Udayavani | Feb 18, 2013
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಿವಂಡಿ ಸ್ಥಳೀಯ ಕಚೇರಿಯಲ್ಲಿ 12 ನೇ ವಾರ್ಷಿಕ ಗುರುಮೂರ್ತಿ ಪ್ರತಿಷ್ಠಾಪನಾ ದಿನಾಚರಣೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಫೆ. 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6 ಗಂಟೆಯಿಂದ ನವಕಲಶ ಅಭಿಷೇಕದ ಮೂಲಕ ಶ್ರೀ ಹರೀಶ್ ಶಾಂತಿ ಅವರ ಹಸ್ತದಿಂದ ವಿವಿಧ ಪೂಜಾ ಕೈಂಕರ್ಯಗಳು, ಪೂರ್ವಾಹ್ನ 9 ಗಂಟೆಯಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ರತ್ನಾಕರ ಜಿ. ಪೂಜಾರಿ ಅವರ ಪ್ರಾಯೋಜಕತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ್ ಎಂ. ಪೂಜಾರಿ ಅವರು ಮಾತನಾಡಿ, ದೈನಂದಿನ ಆಗುಹೋಗುಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ಸಂಘಟನೆಯಿಂದ ಬಲಯುತರಾಗಿರಿ ಎಂಬ ಗುರುಗಳ ಸಂದೇಶವನ್ನು ಅನುಸರಿಸಿ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಘಟಿತರಾಗಬೇಕು. ಆಗ ಮಾತ್ರ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಇಂದು ಇಷ್ಟೊಂದು ಸಂಖ್ಯೆಯಲ್ಲಿ ಪಾಲ್ಗೊಂಡಿರುವ ಸಮಾಜ ಬಾಂಧವರನ್ನು ಕಂಡಾಗ ಸಂತೋಷವಾಗುತ್ತಿದೆ. ನಾವೆಲ್ಲರು ಒಂದಾಗಿ ಸಮಾಜ ಸೇವೆಯಲ್ಲಿ ತೊಡಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ನುಡಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪರಿಸರದ ಎಲ್ಲಾ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಉದ್ಯಮಿ ನಾರಾಯಣ ಪೂಜಾರಿ, ಅಯ್ಯಪ್ಪ ಮಂದಿರ ಭಿವಂಡಿ ಇದರ ಧರ್ಮದರ್ಶಿ ವಿಶ್ವನಾಥ್ ಶೆಟ್ಟಿ, ಭಿವಂಡಿ ಹೊಟೇಲ್ ಅಸೋಸಿಯೇಶನ್‌ನ ಅಧ್ಯಕ್ಷ ರಘುರಾಮ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು ಶ್ರೀದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು.
ಕೇಂದ್ರ ಕಚೇರಿಯ ವತಿಯಿಂದ ಮಹಿಳಾ ವಿಭಾಗದ ಸದಸ್ಯೆ ಶೋಭಾ ಶಂಕರ್ ಪೂಜಾರಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಿವಂಡಿ ಸ್ಥಳೀಯ ಕಚೇರಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗೌರವ ಕಾರ್ಯದರ್ಶಿ ಉಮೇಶ್ ಆರ್. ಸುವರ್ಣ ಅವರು ಮಾತನಾಡಿ ಫೆ. 24 ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೂ ಸಮಾಜ ಬಾಂಧವರು, ದಾನಿಗಳು ಸಹಕರಿಸಬೇಕು ಎಂದು ನುಡಿದು ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳಿಗೆ, ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.