ಮುಂಬಯಿ: ಭಾರತದ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನವೊಂದರಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಡೇವಿಡ್ ಕ್ಯಾಮರೂನ್ ಹೂಡಿಕೆದಾರಿಗೆ ಅರ್ಜಿ ಹಾಕಿದ ದಿನವೇ ವಿಸಾ ಒದಗಿಸುವ ಸೇವೆಯನ್ನು ಪ್ರಾರಂಭಿಸುವ ಕೊಡುಗೆಯಿತ್ತಿದ್ದಾರೆ ಹಾಗೂ ಅಧ್ಯಯನಕ್ಕಾಗಿ ಬರುವ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದಿಲ್ಲ ಎಂದಿದ್ದಾರೆ.ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚಿನ ವಿಸಾಗಳನ್ನು ನಾವು ಭಾರತದಲ್ಲಿ ಕೊಡುತ್ತಿದ್ದೇವೆ. ಬ್ರಿಟನ್‌ನಲ್ಲಿ ಹೂಡಿಕೆ ಮಾಡುವ ಸಲುವಾಗಿ ಬರುವ ವ್ಯಾಪಾರೋದ್ಯಮಿಗಳಿಗೆ ಅರ್ಜಿ ಹಾಕಿದ ದಿನವೇ ವಿಸಾ ಸಿಗುವ ಸೌಲಭ್ಯ ಪ್ರಾರಂಭಿಸುವುದನ್ನು ನಾನಿಲ್ಲಿ ಘೋಷಿಸುತ್ತಿದ್ದೇನೆ ಎಂದು ಹೊಟೇಲ್ ತಾಜ್‌ನಲ್ಲಿ ವಾಣಿಜ್ಯೋದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ಕ್ಯಾಮರೂನ್ ಹೇಳಿದರು.ಬ್ರಿಟನ್‌ನ ವಿಶ್ವವಿದ್ಯಾಲಯಗಳಲ್ಲಿ ಕಲಿಯಲು ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಗೆ ನಾವು ಮಿತಿ ಹೇರುವುದಿಲ್ಲ. ಅಂತೆಯೇ ಕಲಿಕೆಯ ಅವಧಿಗೂ ಮಿತಿಯಿಲ್ಲ. ಅರ್ಹತೆ ಪಡೆದುಕೊಂಡ ಬಳಿಕ ಅವರು ಪದವಿ ಮಟ್ಟದ ನೌಕರಿ ಗಳಿಸಿಕೊಂಡು ಬ್ರಿಟನ್‌ನಲ್ಲಿ ಉಳಿಯಬಹುದು. ಬ್ರಿಟಿಷ್ ಕಂಪೆನಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವ ಸಲುವಾಗಿ ವಾಣಿಜ್ಯ ಅಡೆತಡೆಗಳನ್ನು ನಿವಾರಿಸುವ ಪ್ರಯತ್ನವನ್ನು ಭಾರತ ಮುಂದುವರಿಸಿಕೊಂಡು ಹೋಗಬೇಕು ಎಂದು ಬೃಹತ್ ವಾಣಿಜ್ಯ ನಿಯೋಗದೊಂದಿಗೆ ಬಂದಿರುವ ಕ್ಯಾಮರೂನ್ ಹೇಳಿದರು.ವ್ಯಾಪಾರ ವಹಿವಾಟಿಗೆ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಬ್ರಿಟನ್ ಪ್ರಯತ್ನಿಸುತ್ತಿದೆ. ಭಾರತ ಸರಕಾರ ವಾಣಿಜ್ಯ ವಹಿವಾಟಿನ ಹೆಬ್ಟಾಗಿಲನ್ನು ತೆರೆದು ಇಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವ ನಿರೀಕ್ಷೆಯಲ್ಲಿದ್ದೇವೆ. ನಾವು ಭಾರತದ ಹೂಡಿಕೆಯನ್ನು ಸ್ವಾಗತಿಸಿದ ಮಾದರಿಯಲ್ಲೇ ಬ್ರಿಟಿಷ್ ಕಂಪೆನಿಗಳಿಗೆ ಇಲ್ಲಿ ಹೂಡಿಕೆ ಮಾಡುವುದು ಸುಲಭವಾಗಬೇಕು ಎಂದು ಪ್ರತಿಪಾದಿಸಿದರು.ಬ್ರಿಟಿಷ್ ಆರ್ಥಿಕತೆ ಹಿಂಜರಿತದ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಈ ಕಾಲಘಟ್ಟದಲ್ಲಿ ಭಾರತದ ಜತೆಗಿನ ಪಾಲುದಾರಿಕೆಗೆ ಬಹಳ ಮಹತ್ವವಿದೆ ಎಂದು ಪ್ರಧಾನಮಂತ್ರಿಯಾಗಿ ಭಾರತಕ್ಕೆ ಎರಡನೇ ಪ್ರವಾಸ ಕೈಗೊಂಡಿರುವ ಕ್ಯಾಮರೂನ್ ಹೇಳಿದರು.ಭಾರತದ ಜತೆಗೆ 'ವಿಶೇಷ ಸಂಬಂಧ' ಹೊಂದುವ ಆಶಯ ವ್ಯಕ್ತಪಡಿಸಿದ ಅವರು ನಾವು 'ಗತ'ದತ್ತ ನೋಡುವುದರ ಬದಲು ಆಕಾಶವೇ ವಿತಿಯಾಗಿರುವ ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದರು. ಭಾರತ ಮತ್ತು ಬ್ರಿಟನ್ ವಿಶೇಷ ಸಂಬಂಧ ಹೊಂದುವುದನ್ನು ನೋಡಲು ನಾನು ಬಯಸಿದ್ದೇನೆ. ಈ ಸಂಬಂಧ ಭವಿಷ್ಯದತ್ತ ದೃಷ್ಟಿಯಿಟ್ಟಿರಬೇಕೆ ಹೊರತು ಕಳೆದುಹೋದುದರ ಕುರಿತು ಅಲ್ಲ ಎಂದು ಹೇಳಿದರು.ಭಾರತವನ್ನು 'ಈ ಶತಮಾನದ ಶ್ರೇಷ್ಠ ವಿದ್ಯಮಾನ' ಎಂದು ಬಣ್ಣಿಸಿದ ಕ್ಯಾಮರೂನ್ ಭಾರತದ ಅಗಾಧ ಆರ್ಥಿಕ ಪ್ರಗತಿಯಿಂದಾಗಿ 2030ರಲ್ಲಿ ಅದು ಜಗತ್ತಿನ ಮೂರನೇ ಪ್ರಬಲ ಆರ್ಥಿಕ ಶಕ್ತಿಯಾಗಲಿದೆ ಎಂದು ಭವಿಷ್ಯ ನುಡಿದರು.ವಾಣಿಜ್ಯೋದ್ಯಮಿಗಳ ಬೃಹತ್ ನಿಯೋಗದ ಜತೆಗೆ ಬಂದಿರುವ ನಾನು ವ್ಯಾಪಾರ, ಆರ್ಥಿಕತೆ ಮತ್ತು ವಾಣಿಜ್ಯದ ಜತೆಗೆ ಸಂಸ್ಕೃತಿ, ರಾಜಕೀಯ ಮತ್ತು ರಾಜತಾಂತ್ರಿಕತೆಯ ಆಸಕ್ತಿಯನ್ನೂ ಹೊಂದಿದ್ದೇನೆ. ಈ ಶತಮಾನದಲ್ಲಿ ಭಾರತ ಬೃಹತ್ ಆರ್ಥಿಕ ಶಕ್ತಿಯಾಗಿ ಮೂಡಿಬರಲಿರುವುದರಿಂದ ಅದರ ಜತೆಗೆ ಸಹಭಾಗಿತ್ವ ಹೊಂದುವ ಸಲುವಾಗಿ ಬಂದಿದ್ದೇನೆ ಎಂದರು.