Udayavani | Feb 18, 2013
ಆಲಮಟ್ಟಿ: ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದಲ್ಲಿ ದಿನೇ ದಿನೇ ನೀರು ಇಳಿಮುಖವಾಗಿ ಜಲಾಶಯದ ಗೇಟುಗಳ ಅಡಿಪಾಯ ಕಾಣುತ್ತಿರುವುದರಿಂದ ಕೃಷ್ಣೆಯ ತಟದಲ್ಲಿರುವ ರೈತರು ಆತಂಕಕ್ಕೀಡಾಗಿದ್ದಾರೆ.
ಗರಿಷ್ಠ 519.6 ಮೀ. ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದಲ್ಲಿ ಸೋಮವಾರ 508.770 ಮೀ. ನೀರು ಸಂಗ್ರಹವಿದ್ದು, ಹೊರಹರಿವು 421 ಕ್ಯುಸೆಕ್ ನೀರು ಕಾಲುವೆಗಳ ಮುಖಾಂತರ ರೈತರ ಜಮೀನುಗಳಿಗೆ ನೀರುಣಿಸಲಾಗುತ್ತಿದೆ. ಕಳೆದ ವರ್ಷ ಫೆ. 18ರಂದು 510.6 ಮೀ. ನೀರು ಸಂಗ್ರಹವಿದ್ದಾಗಲೂ ಕೂಡ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ತೀವ್ರ ತೊಂದರೆಯುಂಟಾಗಿತ್ತು.
ದೇಶದ ಬೃಹತ್ ನೀರಾವರಿ ಯೋಜನೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ನೀರನ್ನು ಅವಲಂಬಿಸಿ ಕೃಷ್ಣೆಯ ತಟದಲ್ಲಿರುವ ರೈತರು ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ಮುಂಗಾರು ಮಳೆಯಾಗದಿರುವುದರಿಂದ ರೈತರು ಬರಗಾಲಕ್ಕೆ ತುತ್ತಾಗಿ ಹಿಂಗಾರು ಮಳೆಯನ್ನು ನಂಬಿ ಮತ್ತೆ ಬಿತ್ತನೆ ಮಾಡಿದರೂ ಕೂಡ ಸಮರ್ಪಕ ಮಳೆಯಾಗದಿರುವುದರಿಂದ ಮತ್ತೆ ಬರಗಾಲದ ಭೀತಿಯಲ್ಲಿರುವಾಗ ಕೃಷ್ಣೆಯ ಉಗಮ ಸ್ಥಾನ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದ್ದರಿಂದ ರೈತರು ಹಿಂಗಾರಿ ಬೆಳೆ ಕಾಲುವೆ ನೀರನ್ನು ನಂಬಿ ಬಿತ್ತನೆ ಮಾಡಿರುವುದಲ್ಲದೇ ಬೆಳೆ ಕೂಡ ಉತ್ತಮವಾಗಿ ಬೆಳೆಯುತ್ತಿದೆ. ಇದೀಗ ಕಾಲುವೆಯ ನೀರನ್ನು ಸ್ಥಗಿತಗೊಳಿಸಿದರೆ ರೈತರು ಬೆಳೆದ ಶೇಂಗಾ, ಮೆಕ್ಕೆ ಜೋಳ, ಉಳ್ಳಾಗಡ್ಡಿ, ಸೂರ್ಯಕಾಂತಿ, ಕಡಲೆ ಹೀಗೆ ಹಲವಾರು ಬೆಳೆಗಳು ಒಣಗಿಹೋಗುತ್ತವೆ.
ಅಖಂಡ ವಿಜಾಪುರ ಜಿಲ್ಲೆಯಲ್ಲಿ ಪಂಚ ನದಿಗಳು ಹರಿದರೂ ಭೀಕರ ಬರಗಾಲಕ್ಕೆ ತುತ್ತಾಗುತ್ತಾ ಬಂದಿರುವ ಜಿಲ್ಲೆಯು ಆಡಳಿತಾತ್ಮಕವಾಗಿ ಎರಡು ಜಿಲ್ಲೆಗಳಾದರೂ ಬರಗಾಲಕ್ಕೆ ತುತ್ತಾಗುವುದು ತಪ್ಪಿಲ್ಲ. ಅವಳಿ ಜಿಲ್ಲೆಗಳಾದ ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಮಧ್ಯ ಭಾಗದಲ್ಲಿ ನಿರ್ಮಾಣಗೊಂಡಿರುವ ಆಲಮಟ್ಟಿ ಶಾಸ್ತ್ರಿ ಸಾಗರ ಜಲಾಶಯದಲ್ಲಿ ಪ್ರತಿ ಬಾರಿಯೂ ಬೇಸಿಗೆ ಆರಂಭವಾಗುವುದಕ್ಕೂ ಮುಂಚೆ ಖಾಲಿಯಾಗುತ್ತಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತದೆ.
2011-12ನೇ ಸಾಲಿನ ಫೆ. 18ರಂದು ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದಲ್ಲಿ 510.6 ಮೀ. ನೀರಿನ ಸಂಗ್ರಹವಿದ್ದರೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು. ಅಲ್ಲದೇ ರಾಜ್ಯ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ ಕೋಟ್ಯಂತರ ರೂ. ನೀಡಿ ನೀರು ಖರೀದಿಸಿದರೂ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯ ತಲುಪದಿರುವುದು ಇನ್ನೂ ಜನರ ನೆನಪಿನಿಂದ ಮಾಸಿಲ್ಲ. ಹೀಗಿರುವಾಗ ಸೋಮವಾರ ಫೆ.18ರಂದು 508.770 ಮೀ. ಜಲಾಶಯದಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ಅನಿವಾರ್ಯವಾಗಿ ಫೆಬ್ರುವರಿ ಕೊನೆ ವಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸುವುದು ಸ್ಥಗಿತಗೊಳಿಸಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳಿಂದ ತಿಳಿದುಬಂದಿದೆ.
ಸೋಮವಾರ ಜಲಾಶಯದಲ್ಲಿ 508.770 ಮೀ. ಅಂದರೆ 24.405 ಟಿಎಮ್‌ಸಿ ಅಡಿ ನೀರು ಸಂಗ್ರಹವಿರುವುದರಿಂದ ಇದರಲ್ಲಿ ಜಲಚರಗಳಿಗಾಗಿ 17.500 ಟಿಎಮ್‌ಸಿ ಅಡಿಯಷ್ಟು ನೀರನ್ನು ಬಳಸುವಂತಿಲ್ಲ. ಉಳಿದ 6.785 ಟಿಎಮ್‌ಸಿ ನೀರನ್ನು ಮಾತ್ರ ಕುಡಿಯಲು ಹಾಗೂ ಇನ್ನಿತರಕ್ಕಾಗಿ ಬಳಸಬಹುದಾಗಿದೆ ಫೆ. 19ಹಾಗೂ 20ರ ವರೆಗೆ 6.785 ಟಿಎಮ್‌ಸಿಯಲ್ಲಿ 0.2 ಟಿಎಮ್‌ಸಿ. ಕಾಲುವೆ ನೀರು ಹರಿಸಲಾಗುತ್ತದೆ. ಉಳಿದ 6.585 ಟಿಎಮ್‌ಸಿ ನೀರಿನಲ್ಲಿ 0.37ವರೆಗೆ ಬೇಸಿಗೆಯಲ್ಲಿ ಆವಿಯಾಗುತ್ತದೆ. 6.215 ಟಿಎಮ್‌ಸಿ ನೀರು ಜಲಾಶಯದಲ್ಲಿ ಸಂಗ್ರಹವಿರುತ್ತದೆ. ಆದರೆ ಮಳೆಗಾಲ ಪ್ರಾರಂಭವಾಗುವುದು ಜೂನ್ ತಿಂಗಳಲ್ಲಾದರೂ ಜುಲೈ-ಅಗಷ್ಟ ತಿಂಗಳಲ್ಲಿ ಈ ಭಾಗದಲ್ಲಿ ಮಳೆಸುರಿಯುತ್ತದೆ. ಇನ್ನೂ ಮೂರ್ನಾಲ್ಕು ತಿಂಗಳುಗಳವರೆಗೆ ಕುಡಿಯುವ ನೀರು ಜಲಾಶಯದಲ್ಲಿ ಸಂಗ್ರಹಿಸಲಾಗಿರುವ 6.215 ಟಿಎಮ್‌ಸಿ ಅಡಿ ನೀರು ಸಾಲುವುದಿಲ್ಲವೆಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯ ವ್ಯಾಪ್ತಿಯ ಹಿರಿಯ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದು ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ ನೀರು ಹರಿಯಬಿಡದಿದ್ದರೆ ಈಗ ಸಂಗ್ರಹವಿರುವ ನೀರಿನಲ್ಲಿ ವಿಜಾಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಮಳೆಗಾಲದ ಪ್ರಾರಂಭದವರೆಗೆ ಬಳಸಬಹುದಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ವಾಸ್ತವವಾಗಿ 508.770ಮೀ ನೀರು ಸಂಗ್ರಹವಿದೆ ಎಂದು ಹೇಳುತ್ತಿದ್ದರೂ 3ಮೀ.ಹೂಳು ತುಂಬಿಕೊಂಡಿದೆ ಎಂದು ನಾಗರಿಕರು ದೂರುತ್ತಾರೆ. ಕಳೆದ ವರ್ಷಕ್ಕಿಂತಲೂ ಜಲಾಶಯದಲ್ಲಿ ನೀರು ಎನ್ನಲಾಗಿದೆ ಆದ್ದರಿಂದ ಅಧಿಕಾರಿಗಳು ವಿವಿಧ ಖಾಸಗಿ ಕಾರ್ಖಾನೆಗಳಿಗೆ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರು ಬಿಡಬಾರದೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತರ ಸಿ. ಅನಂತರಾಮು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಫೆ. 20ರಂದು ಎಲ್ಲ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಈಗ ಸಂಗ್ರಹವಿರುವ ನೀರಿನಲ್ಲಿ ಜೂನ್ ಕೊನೆಯ ವಾರದವರೆಗೆ ಕುಡಿಯಲು ಬಳಸಬಹುದಾಗಿದೆ. ಅಲ್ಲಿಯವರೆಗೆ ಕುಡಿಯುವ ನೀರಿಗೆ ತೊಂದರೆ ಏನಿಲ್ಲವೆಂದು ತಿಳಿಸಿದರು.
ಕೃಷ್ಣಾ ಕಾಡಾ ಅಧ್ಯಕ್ಷ ಬಸವರಾಜ ಕುಂಬಾರ ಅವರನ್ನು ದೂರವಾಣಿಯಲ್ಲಿ ಪತ್ರಿಕೆ ಮಾತನಾಡಿಸಿದಾಗ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ನೀರಾವರಿ ಸಚಿವರು ಬೆಂಗಳೂರಿನಲ್ಲಿ ಮಾತುಕತೆ ನಡೆಸುತ್ತಿದ್ದು, ಫಲಪ್ರದವಾದರೆ ಕುಡಿಯುವ ನೀರು ಮತ್ತು ಕೃಷಿಗೆ ಬಳಸಬಹುದಾಗಿದೆ ಆದರೆ ಕಳೆದ ವರ್ಷಕ್ಕಿಂತಲೂ ಈ ಸಲ ನೀರು ಜಲಾಶಯದಲ್ಲಿ ನೀರು ಅತೀ ಕಡಿಮೆಯಿರುವುದರಿಂದ ಕೃಷಿಗೆ ಅಥವಾ ಕುಡಿಯುವ ನೀರು ಎರಡರಲ್ಲಿ ಒಂದಕ್ಕೆ ಬಳಸಬಹುದಾಗಿದೆ. ಆದ್ದರಿಂದ ಕಾಗವಾಡ, ಉಗಾರ, ಜಮಖಂಡಿ, ತೇರದಾಳ ಸೇರಿದಂತೆ ಕೃಷ್ಣಾ ನದಿ ದಡದಲ್ಲಿರುವ ಎಲ್ಲ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೃಷ್ಣಾ ನೀರನ್ನು ನಂಬಿದ್ದಾರೆ. ಆದ್ದರಿಂದ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳು ಸೇರಿ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ರೈತ ಮುಖಂಡ ಹಾಗೂ ಕೃಷ್ಣಾತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ ಸಂಚಾಲಕ ಜಿ.ಸಿ ಮುತ್ತಲದಿನ್ನಿ ಅವರನ್ನು ಮಾತನಾಡಿಸಿದಾಗ ಈಗ ಇರುವ ನೀರು ಜನ-ಜಾನುವಾರುಗಳಿಗೆ ಬೇಸಿಗೆಯಲ್ಲಿ ಸಾಲುವುದಿಲ್ಲ . ಆದ್ದರಿಂದ ಸರ್ಕಾರ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ ನೀರು ಪಡೆದು ರಾಜ್ಯದ ಜನತೆಯ ಹಿತಕಾಪಾಡಬೇಕು ಎಂದರು.