ಬೆಂಗಳೂರು: ಸುಳ್ಳು ಮಾಹಿತಿ ನೀಡಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಐದು ಲಕ್ಷ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ ಘಟನೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆಯಿತು.ಗೋಪಾಲಗೌಡ ಎಂಬುವರು ತನ್ನ ಸಂಬಂಧಿಕ ಅನಂತ್ ನಾಪತ್ತೆಯಾಗಿದ್ದಾರೆ ಎಂದು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಲ್. ಮಂಜುನಾಥ್ ಮತ್ತು ನ್ಯಾ.ಎಚ್.ಎಸ್. ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠವು, ಅರ್ಜಿದಾರನನ್ನು ತರಾಟೆಗೆ ತೆಗೆದುಕೊಂಡಿತು.'ಇಂತಹ ಪ್ರಕರಣಗಳ ವಿಚಾರಣೆಯಿಂದ ನ್ಯಾಯಾಲಯ, ಸರ್ಕಾರ ಹಾಗೂ ಪೊಲೀಸರ ಸಮಯ ವ್ಯರ್ಥವಾಗುತ್ತದೆ. ಇದು ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ, ಸುಳ್ಳು ಅರ್ಜಿ ಸಲ್ಲಿಸಿದಕ್ಕಾಗಿ ಐದು ಲಕ್ಷ ರೂ. ದಂಡ ವಿಧಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿತು.ಏನಿದು ಪ್ರಕರಣತಮ್ಮ ಸಂಬಂಧಿಕ ಅನಂತ್ ಕಾಣೆಯಾಗಿದ್ದಾರೆ ಎಂದು ಗೋಪಾಲಗೌಡ, ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿಸಲ್ಲಿಸಿದ್ದರು.ಅನಂತ್ ಪತ್ತೆಗೆ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ, ಪತ್ತೆ ಕಾರ್ಯವನ್ನು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನೂ ನ್ಯಾಯಾಲಯಕ್ಕೆ ಕರೆಸಿತ್ತು¤.ಸೋಮವಾರದ ವಿಚಾರಣೆ ವೇಳೆ ಅನಂತ್‌ನನ್ನು ಮನೆ ಕಳವು ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಜತೆಗೆ ಗೋಪಾಲಗೌಡ ಕೂಡ ನ್ಯಾಯಾಲಯಕ್ಕೆ ಖುದ್ದು ಹಾಜರಾದರು. ಆಗ ಅನಂತ್ ಹಾಗೂ ಗೋಪಾಲಗೌಡ ಸಂಬಂಧಿಕರಲ್ಲ ಎಂಬುದು ಬಯಲಾಯಿತು. ನ್ಯಾಯಪೀಠ ತರಾಟೆ ತೆಗೆದುಕೊಂಡಿದ್ದರಿಂದ ಗೋಪಾಲಗೌಡ 'ನನ್ನಿಂದ ತಪ್ಪಾಗಿದ್ದು, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ. ದಯವಿಟ್ಟು ನನನ್ನು ಕ್ಷಮಿಸಿ ' ಎಂದು ಮನವಿ ಮಾಡಿದರು. ನ್ಯಾಯಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.