ಮುಂಬಯಿ: ರಾಜ್ಯದಲ್ಲಿ 3 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಎರಡು ಬೃಹತ್ ವಿದ್ಯುತ್ ಸ್ಥಾವರಗಳು ಮುಚ್ಚಿದರೂ ಬೇಸಗೆಯಲ್ಲಿ ಲೋಡ್‌ಶೆಡ್ಡಿಂಗ್ ಇರುವುದಿಲ್ಲ.ಎರಡು ವಿದ್ಯುತ್ ಸ್ಥಾವರಗಳ ಕಾರ್ಯ ಸ್ಥಗಿತ ತೀರಾ ಕಳವಳಕಾರಿಯಾಗಿದೆ. ಆದರೆ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಹೇಳಿದ್ದಾರೆ.ಇಲ್ಲಿ ಎಫ್‌ಐಸಿಸಿಐ ಆಯೋಜಿಸಿದ ಪ್ರಗತಿಪರ ಮಹಾರಾಷ್ಟ್ರ ಸಮ್ಮೇಳನದ ಪಾರ್ಶ್ವದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡುತ್ತಿದ್ದರು.1,967 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ದಾಭೋಲ್ ವಿದ್ಯುತ್ ಸ್ಥಾವರ ಮತ್ತು 1,130 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಪಾರ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಕ್ರಮವಾಗಿ ಅನಿಲ ಮತ್ತು ನೀರಿನ ಕೊರತೆ ಉದ್ಭವಿಸಿದ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ.ವಿದ್ಯುತ್ ಉತಾ#ದನೆ ಹೆಚ್ಚಿಸಲು ಪಾರ್ಲಿ ಸ್ಥಾವರದ ಕಲ್ಲಿದ್ದನ್ನು ಕೋರಾಡ್ ಇಲ್ಲವೇ ಇತರ ಸ್ಥಾವರಗಳಿಗೆ ಸಾಗಿಸುವುದಾಗಿ ಅವರು ಹೇಳಿದರು.ಆದರೆ ರಿಲಯನ್ಸ್ ಮತ್ತು ಒಎನ್‌ಜಿಸಿಯಿಂದ ಅನಿಲ ಪೂರೈಕೆಯ ಕೊರತೆ ಎದುರಿಸುತ್ತಿದೆ ಎನ್ನಲಾದ ದಾಭೋಲ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸುವ ಬದಲಿ ಮಾರ್ಗೋಪಾಯದ ಬಗ್ಗೆ ಅವರು ಸ್ಪಷ್ಟನೆ ನೀಡಿಲ್ಲ. ಇತರ ರಾಜ್ಯಗಳಿಂದ ವಿದ್ಯುತ್ ಪಡೆಯುವ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆದರೆ ರಾಜ್ಯದಲ್ಲಿ ವಿದ್ಯುತ್ ಅಭಾವ ಎಷ್ಟು ಪ್ರಮಾಣದಲ್ಲಿ ಉಂಟಾಗಬಹುದು ಎಂಬುದನ್ನು ತಿಳಿಸಲು ನಿರಾಕರಿಸಿದರು.