ಮುಂಬೈ: 1990ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಕ್ಷಯ್ ಕುಮಾರ್ ಇದುವರೆಗೆ ಗಳಿಸಿದ ಆದಾಯ ಬರೋಬ್ಬರಿ 2000 ಕೋಟಿ ರೂಪಾಯಿ! ಇಂತಹದ್ದೊಂದು ಸುದ್ದಿ ಟ್ವೀಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. 1990ರಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಅಕ್ಷಯ್ ಕುಮಾರ್ ಆರಂಭದಲ್ಲಿ ಸಾಕಷ್ಟು ಯಶಸ್ವೀ ಚಿತ್ರಗಳಲ್ಲಿ ಅಭಿನಯಿಸಿದ್ದರೂ, 2000ರ ದಶಕದ ಆರಂಭದಲ್ಲಿ ಬಹುತೇಕ ಚಿತ್ರರಂಗದಿಂದ ಮಾಯವಾಗಿದ್ದರು. ಆದರೆ ಕಳೆದ 4-5 ವರ್ಷಗಳಲ್ಲಿ ಅಕ್ಷಯ್ ಚಿತ್ರಗಳು ಮತ್ತೆ ಸೂಪರ್ ಹಿಟ್ ಹಾದಿ ಹಿಡಿದಿದ್ದು, ಅವರ ಸಂಭಾವನೆಯೂ ಭಾರೀ ಪ್ರಮಾಣದಲ್ಲಿ ಏರಿದೆ. ಹೊಸ ಚಿತ್ರವೊಂದಕ್ಕೆ ಅವರು 50 ಕೋಟಿ ರೂಪಾಯಿ ಸಂಭಾವನೆ ಪಡೆದ ಸುದ್ದಿಯೂ ಬಂದಿದೆ. ಇದರ ಬೆನ್ನಲ್ಲೇ ತಮ್ಮ ಮೊದಲ ಚಿತ್ರ 'ಖೀಲಾಡಿ'ಯಿಂದ ಹಿಡಿದು ಇದುವರೆಗೆ ಚಿತ್ರಗಳ ಮೂಲಕ, ಇತರೆ ಮೂಲಗಳ ಮೂಲಕ ಅಕ್ಷಯ್ ಸಂಪಾದಿಸಿದ ಮೊತ್ತ 2000 ಕೋಟಿ ರೂ.ತಲುಪಿದೆ. ಹೀಗಾಗಿ ಅವರೀಗ 2000 ಕೋಟಿ ರೂ. ಆದಾಯ ಸಂಗ್ರಹಿಸಿದ ಗ್ರೂಪ್‌ಗೆ ಸೇರಿಕೊಂಡಿದ್ದಾರೆ ಎಂದು ಟ್ವೀಟರ್‌ನಲ್ಲಿ ಭರ್ಜರಿ ಅಭಿನಂದನೆಗಳ ಸುರಿಮಳೆಯಾಗಿದೆ. ಅಕ್ಕಿ ಕೂಡಾ ಈ ಸುದ್ದಿಯನ್ನು ಸಂಭ್ರಮದಿಂದಲೇ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೆಲ್ಲಾ ನಿಮ್ಮಿದಂಲೇ ಸಾಧ್ಯವಾಗಿದ್ದು ಎನ್ನುವ ಮೂಲಕ ಸುದ್ದಿಯನ್ನು ಖಚಿತಪಡಿಸಿದ್ದಾರೆ.