ಪಟ್ನಾ: ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕುಟುಂಬ ಶಾಮೀಲಾಗಿದೆ. ಆದ್ದರಿಂದಲೇ ಯುಪಿಎ ಸರಕಾರ ಈ ಹಗರಣದಲ್ಲಿನ ಸತ್ಯ ಬಯಲಾಗುವುದನ್ನು ಬಯಸುತ್ತಿಲ್ಲ ಎಂದು ಜನತಾ ಪಾರ್ಟಿಯ ನಾಯಕ ಡಾ| ಸುಬ್ರಹ್ಮಣ್ಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ಈ ಹಗರಣದಿಂದ ತನಗೆ ಅಚ್ಚರಿಯೇನಾಗಿಲ್ಲ. ವಾಸ್ತವವಾಗಿ ವ್ಯವಹಾರದ ಆರಂಭದಲ್ಲಿ ಬೇರೊಂದು ಹೆಲಿಕಾಪ್ಟರ್ ಆಯ್ಕೆಯಾಗಿತ್ತು. ಆದರೆ ಸರಕಾರ ತಾಂತ್ರಿಕ ಅಂಶಗಳ ನೆಪ ಮುಂದೊಡ್ಡಿ ಕಂಪೆನಿಯನ್ನು ಬದಲಿಸಿತು. ಕಮಿಷನ್ ಜೇಬಿಗಿಳಿಸುವುದಕ್ಕಾಗಿಯೆ ಹೀಗೆ ಮಾಡಲಾಯಿತು. ಕಮಿಷನ್ ಮೊತ್ತದ ಬಹು ಭಾಗವನ್ನು ನೆಹರು - ಗಾಂಧಿ ಕುಟುಂಬವೆ ಜೇಬಿಗಿಳಿಸಿದೆ. ಲಂಚದ ಹಣದಲ್ಲಿ ಅರ್ಧ ಭಾಗ ಇಟಲಿಯಲ್ಲಿರುವ ಸೋನಿಯಾರ ಸೋದರಿಯರಿಬ್ಬರಿಗೆ ಸಂದಾಯವಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.ಲಾಲ್ ಬಹಾದುರ್ ಶಾಸ್ತ್ರಿ ಅಥವಾ ಮೊರಾರ್ಜಿ ದೇಸಾಯಿ ಅವರ ಅಧಿಕಾರಾವಧಿಯಲ್ಲಿ ಲಂಚ ಅಥವಾ ಭ್ರಷ್ಟಾಚಾರದ ಪ್ರಕರಣ ನಡೆದ ನಿದರ್ಶನವಿಲ್ಲ. ಆದರೆ ಯಾವುದೇ ವ್ಯವಹಾರದಲ್ಲಿ ನೆಹರು - ಗಾಂಧಿ ಕುಟುಂಬ ಶಾಮೀಲಾದಾಗೆಲ್ಲ ಭ್ರಷ್ಟಾಚಾರ ನಡೆದಿದೆ ಎಂದವರು ಆಪಾದಿಸಿದರು.ಲಂಚ ಹಗರಣ ಪ್ರಕರಣದ ಬಗ್ಗೆ ಮಾಹಿತಿ ಅಥವಾ ದಾಖಲೆಗಳನ್ನು ಹಂಚಿಕೊಳ್ಳಲು ಇಟಲಿಯ ನ್ಯಾಯಾಲಯ ನಿರಾಕರಿಸಿರುವ ಬಗ್ಗೆ ಪ್ರಸ್ತಾವಿಸಿದ ಸ್ವಾಮಿ, ಸಹಜವಾಗಿಯೆ ನ್ಯಾಯಾಲಯ ಇಂಥ ಮಾಹಿತಿಯನ್ನು ಹಂಚಿಕೊಳ್ಳದು. ಮಾಹಿತಿ ಬೇಕಿದ್ದರೆ ಸಿಬಿಐ ಮೊದಲು ಇಲ್ಲಿನ ನ್ಯಾಯಾಲಯವನ್ನು ಸಂಪರ್ಕಿಸಿ ಮಾಹಿತಿ ಮತ್ತು ದಾಖಲೆಗಳನ್ನು ಕೋರುವ ವಿಧ್ಯುಕ್ತ ಪತ್ರವೊಂದನ್ನು ಪಡೆದುಕೊಳ್ಳಬೇಕಾಗಿತ್ತು. ಕೋರ್ಟಿನ ವಿನಂತಿಪತ್ರವಿದ್ದರೆ ಇಟಲಿಯ ನ್ಯಾಯಾಲಯ ಮಾಹಿತಿ ಒದಗಿಸಲು ಬದ್ಧವಾಗಬೇಕಾಗುತ್ತಿತ್ತು. ಆದರೆ ಯುಪಿಎ ಸರಕಾರ ಈ ವಿಚಾರದಲ್ಲಿ ಗಂಭೀರವಾಗಿಲ್ಲ. ಅದು ನೆಪ ಮಾತ್ರಕ್ಕೆ ತನಿಖೆ ನಡೆಸುತ್ತಿದೆ ಅಷ್ಟೆ ಎಂದರು.