ಚಿತ್ರ : ಸುಭಾಶ್ ಶಿರಿಯಾ, ವರದಿ : ರಮೇಶ್ ಉದ್ಯಾವರ್. | Feb 18, 2013
ಮುಂಬಯಿ: ಭಾರತೀಯ ಪರಂಪರಾಗತ ಸಂಸ್ಕೃತಿಯಲ್ಲಿ ಬದುಕನ್ನು ಕಟ್ಟಿಕೊಂಡವರು ನಾವು. ಸಂಸ್ಕೃತಿ ಪ್ರಕೃತಿಗೆ ಯಾವ ರೀತಿ ಪೂರಕವಾಗಿದೆ ಎಂಬುವುದನ್ನು ನಾವು ತಿಳಿದುಕೊಳ್ಳಬೇಕು. ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸ್ತ್ರೀಯನ್ನು ಗೌರವಿಸುವ ಪರಿಪಾಠ ನಮ್ಮದಾಗಿದೆ. ಪ್ರತಿ ಮನೆಯ, ಮನದ ಶಕ್ತಿ ತಾಯಿಯಾಗಿದ್ದಾಳೆ. ಸ್ತ್ರೀ ಸಮಾನತೆ ನಮ್ಮನ್ನು ಪ್ರೀತಿಸಿ ಗೆಲ್ಲುತ್ತದೆ. ದೇಶದಲ್ಲಿ ಬದಲಾವಣೆಯನ್ನು ಕಾಣುವ ನಾವು ಮೌಲ್ಯದಲ್ಲಿ ಅಶ್ವತ್ಥದ ಮರದಂತೆ. ಅಮಹಾದೇವಿಯ ಚಿಂತನೆಯನ್ನು ಮಾನದಂಡವಾಗಿ ಇಟ್ಟುಕೊಂಡು ಬದುಕುವುದು ಮಹಿಳೆಯರಿಗೆ ಹಿರಿಮೆ ಎಂದು ಪ್ರಸಿದ್ಧ ಸ್ತ್ರೀ ಚಿಂತಕಿ, ಲೇಖಕಿ ಡಾ| ವೀಣಾ ಬನ್ನಂಜೆ ಅವರು ಅಭಿಪ್ರಾಯಿಸಿದರು.

ಫೆ. 17 ರಂದು ಸಂಜೆ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಡಾ| ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕರ್ನಾಟಕ ಸಂಘ ಮುಂಬಯಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಅವರ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಮಹಿಳೆ ಮತ್ತು ಸಂಸ್ಕೃತಿ ಎಂಬ ವಿಷಯದ ಮೇಲೆ ನಡೆದ ಎಂಟನೆ ಸಾಹಿತ್ಯ ಸಂಸ್ಕೃತಿ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಆಚಾರ-ವಿಚಾರ, ಪದ್ಧತಿಯಲ್ಲಿ ಕೆಡುಕಿಲ್ಲ. ನೋಡುವ ರೀತಿ ಬದಲಾಗಬೇಕು.
ಪಶುವಿನೊಂದಿಗೆ ಕೂಡುವ ಪ್ರಾಣಿ ಪಕ್ಷಿಗಳು ಸಂಯಮದಿಂದ ವರ್ತಿಸುವಾಗ ಅಶ್ಲೀಲತೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು ಬದುಕಿಗೆ ದಾರಿದೀಪ. ಪ್ರೀತಿಯಲ್ಲಿ ಎಲ್ಲವನ್ನು, ಎಲ್ಲರನ್ನು ಗೆಲ್ಲಬಹುದು. ವಾದದಲ್ಲಿ ಸಾಧುವಲ್ಲ. ಸತ್ಯವೇ ದೇವರು ಎಂದು ನಮ್ಮ ಹಿಂದು ಧರ್ಮ ಸಾರಿದರೆ, ಪ್ರೀತಿಯೇ ದೇವರು ಎಂದು ಕ್ರೈಸ್ತ ಧರ್ಮ ಸಾರುತ್ತದೆ. ಎಲ್ಲಾ ಶೇಷ-ಅವಶೇಷಗಳ ಬೇರಿನಿಂದ ತಿಳಿಯಲು ಇಂತಹ ಕಾರ್ಯಕ್ರಮಗಳಿಗೆ ಮಹಿಳೆಯರೊಂದಿಗೆ ಮಕ್ಕಳ ಸಂಖ್ಯೆ ಅಧಿಕವಾಗಿರಬೇಕು. ಆಗ ನಮ್ಮ ಸಂಸ್ಕೃತಿಯ ದಾರ್ಶನಿಕತೆಗೆ ಬೆಳಕು ಚೆಲ್ಲಬಹುದು ಎಂದು ನುಡಿದರು.
ಸಮಾರಂಭದಲ್ಲಿ ಸಾಹಿತ್ಯ, ಸಂಗೀತ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಎ. ಎಚ್. ಶೆಣೈ (ಪ್ರಿಯತಮ), ಪ್ರಕಾಶ್ ಜಿ. ಬುರ್ಡೆ, ಅರುಣ್ ಕುಮಾರ್ ಅವರನ್ನು ಗಣ್ಯರು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ನಗದು ನಿಧಿಯೊಂದಿಗೆ ಸಾಧನಾ ಶಿಖರ ಪ್ರಶಸ್ತಿಯನ್ನು ಸಮ್ಮಾನಿಸಿದರು.
ಅಲ್ಲದೆ ಕಳೆದ 110 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನಾ ಸಂಸ್ಥೆಯಾಗಿ ಪ್ರಸ್ತುತ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಗೌರವಾರ್ಪಣೆ ಮಾಡಲಾಯಿತು. ಮಂಡಳಿಯ ಉಪಾಧ್ಯಕ್ಷ ಸಂಜೀವ ಕೆ. ಸಾಲ್ಯಾನ್ ಅವರು ಗೌರವಾರ್ಪಣೆ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ಡಾ| ಜಿ. ಡಿ. ಜೋಶಿ ಅವರು ಮಾತನಾಡಿ, ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಸಾಧನ ಶಿಖರ ಪ್ರಶಸ್ತಿಯೊಂದಿಗೆ ಲೇಖಕರು, ಸಾಹಿತಿ, ಸಮಾಜ ಸೇವೆಕರು, ಕಲಾವಿದರನ್ನು ಗೌರವಿಸುತ್ತಿರುವುದು ಸಂಘಕ್ಕೆ ಕಲಶಪ್ರಾಯವಾಗಿದೆ. ಭವಿಷ್ಯದಲ್ಲೂ ಇಂತಹ ಕಾರ್ಯಕ್ರಮಗಳು ನಿರಂತರಾಗಿ ನಡೆಯಲಿದೆ. ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘವು ಪ್ರೋತ್ಸಾಹಿಸುತ್ತಿದೆ ಎಂದರು.
ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್ ಕುಮಾರ್ ಪೊಲಿಪು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗೌರವ ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಅವರು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ದೃಶ್ಯ ಬೆಂಗಳೂರು ಕಲಾವಿದರಿಂದ ಮೋಹನ್‌ಚಂದ್ರ ಅವರು ರಚಿಸಿರುವ, ದಾಕ್ಷಾಯಿಣಿ ಭಟ್ ಅವರು ನಿರ್ದೇಶಿಸಿರುವ ಬಸ್ತಿ ನಾಟಕ ನಾಟಕ ಪ್ರದರ್ಶನಗೊಂಡಿತು. ಬೆಳಗ್ಗೆಯಿಂದ ವಿವಿಧ ಗೋಷ್ಟಿಗಳು ಜರಗಿತು.
ಮರೆತು ಹೋದ ಕನ್ನಡ ಸಂಬಂಧಕ್ಕೆ ಮರುಜೀವ ನೀಡಿದ ಈ ಸಂಸ್ಥೆ ನನಗೆ ಮೂರನೇ ಮಗು ಇದ್ದಂತೆ. ನನ್ನ ಪರಿಶ್ರಮಕ್ಕೆ ದಕ್ಕಿದ ಫಲ ಇದಾಗಿದೆ - ಪಿ. ಜಿ. ಬುರ್ಡೆ (ಸಾಧನಾ ಶಿಖರ ಪ್ರಶಸ್ತಿ ಪುರಸ್ಕೃತರು).
ಕರ್ನಾಟಕ ಸಂಘವು ಮಾಡುತ್ತಿರುವ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಅಭಿನಂದನೀಯ. ಈ ಪ್ರಶಸ್ತಿಯಿಂದ ನನ್ನ ಸಾಹಿತ್ಯ ಸೇವೆಗೆ ಇನ್ನಷ್ಟು ಬಲ ಬಂದಂತಾಗಿದೆ - ಪ್ರಿಯತಮ (ಸಾಧನಾ ಶಿಖರ ಪ್ರಶಸ್ತಿ ಪುರಸ್ಕೃತರು).
ಇದೊಂದು ಅಪೂರ್ವ ಕ್ಷಣವಾಗಿದೆ. ನನ್ನ ಸಾಧನೆಯನ್ನು ಗುರುತಿಸಿ ನನಗೆ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರದಾನಿಸಿದ ಸಂಘಕ್ಕೆ ಋಣಿಯಾಗಿದ್ದೇನೆ. ಸಂಘವು ಮಾಡುತ್ತಿರುವ ಸಾಧನೆ ವಿಶೇಷವಾಗಿದೆ - ಅರುಣ್ ಕುಮಾರ್ (ಸಾಧನಾ ಶಿಖರ ಪ್ರಶಸ್ತಿ ಪುರಸ್ಕೃತರು).
110 ವರ್ಷಗಳಿಂದ ಹಿರಿಯ ಚೇತನಗಳು ಕಲಿಸಿದ ಪಾಠದಂತೆ ಸಮಾಜ ಸೇವೆಯಲ್ಲಿ ತೊಡಗಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ ನಿಸ್ವಾರ್ಥ ಸೇವೆಯ ಸಂಸ್ಥೆಯಾಗಿದೆ. ಕರ್ನಾಟಕ ಸಂಘದ ಅನ್ಯೋನ್ಯ ಸಂಬಂಧವು ಮಂಡಳಿಯ ಹೆಗ್ಗಳಿಕೆಗೆ ಕಾರಯವಾಗಿದೆ - ಸಂಜೀವ ಕೆ. ಸಾಲ್ಯಾನ್ (ಉಪಾಧ್ಯಕ್ಷರು : ಮೊಗವೀರ ವ್ಯವಸ್ಥಾಪಕ ಮಂಡಳಿ).