ಪಟ್ನಾ: ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸೋಮವಾರ ದೇಶಾದ್ಯಂತ 'ಸೂರ್ಯ ನಮಸ್ಕಾರ' ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಸುಮಾರು 2 ಕೋಟಿ ಶಾಲಾ ಮಕ್ಕಳು ಸೂರ್ಯ ನಮಸ್ಕಾರ ಮಾಡಿದರು.ಶಾಲಾ ಶಿಕ್ಷಣ ಇಲಾಖೆ ಮತ್ತು ಸರಕಾರೇತರ ಸಂಘಟನೆಗಳು ಹಲವು ರಾಜ್ಯಗಳಲ್ಲಿ ಈ ಕಾರ್ಯಕ್ರಮವನ್ನು ಭರ್ಜರಿ ಯಶಸ್ವಿಗೊಳಿಸಲು ವಿಸ್ತೃತ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದವು.ಸೂರ್ಯ ನಮಸ್ಕಾರ ಮಾಡುವುದು ಶಾಲೆಗಳಲ್ಲಿ ಕಡ್ಡಾಯವೆಂಬ ವಿಷಯದಲ್ಲಿ ಬಿಹಾರದಲ್ಲಿ ವಿವಾದವೇರ್ಪಟ್ಟಿತ್ತು. ಈ ವಿಷಯದಲ್ಲಿ ನೀಡಿದ ನೋಟಿಸ್‌ನಲ್ಲಿ ಬದಲಾವಣೆ ಮಾಡಬೇಕು ಮತ್ತು ಸೂರ್ಯ ನಮಸ್ಕಾರ ಮಾಡುವುದನ್ನು ಐಚ್ಛಿಕವನ್ನಾಗಿ ಮಾಡಬೇಕು. ಇದರಿಂದ ಅಲ್ಪಸಂಖ್ಯಾಕ ವರ್ಗಕ್ಕೆ ಸೇರಿದ ಮಕ್ಕಳು ಕಾರ್ಯಕ್ರಮದಿಂದ ದೂರವುಳಿಯಲು ಸಾಧ್ಯವಾಗುತ್ತದೆ ಎಂದು ಪ್ರಮುಖ ಮುಸ್ಲಿಂ ಗುಂಪುಗಳು ನಿತೀಶ್ ಕುಮಾರ್ ಸರಕಾರಕ್ಕೆ ಮನವಿ ಮಾಡಿದ್ದವು.ಬಳಿಕ ಬೇಡಿಕೆಗೆ ಸಮ್ಮತಿಸಿದ ಸರಕಾರ, ಸುತ್ತೋಲೆಯಲ್ಲಿ ಬದಲಾವಣೆ ಮಾಡಿತು.ಜ. 12ರಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದ ಸೂರ್ಯ ನಮಸ್ಕಾರದಲ್ಲಿ ಸುಮಾರು 50 ಲಕ್ಷ ವಿದ್ಯಾರ್ಥಿಗಳು, ವಿಪಕ್ಷ ಪ್ರತಿಭಟನೆಯನ್ನು ಮತ್ತು ಮುಸ್ಲಿಂ ಧರ್ಮಗುರುಗಳ ಫತ್ವಾವನ್ನು ನಿರ್ಲಕ್ಷಿಸಿ, ಪಾಲ್ಗೊಂಡಿದ್ದರು. ಸೂರ್ಯ ನಮಸ್ಕಾರದಂಥ ಯೋಗಾಸನದಲ್ಲಿ ಯಾವುದೇ ತಪ್ಪು ಇಲ್ಲ. ಇದನ್ನು ಧರ್ಮದೊಂದಿಗೆ ಸಮೀಕರಿಸಬಾರದೆಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದರು.