Udayavani | Feb 18, 2013
ಉಡುಪಿ: ಕುಂಜಾರುಗಿರಿ ದೇವಳದಿಂದ ನೀಲಾವರ ಗೋಶಾಲೆಯ ನಿರ್ವಹಣೆಗಾಗಿ ನಿರ್ದಿಷ್ಟ ಪಾವತಿ ಮಾಡಲು ನಿರ್ಧರಿಸಲಾಗಿದೆ ಎಂದು ದೇವಳದ ಆಡಳಿತೆದಾರರಾದ ಶ್ರೀಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.
ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀಅದಮಾರು ಮಠದಿಂದ ಶ್ರೀದೇವಿಗೆ ಸ್ವರ್ಣ ಮಂಟಪವನ್ನು ಸಮರ್ಪಿಸಿ ಸೋಮವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇವಳಕ್ಕೆ ಸಲ್ಲುವ ಸೇವೆಯಲ್ಲಿ ಒಂದಿಷ್ಟು ಅಂಶವನ್ನು ಗೋಶಾಲೆಯ ನಿರ್ವಹಣೆಗೆ ನೀಡಲಾಗುವುದು ಎಂದರು.
ಗೋಸೇವೆ ಶ್ರೀಕೃಷ್ಣನಿಗೆ ಪರಮಪ್ರಿಯವಾದ ಕೆಲಸ. ಕೋಟಿ ಕೋಟಿ ಖರ್ಚು ಮಾಡಿ ಮನೆ ಕಟ್ಟಿದರೂ ಮೊದಲು ಪ್ರವೇಶ ಮಾಡುವುದು ಗೋವು. ಗೋಮಯ, ಗೋಮೂತ್ರ ಅಷ್ಟೂ ಪವಿತ್ರ. ಹೀಗಾಗಿ ನಾವೆಲ್ಲರೂ ಗೋಸೇವೆಯನ್ನು ಮಾಡಬೇಕು. ಶ್ರೀಪೇಜಾವರ ಕಿರಿಯ ಶ್ರೀಗಳು ಅನಾಥ ಗೋವುಗಳ ರಕ್ಷಣೆಗಾಗಿ ಗೋಶಾಲೆಯನ್ನು ಆರಂಭಿಸಿದರು. ಆದರೆ ಈಗ ನಿಯಂತ್ರಣ ಮೀರಿ ಬೆಳೆಯುತ್ತಿದೆ. ನಾವೆಲ್ಲರೂ ಮನೆಗಳಲ್ಲಿ ಗೋವುಗಳನ್ನು ಸಾಕಿ ಸೇವೆ ಮಾಡಬೇಕು, ಇಲ್ಲವಾದರೆ ಗೋಶಾಲೆಯ ನಿರ್ವಹಣೆಗಾದರೂ ನೆರವು ನೀಡಬೇಕು. ಇಂದು ಭೀಷ್ಮಾಚಾರ್ಯರು ನಿರ್ಯಾಣ ಹೊಂದಿದ ಭೀಷ್ಮಾಷ್ಟಮಿ. ಇದೇ ದಿನ ಭೀಷ್ಮರು ಧರ್ಮರಾಯನಿಗೆ ಗೋಸಾವಿತ್ರಿ ಸ್ತೋತ್ರವನ್ನು ಬೋಧಿಸಿದರು ಎಂದರು.
ಪರಶುರಾಮದೇವರಿಂದ ದುರ್ಗಾದೇವಿಯ ಪ್ರತಿಷ್ಠೆಯಾಗಿದೆ ಎಂಬ ಐತಿಹ್ಯವಿದೆ. ಆದ ಕಾರಣ ಶ್ರೀಅದಮಾರು ಶ್ರೀಗಳು ಮೂಲವಿಗ್ರಹವನ್ನು ಚಲನೆ ಮಾಡದೆ ಸುತ್ತಲಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದು ಯೋಗ್ಯವಾದುದು ಎಂದು ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು. ದುರ್ಗಾದೇವಿಯ ಅನುಗ್ರಹದಿಂದ ಅಜ್ಞಾನನಾಶವಾಗಬೇಕು, ಭಗವಜ್ಞಾನ ಪ್ರಾಪ್ತಿಯಾಗಬೇಕು ಎಂದರು ಶ್ರೀಪಾದರು ಆಶಯ ವ್ಯಕ್ತಪಡಿಸಿದರು.
ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಶುಭಕೋರಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ವೆಂಕಟರಮಣ ಮುಚ್ಚಿಂತಾಯ ಸ್ವಾಗತಿಸಿದರು. ಮಧ್ವರಾಜ ಭಟ್ ಕಾರ್ಯಕ್ರಮ ನಿರ್ವಹಿಸಿ ರಾಮಚಂದ್ರ ಉಪಾಧ್ಯಾಯ ವಂದಿಸಿದರು.
ಜಗತಿ³ತಾ, ಜಗನ್ಮಾತೆ, ಜಗದ್ಗುರು ಕ್ಷೇತ್ರ
ಕುಂಜಾರುಗಿರಿ ದುರ್ಗಾದೇವಿ ಜಗನ್ಮಾತೆ, ಕುಂಜಾರುಗಿರಿ ಬೆಟ್ಟದ ಎದುರು ಜಗತಿ³ತರಾದ ಪರಶುರಾಮ ದೇವರ ಸನ್ನಿಧಾನವಿದೆ, ಸಮೀಪದ ಪಾಜಕ ಕ್ಷೇತ್ರ ಜಗದ್ಗುರು ಮಧ್ವಾಚಾರ್ಯರು ಜನಿಸಿದ ತಾಣವಾಗಿದೆ- ಹೀಗೆ ಇವು ಮೂರೂ ಒಂದೇ ಕ್ಷೇತ್ರದಲ್ಲಿರುವುದು ಇಲ್ಲಿನ ವೈಶಿಷ್ಟé ಎಂದು ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ದುರ್ಗಾದೇವಿ ಲಕ್ಷ್ಮೀದೇವಿಯಾಗಿದ್ದಾಳೆ. ಈಕೆ ಶ್ರೀಮನ್ನಾರಾಯಣನ ಪತ್ನಿ. ಆದರೆ ಕೆಲವರು ಬ್ರಹ್ಮ, ವಿಷ್ಣು, ಮಹೇಶ್ವರರು ದುರ್ಗಾದೇವಿಯ ಮಕ್ಕಳು ಎನ್ನುತ್ತಿದ್ದಾರೆ. ನಮಗೆಲ್ಲರಿಗೂ ಮಾನ್ಯವಾದ ಶ್ರೀಮದ್ಭಾಗವತದಲ್ಲಿ ಶ್ರೀಮನ್ನಾರಾಯಣನ ಪತ್ನಿ ಲಕ್ಷ್ಮೀದೇವಿ, ದುರ್ಗಾದೇವಿ ಎನ್ನುವುದು ಸ್ಪಷ್ಟವಿದೆ. ನಮಗೆಲ್ಲರಿಗೂ ಮಾನ್ಯವಾದ ಭಾಗವತ ಪುರಾಣದಂತೆ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಶ್ರೀಗಳು ಹೇಳಿದರು.
ದುರ್ಗಾದೇವಿ ದುಷ್ಟರಿಗೆ ಮಾತ್ರ ರೌದ್ರಾವತಾರಿ, ಆದರೆ ಭಕ್ತರಿಗೆ ಶಾಂತಸ್ವರೂಪಳು ಎಂದು ಶ್ರೀಪಾದರು ಹೇಳಿದರು.