Udayavani | Feb 18, 2013
ಗಂಗಾವತಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯಾಗಿ ಆದ್ಯತೆಯ ಮೇರೆಗೆ ಫ್ಯಾನ್, ರಾಟಿ ಇಲ್ಲವೇ ನಳದ ಗುರುತು ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಹೇಳಿದರು.
ಅವರು ಸೋಮವಾರ ಆನೆಗೊಂದಿ ರಸ್ತೆಯಲ್ಲಿ ಬಿಎಸ್‌ಆರ್ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿ, ನೋಂದಾಯಿತ ರಾಜಕೀಯ ಪಕ್ಷಗಳಿಗೆ ಚಿಹ್ನೆ ಆಯ್ಕೆ ವೇಳೆ ಮೊದಲ ಪ್ರಾಶಸ್ತ್ಯ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಅದೇ ರೀತಿ ಬಿಎಸ್‌ಆರ್ ಕಾಂಗ್ರೆಸ್ ನೋಂದಾಯಿತ ಪಕ್ಷವಾಗಿದ್ದು, ಫ್ಯಾನ್ ಚಿಹ್ನೆ ಪಡೆದುಕೊಳ್ಳಬೇಕು ಮನವಿ ಮಾಡಿದ್ದೇವೆ. ಅದು ಸಿಗದೇ ಇದ್ದಾಗ ಉಳಿದ ಎರಡರಲ್ಲಿ ಯಾವುದಾರೂ ಒಂದು ಚಿಹ್ನೆ ಪಡೆಯಲು ಯೋಚಿಸಲಾಗಿದೆ ಎಂದರು.
ಕೆಜೆಪಿ ಬಿಜೆಪಿಯಲ್ಲಿ ಶೀಘ್ರ ವಿಲೀನ: ಶ್ರೀರಾಮುಲು
ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡು ಬಿಜೆಪಿಯಿಂದ ಹೊರ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನಸ್ಸು ಇನ್ನೂ ಬಿಜೆಪಿಯಲ್ಲಿಯೇ ಇದೆ ಬಿ. ಶ್ರೀರಾಮುಲು ಹೇಳಿದರು.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಹಾಗೂ ಯಡಿಯೂರಪ್ಪ ಅವರ ಮನಸ್ಥಿತಿಯನ್ನು ಅವಲೋಕಿಸಿದಾಗ ಅತಿ ಶೀಘ್ರ ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನ ಮಾಡುವುದು ಖಂಡಿತ ಎಂದು ಭವಿಷ್ಯ ನುಡಿದರು.
ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲು ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನಿಲ್ಲದ ಯತ್ನ ನಡೆಸಿತ್ತು. ಅಲ್ಲದೇ ಸಂವಿಧಾನದ ವಿರುದ್ಧವಾಗಿ ಚುನಾವಣಾ ಆಯುಕ್ತರನ್ನು ಬೆದರಿಸುವ ಕಾರ್ಯಗಳನ್ನು ಕೂಡ ಈ ಎರಡೂ ಪಕ್ಷಗಳ ಮುಖಂಡರು ಮಾಡಿದ್ದು ತಪ್ಪು ಎಂದು ಆರೋಪಿಸಿದ ಶ್ರೀರಾಮುಲು, ಬಿಎಸ್‌ಆರ್ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೋಳಿ ದಾದಾ ಹಾಗೂ ಇತರೆ ಮುಖಂಡರು ಬಿಎಸ್‌ಆರ್ ಸೇರ್ಪಡೆಯಾದರು. ಲಲಿತಾರಾಣಿ, ಕೆ.ಎಂ. ಸೈಯದ್, ಮುಕುಂದರಾವ್ ಭವಾನಿಮಠ, ರಮೇಶ ಜೋಗಿನ ನಾಯಕ, ಟಿ.ಜಿ. ಬಾಬು ಇದ್ದರು.