ಹೊಸದಿಲ್ಲಿ : ಮಹಿಳೆಯರ ಮೇಲಣ ದೌರ್ಜನ್ಯಗಳು ಹೆಚ್ಚುತ್ತಿರುವುದು 'ನಾಚಿಕೆಗೇಡು' ಎಂದಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಈ ಸಂಬಂಧ ಕಾನೂನಿಗೆ ಮಾಡಿರುವ ತಿದ್ದುಪಡಿಗಳನ್ನು ಸಂಸತ್ತು ತ್ವರಿತವಾಗಿ ಅಂಗೀಕರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಾವೆಷ್ಟೇ ಸಾಧನೆ ಮಾಡಿದ್ದರೂ ಮಹಿಳೆಯರ ಮೇಲಣ ದೌರ್ಜನ್ಯಗಳು ಮತ್ತು ಲೈಂಗಿಕ ಆಕ್ರಮಣಗಳು ಹೆಚ್ಚುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಮಾಜ ಸೇವಕಿ ಇಳಾ ಭಟ್ ಅವರಿಗೆ ಇಂದಿರಾ ಗಾಂಧಿ ಪ್ರಶಸ್ತಿ ಪ್ರದಾನಿಸಿದ ಬಳಿಕ ಮನಮೋಹನ್ ಸಿಂಗ್ ಹೇಳಿದರು.ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಸರಕಾರ ಶಾಸಕಾಂಗ, ಸಾಂಸ್ಥಿಕ ಮತ್ತು ವೈಧಾನಿಕ ಸುಧಾರಣೆಗಳನ್ನು ಕೈಗೊಂಡಿದೆ. ನ್ಯಾ| ಜೆ.ಎಸ್. ವರ್ಮ ಆಯೋಗದ ವರದಿಯನ್ನು ಆಧರಿಸಿ ಈಗಾಗಲೇ ಅಧ್ಯಾದೇಶವೊಂದನ್ನು ಹೊರಡಿಸಿರುವುದಲ್ಲದೆ ಲೈಂಗಿಕ ಆಕ್ರಮಣಗಳಿಂದ ಮಹಿಳೆಯರನ್ನು ಪಾರು ಮಾಡುವುದಕ್ಕೋಸ್ಕರ ಕಾನೂನುಗಳನ್ನು ಬಲಗೊಳಿಸಲು ಕಾಯಿದೆಗೆ ತಿದ್ದುಪಡಿ ಮಾಡಿಕೊಳ್ಳಲಾಗಿದೆ ಎಂದರು.ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ಸಮಗ್ರ ಮಸೂದೆಯನ್ನು ಸಂಸತ್ತು ತ್ವರಿತವಾಗಿ ಮಂಜೂರು ಮಾಡಿಕೊಳ್ಳಲಿದೆ ಎನ್ನುವ ವಿಶ್ವಾಸ ನಮ್ಮದು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳವನ್ನು ತಡೆಯುವ, ನಿಷೇಧಿಸುವ ಮತ್ತು ಅಹವಾಲು ಆಲಿಸುವ ಮಸೂದೆ ಲೋಕಸಭೆಯಲ್ಲಿ ಈಗಾಗಲೇ ಮಂಜೂರಾಗಿದ್ದು, ರಾಜ್ಯಸಭೆಯ ಅಂಗೀಕಾರದ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು.ಮಹಿಳೆಯರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸುರಕ್ಷಿತ ವಾತಾವರಣವೊಂದನ್ನು ಸೃಷ್ಟಿಸುವುದು ನಮ್ಮ ಗುರಿ. ಸಂಸ್ಥಾಪನೆಗಳನ್ನು ಬಲಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸರಕಾರ ಪ್ರಯತ್ನಿಸಿದೆ. ಮಹಿಳೆಯರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಸಮಾನ ಅವಕಾಶಗಳನ್ನು ಒದಗಿಸುವುದರ ಜತೆಗೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಅವರ ಒಳಗೊಳ್ಳುವಿಕೆ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಮಹಿಳೆಯರ ಬದುಕು ಹಸನುಗೊಳಿಸಲು ಇಳಾ ಭಟ್ ಮಾಡಿರುವ ಪ್ರಯತ್ನಗಳನ್ನು ಹೊಗಳಿದ ಪ್ರಧಾನಿ ಸ್ವಸಹಾಯ ಮಹಿಳಾ ಒಕ್ಕೂಟಗಳ ಕಾರ್ಯವೈಖರಿಯಿಂದ ಸರಕಾರ ಕಲಿಯುವುದು ಬಹಳಷ್ಟಿದೆ ಎಂದರು.ಮಹಿಳೆಯರ ಆರ್ಥಿಕ ಸಶಕ್ತೀಕರಣ, ಸಾಕಷ್ಟು ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳ ನಿರ್ಮಾಣ ಮತ್ತು ಆಳ್ವಿಕೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವಂತಹ ಕ್ರಮಗಳ ಮೂಲಕ ಲಿಂಗತಾರತಮ್ಯವನ್ನು ನಿವಾರಿಸಬಹುದು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದರು.