ಚಿತ್ರ-ವರದಿ: ಕುಂಠಿನಿ ಪ್ರಕಾಶ್ ಹೆಗ್ಡೆ | Feb 18, 2013
ಉಲ್ಲಾಸನಗರ: ಪೋರ್ಚುಗೀಸರು, ಬ್ರಿಟಿಷರು ನಮ್ಮ ಸಾಂಸ್ಕೃತಿಕ ಸಂಪತ್ತನ್ನು ದೋಚಿಕೊಂಡು ಹೋಗುವ ಪ್ರಯತ್ನ ಮಾಡುವುದರ ಜೊತೆಗೆ ನಮ್ಮ ಪ್ರಾದೇಶಿಕ ಭಾಷೆಗಳನ್ನೂ ಮೂಲೆ ಗುಂಪಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಭಾರತೀಯರಾದ ನಾವು ಜಾತಿ, ಧರ್ಮ, ಮತ, ಭೇದಕ್ಕೆ ಆಸ್ವದ ನೀಡದೆ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಬ್ರಿಟಿಷರ ದಬ್ಟಾಳಿಕೆಯಿಂದ ಹೊರಬಂದವರಾಗಿದ್ದೇವೆ. ಆಂಗ್ಲಭಾಷೆಯನ್ನು ನಾವು ಕೇವಲ ನಮ್ಮ ವ್ಯವಹಾರಿಕ, ಉದ್ಯೋಗವಕಾಶಕ್ಕಾಗಿ ಬಳಸಿಕೊಳ್ಳಬೇಕೆ ಹೊರತು ನಮ್ಮ ಭಾರತೀಯ ಸಂಸ್ಕೃತಿಗೆ ಅಥವಾ ಬಂಟ ಸಮಾಜದ ಸಂಸ್ಕಾರ, ಸಂಸ್ಕೃತಿಗೆ ಧಕ್ಕೆಯಾಗಕೂಡದು ಎಂದು ಪದ್ಮಭೂಷಣ ಡಾ| ಬಿ. ಎಂ. ಹೆಗ್ಡೆ ಅವರು ನುಡಿದರು.
ಫೆ. 16 ರಂದು ಅಪರಾಹ್ನ ಉಲ್ಲಾಸನಗರದ ಟೌನ್‌ಹಾಲ್‌ನಲ್ಲಿ ನಡೆದ ಬಂಟರ ಸಂಘ ಮುಂಬಯಿ ಇದರ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ 3ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣಗಳಲ್ಲಿ ಇಂದು ನಡೆಯದ ಒಂದು ಅದ್ಭುತವಾದ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಈ ಹಳ್ಳಿ ಬದ್ಲಾಪುರ ಪ್ರದೇಶದಲ್ಲಿ ಸಂಘಟಿತರಾಗಿ ಏರ್ಪಡಿಸಿರುವುದು ಬಹಳ ಅಭಿನಂದನೀಯವಾದುದು. ತುಳು, ಕನ್ನಡ, ಮರಾಠಿ, ಹಿಂದಿ ಭಾಷೆಗೆ ಪಾಧಾನ್ಯತೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುವುದು ಮಾತ್ರವಲ್ಲ ಇಲ್ಲಿ ನಮ್ಮ ಬಂಟ ಸಂಸ್ಕೃತಿಯು ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಅತಿಥಿಗಳಿಗೆ, ಗಣ್ಯರಿಗೆ ಅಥವಾ ಸಾಧಕರಿಗೆ ಹೂಗುಚ್ಚ ನೀಡಿ ಸತ್ಕರಿಸುವ ಬದಲು ಒಳ್ಳೆಯ ಜ್ಞಾನೋಭಿವೃದ್ಧಿಗೆ ಸಹಕಾರವಾಗುವ ಗ್ರಂಥ, ಪುಸ್ತಕಗಳನ್ನು ನೀಡಿದಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವ ಇನ್ನಷ್ಟು ಹೆಚ್ಚಾಗಬಹುದು ಎಂದರು.
ಜಾತಿ, ಮತ ಭೇದಕ್ಕೆ ಅವಕಾಶ ನೀಡದೆ ಎಲ್ಲರನ್ನೂ ಪ್ರೀತಿ ಗೌರವದೊಂದಿಗೆ ಕಾಣುವ ಸಮಾಜ ಎಂದರೆ ಅದು ಬಂಟ ಸಮಾಜವಾಗಿದ್ದು, ಈ ಪರಂಪರೆಯನ್ನು ಬಿಟ್ಟುಕೊಡದೆ, ಪ್ರತಿಭಾ ಪುರಸ್ಕಾರ ನೀಡುವಾಗ ಕೇವಲ ಪ್ರಥಮ, ದ್ವಿತೀಯ, ತೃತೀಯ ಎನ್ನದೆ ಅತ್ಯಧಿಕ ಅಂಕಗಳನ್ನು ಪಡೆದ ಮಕ್ಕಳನ್ನೆಲ್ಲ ಗೌರವಿಸಿ ಪುರಸ್ಕರಿಸಬೇಕು ಎಂದರು.
ಬಂಟರ ಸಂಘದ ಶೈಕ್ಷಣಿಕ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದವುಗಳಾಗಿದ್ದು, ಈ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಯೋಜನೆ ನಮ್ಮದಾಗಿದೆ. ಈ ಪ್ರಗತಿಪರ ಯೋಜನೆಗಳ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ. ಜೊತೆಗೆ ಮಾತೃಭೂಮಿ ಬ್ಯಾಂಕ್ ಆಗಿ ಪರಿವರ್ತಿಸುವುದಕ್ಕೆ, ಸಂಘದ ಹಾಗೂ ಮಾತೃಭೂಮಿಯ ಸದಸ್ಯತ್ವವನ್ನು ಹೆಚ್ಚಿಸುವುದಕ್ಕೆ ತಮ್ಮೆಲ್ಲರ ಸಹಕಾರ ಇರಲಿ ಎಂದು ಬಂಟರ ಸಂಘದ ಅಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ ತಿಳಿಸಿದರು.
ಬಂಟರ ಸಂಘದ ಪ್ರಗತಿಗೆ ದುಡಿದ ಎಲ್ಲ ಮಾಜಿ ಅಧ್ಯಕ್ಷರುಗಳನ್ನು ಬರಮಾಡಿಕೊಂಡು ಅವರ ಅನುಭವದ ಮಾತುಗಳನ್ನು ಜನಸಾಮಾನ್ಯರಿಗೆ ಕೇಳುವುದಕ್ಕೆ ಅವಕಾಶ ಮಾಡಿಕೊಟ್ಟ ಪ್ರಾದೇಶಿಕ ಸಮಿತಿಗೆ ಕೃತಜ್ಞತೆಗಳನ್ನು ಸಲ್ಲಿಸುವುದರ ಜೊತೆಗೆ ಡಾ| ಬಿ. ಎಂ. ಹೆಗ್ಡೆಯವರಂತಹ ಬುದ್ದಿ ಜೀವಿಗಳ ಅನುಭವದ ಮಾತುಗಳಿಂದ ಇಲ್ಲಿನ ಎಲ್ಲರು ಪ್ರೇರೇಪಿತರಾಗಿದ್ದಾರೆ ಎಂದರು.
ಸಮ್ಮಾನ ಸ್ವೀಕರಿಸಿದ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಮತ್ತು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರು ಮಾತನಾಡುತ್ತಾ ಪ್ರಾದೇಶಿಕ ಸಮಿತಿಗೆ, ಬಂಟರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳಿಗೆ, ಮಾಜಿ ಅಧ್ಯಕ್ಷರುಗಳಿಗೆ ಚಿರಋಣಿಯಾಗಿದ್ದೇವೆ ಎಂದರು.
ಪ್ರಾದೇಶಿಕ ಸಮಿತಿಯ ಸಂಚಾಲಕ ಭಾಸ್ಕರ ಟಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ದಯಾಶಂಕರ ಪಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕುಂಠಿನಿ ಪ್ರಕಾಶ್ ಹೆಗ್ಡೆ ವಾರ್ಷಿಕ ವರದಿ ಮಂಡಿಸಿದರು.
ಕಚೇರಿ ಖರೀದಿಗೆ 10 ಲ. ರೂ. ನೀಡಿದ ಮಹಾದಾನಿಗಳಾದ ಎಕ್ಕಾರು ನಿಡ್ಡೋಡಿಗುತ್ತು ಶಿವಾನಂದ ಶೆಟ್ಟಿ, ವೇದಾವತಿ ಶೆಟ್ಟಿ, ದಯಾಶಂಕರ ಶೆಟ್ಟಿ ದಂಪತಿ ಮತ್ತವರ ಪರಿವಾರದ ಸದಸ್ಯರುಗಳನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ವಿಶೇಷ ಆಮಂತ್ರಿತ ಅತಿಥಿಗಳಾಗಿ ಉಪಸ್ಥಿತರಿದ್ದ ಕಲ್ಯಾಣ್ ಡೊಂಬಿವಲಿ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಕಾರ್ಯಾಧ್ಯಕ್ಷ ಮಲ್ಲೇಶ್ ಶೆಟ್ಟಿಯವರು 1 ಲ. ರೂ. ನಗದು ಹಣ ನೀಡುವುದರ ಜೊತೆಗೆ ಸಂಘದ ಯೋಜನೆಗೆ ಸದಾ ಸಹಕಾರವಿದೆ ಎಂದರು.
ಪ್ರಮೋದಾ ಸುಕುಮಾರ್ ಶೆಟ್ಟಿ, ಸುಮಿತ್ರಾ ರಾಜೇಶ್ ಶೆಟ್ಟಿ, ಸುಪ್ರೀತಾ ಮಹಾಬಲ ಭಂಡಾರಿ ಪ್ರಾರ್ಥನೆಗೈದರು. ಅಶೋಕ್ ಪಕ್ಕಳ ಮತ್ತು ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ವಿಶೇಷ ಆಮಂತ್ರಿತರುಗಳಾಗಿ ಭಿವಂಡಿ ಮಹಾನಗರಪಾಲಿಕೆಯ ನಗರಸೇವಕರುಗಳಾದ ಸಂತೋಷ್ ಎಂ. ಶೆಟ್ಟಿ ಮತ್ತು ಶಶಿಲತಾ ಎಸ್. ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಕೋಶಾಧಿಕಾರಿ ಸಿಎ ಸತೀಶ್ ಶೆಟ್ಟಿ, ಪ್ರಾದೇಶಿಕ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರುಗಳಾದ ವಾಸು ಕೆ. ಶೆಟ್ಟಿ, ರಮೇಶ್ ಡಿ. ಶೆಟ್ಟಿ, ಪ್ರಕಾಶ್ ಆರ್. ಶೆಟ್ಟಿ, ಸುರೇಂದ್ರ ಪಿ. ರೈ, ದಿವಾಕರ ಬಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ, ಕೋಶಾಧಿಕಾರಿ ಜಯ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಆನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಉದಯ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲೋಚನಾ ಜಗದೀಶ್ ಶೆಟ್ಟಿ, ಸಂಘಟಕರುಗಳಾದ ರಾಮಕೃಷ್ಣ ಎನ್. ಶೆಟ್ಟಿ, ಸುಭೋದ್ ಡಿ. ಭಂಡಾರಿ, ದಯಾನಂದ ವಿ. ಶೆಟ್ಟಿ, ಪ್ರಶಾಂತ್ ಜಿ. ಶೆಟ್ಟಿ, ಭಗವಾನ್ ಎಂ. ಆಳ್ವ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶ್ರಿಕಾಂತ್ ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಣೆಯನ್ನು ರೂಪಾ ದಯಾಶಂಕರ್ ಶೆಟ್ಟಿ ಮತ್ತು ರೂಪಾ ಯೊಗೇಶ್ ಶೆಟ್ಟಿ ನಿರ್ವಹಿಸಿದರು. ಮನೋರಂಜನೆ ಅಂಗವಾಗಿ ಯುವ ವಿಭಾಗದ ಸದಸ್ಯರು ಮತ್ತು ಮಹಿಳಾ ವಿಭಾಗದ ಸದಸ್ಯೆಯರಿಂದ ಪಿರ ಮುಕುಡುª ತೂನಗ ತುಳು ನಾಟಕ, ಸದಸ್ಯರಿಂದ ಕಂಗಿಲು ನೃತ್ಯ ಮತ್ತು ಸದಸ್ಯರು ಹಾಗೂ ಅವರ ಮಕ್ಕಳಿಂದ ವಿವಿಧ ನೃತ್ಯವಿನೋದಾವಳಿಗಳು ನಡೆದವು. ಕೊನೆಯಲ್ಲಿ ಭೋಜನಾ ವ್ಯವಸ್ಥೆಯಿತ್ತು.
ಈ ವಲಯದ ಎಲ್ಲ ಬಂಟ ಬಾಂಧವರು ಬಂಟರ ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸುವ ಉತ್ಸಾಹ ಇಟ್ಟುಕೊಳ್ಳುವುದರೊಂದಿಗೆ, ನಮ್ಮ-ನಿಮ್ಮ ಸಂಪರ್ಕದ ಕೊಂಡಿ ಖಾಯಂ ಆಗಿ ಉಳಿಯುವಂತೆ ನಾವು ನೋಡಿಕೊಳ್ಳಬೇಕು- ಗೌರವ ಅತಿಥಿ ಎಂ. ಡಿ. ಶೆಟ್ಟಿ ( ಮಾಜಿ ಅಧ್ಯಕ್ಷ, ಬಂಟರ ಸಂಘ)
ಈ ಹಳ್ಳಿನಾಡಿನಲ್ಲಿರುವ ಈ ಸಮಿತಿ ತನ್ನ 3 ನೇ ವರ್ಷದಲ್ಲೆ ಸ್ವಂತ ಕಚೇರಿ ಖರೀದಿಸುವ ಯೋಜನೆಗೆ ಮುಂದಾಗಿರುವುದು ಅಭಿನಂದನೀಯ ಮಾತ್ರವಲ್ಲ ಇದು ದೊಡ್ಡ ಸಾಧನೆ - ಇನ್ನೋರ್ವ ಗೌರವ ಅತಿಥಿ ಅಡ್ವೊಕೇಟ್ ಆರ್. ಸಿ. ಶೆಟ್ಟಿ
8 ದಶಕಗಳ ಇತಿಹಾಸವಿರುವ ನಮ್ಮ ಸಂಘ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಈ ಸೌಕರ್ಯಗಳ ಸದುಪಯೋಗವನ್ನು ನಮ್ಮ ಬಾಂಧವರೆಲ್ಲ ಪಡೆಯಬೇಕು - ಮತ್ತೋರ್ವ ಗೌರವ ಅತಿಥಿ ಬೊಲ್ಯಗುತ್ತು ವಿವೇಕ್ ಶೆಟ್ಟಿ(ಮಾಜಿ ಅಧ್ಯಕ್ಷ)
ಸಂಘದ ಬೆಳವಣಿಗೆಗೆ ಮಾತ್ರವಲ್ಲ ಸಮಾಜದ ನಡುವಿನ ಏರು-ಪೇರು, ಶ್ರಿಮಂತರು-ಬಡವರು ಎಂಬ ವ್ಯತ್ಯಾಸದ ಅಂತರ ಈ ಪ್ರಾದೇಶಿಕ ಸಮಿತಿಗಳ ಸ್ಥಾಪನೆಯಿಂದಾಗಿ ಬಹಳಷ್ಟು ಕಡಿಮೆಯಾಗಿದೆ. ಬಹಳಷ್ಟು ಮಂದಿಗೆ ಸಾಮಾಜಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸುವುದಕ್ಕೆ ಅವಕಾಶ ಸಿಕ್ಕಿದೆ - ಗೌರವ ಅತಿಥಿ ಐಕಳ ಹರೀಶ್ ಶೆಟ್ಟಿ( ಉಪಾಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟ)