ಮುಂಬಯಿ: ಮುಂಬಯಿ-ಬೆಂಗಳೂರು ನಡುವಿನ 1,000 ಕಿ.ಮೀ. ಉದ್ದದ ಕಾರಿಡಾರ್ ಸಹಿತ ಭಾರತದ ಹೊಸ ನಗರ ಮತ್ತು ಜಿಲ್ಲೆಗಳ ಅಭಿವೃದ್ಧಿಗೆ ತನ್ನ ರಾಷ್ಟ್ರದ ಕಂಪೆನಿಗಳು ನೆರವು ಒದಗಿಸಬೇಕು ಎಂದು ತಾನು ಬಯಸಿರುವುದಾಗಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮ್ರಾನ್ ಇಂಗಿತ ವ್ಯಕ್ತಪಡಿಸಿದ್ದಾರೆ.ತಂತ್ರಜ್ಞಾನದ ಕೇಂದ್ರತಾಣ ಬೆಂಗಳೂರು ಮತ್ತು ಭಾರತದ ವಾಣಿಜ್ಯ ರಾಜಧಾನಿ ಮುಂಬಯಿ ಜತೆ ಸಂಪರ್ಕ ಕಲ್ಪಿಸಲು ಒಂಬತ್ತು ಜಿಲ್ಲೆಗಳ ಅಭಿವೃದ್ಧಿಗೆ ಬ್ರಿಟಿಷ್ ಸರ್ಕಾರ ಮತ್ತು ಬ್ರಿಟಿಷ್ ಕಂಪೆನಿಗಳು ಭಾರತದ ಜತೆ ಸಹಭಾಗಿಯಾಗಬೇಕು ಎಂಬುದು ತನ್ನ ಇಂಗಿತವಾಗಿದೆ. 1000 ಕಿ.ಮೀ.ಉದ್ದದ ಮುಂಬಯಿ-ಬೆಂಗಳೂರು ಕಾರಿಡಾರ್ ಯೋಜನೆ ಜನರ ಜೀವನ ಮಟ್ಟ ಸುಧಾರಿಸಲಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಬ್ರಿಟಿಷ್ ಉದ್ಯಮವನ್ನು ಪ್ರಧಾನ ಸ್ಥಾನಕ್ಕೊಯ್ಯಲಿದೆ ಎಂದು ಅಭಿಪ್ರಾಯಪಟ್ಟರು.ಮುಂಬಯಿ-ಬೆಂಗಳೂರು ಕಾರಿಡಾರ್ ಯೋಜನೆಗಾಗಿ ಉಭಯ ರಾಷ್ಟ್ರಗಳ ವಾಣಿಜ್ಯ ಪ್ರತಿನಿಧಿಗಳೊಂದಿಗೆ ಬ್ರಿಟಿಷ್ ಮತ್ತು ಭಾರತದ ಅಧಿಕಾರಿಗಳು ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಯೋಜನೆಯ ಗಾತ್ರ ಮತ್ತು ಸಾಮರ್ಥ್ಯದ ಪ್ರಾಥಮಿಕ ವಿಶ್ಲೇಷಣಾ ವರದಿ ಸಲ್ಲಿಸಿದ್ದಾರೆ. ಯೋಜನೆಯ ಧಾರಣಾ ಸಾಮರ್ಥ್ಯದ ಅಧ್ಯಯನಕ್ಕಾಗಿ ಬ್ರಿಟಿಷ್ ಸರಕಾರ ಸಹ-ನಿಧಿ ಒದಗಿಸಲಿದೆ. 2030ರೊಳಗೆ ಈ ಯೋಜನೆ ಅರ್ಥ ಮಿಲಿಯನ್ ಉದ್ಯೋಗಾವಕಾಶ ಸೃಷ್ಟಿಸಲಿದೆ. ಎರಡು ಮಿಲಿಯನ್ ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಹೇಳಿದರು.