ಮಾಲೆ: ಮಾಲ್ದೀವ್ಸ್‌ನ ಕೋರ್ಟೊಂದು ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರನ್ನು ತನ್ನ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೋಮವಾರ ಆದೇಶಿಸಿತು. ನಶೀದ್ ಅವರು ಕಳೆದ ಆರು ದಿನಗಳಿಂದ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆದಿರುವುದರಿಂದ ಪೊಲೀಸರು ಇದೀಗ ದೂತಾವಾಸದೊಂದಿಗೆ ಮಾತುಕತೆ ನಡೆಸುವುದಕ್ಕೆ ವಿದೇಶಾಂಗ ಖಾತೆಯನ್ನು ಸಂಪರ್ಕಿಸಿದ್ದಾರೆ.'ಬುಧವಾರ ಸಂಜೆ 4 ಗಂಟೆಯೊಳಗೆ ಮಾಜಿ ಅಧ್ಯಕ್ಷ ನಶೀದ್ ಅವರನ್ನು ತನ್ನೆದುರು ಹಾಜರುಪಡಿಸುವಂತೆ ಹೇಳಿರುವ ಕೋರ್ಟು ಆದೇಶ ನಮಗೆ ತಲಪಿದೆ' ಎಂದು ಪೊಲೀಸ್ ವಕ್ತಾರ ಹಸನ್ ಹನೀಫ್ ಪಿಟಿಐಗೆ ತಿಳಿಸಿದರು.ಪೊಲೀಸ್ ಇಲಾಖೆ ಅಟಾರ್ನಿ ಜನರಲ್ ಮೂಲಕ ವಿದೇಶಾಂಗ ಖಾತೆಯನ್ನು ಸಂಪರ್ಕಿಸಿದ್ದು ಭಾರತೀಯ ದೂತಾವಾಸವನ್ನು ಸಂಪರ್ಕಿಸುವಂತೆ ಕೊರಿದೆ. ನಶೀದ್ ಅವರು ಕಳೆದ ಜನವರಿಯಲ್ಲಿ ಅಧ್ಯಕ್ಷರಾಗಿದ್ದ ವೇಳೆ ಕ್ರಿಮಿನಲ್ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಬಂಧಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧ ಹೊರಡಿಸಲಾಗಿರುವ ಬಂಧನ ವಾರಂಟ್‌ನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಫೆ. 13ರಿಂದ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆದಿದ್ದಾರೆ.''ನಶೀದ್ ಬಂಧನಕ್ಕೆ ಅವಕಾಶ ಮಾಡಿಕೊಡುವಂತೆ ಭಾರತೀಯ ದೂತಾವಾಸಕ್ಕೆ ಸೂಚಿಸುವಂತೆ ನಾವು ವಿದೇಶಾಂಗ ಖಾತೆಯನ್ನು ಕೇಳಿದ್ದೇವೆ. ತನ್ಮೂಲಕ ಅವರನ್ನು ಕೋರ್ಟಿನ ಮುಂದೆ ಹಾಜರುಪಡಿಸಲು ಸಾಧ್ಯವಾಗುವುದು' ಎಂದು ಹನೀಫ್ ಹೇಳಿದರು. ನಶೀದ್ ತಪ್ಪುಗಾರನೆಂದು ಕಂಡುಬಂದಲ್ಲಿ ಸೆ. 7ಕ್ಕೆ ನಿಗದಿಯಾಗಿರುವ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ.