Udayavani | Feb 18, 2013
ಬೆಳ್ತಂಗಡಿ: ಹೃದಯ ಪರಿವರ್ತನೆ ಮಾಡುವ, ಸಂವೇದನಾಶೀಲ ಭಾಷೆ ತುಳು. ಜಗತ್ತಿನ ಅತ್ಯಂತ ಉತ್ಕೃಷ್ಟ ಸಂಸ್ಕೃತಿ ತುಳು ಸಂಸ್ಕೃತಿ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ನುಡಿದರು.
ಅವರು ಸೋಮವಾರ ಇಲ್ಲಿನ ಮಾರಿಗುಡಿ ಮೈದಾನದಲ್ಲಿ ಬೆಳ್ತಂಗಡಿ ತಾಲೂಕು ತುಳುವರ ಕೂಡುಕಟ್ಟು ವತಿಯಿಂದ ನಡೆದ ಬೆಳ್ತಂಗಡಿ ತಾಲೂಕು ತುಳುವರ ಹಬ್ಬ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಅನ್ಯಭಾಷೆಗಿಂತ ಶುದ್ಧತುಳು ಕಲಿಸಿ. ಸ್ತ್ರೀಯ ಮಾನ ಉಳಿಸಿ. ಹೆಣ್ಣಿನ ಕಣ್ಣೀರು ಭೂಮಿಗೆ ಬೀಳಬಾರದು. ಸಂಜೆ, ರಾತ್ರಿಯ ವೇಳೆ ಬೆಳ್ತಂಗಡಿಯಲ್ಲಿ ನಡೆದು ಹೋಗುವುದೇ ಅಪಾಯ ಎಂಬ ಭೀತಿ ಹೆಣ್ಣುಮಕ್ಕಳ ಪಾಲಿಗೆ ಉಂಟಾಗಿದೆ. ಸೌಜನ್ಯಾ ನಮ್ಮ ಮನೆ ಹೆಣ್ಣು ಮಗಳೆಂದು ಭಾವಿಸಿ ಆಕೆಯ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಈ ಪರ್ಬದಲ್ಲಿ ಮೊದಲ ನಿರ್ಣಯವಾಗಿ ಅಂಗೀಕರಿಸಬೇಕು ಎಂದರು.
ಮಾನ್ಯತೆ ಖಚಿತ
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಈ ಬಾರಿ ಸೇರ್ಪಡೆಯಾಗಲಿದೆ. ಫೆ. 24ರಂದು ಈ ಕುರಿತು ದಿಲ್ಲಿಯಲ್ಲಿ ಸಭೆ ಆಯೋಜಿಸಲಾಗಿದ್ದು ರಾಜ್ಯದ ಎಲ್ಲ ಸಂಸದರೂ ಬೆಂಬಲ ನೀಡಿದ್ದಾರೆ ಎಂದರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಧರ್ಮಗುರು ಫಾ| ಜೇಮ್ಸ್ ಡಿ'ಸೋಜಾ ಭಾಷೆ ಹೃದಯದಲ್ಲಿ ಅಂತರ್ಗತವಾಗಿರಬೇಕು. ಹುಟ್ಟಿದ ನಾಡು, ಭಾಷೆ, ಊರು, ಜನರನ್ನು ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರ ಅವರು, ತುಳು ಸಂಸ್ಕೃತಿ ನಶಿಸಲು ಬಿಡದೇ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮೆರವಣಿಗೆ ಉದ್ಘಾಟಿಸಿದರು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಕೇಶವ ಎಂ., ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್ ಡಾ| ಬಿ. ದೇವದಾಸ ಪೈ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಜಿ.ಪಂ. ಸದಸ್ಯೆ ಸಿ.ಕೆ. ಚಂದ್ರಕಲಾ, ತಾ.ಪಂ. ಸದಸ್ಯ ಜಯಂತ್ ಕೋಟ್ಯಾನ್, ಸಮಿತಿಯ ಪ್ರಧಾನ ಸಂಚಾಲಕರಾದ ಕೆ. ಸುಂದರ ಸಾಲಿಯಾನ್, ದೇವಿಪ್ರಸಾದ್, ಶೀÅಧರ ಜಿ. ಭಿಡೆ, ಎಲ್. ಚಂದು, ಕೆ. ಸೋಮ, ಚಂದಪ್ಪ ಗೌಡ ಪಾಂಗಾಳ, ಜಯಪ್ರಕಾಶ್ ಭಟ್ ಸಿ.ಎಚ್., ಚಂದ್ರಕಾಂತ ಎನ್., ವಿಶೇಷ ಆಹ್ವಾನಿತರಾದ ಕುದಾRಡಿ ವಿಶ್ವನಾಥ ರೈ, ಅನಂತ್ರಾಮ ಬಂಗಾಡಿ, ಮುಗುಳಿ ನಾರಾಯಣ ಭಟ್ ಉಪಸ್ಥಿತರಿದ್ದರು.
ಪ್ರಧಾನ ಸಂಚಾಲಕ ಕೆ. ಸೋಮನಾಥ ನಾಯಕ್ ಸ್ವಾಗತಿಸಿ, ವಿದ್ಯಾ ನಾಯಕ್ ನಿರ್ವಹಿಸಿದರು. ಆತ್ರಾಡಿ ಅಮೃತಾ ಶೆಟ್ಟಿ ಪ್ರಸ್ತಾವನೆಗೈದರು. ಕೆ. ರಮಾನಂದ ಸಾಲಿಯಾನ್ ನಿರ್ಣಯ ಮಂಡಿಸಿದರು.