ಬೆಳ್ತಂಗಡಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ ಎಂದು ಯುನೈಟೆೆಡ್ ಕಿಂಗ್‌ಡಂನ ಮ್ಯಾಂಚಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ| ಅರವಿಂದ್ ಹೇಳಿದರು.ಅವರು ಸೋಮವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದಲ್ಲಿ ಆಯುಷ್ ವೈದ್ಯರಿಗೆ ಅಯೋಜಿಸಿರುವ 6 ದಿನಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು.ಅಲೋಪತಿ ಚಿಕಿತ್ಸೆಯನ್ನು ಮೂಲಮಂತ್ರವಾಗಿ ನಂಬಿರುವ ಆಂಗ್ಲರು ಇತ್ತೀಚಿನ ದಿನಗಳಲ್ಲಿ ಮನೋದೈಹಿಕ ಚಿಕಿತ್ಸೆಯಾದ ಯೋಗ ಚಿಕಿತ್ಸೆಯನ್ನು ಆಯ್ದ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದರಿಂದ ಈ ವೈದ್ಯ ಪದ್ಧತಿಗೆ ಉತ್ತಮ ಭವಿಷ್ಯವಿರುವುದು ದೃಢಪಟ್ಟಿದೆ ಎಂದರು.ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಣಾಧಿಕಾರಿ ಪಿ. ಜೀವಂಧರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯದ 30 ಜಿಲ್ಲೆಗಳಿಂದ ಜಿಲ್ಲಾ ಯೋಗ ಸಂಯೋಜಕರು ಭಾಗವಹಿಸಿದ್ದರು.ಪ್ರಶಿಕ್ಷಣ ಶಿಬಿರದ ಮಹತ್ವ ಹಾಗೂ ಶಾಲಾ ಮಕ್ಕಳಲ್ಲಿ ಯೋಗ ಶಿಕ್ಷಣದ ಪ್ರಾಮುಖ್ಯತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ| ಪ್ರಶಾಂತ್ ಶೆಟ್ಟಿ ಶಿಬಿರಾರ್ಥಿಗಳಿಗೆ ತಿಳಿಸಿದರು.ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಯೋಗ ವಿಭಾಗದ ಮುಖ್ಯಸ್ಥ ಡಾ| ಶಿವಪ್ರಸಾದ್ ವಂದಿಸಿದರು. ಡಾ| ಪುನೀತ್ ಕಾರ್ಯಕ್ರಮ ನಿರ್ವಹಿಸಿದರು.