ಹುಬ್ಬಳ್ಳಿ: ಕಾವೇರಿ ನದಿ ಕೊಳ್ಳದ ನೀರನ್ನೆಲ್ಲ ತಮಿಳುನಾಡಿಗೆ ಹರಿಸಿದ ಮೇಲೆ ಮುಖ್ಯಮಂತ್ರಿ ಜಗದೀಶ ಶೆಟ್ಟರರು ಪ್ರಧಾನಮಂತ್ರಿ ಬಳಿ ರಾಜ್ಯದ ನಿಯೋಗ ಕೊಂಡೊಯ್ಯುವುದರಲ್ಲಿ ಅರ್ಥವಿಲ್ಲ. ನಿಯೋಗವನ್ನು ಕಾಟಾಚಾರಕ್ಕಾಗಿ ಒಯ್ಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೇಲಿ ಮಾಡಿದರು.ಸೋಮವಾರ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಗೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿ ಮುಖ್ಯಮಂತ್ರಿ ಶೆಟ್ಟರ ಕಾವೇರಿ ಕೊಳ್ಳದ ಜನರಿಗೆ ಮೋಸ ಮಾಡಿದ್ದಾರೆ.ಅವರಿಗೆ ರಾಜ್ಯದ ಬಗ್ಗೆ ಹಿತಾಸಕ್ತಿಯೇ ಇಲ್ಲ. ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಗೆ ಲಿಖೀತ ಪತ್ರ ಬರೆದಿದ್ದರು. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದ ಪರ ವಕಾಲತ್ತು ಮಾಡುತ್ತಿರುವ ನ್ಯಾಯವಾದಿ ನಾರಿಮನ್ ಅವರನ್ನು ಬದಲಾಯಿಸುವಂತೆ ಕೋರುತ್ತಿರುವುದು ಸರಿಯಲ್ಲ. ಅವರಿಗೆ ರಾಜ್ಯ ಸರಕಾರವು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸಮಸ್ಯೆ ಉದ್ಭವಿಸುತ್ತಿದೆ ಎಂದರು.ಬಿಜೆಪಿಯೊಂದಿಗೆ ಮೈತ್ರಿ ಇಲ್ಲ:ಬಿಜೆಪಿಯೊಂದಿಗೆ ಕೆಜೆಪಿಯು ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿರುವುದು ಶುದ್ಧಸುಳ್ಳು. ಬಿಜೆಪಿ ಮುಖಂಡ ರಾಜನಾಥಸಿಂಗ್ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಅವರ ಹೇಳಿಕೆಗೆ ಮಹತ್ವ ಕೊಡುವುದು ಬೇಡ. ಬಿಜೆಪಿ ಕಡೆ ತಿರುಗಿಯೂ ನೋಡಲ್ಲ. ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಖಂಡತುಂಡವಾಗಿ ಹೇಳಿದರು.