Udayavani | Feb 18, 2013
ಬೆಳ್ತಂಗಡಿ: ಓದಿನ ಅನುಭವವನ್ನು ಜೀವನದಲ್ಲಿ ಅರ್ಥೈಸಿಕೊಳ್ಳಿ. ನಿಮ್ಮನ್ನು ನೀವು ಅರಿತುಕೊಳ್ಳಲು ಪ್ರಯತ್ನಿಸಿ ಎಂದು ರಾಜ್ಯಸಭಾ ಸದಸ್ಯೆ ಡಾ| ಬಿ. ಜಯಶ್ರೀ ಹೇಳಿದರು.
ಅವರು ಸೋಮವಾರ ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ಅರುಣೋದಯ ಹಾಗೂ ಕಿರಣೋದಯ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳು ಹಾಗೂ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಹಳ್ಳಿ ಹಳ್ಳಿಗಳಿಗೆ ಲಕ್ಷಾಂತರ ಪುಸ್ತಕ ಮುದ್ರಿಸಿ ತಲುಪಿಸಿ ಅದನ್ನು ಓದಿಸಿ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸುವ ಹೆಗ್ಗಡೆಯವರ ಶ್ರಮ ಅವರ್ಣನೀಯ. ಇಂತಹ ದೊಡ್ಡ ಸಾಧನೆ ಬೇರೆಲ್ಲೂ ನಡೆದಿಲ್ಲ ಎಂದ ಅವರು, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹೆತ್ತವರು ಬೆಳೆಸಬೇಕು. ಹೆಣ್ಮಕ್ಕಳನ್ನು ಕಾಪಾಡುವ ಜವಾಬ್ದಾರಿಯನ್ನು ತಂದೆ ಕೂಡ ಹೊತ್ತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು, ಇಂದಿನ ಹೆತ್ತವರ ಆದ್ಯತೆಗಳು ಬದಲಾಗುತ್ತಿವೆ. ಮಕ್ಕಳು ಸಾತ್ವಿಕರಾಗಬೇಕು, ಸಚ್ಚಾರಿತ್ರÂ ಹೊಂದಿರಬೇಕು, ದೇಶ, ಭಾಷೆ, ಸಾಹಿತ್ಯ ಪ್ರೇಮಿಗಳಾಗಬೇಕೆಂದು ಆಸೆ ಪಡುವವರು ವಿರಳವಾಗಿದ್ದಾರೆ. ಉತ್ತಮ ಸಂಪಾದನೆ, ದೊಡ್ಡ ಉದ್ಯೋಗ ಸಿಗಬೇಕೆಂಬುದೇ ಕನಸಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರಕಾರ ಮಕ್ಕಳಿಗೆ ನೈತಿಕ ಮೌಲ್ಯಗಳ ಶಿಕ್ಷಣ ಬೋಧಿಸಿ ಎಂದು ಹೇಳದೇ ಕೇವಲ ಪಠ್ಯಕ್ರಮಕ್ಕೆ ಜೋತುಬಿದ್ದಿದೆ. ಮಕ್ಕಳು ತಮ್ಮ ಬೇಕು ಬೇಡಗಳನ್ನು ಗಟ್ಟಿಯಾಗಿ ತೀರ್ಮಾನಿಸಿ. ಓದುವ ನೆಪಕ್ಕಾಗಿ ಮಾತ್ರ ಪುಸ್ತಕದ ಸ್ಪರ್ಧೆ ಏರ್ಪಡಿಸಲಾಗಿದೆ. ಶಾಂತಿವನದ ಪುಸ್ತಕಗಳ ಪರಿಣಾಮ ಮಕ್ಕಲ್ಲಿ ಧನಾತ್ಮಕವಾಗಿ ಉಂಟಾಗಿದೆ ಎಂದರು.
ಆನಂದ್‌ರಾಜ್, ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಉಡುಪಿಯ ಜಿಲ್ಲಾ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.
ದ.ಕ., ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಉಡುಪಿ ಒಳಕಾಡಿನ ಅಕ್ಷಯ ಹೆಗಡೆ, ಕುದಿ ವಿಷ್ಣುಮೂರ್ತಿ ಪ್ರೌಢಶಾಲೆಯ ಸ್ವಾತಿ, ಚಿಕ್ಕಮಗಳೂರಿನ ಮೌಂಟನ್ ವ್ಯೂ ಶಾಲೆಯ ಸಜಯ್ ವಿ. ಕೌಶಿಕ್, ಧರ್ಮಸ್ಥಳ ಎಸ್‌ಡಿಎಂ ಶಾಲೆಯ ಶಿಲ್ಪಾ ಭಾಷಣ ಹಾಗೂ ಕಂಠಪಾಠ ಒಪ್ಪಿಸಿದರು. ಬಹುಮಾನಿತರ ಪಟ್ಟಿಯನ್ನು ಬಾಲಕೃಷ್ಣ ರೆಖ್ಯ ವಾಚಿಸಿದರು.
ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಐ. ಶಶಿಕಾಂತ್ ಜೈನ್ ಸ್ವಾಗತಿಸಿದರು. ಉಡುಪಿ ಯೋಗಶಿಕ್ಷಕ ಕುಮಾರ್ ವಂದಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ ನಿರ್ವಹಿಸಿದರು.
ಮಾದಕ ದ್ರವ್ಯ
ಚಟ ಬಿಡಿಸಿ
ಮಂಗಳೂರಿನ ಸ್ನೇಹಾ ಉಪಾಧ್ಯಾಯ ಎಂಬ ವಿದ್ಯಾರ್ಥಿನಿ ಡ್ರಗ್ಸ್ ಚಟಕ್ಕೆ ಬಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಉಲ್ಲೇಖೀಸಿದ ಡಾ| ಹೆಗ್ಗಡೆ, ಮಾದಕ ವಸ್ತು ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಮೌಲ್ಯಗಳನ್ನು ಹಾಳು ಮಾಡುತ್ತದೆ. ಆಧುನಿಕತೆಯ ಸೋಗಿನಲ್ಲಿ ಮಕ್ಕಳಿಗೆ ದುಶ್ಚಟ ಕಲಿಸುವಂತಹ ಸಂಪ್ರದಾಯ ಬರಬಾರದು ಎಂದರು.