ಬೆಂಗಳೂರು : ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ನಟ ದರ್ಶನ್ ತೂಗುದೀಪ ಅವರಿಗೆ ನಗರ 1ನೇ ಎಸಿಎಂಎಂ ನ್ಯಾಯಾಲಯ ಕ್ಲೀನ್‌ಚಿಟ್ ನೀಡಿದೆ.ಫೆ.15ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ಅತ್ತೆ ಸುಮತಿ ಮತ್ತು ಕಾರು ಚಾಲಕ ಲಕ್ಷ್ಮಣ್ ನೀಡಿದ ಹೇಳಿಕೆ ಆಧರಿಸಿ ದರ್ಶನ್‌ರನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಸೋಮವಾರ ಪ್ರಕರಣದ ತೀರ್ಪು ಪ್ರಕಟಿಸಿದ 1ನೇ ಎಸಿಎಂಎಂ ನ್ಯಾಯಾಧೀಶ ವೆಂಕಟೇಶ್ ಆರ್.ಹಲಗಿ ಅವರು, ದರ್ಶನ್- ವಿಜಯಲಕ್ಷ್ಮೀ ನಡುವೆ ರಾಜೀ ಸಂಧಾನವಾಗಿದೆ. ಅಲ್ಲದೇ, ತಮ್ಮ ಮೇಲೆ ಹಲ್ಲೆ ನಡೆದಿಲ್ಲ ಎಂದು ಖುದ್ದು ವಿಜಯಲಕ್ಷ್ಮೀ ಅವರೇ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಪ್ರಕರಣದಿಂದ ಮುಕ್ತ ಗೊಳಿಸಲಾಗಿದೆ ಎಂದರು.ಪ್ರಕರಣದ ತನಿಖೆ ನಡೆಸಿದ ವಿಜಯನಗರ ಪೊಲೀಸರಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಮೇಲ್ಮನವಿ ಅವಧಿ ಮುಗಿದ ಬಳಿಕ ಪೊಲೀಸರ ವಶದಲ್ಲಿರುವ ದರ್ಶನ್ ಅವರ ಪಿಸ್ತೂಲ್ ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪತಿ-ಪತ್ನಿ ರಾಜಿಯಾಗಿದ್ದರೂ, ವಿಜಯನಗರ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇಲ್ಮನವಿಗೆ ಅವಕಾಶ ನೀಡಿದೆ.ಆಕಸ್ಮಿಕ ಘಟನೆ ಎಂದ ವಿಜಯಲಕ್ಷ್ಮೀಸೋಮವಾರ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ದರ್ಶನ್ ಗೈರಾಗಿದ್ದರು.2011ರ ಸೆ. 8ರಂದು ದರ್ಶನ್ ಮತ್ತು ತಮ್ಮ ನಡುವಿನ ವಾಗ್ವಾದದ ವೇಳೆ ಅವರ ಕೈಯಲ್ಲಿದ್ದ ಸಿಗರೇಟು ಆಕಸ್ಮಿಕವಾಗಿ ತಮಗೆ ತಗುಲಿದೆ ಹಾಗೂ ಕಾರಿನಿಂದ ಇಳಿದ ಬಳಿಕ ಅದರ ಬಾಗಿಲು ಮುಚ್ಚುವ ವೇಳೆ ಕೈ ಸಿಲುಕಿ ಗಾಯವಾಗಿದೆ ಎಂದು ಫೆ.15ರಂದು ವಿಜಯಲಕ್ಷ್ಮೀ ಅವರು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಕಾರು ಚಾಲಕ ಲಕ್ಷ್ಮಣ್ ಮತ್ತು ವಿಜಯಲಕ್ಷ್ಮೀ ತಾಯಿ ಸುಮತಿ ಅವರು, ದರ್ಶನ್ ಹಲ್ಲೆ ಮಾಡಿರುವುದನ್ನು ಕಣ್ಣಾರೇ ಕಂಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇವರ ಹೇಳಿಕೆ ಆಧರಿಸಿ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥ ಮಾಡಿದೆ.