ನಗರದ ಅಪ್ಸರಾ ಥಿಯೇಟರ್ ಮುಂದೆ ಇಂದು ಸಿಕ್ಕಾಪಟ್ಟೆ ಜನ ಸೇರಿದ್ದರು. ಹಾಗಂತ ಸಿನಿಮಾ ನೋಡಲು ಜನ ಬಂದಿರಲಿಲ್ಲ. ಬದಲಾಗಿ ಶೂಟಿಂಗ್ ನೋಡಲು. ಅವರೆಲ್ಲರ ಮಧ್ಯೆ ರಘು ದೀಕ್ಷಿತ್ ಹೈ ಪಿಚ್‌ನಲ್ಲಿ ಹಾಡುತ್ತಿದ್ದರು. ನಿಜ ಹೇಳಬೇಕೆಂದರೆ ಅದೊಂಥರ ಬೀದಿ ನಾಟಕದ ಫೀಲ್ ಕೊಡುತ್ತಿತ್ತು. ಅಷ್ಟಕ್ಕೂ ರಘು ದೀಕ್ಷಿತ್ ಕ್ಯಾಮರಾ ಮುಂದೆ ಹಾಡುತ್ತಾ ತಮ್ಮ ಭಾವ-ಭಂಗಿ ಪ್ರದರ್ಶಿಸುತ್ತಿದ್ದುದು 'ಟೋನಿ' ಚಿತ್ರಕ್ಕಾಗಿ. ಕಿಟ್ಟಿ ನಾಯಕರಾಗಿರುವ 'ಟೋನಿ' ಚಿತ್ರದ ಹಾಡೊಂದನ್ನು ನಿರ್ದೇಶಕ ಜಯತೀರ್ಥ ಅಪ್ಸರಾ ಚಿತ್ರಮಂದಿರದ ಮುಂದೆ ಚಿತ್ರೀಕರಿಸುತ್ತಿದ್ದರು. ಸಿದ್ಧಯ್ಯ ಸ್ವಾಮಿಯ ನೀಲಗಾರರ ಪದಗಳ ಪಲ್ಲವಿಯನ್ನು ಇಟ್ಟುಕೊಂಡು ತಮ್ಮ ಸಿನಿಮಾಕ್ಕೆ ಬೇಕಾದಂತೆ ನಿರ್ದೇಶಕ ಜಯತೀರ್ಥ ಚರಣಗಳನ್ನು ಬರೆದಿದ್ದಾರೆ. ಇದಕ್ಕೆ ಎಲಿಗ¾ ಸೌಂಡ್ ಎಫೆಕ್ಟ್ ಬೇರೆ ನೀಡಲಾಗಿದೆಯಂತೆ. ರಘು ದೀಕ್ಷಿತ್ ಹಾಡಿರುವ ಈ ಹಾಡಿನಲ್ಲಿ ಸ್ವತಃ ರಘು ದೀಕ್ಷಿತ್ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನಾಯಕನ ಮನ ಪರಿವರ್ತನೆ ಮಾಡುವ ಹಾಡು. ಬೀದಿ ನಾಟಕದ ಶೈಲಿಯಲ್ಲಿ ಇರಬೇಕೆಂಬ ಕಾರಣಕ್ಕೆ ಹೆಚ್ಚು ಜನ ಸೇರುವ ಅಪ್ಸರಾ ಚಿತ್ರಮಂದಿರದ ಕಾಂಪೌಂಡ್ ಒಳಗಡೆ ಶೂಟಿಂಗ್ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ ಜಯತೀರ್ಥ. ನಾಯಕಿಯೊಂದಿಗೆ ಬಂದ ನಾಯಕ ಆ ಹಾಡು ಕೇಳಿ ಪರಿವರ್ತನೆಗೊಳ್ಳುತ್ತಾನಂತೆ. ಶೂಟಿಂಗ್‌ನಲ್ಲಿ ಕಿಟ್ಟಿ ಹಾಗೂ ಐಂದ್ರಿತಾ ಕೂಡಾ ಭಾಗವಹಿಸಿದ್ದರು. ಈ ಹಾಡಿನಲ್ಲಿ ಲಂಚಾವತಾರ, ಮಹಿಳಾ ದೌರ್ಜನ್ಯ, ರೈತರ ಸಮಸ್ಯೆ ಸೇರಿದಂತೆ ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಹಲವು ಅಂಶಗಳ ಬಗ್ಗೆ ಹೇಳಲಾಗಿದೆಯಂತೆ. ಧನು ಕುಮಾರ್ ಈ ಹಾಡಿನ ನೃತ್ಯ ಸಂಯೋಜನೆ ಮಾಡಿದ್ದಾರೆ.