ಇಸ್ಲಾಮಾಬಾದ್: ಪ್ರಕ್ಷುಬ್ಧ ವಾಯವ್ಯ ಪಾಕಿಸ್ಥಾನದ ಪೇಶಾವರ ನಗರದಲ್ಲಿ ಭದ್ರತಾ ಸಿಬಂದಿಯಂತೆ ವೇಷ ಧರಿಸಿದ್ದ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಸೋಮವಾರ ಸರಕಾರಿ ಸಂಕೀರ್ಣವೊಂದಕ್ಕೆ ನುಗ್ಗಿದ ಬಳಿಕ ತಮ್ಮನ್ನು ತಾವು ಸ್ಫೋಟಿಸಿಕೊಂಡಾಗ ತಮ್ಮಿಬ್ಬರ ಸಹಿತ ಏಳು ಮಂದಿ ಬಲಿಯಾಗಿ ಇತರ 8 ಮಂದಿ ಗಾಯಗೊಂಡರೆಂದು ಅಧಿಕಾರಿಗಳು ತಿಳಿಸಿದ್ದಾರೆ.ಖೈಬರ್ ಬುಡಕಟ್ಟು ವಲಯದ ರಾಜಕೀಯ ಆಡಳಿತಗಾರನ ಕಚೇರಿಯಾಗಿರುವ ಖೈಬರ್ ಭವನದೊಳಗೆ ನುಗ್ಗಿದ ಉಗ್ರರು ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ ನಡೆಸಿದ ಬಳಿಕ ತಮ್ಮನ್ನು ತಾವು ಸ್ಫೋಟಿಸಿಕೊಂಡರು. ದಾಳಿ ವೇಳೆ ಖೈಬರ್ ಭವನದಲ್ಲಿ ರಾಜಕೀಯ ಪಕ್ಷಗಳ ನಾಯಕರ ಸಭೆಯೊಂದು ನಡೆಯುತ್ತಿತ್ತು. ದಾಳಿಕೋರರು ಲೆವೀಸ್ ಮಿಲಿಶಿಯಾದ ಸಮವಸ್ತ್ರ ಧರಿಸಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದರು.ಸಭೆ ನಡೆಯುತ್ತಿದ್ದ ಭವನದ ಹೊರಗೆ ಆತ್ಮಾಹುತಿ ದಾಳಿಕೋರನೋರ್ವ ತನ್ನನ್ನು ತಾನು ಸ್ಫೋಟಿಸಿಕೊಂಡನೆಂದು ಪಾಕಿಸ್ಥಾನ್ ತೆಹ್ರಿಕ್-ಎ-ಇನ್ಸಾಫ್ನ ನಾಯಕ ಇಕ್ಬಾಲ್ ಖಾನ್ ಮಾಧ್ಯಮದವರೊಂದಿಗೆ ಹೇಳಿದರು. ಇನ್ನೋರ್ವ ದಾಳಿಕೋರ ಗೇಟಿನಲ್ಲಿದ್ದ ಕಾವಲುಗಾರನನ್ನು ಗುಂಡಿಕ್ಕಿ ಕೊಂದು ಭದ್ರತಾ ಪಡೆಗಳೊಂದಿಗೆ ಸುಮಾರು 20 ನಿಮಿಷಗಳ ಕಾಲ ಗುಂಡಿನ ಕಾಳಗ ನಡೆಸಿದ ಮತ್ತು ಗಾಯಗೊಂಡ ಬಳಿಕ ತನ್ನನ್ನು ತಾನು ಸ್ಫೋಟಿಸಿಕೊಂಡ. ದಾಳಿಯಲ್ಲಿ ನಾಲ್ವರು ಭದ್ರತಾ ಪಡೆ ಸಿಬಂದಿ ಹಾಗೂ ಓರ್ವ ಪೌರ ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ನಾಲ್ವರು ಲೆವೀಸ್ ಸಿಬಂದಿ ಸಹಿತ 8 ಮಂದಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ. ಖೈಬರ್ ಭವನ ಪೇಶಾವರದ ಅತ್ಯುನ್ನತ ಭದ್ರತೆಯ ಕಂಟೋನ್ಮೆಂಟ್ ಸಮೀಪದಲ್ಲೇ ಇದೆ. ಲೆವೀಸ್ ಮಿಲಿಶಿಯಾ ಎಂಬುದು ಬುಡಕಟ್ಟು ಪೊಲೀಸ್ ಪಡೆಯಾಗಿದ್ದು ಖೈಬರ್ ಭವನ ಸಂಕೀರ್ಣದ ರಕ್ಷಣೆಯ ಹೊಣೆ ಹೊಂದಿದೆ.ದಾಳಿ ಆರಂಭವಾದ ತತ್‌ಕ್ಷಣ ಸೇನಾ ಯೋಧರು ಹಾಗೂ ಪೊಲೀಸರು ಸಂಕೀರ್ಣವನ್ನು ಸುತ್ತುವರಿದರು. ಎಲ್ಲ ಗೇಟುಗಳನ್ನು ಮುಚ್ಚಲಾಯಿತು ಮತ್ತು ಸಮೀಪದ ರಸ್ತೆಗಳನ್ನು ಬಂದ್ ಮಾಡಲಾಯಿತು. ಸ್ಫೋಟವೊಂದರ ಬಳಿಕ ಸಂಕೀರ್ಣದಿಂದ ಹೊಗೆ ಆಗಸಕ್ಕೇರುವುದರ ಚಿತ್ರಿಕೆಯನ್ನು ಟಿವಿಯಲ್ಲಿ ಪ್ರಸಾರಿಸಲಾಯಿತು. ಸ್ವಲ್ಪ ಸಮಯದ ಬಳಿಕ ಸಂಕೀರ್ಣದೊಳಗಿದ್ದ ಜನರಿಗೆ ಹೊರತೆರಳುವುದಕ್ಕೆ ಭದ್ರತಾ ಪಡೆಗಳು ಅವಕಾಶವಿತ್ತವು. ಪೊಲೀಸರು ಹಾಗೂ ಸೇನಾ ಕಮಾಂಡೋಗಳು ಸಮೀಪದ ಕಟ್ಟಡಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ನಿಂತಿದ್ದಂತೆಯೇ ಭದ್ರತಾ ಪಡೆಗಳು ಸಂಕೀರ್ಣದ ಶೋಧ ಕಾರ್ಯ ನಡೆಸಿದವು.ಮುಂಬರುವ ಚುನಾವಣೆಗೆ ಮಾದರಿ ನೀತಿ ಸಂಹಿತೆ ಕುರಿತು ಚರ್ಚಿಸಲು ಖೈಬರ್ ಸಂಸ್ಥೆಯ ಸಹಾಯಕ ರಾಜಕೀಯ ಏಜೆಂಟ್ ಕರೆದಿದ್ದ ಸಭೆಯಲ್ಲಿ ರಾಜಕೀಯ ಪಕ್ಷಗಳ ಸಭೆಯಲ್ಲಿ ಸುಮಾರು 100 ಮಂದಿ ಪಾಲ್ಗೊಂಡಿದ್ದರು. ಇಂಥ ದಾಳಿಗಳನ್ನು ಸಾಮಾನ್ಯವಾಗಿ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ಥಾನ್ ನಡೆಸುತ್ತದೆಯಾದರೂ ದಾಳಿಗೆ ಯಾವುದೇ ಸಂಘಟನೆ ಹೊಣೆ ವಹಿಸಿಕೊಂಡಿಲ್ಲ.