ಇಸ್ಲಾಮಾಬಾದ್: ನೈಋತ್ಯದ ಕ್ವೆಟ್ಟಾ ನಗರದಲ್ಲಿ ಇನ್ನಷ್ಟು ಭೀತಿವಾದಿ ದಾಳಿ ನಡೆಯುವುದನ್ನು ತಪ್ಪಿಸುವ ಸಲುವಾಗಿ ಸೇನೆ ನಗರದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುವ ತನಕ ನಗರದಲ್ಲಿ ಸಂಭವಿಸಿದ ಭೀಕರ ಬಾಂಬ್ ದಾಳಿಯಲ್ಲಿ ಹತರಾದವರ ಶವಗಳನ್ನು ತಾನು ದಫನ ಮಾಡುವುದಿಲ್ಲವೆಂದು ಪಾಕಿಸ್ಥಾನದ ಅಲ್ಪಸಂಖ್ಯಾಕ ಶಿಯಾ ಹಜಾರ ಸಮುದಾಯ ಹೇಳಿದೆ.ಕ್ವೆಟ್ಟಾದ ಹಜಾರಾ ಪಟ್ಟಣದಲ್ಲಿ ಶನಿವಾರ ನಡೆದ ದಾಳಿಯಲ್ಲಿ ಬಲಿಯಾದ ಸುಮಾರು 85 ಮಂದಿಯ ಶವಗಳೊಂದಿಗೆ ನೂರಾರು ಶಿಯಾಗಳು ಪ್ರತಿಭಟನೆ ನಡೆಸಿದರು. ನೂರು ಕೆ.ಜಿ.ಗಿಂತಲೂ ಅಧಿಕ ಸ್ಫೋಟಕ ವಸ್ತುಗಳನ್ನೊಳಗೊಂಡಿದ್ದ ಬಾಂಬೊಂದು ಹಜಾರಾ ಪಟ್ಟಣದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಸ್ಫೋಟಗೊಂಡು, ಕನಿಷ್ಠ 85 ಮಂದಿ ಬಲಿಯಾಗಿದ್ದರು ಮತ್ತು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬಾಂಬ್ ದಾಳಿಗೆ ಲಷ್ಕರ್-ಎ-ಝಂಗ್ವಿ (ಎಲ್‌ಇಜೆ) ಹೊಣೆ ಹೊತ್ತುಕೊಂಡಿದೆ.ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸುವುದಕ್ಕೆ ಶಿಯಾ ಹಜಾರಾ ಸಮುದಾಯದ ನಾಯಕರು ಸರಕಾರಕ್ಕೆ 48 ತಾಸುಗಳ ಗಡುವು ನೀಡಿದ್ದಾರೆ. ಎಲ್‌ಇಜೆಯಂಥ ಪಂಥೀಯ ಗುಂಪುಗಳು ಪದೇ ಪದೇ ಶಿಯಾಗಳ ಮೇಲೆ ದಾಳಿ ಮಾಡುತ್ತಿವೆ. ಪ್ರಾಂತದಲ್ಲಿ ರಾಜ್ಯಪಾಲರ ಆಡಳಿತ ವಿಧಿಸಲಾಗಿದ್ದರೂ ಭದ್ರತಾ ಪರಿಸ್ಥಿತಿ ಸುಧಾರಣೆಯಾಗಿಲ್ಲವೆಂದು ಶಿಯಾ ನಾಯಕರು ಹೇಳುತ್ತಿದ್ದಾರೆ.