ಉಡುಪಿ: ಮುಂದಿನ ದಿನಗಳಲ್ಲಿ ಔಷಧಗಳಾಗಿ ಜೈವಿಕ ಪದಾರ್ಥಗಳ ಬಳಕೆ ಹೆಚ್ಚಲಿವೆ. ಫಾರ್ಮಾಸಿಸ್ಟ್‌ಗಳು ಸುಧಾರಿತ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ಮೈಸೂರು ಜೆಎಸ್ಸೆಸ್ ವಿ.ವಿ. ಕುಲಪತಿ, ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ| ಬಿ. ಸುರೇಶ್ ಕರೆ ನೀಡಿದ್ದಾರೆ.ಮಣಿಪಾಲದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್‌ನ ಸ್ವರ್ಣ ಮಹೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯಸೇವೆ ನೀಡುವಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟತನದಿಂದ ಎದುರಿಸಬೇಕು ಎಂದರು.ಮಣಿಪಾಲ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಎಂ. ಪೈ, ಕುಲಸಚಿವ ಡಾ| ಜಿ.ಕೆ. ಪ್ರಭು ಉಪಸ್ಥಿತರಿದ್ದರು. ಇಂಡಿಯನ್ ಹಾಸ್ಪಿಟಲ್ ಫಾರ್ಮಾಸಿಸ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಲ್. ನಾಸಾ ಶುಭ ಕೋರಿದರು. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಸ್ವಾಗತಿಸಿ, ಪ್ರಾಂಶುಪಾಲ ಡಾ| ಎನ್. ಉಡುಪ ವರದಿ ವಾಚಿಸಿದರು. ಉಪಪ್ರಾಂಶುಪಾಲ ಡಾ| ಸಿ. ಮಲ್ಲಿಕಾರ್ಜುನ ರಾವ್ ವಂದಿಸಿದರು.ಒಂಬತ್ತು ಮಂದಿ ವಿಶಿಷ್ಟ ಪ್ರಾಕ್ತನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಫಾರ್ಮಾಸ್ಯೂಟಿಕಲ್ ರಸಾಯನಶಾಸ್ತ್ರದ ಸಹ ಪ್ರಾಧ್ಯಾಪಕ ಡಾ| ಅಲೆಕ್ಸ್ ಜೋಸೆಫ್ ಅವರಿಗೆ ಶ್ರೇಷ್ಠ ಶಿಕ್ಷಕ, ಕ್ವಾಲಿಟಿ ಅಶ್ಯುರೆನ್ಸ್ ವಿಭಾಗದ ಹಿರಿಯ ತಾಂತ್ರಿಕ ಕೃಷ್ಣ ಅಮೀನ್ ಅವರಿಗೆ ಶ್ರೇಷ್ಠ ಪೂರಕ ಸಿಬಂದಿ ಪ್ರಶಸ್ತಿ ನೀಡಲಾಯಿತು. ಡಾ| ಎನ್. ಉಡುಪ ಅವರು ಕೊಡಮಾಡಿದ ವರ್ಷದ ಶಿಕ್ಷಕ ಪ್ರಶಸ್ತಿಯನ್ನು ಫಾರ್ಮಸಿ ಪ್ರಾಕ್ಟಿಸ್ ವಿಭಾಗದ ಮುಖ್ಯಸ್ಥ ಡಾ| ಎಂ.ಕೆ. ಉಣ್ಣಿಕೃಷ್ಣನ್ ಅವರಿಗೆ, ವರ್ಷದ ಪೂರಕ ಸಿಬಂದಿ ಪ್ರಶಸ್ತಿಯನ್ನು ಲೆಕ್ಕ ವಿಭಾಗದ ಕೃಷ್ಣ ಪ್ರಭು ಅವರಿಗೆ ನೀಡಲಾಯಿತು.