ಮುಂಬಯಿ: ಮೊಬೈಲ್ ಫೋನ್ ವಾಲ್‌ಪೇಪರ್ ಓರ್ವ ಕಳ್ಳನನ್ನು ಬಂಧಿಸಲು ಪೊಲೀಸರಿಗೆ ಮಹತ್ವದ ಸುಳಿವು ನೀಡಿದೆ.ಜ್ಯುವೆಲ್ಲರಿ ಅಂಗಡಿಯೊಂದರಿಂದ ಬೆಳ್ಳಿಯಾಭರಣಗಳನ್ನು ದೋಚಿದ ಆರೋಪಿ ಸಲ್ಮಾನ್ ಶೇಖ್‌ನನ್ನು ಪೊಲೀಸರು ಅಂಗಡಿಯ ಸಿಸಿಟಿವಿ ಸೆರೆ ಹಿಡಿದ ಆತನ ಮೊಬೈಲ್ ಫೋನಿನ ವಾಲ್‌ಪೇಪರ್ ಆಧಾರದಲ್ಲಿ ಬಂಧಿಸಿದ್ದಾರೆ.ಮಲಾಡ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಶೇಖ್ ಮಲಾಡ್ ಪಶ್ಚಿಮದ ಜಕಾರಿಯಾ ರಸ್ತೆಯಲ್ಲಿ ಎಂ ಶಂಕರ್‌ಲಾಲ್ ಆ್ಯಂಡ್ ಕಂಪೆನಿಯ ಚಿನ್ನಾಭರಣದಂಗಡಿಯಿಂದ ಫೆ.13ರಂದು ಬೆಳ್ಳಿಯಾಭರಣಗಳನ್ನು ದೋಚಿದ್ದ ಎಂದು ಆರೋಪಿಸಲಾಗಿದೆ.ಅಂಗಡಿಯಲ್ಲಿ ಬೆಳ್ಳಿಯಾಭರಣಗಳು ಕಳವಾದ ಅನಂತರ ಮಾಲಕ ಪೊಲೀಸರಿಗೆ ದೂರು ನೀಡಿದ್ದರು. ಅಂಗಡಿಯ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿದಾಗ ಕತ್ತಲೆಯಲ್ಲಿ ಕಳ್ಳ ತನ್ನ ಮೊಬೈಲ್ ಫೋನ್‌ನನ್ನು ಬ್ಯಾಟರಿಯಾಗಿ ಬಳಸಿದ್ದ ದೃಶ್ಯವನ್ನು ಗಮನಿಸಿದರು. ಸಿಸಿಟಿವಿಯಲ್ಲಿ ಅವನ ಮೊಬೈಲ್ ಫೋನಿನ ವಾಲ್‌ಪೇಪರ್ ಮೂಡಿ ಬಂದಿದೆ. ಈ ಆಧಾರದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು ಸಮೀಪದ ನಿರ್ಮಾಣ ಹಂತದ ಕಟ್ಟಡದ ಕಾರ್ಮಿಕರನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಶೇಖ್‌ನನ್ನು ಪ್ರಶ್ನಿಸಿದಾಗ ಅವನ ಮೊಬೈಲ್ ಫೋನಿನ ವಾಲ್‌ಪೇಪರ್ ತೋರಿಸಲು ಪೊಲೀಸರು ಹೇಳಿದರು.ಮೊಬೈಲ್‌ನಲ್ಲಿದ್ದ ವಾಲ್‌ಪೇಪರ್ ಸಿಸಿಟಿವಿ ಸೆರೆ ಹಿಡಿದ ವಾಲ್‌ಪೇಪರ್‌ಗೆ ಹೋಲಿಕೆಯಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದರು.ಆರೋಪಿಯ ಮನೆಯಿಂದ ಬೆಳ್ಳಿಯಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆ.20ರ ತನಕ ಶೇಖ್‌ಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.ಅವನ ವಿರುದ್ಧ ಅಕ್ರಮ ಪ್ರವೇಶ ಮತ್ತು ಕಳ್ಳತನದ ಆರೋಪ ದಾಖಲಿಸಲಾಗಿದೆ.