Udayavani | Feb 18, 2013
ನವಿಮುಂಬಯಿ: ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಪ್ರಾರಂಭದಲ್ಲಿ ಹೇಮಾ ಸುರೇಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ಜರಗಿತು. ಸಂಜೆ 6 ಗಂಟೆಯಿಂದ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಜರಗಿತು. ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಅಧ್ಯಕ್ಷೆ ಲತಾ ಪಿ. ಶೆಟ್ಟಿ ಅವರು ಮಾತನಾಡಿ, ನವಿಮುಂಬಯಿ ಬಂಟ ಮಹಿಳೆಯರ ಒಗ್ಗಟ್ಟು ನಿಜವಾಗಿಯೂ ಶ್ಲಾಘನೀಯ. ಆಟೋಟ ಸ್ಪರ್ಧೆಗಳ ಆಯೋಜನೆ, ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಇತ್ಯಾದಿಗಳು ಸಮಿತಿಯ ಐಕ್ಯತೆಗೆ ನಿದರ್ಶನವಾಗಿದೆ. ಭವಿಷ್ಯದಲ್ಲಿ ನವಿಮುಂಬಯಿ ಪ್ರಾದೇಶಿಕ ಸಮಿತಿಯು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಹೊಂದಲಿ ಎಂದು ಶುಭಹಾರೈಸಿದರು.
ಸಭೆಯ ಪ್ರಾರಂಭದಲ್ಲಿ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ವೀಣಾ ಎ. ಶೆಟ್ಟಿ ಅವರು ಸ್ವಾಗತಿಸಿದರು. ಇನ್ನೋರ್ವೆ ಅತಿಥಿ ಬಾಂಬೇ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಎಸ್. ಶೆಟ್ಟಿ ಅವರು ಮಾತನಾಡಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ ಮತ್ತು ಬಂಟರ ಸಂಘ ಮುಂಬಯಿ ಬೇರೆ ಬೇರೆಯಲ್ಲ. ನಮ್ಮ ಮಾತೃಭೂಮಿ ಕೋ. ಆಅಪರೇಟಿವ್ ಕ್ರೆಡಿಟ್ ಸೊಸೈಟಿಯು ಬ್ಯಾಂಕ್ ಆಗಿ ಪರಿವರ್ತನೆಗೊಳ್ಳುವ ನಿಟ್ಟಿನಲ್ಲಿ ನಮ್ಮಿಂದಾದಷ್ಟು ಠೇವಣಿಯನ್ನು ಜಮಾಯಿಸಿದ್ದೇವೆ. ಇನ್ನು ಮುಂದೆಯೂ ನಾವು ಸರ್ವ ರೀತಿಯಲ್ಲಿ ಸಹಕರಿಸುತ್ತೇವೆ. ಮಾರ್ಗಶಿರ ಋತುವಿನ ಈ ಸುಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ನಾಟ್ಯಗುರು ಸಹನಾ ಭಾರದ್ವಾಜ್ ಅವರು ಅರಸಿನ ಕುಂಕುಮದ ಮಹತ್ವದ ಬಗ್ಗೆ, ಆರೋಗ್ಯದ ಬಗ್ಗೆ ವಿವರಿಸಿದರು. ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ ತಾಳಿಪಾಡಿಗುತ್ತು, ಭವಾನಿ ಶಿಪ್ಪಿಂಗ್ ಕಾರ್ಪೋರೇಶನ್‌ನ ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಲತಾ ಜೆ. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಶೈಲಜಾ ಎ. ಶೆಟ್ಟಿ, ಆಶಾ ಜಿ. ಶೆಟ್ಟಿ, ನವಿಮುಂಬಯಿ ನೆರೂಲ್ ವಿಭಾಗದ ನಗರ ಸೇವಕಿ ಅನಿತಾ ಸಂತೋಷ್ ಶೆಟ್ಟಿ, ಮುಂಬಯಿ ಸಿಟಿ ರೀಜನ್‌ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ಸಂಜೀವ ಎಸ್. ಶೆಟ್ಟಿ, ಅಣ್ಣಿ ಸಿ. ಶೆಟ್ಟಿ, ಜಗದೀಶ್ ಶೆಟ್ಟಿ ನಂದಿಕೂರು, ರೇಣುಕಾ ರೈ, ಹರೀಶ್ ಶೆಟ್ಟಿ ಪಡುಬಿದ್ರೆ, ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಗೌರವ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ಅವರನ್ನು ಪುಷ್ಪಗುಚ್ಚವನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳೊಂದಿಗೆ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷೆ ಜಯಂತಿ ಶೆಟ್ಟಿ, ಕೋಶಾಧಿಕಾರಿ ಸ್ಮಿತಾ ಎಚ್. ಶೆಟ್ಟಿ ಅವರು ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಗುಣವತಿ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ ಎಚ್. ಶೆಟ್ಟಿ ಅವರು ವಂದಿಸಿದರು.