ಹೊಸದಿಲ್ಲಿ: ಜಮಿಯತ್ ಉಲೇಮಾ-ಇ-ಹಿಂದ್ ಮುಖಂಡ ಮೌಲಾನ ಮೆಹಮೂದ್ ಮದನಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿರುವುದರಿಂದ ಬಿಜೆಪಿಗೆ ಭಾರೀ ಖುಷಿಯಾಗಿದೆ. ಅನಿರೀಕ್ಷಿತ ವ್ಯಕ್ತಿಯಿಂದ ಬಂದಿರುವ ಈ ಅನಿರೀಕ್ಷಿತ ತಾರೀಫನ್ನು ಬಿಜೆಪಿ ಬಹಳ ಸಂಭ್ರಮದಿಂದ ಸ್ವಾಗತಿಸಿ, ಮೋದಿ ಎಲ್ಲರಿಗೂ ಸಮ್ಮತ ನಾಯಕ ಮತ್ತು ಅವರ ದಕ್ಷ ಆಳ್ವಿಕೆಗೆ ಸಂದ ಗೆಲುವು ಎಂದು ಹೇಳಿದೆ.ಮದನಿ ಗುಜರಾತಿನ ಅಲ್ಪಸಂಖ್ಯಾಕರ ಸ್ಥಾನಮಾನದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ ಹಾಗೂ ಮೋದಿಯ ಆಡಳಿತ ಶೈಲಿಯನ್ನು ತಾರೀಫು ಮಾಡಿದ್ದಾರೆ. ಮದನಿ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಪಕ್ಷದ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.ಗುಜರಾತ್‌ನ ಬಿಜೆಪಿ ಸರಕಾರ ಮತ್ತು ಮೋದಿ ಮುಸ್ಲಿಮರನ್ನು ನೋಡಿಕೊಳ್ಳುತ್ತಿರುವ ದೃಷ್ಟಿಕೋನ ಬದಲಾಗಿದೆ ಎಂದಿರುವ ಮದನಿಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ರೂಡಿ ಈ ಮೇಲಿನಂತೆ ಉತ್ತರಿಸಿದರು.ಈಗ ಅಲ್ಪಸಂಖ್ಯಾಕರಿಗೆ ಕೂಡ ಮೋದಿಯ ಉತ್ತಮ ಕೆಲಸಗಳು ಮನವರಿಕೆಯಾಗುತ್ತಿವೆ. ಮೋದಿ ಉತ್ತಮ ನಾಯಕ ಹಾಗೂ ದಕ್ಷ ಆಡಳಿತಗಾರ ಎನ್ನುವ ಸಂಗತಿಯನ್ನು ಎಲ್ಲರೂ ಸಮ್ಮತಿಸುತ್ತಾರೆ. ಇದು ಅಪೇಕ್ಷಣೀಯ ನಡೆ ಮತ್ತು ಈ ಸಂದೇಶವನ್ನು ದೇಶದ ಅಲ್ಪಸಂಖ್ಯಾಕರ ಬಳಿಗೊಯ್ಯಬೇಕು ಎಂದು ರೂಡಿ ಹೇಳಿದ್ದಾರೆ.ಮೋದಿಯನ್ನು ಬಾಯಿತುಂಬ ಹೊಗಳಿರುವ ಮದಧಿನಿ, ಮೋದಿ ಮತ್ತು ಗುಜರಾತಿನ ಮುಸ್ಲಿಮರು ಮಹಾರಾಷ್ಟ್ರ ಅಥವಾ ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಸಹೋದರರಿಗಿಂತ ಚೆನ್ನಾಗಿದ್ದಾರೆ ಎಂದಿದ್ದಾರೆ.ಗುಜರಾತಿನಲ್ಲಿರುವ ಜಮೀಯತ್ ಕಾರ್ಯಕರ್ತರು ಹಲವು ಕ್ಷೇತ್ರಗಳಲ್ಲಿ ಮುಸ್ಲಿಮರು ಮೋದಿಗೆ ಮತ ಹಾಕಿರುವ ಸಂಗತಿಯನ್ನು ನನಗೆ ತಿಳಿಸಿದ್ದಾರೆ. ಅಲ್ಲಿ ಗ್ರಹಿಕೆಗೆ ನಿಲುಕುವಂತಹ ಬದಲಾವಣೆಗಳಾಗಿವೆ ಮತ್ತು ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ತಥಾಕಥಿತ ಜಾತ್ಯತೀತ ಸರಕಾರಗಳು ಅಧಿಕಾರದಲ್ಲಿರುವ ಇತರ ರಾಜ್ಯಗಳ ಮುಸ್ಲಿಮರಿಗಿಂತ ಗುಜರಾತಿನ ಮುಸ್ಲಿಮರು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ ಎಂದು ಒಂದು ಸುದ್ದಿವಾಹಿನಿಯಲ್ಲಿ ಮದನಿ ಹೇಳಿಕೊಂಡಿದ್ದಾರೆ. ಮೋದಿ ನನ್ನ ಸಮುದಾಯಕ್ಕೆ ಅಸ್ಪೃಶ್ಯರಲ್ಲ. ಗುಜರಾತಿಗಿಂತ ಹೆಚ್ಚು ಅಮಾಯಕ ಮುಸ್ಲಿಮರು ಮಹಾರಾಷ್ಟ್ರದ ಜೈಲುಗಳಲ್ಲಿದ್ದಾರೆ. ಜಾತ್ಯತೀತ ಸರಕಾರಗಳಿರುವ ಹಲವು ರಾಜ್ಯಗಳ ಮಾನವಾಧಿಕಾರ ದಾಖಲೆಗಳು ನಿರಾಶದಾಯಕವಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಆರ್ಥಿಕ ಸ್ಥಿತಿಯನ್ನು ನೋಡುವಾಗ ಆಘಾತವಾಗುತ್ತದೆ. ಈ ರಾಜ್ಯಗಳಲ್ಲಿ ಮೋದಿಯ ಆಳ್ವಿಕೆಯಿಲ್ಲ ಮತ್ತು ಈ ಸಂಗತಿಯನ್ನು ನಾವು ಕಡೆಗಣಿಸುವುದು ಅಸಾಧ್ಯ ಎಂದಿದ್ದಾರೆ.ಕೆಲವು ಸಮಯದ ಹಿಂದೆ ದೇವೊಬಂದ್‌ನ ಮೌಲಾನ ವಸ್ತಾನ್ವಿ ಇದೇ ಮಾದರಿಯಲ್ಲಿ ಮೋದಿಯನ್ನು ಹೊಗಳಿದ್ದು ಭಾರೀ ವಿವಾದಕ್ಕೊಳಗಾಗಿತ್ತು.ಇತ್ತೀಚೆಗೆ ನಡೆದ ಪೌರಾಡಳಿತ ಚುನಾವಣೆಯಲ್ಲಿ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.