Udayavani | Feb 18, 2013
ಬಸ್, ರಿಕ್ಷಾ, ಟ್ಯಾಕ್ಸಿ ಬಂದ್‌ಗೆ ಕಾರ್ಮಿಕರ ಕರೆ; ಬಸ್ ಬಂದ್ ಬೇಡ ಎಂದು ಮಾಲಕರು
ಮಂಗಳೂರು/ಉಡುಪಿ: ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಬಿಎಂಎಸ್, ಎಐಟಿಯುಎಸಿ, ಇಂಟಕ್ ಮತ್ತು ಎಚ್‌ಎಂಎಸ್ ಫೆ. 20 ಮತ್ತು 21 ರಂದು ನಡೆಸಲುದ್ದೇಶಿಸಿರುವ ಅಖೀಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಎರಡೂ ದಿನಗಳಲ್ಲಿ ಬಸ್ ಮತ್ತು ಆಟೋ ರಿಕ್ಷಾ ಬಂದ್‌ಗೆ ಸಾರಿಗೆ ಕಾರ್ಮಿಕರ ಸಂಘಟನೆಗಳು ಕರೆ ನೀಡಿವೆ; ಆದರೆ ಕೆನರಾ ಬಸ್ ಮಾಲಕರ ಸಂಘ ಮತ್ತು ಉಡುಪಿ ಸಿಟಿ ಬಸ್ ಮಾಲಕರ ಸಂಘದವರು ಈ ಮುಷ್ಕರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ. ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕವು ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿದೆ.
ವಿವಿಧ ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಅಖೀಲ ಭಾರತ ಸಾರಿಗೆ ಕಾರ್ಮಿಕರ ಫೆಡರೇಶನ್ ಮುಷ್ಕರಕ್ಕೆ ಬೆಂಬಲ ಘೋಷಿಸಿರುವುದರಿಂದ ಜಿಲ್ಲೆಯ ಖಾಸಗಿ ಬಸ್ಸು ನೌಕರರು, ಟೆಂಪೊ, ಲಾರಿ, ಕಾರು ಚಾಲಕರು ಕೆಲಸ ಸ್ಥಗಿತಗೊಳಿಸಿ ಬಸ್ಸು ಹಾಗೂ ಇತರ ಸಾರಿಗೆ ರಂಗವನ್ನು ಬಂದ್ ಮಾಡುವ ನಿರ್ಣಯಕ್ಕೆ ಬಂದಿದೆ ಎಂದು ಮೋಟಾರ್ ಟ್ರಾನ್ಸ್‌ಪೊàರ್ಟ್ ಆ್ಯಂಡ್ ಎಂಜಿನಿಯರಿಂಗ್ ವರ್ಕರ್ ಯೂನಿಯನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಬಲ ಇಲ್ಲ; ಬಂದ್ ಬೇಡ ಎಂದು ಮಾಲಕರು
ಫೆ. 20, 21 ರಂದು ಕರೆ ನೀಡಲಾಗಿರುವ ಸಾರ್ವತ್ರಿಕ ಮುಷ್ಕರಕ್ಕೆ ಬಸ್ ಮಾಲಕರ ಬೆಂಬಲ ಇಲ್ಲ ಎಂದು ಕೆನರಾ ಬಸ್ ಮಾಲಕರ ಸಂಘ ತಿಳಿಸಿದೆ.
ಮುಷ್ಕರಕ್ಕೆ ಕರೆ ನೀಡಲಾಗಿರುವ ಎರಡೂ ದಿನಗಳಲ್ಲಿ ಹಬ್ಬ, ಜಾತ್ರೆ, ಮದುವೆ ಮುಂತಾದ ಸಮಾರಂಭಗಳು ಅಧಿಕ ಪ್ರಮಾಣದಲ್ಲಿ ನಿಗದಿಯಾಗಿದ್ದು, ಮುಷ್ಕರ ನಡೆದರೆ ದ.ಕ. ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಪ್ರಯಾಣಿಕರಿಗೂ ತೊಂದರೆಯಾಗಲಿದೆ. ಎರಡು ದಿನಗಳ ಕಾಲ ಮುಷ್ಕರ ನಡೆದರೆ ಜನರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಆದ್ದರಿಂದ ಕಾರ್ಮಿಕ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳ ಬೇಕು ಎಂದು ಸಂಘ ವಿನಂತಿಸಿದೆ.
ಉಭಯ ಜಿಲ್ಲೆಗಳಲ್ಲಿ ಅಂದು ಬಸ್ಸುಗಳು ಎಂದಿನಂತೆ ಓಡಾಟ ನಡೆಸಲಿವೆ ಎಂದು ಸಂಘದ ಪ್ರಕಟನೆ ತಿಳಿಸಿದೆ.
ಆಟೊ ರಿಕ್ಷಾ ಚಾಲಕರ ಸಂಘದ ಹೇಳಿಕೆ
ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ (ಸಿಐಟಿಯು) ಈ ಮುಷ್ಕರವನ್ನು ಬೆಂಬಲಿಸುತ್ತದೆ ಎಂದು ಫೆಡರೇಶನಿನ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಎಲ್. ಟಿ. ಸುವರ್ಣ ಅವರು ತಿಳಿಸಿದ್ದಾರೆ.
ಬ್ಯಾಂಕ್ ಸಂಘಟನೆಗಳ ವೇದಿಕೆಯ ಬೆಂಬಲ
ಕೇಂದ್ರ ಕಾರ್ಮಿಕ ಸಂಘಟನೆಗಳು 10 ಅಂಶ ಬೇಡಿಕೆಗಳನ್ನು ಒತ್ತಾಯಿಸಿ ಫೆ. 20- 21 ರಂದು ಕರೆ ನೀಡಲಾಗಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ದ. ಕ. ಜಿಲ್ಲಾ ಘಟಕ ಬೆಂಬಲ ವ್ಯಕ್ತ ಪಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಜಿಲ್ಲೆಯ ಸುಮಾರು 25000 ದಷ್ಟಿರುವ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಫೆ 20 ರೊಳಗೆ ತಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವ ಮೂಲಕ ತಮ್ಮೊಂದಿಗೆ ಸಹಕರಿಸ ಬೇಕು; ಜನರಿಗೆ ಆಗಲಿರುವ ತೊಂದರೆಗಳ ಬಗ್ಗೆ ತಮಗೆ ಖೇದವಿದೆ ಎಂದು ಪ್ರಕಟನೆ ವಿವರಿಸಿದೆ.
ಬಸ್ ನೌಕರರ ಬೇಡಿಕೆಗಳು
* ಬಸ್ ನೌಕರರನ್ನು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸ ಬೇಕು * 8 ಗಂಟೆಗಳ ಕೆಲಸ ನಿಗದಿ. * ಬೋನಸ್, ಪ್ರಾವಿಡೆಂಟ್ ಫಂಡ್ ಮತ್ತು ಇಎಸ್‌ಐ ಸೌಲಭ್ಯ * ಅಪಘಾತಗಳ ಸಂದರ್ಭದಲ್ಲಿ ಚಾಲಕರನ್ನು ಬಂಧಿಸುವ ಕ್ರಮ ನಿಲ್ಲ ಬೇಕು * ಪೆಟ್ರೋಲ್, ಡೀಸಿಲ್ ಬೆಲೆ ಇಳಿಸ ಬೇಕು * ಬೆಲೆ ಏರಿಕೆ ನಿಯಂತ್ರಣ * ಚಾಲಕರು ಮತ್ತು ನಿರ್ವಾಹಕರಿಗೆ ಉಚಿತ ಮನೆ ನಿವೇಶನ ನೀಡ ಬೇಕು.
ರಿಕ್ಷಾ ಚಾಲಕರ ಬೇಡಿಕೆಗಳು:
* ಕಾರ್ಮಿಕಟರ ಭದ್ರತಾ ಮಂಡಳಿಯಲ್ಲಿ ಆಟೋ ಚಾಲಕರ ನೋಂದಣಿ ಮತ್ತು ಕಲ್ಯಾಣ ಯೋಜನೆಗಳ ಜಾರಿ * ಆಟೋ ಚಾಲನಾ ಪತ್ರಕ್ಕೆ ವಿದ್ಯಾರ್ಹತ ಕಡ್ಡಾಯ ಮಾಡಿರುವುದಕ್ಕೆ ವಿರೋಧ * 60 ವರ್ಷ ಪ್ರಾಯ ಮೇಲ್ಪಟ್ಟ ರಿಕ್ಷಾ ಚಾಲಕರಿಗೆ ಪಿಂಚಣಿ ಸೌಲಭ್ಯ * ರಿಕ್ಷಾ ವಿಮಾ ಪಾಲಿಸಿ ದರ ಕಡಿತ * ರಿಕ್ಷಾ ಚಾಲಕರಿಗೆ ಆರ್‌ಟಿಒ/ ಪೊಲೀಸ್ ಕಿರುಕುಳಕ್ಕೆ ತಡೆ.
ಬ್ಯಾಂಕ್ ಅಧಿಕಾರಿಗಳ/ ನೌಕರರ/ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳು:
* ಬೆಲೆ ಏರಿಕೆಗೆ ನಿಯಂತ್ರಣ * ಉದ್ಯೋಗ ಸೃಷ್ಟಿಗೆ ಕ್ರಮ *ಕಾರ್ಮಿಕ ಕಾನೂನುಗಳ ಕಟ್ಟು ನಿಟ್ಟಿನ ಅನುಷ್ಠಾನ *ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ *ಕೇಂದ್ರ ಮತ್ತು ರಾಜ್ಯ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಬಂಡವಾಳ ಹಿಂದಕ್ಕೆ ಪಡೆಯುವ ಕ್ರಮಕ್ಕೆ ತಡೆ * ಬ್ಯಾಂಕಿಂಗ್ ಸುಧಾರಣೆಗಳಿಗೆ ತಡೆ * ಹೊರ ಗುತ್ತಿಗೆ ಪದ್ಧತಿ ರದ್ದು * ಶೀಘ್ರ ವೇತನ ಪರಿಷ್ಕರಣೆ * ಅನುಕಂಪದ ಆಧಾರದಲ್ಲಿ ನೆಮಕಾತಿಯಂತಹ ಬಾಕಿ ಉಳಿದಿರುವ ಬೇಡಿಕೆಗಳ ಇತ್ಯರ್ಥ * ಗುತ್ತಿಗೆ ಆಧಾರದ ನೇಮಕಾತಿಯ ರದ್ದತಿ *ಕನಿಷ್ಟ ವೇತನ 10,000 ರೂ. ನಿಗದಿ * ಬೋನಸ್, ಪ್ರಾವಿಡೆಂಟ್ ಫಂಡ್ ಸೌಲಭ್ಯಕ್ಕಿರುವ ಮಿತಿಗಳ ರದ್ದತಿ * ಎಲ್ಲರಿಗೂ ಪಿಂಚಣಿ ಸೌಲಭ್ಯ.* ಕಾರ್ಮಿಕ ಸಂಘಟನೆಗಳನ್ನು 45 ದಿನಗಳಲ್ಲಿ ಕಡ್ಡಾಯವಾಗಿ ನೊಂದಾಯಿಸುವುದು.