ತದೆ. ಹೀಗಾಗಿ ರಕ್ಷಣಾ ಇಲಾಖೆಯ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಣುವುದಿಲ್ಲ. ನಾಲ್ಕು ಗೋಡೆಗಳ ನಡುವೆ ನಡೆವ ವ್ಯವಹಾರಗಳ ವಿವರಗಳು ಹೊರ ಜಗತ್ತಿಗೂ ಸಿಗುವುದಿಲ್ಲ.
ಈ ಹಗರಣದ ಬಳಿಕ ಪ್ರಮುಖವಾಗಿ ಎದ್ದಿರುವ ಪ್ರಶ್ನೆ ಎಂದರೆ, ತಮ್ಮ ಮೂಗಿನ ಕೆಳಗೆಯೇ ಹಗರಣ ನಡೆಯುತ್ತಿದ್ದರೂ ಪ್ರಾಮಾಣಿಕ ಎಂಬ ಬಿರುದಾಂಕಿತ ಎ.ಕೆ. ಆ್ಯಂಟನಿ ಅವರೇನು ಮಾಡುತ್ತಿದ್ದರು ಎಂಬುದು. ಯುಪಿಎ ಸರ್ಕಾರದಲ್ಲಿರುವ ಇಬ್ಬರು ಪ್ರಾಮಾಣಿಕರೆಂದರೆ ಪ್ರಧಾನಿ ಮನಮೋಹನಸಿಂಗ್ ಹಾಗೂ ಎ.ಕೆ. ಆ್ಯಂಟನಿ ಎಂದು ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹೇಳಲಾಗುತ್ತಿದೆ. ಪ್ರಾಮಾಣಿಕರು ನಮ್ಮನ್ನಾಳುತ್ತಿದ್ದಾರೆ ಎಂದು ದೇಶದ ಜನರು ನಂಬಿ ಕೂತಿರುವಾಗಲೇ ಪ್ರಾಮಾಣಿಕ ಪ್ರಧಾನಿ ಆಳ್ವಿಕೆಯಲ್ಲೇ ದೇಶ ಕಂಡುಕೇಳರಿಯದ ಹಗರಣಗಳು ನಡೆದವು. ಈಗ ಪ್ರಾಮಾಣಿಕ ರಕ್ಷಣಾ ಸಚಿವರ ಇಲಾಖೆಯಲ್ಲೇ ಸಹಸ್ರಾರು ಕೋಟಿ ರೂ.ಗಳು ಒಂದೊಂದಾಗಿ ಹೊರಗಡೆ ಬರುತ್ತಿವೆ. ಹೀಗಾಗಿ ಪ್ರಾಮಾಣಿಕತೆ ಅಂದರೆ ಏನು ಎಂದು ತಿಳಿಯದಂತಾಗಿದೆ. ಮನಮೋಹನಸಿಂಗ್ ಹಾಗೂ ಆ್ಯಂಟನಿ ವೈಯಕ್ತಿಕವಾಗಿ ಪ್ರಾಮಾಣಿಕರಾಗಿದ್ದರೂ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುತ್ತಿದ್ದಾರೆ. ಹಾಗಿದ್ದ ಮೇಲೆ ಅವರ ಪ್ರಾಮಾಣಿಕತೆಯ ಸಾಚಾತನವನ್ನೇ ಪ್ರಶ್ನಿಸಬಹುದಲ್ಲವೇ?
ಹೆಲಿಕಾಪ್ಟರ್ ಖರೀದಿಯಲ್ಲಿ ಹಗರಣ ನಡೆದಿರುವ ವಾಸನೆ ಇದೆ ಎಂದು ಆ್ಯಂಟನಿಗೆ ವರ್ಷದ ಹಿಂದೆಯೇ ಗೊತ್ತಿತ್ತು. ಫಿನ್‌ಮೆಕ್ಕಾನಿಕಾ ಕಂಪನಿ ಹೆಲಿಕಾಪ್ಟರ್ ಪೂರೈಸುವ ಗುತ್ತಿಗೆಯನ್ನು ಭಾರತದಿಂದ ಪಡೆಯಲು ಅಪಾರ ಹಣ ಕೊಟ್ಟಿದೆ ಎಂದು ಇಟಲಿ ಪತ್ರಿಕೆಗಳು ವರ್ಷದ ಹಿಂದಿನಿಂದಲೂ ವರದಿ ಮಾಡಿಕೊಂಡೇ ಬಂದಿದ್ದವು. ಆದರೆ, ಆ್ಯಂಟನಿ ಆ ಕುರಿತು ತನಿಖೆಗೆ ಆದೇಶಿಸಲೇ ಇಲ್ಲ. ಪತ್ರಿಕೆಗಳ ವರದಿಗಳನ್ನೂ ನಂಬಲಿಲ್ಲ. ಈ ಬಗ್ಗೆ ಮಾಹಿತಿ ಇಲ್ಲ ಎಂದೇ ಕಾಲ ತಳ್ಳಿಕೊಂಡು ಬಂದರು. ಈ ಹಿಂದೆ ಟಟ್ರಾ ಟ್ರಕ್ ಖರೀದಿ ಹಗರಣದಲ್ಲೂ ಆ್ಯಂಟನಿ ವೈಫಲ್ಯ ಎದ್ದು ಕಂಡಿತ್ತು. ಕೀಳು ಗುಣಮಟ್ಟದ ಟಟ್ರಾ ಟ್ರಕ್ ಖರೀದಿಗೆ ಶಿಫಾರಸು ಮಾಡಿದರೆ 14 ಕೋಟಿ ರೂ. ಲಂಚ ಕೊಡುವುದಾಗಿ ತಮಗೆ ಆಮಿಷವೊಡ್ಡಲಾಗಿತ್ತು ಎಂದು ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಕೆ. ಸಿಂಗ್ ಅವರೇ ಆ್ಯಂಟನಿ ಅವರಿಗೆ ತಿಳಿಸಿದ್ದರೂ ಆ್ಯಂಟನಿ ನಿಷ್ಕ್ರಿಯರಾಗಿ ಕುಳಿತಿದ್ದರು. ಈ ಬಗ್ಗೆ ವಿ.ಕೆ. ಸಿಂಗ್ ಅವರು ಬಹಿರಂಗವಾಗಿ ಹೇಳಿದ ನಂತರವಷ್ಟೇ ಆ್ಯಂಟನಿ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದು.
ವಿಶೇಷವೆಂದರೆ, ಬೊಫೋರ್ಸ್ ಸೇರಿದಂತೆ ಮೂರು ದಶಕಗಳಿಂದ ಸಿಬಿಐ ಸಾಕಷ್ಟು ರಕ್ಷಣಾ ಹಗರಣಗಳನ್ನು ತನಿಖೆ ನಡೆಸಿದೆ. ಇದುವರೆಗೂ ಒಂದೇ ಒಂದೂ ಹಗರಣವನ್ನು ಸಾಬೀತುಪಡಿಸಲು, ಒಬ್ಬ ಅಪರಾಧಿಗಾದರೂ ಶಿಕ್ಷೆ ಕೊಡಿಸಲೂ ಆ ಸಂಸ್ಥೆಯಿಂದ ಆಗಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಅಂದರೆ 1948ರಲ್ಲಿ ಲಂಡನ್‌ನಲ್ಲಿ ಭಾರತೀಯ ಹೈಕಮೀಷನರ್ ಆಗಿದ್ದ ವಿ.ಕೆ. ಕೃಷ್ಣ ಮೆನನ್ ವಿರುದ್ಧ ಸೇನೆಗಾಗಿ ಕಳಪೆ ಜೀಪ್ ಖರೀದಿಸಿದ ಆರೋಪ ಕೇಳಿಬಂದಿತ್ತು. ಆದರೂ ಕೃಷ್ಣ ಮೆನನ್‌ಗೆ ಏನೂ ಆಗಲಿಲ್ಲ. ನೆಹರು ಸಂಪುಟದಲ್ಲಿ ಮುಂದೊಂದು ದಿನ ಅವರು ರಕ್ಷಣಾ ಮಂತ್ರಿಯಾಗಿ ಬಡ್ತಿ ಪಡೆದರು. ಹೀಗಾಗಿ ಈ ಹಗರಣದ ಭವಿಷ್ಯ ಏನಾಗುತ್ತದೆ ಎಂಬುದೇ ಸದ್ಯದ ಕುತೂಹಲ.
ಬೊಫೋರ್ಸ್ ಹಗರಣ, ಕಾರ್ಗಿಲ್ ಶವ ಪೆಟ್ಟಿಗೆ ಹಗರಣ, ಬಂದೂಕು ಖರೀದಿ ಹಗರಣ ಇವೆಲ್ಲಾ ಜನರ ಮನಸ್ಸಿಂದ ಮರೆಯಾಗಿದ್ದರೂ ಮತ್ತೂಂದು ಹಗರಣ ನಡೆದಾಗ ನೆನಪಿಗೆ ಬರುತ್ತವೆ. ಆದರೆ ಯಾವುದೇ ಹೊಸ ಹಗರಣ ಬಂದರೂ ಹಳೇ ಹಗರಣದ ಆರೋಪಿಗಳು ಆರಾಮವಾಗಿಯೇ ಇರುತ್ತಾರೆ. ಇವತ್ತಿಗೂ ಬೊಫೋರ್ಸ್ ಹಗರಣದ ಆರೋಪಿ ಒಟ್ಟಾವಿಯೋ ಕ್ವಟ್ರೋಕಿಯನ್ನು ಬಂಧಿಸಿ ಕರೆತರಲು ನಮ್ಮ ಸಿಬಿಐಗೆ ಸಾಧ್ಯವಾಗಿಲ್ಲ. ಈಗ ಕಾಪ್ಟರ್ ಖರೀದಿ ಹಗರಣದ ಜಾಡು ಹಿಡಿದು ಇಟಲಿಗೆ ಹೊರಟು ನಿಂತಿದೆ. ಈ ಹಗರಣವನ್ನಾದರೂ ಆ ಸಂಸ್ಥೆ ಬಯಲಿಗೆಳೆದು, ಹಗರಣದ ಹಿಂದೆ ತ್ಯಾಗಿ ಮಾತ್ರವೇ ಇದ್ದಾರೆಯೇ ಅಥವಾ ಘಟಾನುಘಟಿ ನಾಯಕರಾದರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಬೆಳಕಿಗೆ ತರಲಿ. ಇತರೆ ರಕ್ಷಣಾ ಹಗರಣಗಳಂತೆ ಕಾಪ್ಟರ್ ಖರೀದಿ ಹಗರಣವೂ ಹೂತು ಹೋಗದಿರಲಿ.
ಚಿವುಟು:ಕಾಪ್ಟರ್ ಹಗರಣದ ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದಿಲ್ಲ- ಆ್ಯಂಟನಿ. ತಪ್ಪಿತಸ್ಥರು ಯಾರೆಂದೇ ಗೊತ್ತಾಗುತ್ತಿಲ್ಲವಲ್ಲ!