ತಿರುವನಂತಪುರ: ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಲಿಪಶು ಮಹಿಳೆಯನ್ನು ವೇಶ್ಯೆ ಎಂದು ಕರೆದಿರುವ ಕಣ್ಣೂರಿನ ಕಾಂಗ್ರೆಸ್ ಸಂಸದ ಕೆ.ಸುಧಾಕರನ್ ಹೇಳಿಕೆ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಸಿಪಿಎಂನ ಹಿರಿಯ ನಾಯಕಿ ಬೃಂದಾ ಕಾರಟ್ ಸಹಿತ ವಿಪಕ್ಷ ನಾಯಕಿಯರು, ಮಹಿಳಾ ಸಂಘಟನೆಗಳು ಮಾತ್ರವಲ್ಲದೆ ಕಾಂಗ್ರೆಸಿನ ಹಲವು ನಾಯಕಿಯರು ಕೂಡ ಈ ಹೇಳಿಕೆಗೆ ಆಕ್ಷೇಪ ಎತ್ತಿ ಸಂಸದನ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.ಮಸ್ಕತ್‌ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವ ವೇಳೆ ಸುಧಾಕರನ್ ಸೂರ್ಯನೆಲ್ಲಿ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಹೊತ್ತಿರುವ ಪಕ್ಷದ ತನ್ನ ಸಹೋದ್ಯೋಗಿ ಪಿ. ಜೆ. ಕುರಿಯನ್ ಅವರನ್ನು ಬೆಂಬಲಿಸುವ ಭರದಲ್ಲಿ ಮಹಿಳೆಯನ್ನು ವೇಶ್ಯೆ ಎಂದು ಕರೆದಿದ್ದಾರೆ. 42 ದಿನಗಳಲ್ಲಿ 40 ಮಂದಿಯಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಈ ಮಹಿಳೆಗೆ ಪಾರಾಗಿ ಹೋಗಲು ಸಾಕಷ್ಟು ಅವಕಾಶವಿತ್ತು.ಪುರುಷರ ಜತೆಗಿದ್ದಾಗ ಆಕೆ ಖರೀದಿಗಳನ್ನು ಮಾಡಿದ್ದಾರೆ, ವೈದ್ಯರ ಬಳಿಗೆ ಮತ್ತು ಮಾರುಕಟ್ಟೆಗೆ ಹೋಗಿದ್ದಾರೆ. ಕನಿಷ್ಠ ಆಕೆ ಕಿರುಚಿಕೊಳ್ಳಬಹುದಿತ್ತು, ಇಲ್ಲವೇ ಅಳಬಹುದಿತ್ತು. ಆದರೆ ಆಕೆ ಹೀಗೇನೂ ಮಾಡದೆ ಪುರುಷರ ಸಾಂಗತ್ಯದಲ್ಲಿ ಖುಷಿಯಿಂದ ಇದ್ದರು ಮತ್ತು ಅವರಿಂದ ಸಾಕಷ್ಟು ಲಾಭ ಮಾಡಿಕೊಂಡ ಬಳಿಕ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಇದು ಸುಧಾಕರನ್ ಹೇಳಿರುವ ಮಾತುಗಳು.ಸುಧಾಕರನ್ ಹೇಳಿಕೆಯನ್ನು ಖಂಡಿಸಿರುವ ಕಾರಟ್ ಇದು ಆ ಮನುಷ್ಯನ ಮನೋಧರ್ಮ ಏನೆಂಬುದನ್ನು ತಿಳಿಸುತ್ತದೆ. ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯ ವಿರುದ್ಧ ಇಂತಹ ಘೋರ ಮಾತುಗಳನ್ನಾಡುತ್ತಾರೆ ಎಂದಾದರೆ ಇದಕ್ಕೆ ಕಾರಣ ಕಾಂಗ್ರೆಸ್ ನಾಯಕತ್ವದ ನಿಷ್ಕ್ರಿಯತೆ ಎಂದಿದ್ದಾರೆ.ಕೇರಳದ ವಿಪಕ್ಷ ಸುಧಾಕರನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಅನಾಗರಿಕ ವ್ಯಕ್ತಿ ಮಾತ್ರ ಇಂತಹ ಮಾತುಗಳನ್ನು ಆಡಬಲ್ಲ. ಇದು ಸಮಾಜದ ವಿರುದ್ಧ ಮತ್ತು ನಿರ್ದಿಷ್ಟವಾಗಿ ಮಹಿಳೆಯರ ವಿರುದ್ಧ ನೀಡಿರುವ ಅತ್ಯಂತ ಹೀನವಾದ ಹೇಳಿಕೆ ಎಂದು ವಿಪಕ್ಷ ನಾಯಕ ವಿ. ಎಸ್. ಅಚ್ಯುತಾನಂದನ್ ಹೇಳಿದ್ದಾರೆ.ಸುಧಾಕರನ್ ವಿರುದ್ಧ ಸರಕಾರ ಕೇಸು ದಾಖಲಿಸಿಕೊಳ್ಳಬೇಕೆಂದು ಸಿಪಿಎಂನ ರಾಜ್ಯಸಭಾ ಸದಸ್ಯೆ ಟಿ. ಎನ್. ಸೀಮಾ ಆಗ್ರಹಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿ ಶನಿಮೋಲ್ ಉಸ್ಮಾನ್, ಮಹಿಳಾ ಕಾಂಗ್ರೆಸ್ ರಾಜಾಧ್ಯಕ್ಷೆ ಬಿಂದು ಕೃಷ್ಣ ಮತ್ತಿತರ ಕಾಂಗ್ರೆಸ್ ನಾಯಕಿಯರು ಸುಧಾಕರನ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.ಇದೇ ವೇಳೆ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆ ಮತ್ತು ಅವರ ತಾಯಿ ವೇಶ್ಯಾವಾಟಿಕೆ ಮಾಡಿದ ಆರೋಪವನ್ನು ಅಲ್ಲಗಳೆದಿದ್ದಾರೆ. ಶಾಲಾ ಬಾಲಕಿಯಾಗಿದ್ದ ತನಗೆ ವೇಶ್ಯೆಯಾಗುವ ಅಗತ್ಯವೇನಿತ್ತು ಎಂದು ಮಹಿಳೆ ಕೇಳಿದರೆ ಆಕೆಯ ತಾಯಿ ಮಗಳನ್ನು ವೇಶ್ಯಾವಾಟಿಕೆಗೆ ದೂಡುವಂತಹ ಹೀನ ಕೆಲಸವನ್ನು ನಾವು ಮಾಡಿಲ್ಲ ಎಂದಿದ್ದಾರೆ.