ಢಾಕಾ: 1971ರ ಯುದ್ಧಾಪರಾಧಗಳಿಗೆ ಸಂಬಂಧಿಸಿ ತಮ್ಮ ನಾಯಕರ ವಿರುದ್ಧ ನಡೆದಿರುವ ತನಿಖೆಯನ್ನು ಪ್ರತಿಭಟಿಸಿ ಮೂಲಭೂತವಾದಿ ಜಮಾತೆ ಇಸ್ಲಾಮಿ(ಜೆಐ) ಸೋಮವಾರ ಕರೆದಿದ್ದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ವೇಳೆ ಸಂಭವಿಸಿದ ಘರ್ಷಣೆಗಳಲ್ಲಿ ಕನಿಷ್ಠ ಮೂವರು ವ್ಯಕ್ತಿಗಳು ಬಲಿಯಾಗಿದ್ದಾರೆ.ಮುಷ್ಕರ ಕರೆಯನ್ನು ಧಿಕ್ಕರಿಸುವಂತೆ ವಿರೋಧಿ ಪ್ರತಿಭಟನಕಾರರು ನೀಡಿದ್ದ ಕರೆಯ ನಡುವೆ ಜೆಐ ಕಾರ್ಯಕರ್ತರು ಢಾಕಾ ಮತ್ತು ಇತರ ಅನೇಕ ನಗರಗಳಲ್ಲಿ ದಾಳಿಯೆಸಗಿ ಓಟ ಕೀಳುವ ತಂತ್ರ ಅನುಸರಿಸಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಢಾಕಾದಲ್ಲಿ ಜೆಐ ಕಾರ್ಯಕರ್ತರು ಮಿನಿ ಬಸ್ಸೊಂದನ್ನು ಬೆನ್ನಟ್ಟಿದಾಗ ಅದು ಉರುಳಿಬಿದ್ದು, ಪಾದಚಾರಿಯೋರ್ವ ಅಸುನೀಗಿದ. 1971ರ ಪಾಕ್ ವಿರುದ್ಧ ಸಮರ ಸಂದರ್ಭದಲ್ಲಿ 'ಮಾನವತೆ ವಿರುದ್ಧ ನಡೆದ ಅಪರಾಧಗಳ' ಕುರಿತು ವಿಚಾರಣೆ ನಡೆಯಬೇಕೆಂಬ ಬೇಡಿಕೆಗೆ ಬೆಂಬಲ ಸೂಚಿಸಿ ಸಾರಿಗೆ ನಿರ್ವಹಣೆದಾರರು ಜೆಐ ಮುಷ್ಕರ ಕರೆಯನ್ನು ಉಲ್ಲಂ ಸಿದರು.ಮಧ್ಯ ಕೊಮಿಲ್ಲಾ ಜಿಲ್ಲೆಯಲ್ಲಿ ಇನ್ನೊಂದು ಸಾವು ಸಂಭವಿಸಿತು. ಜೆಐ ಪ್ರತಿಭಟನಕಾರರು ರಸ್ತೆಗಳಲ್ಲಿ ದಾಂಧಲೆ ನಡೆಸಿದಾಗ ಅವರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದರು ಮತ್ತು ಓರ್ವ ವ್ಯಕ್ತಿ ಗುಂಡೇಟಿಗೆ ತುತ್ತಾಗಿ ಬಳಿಕ ಮೃತಪಟ್ಟ. ಜಮಾತ್‌ನ ಭದ್ರಕೋಟೆಯಾದ ಆಗ್ನೇಯದ ಕಾಕ್ಸ್‌ಬಜಾರ್‌ನಲ್ಲಿ ಮೂರನೆ ಸಾವು ಸಂಭವಿಸಿತು. ಜೆಐ ಕಾರ್ಯಕರ್ತರು ಅಂಬ್ಯುಲೆನ್ಸ್ ಒಂದರ ಮೇಲೆ ದಾಳಿ ನಡೆಸಿದಾಗ ಅದರಲ್ಲಿದ್ದ ರೋಗಿಯೊಬ್ಬ ಬಲಿಯಾದ.ಢಾಕಾದಲ್ಲಿ ಅನೇಕ ಶಾಲೆಗಳು ತೆರೆದಿದ್ದವಾದರೂ ಮಕ್ಕಳ ಹಾಜರಾತಿ ಕಡಿಮೆಯಿತ್ತು. ಅಂಗಡಿಗಳು ಹಾಗೂ ಪ್ರಮುಖ ವಾಣಿಜ್ಯ ಸಂಸ್ಥೆಗಳು ತೆರೆದಿದ್ದವು. ಬಾಂಗ್ಲಾದೇಶ 1971ರಲ್ಲಿ ಪಾಕಿಸ್ಥಾನದಿಂದ ಸ್ವತಂತ್ರಗೊಂಡಿರುವುದನ್ನು ಜೆಐ ವಿರೋಧಿಸುತ್ತಿದೆ. ಪ್ರಧಾನ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಈ ಬಾರಿ ಜೆಐ ಮುಷ್ಕರ ಕರೆಗೆ ಬೆಂಬಲ ನೀಡಲಿಲ್ಲ.ಬಾಂಗ್ಲಾದೇಶದ ಸಂಸತ್ತು ರವಿವಾರ ಜೆಐ ಸಹಿತ ಯಾವುದೇ ಸಂಘಟನೆ ವಿರುದ್ಧ ವಿಚಾರಣೆ ನಡೆಸಲು ಮತ್ತು ಶಿಕ್ಷಿಸಲು ಪ್ರಾಸಿಕ್ಯೂಶನ್‌ಗೆ ಅವಕಾಶವೀಯುವುದಕ್ಕಾಗಿ ಯುದ್ಧಾಪರಾಧಗಳ ಕಾನೂನಿಗೆ ತಿದ್ದುಪಡಿ ತಂದಿತ್ತು. ಇದರಿಂದ ದೇಶದ ಅತಿದೊಡ್ಡ ಇಸ್ಲಾಮಿಕ್ ಪಕ್ಷವನ್ನು ನಿಷೇಧಿಸುವುದಕ್ಕೆ ಹಾದಿ ಮಾಡಿಕೊಟ್ಟಂತಾಗಿದೆ.