ಮುಂಬಯಿ : ಇದು ಆಸ್ಟ್ರೇಲಿಯದ ಪುರುಷರ ತಂಡಕ್ಕಿಂತ ಮಿಗಿಲಾದ ಸಾಧನೆ ಎಂಬ ಕಾರಣಕ್ಕಾಗಿ ಬಹಳ ಹೆಮ್ಮೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯ ವನಿತಾ ತಂಡದ ನಾಯಕಿ ಜೂಡಿ ಫೀಲ್ಡ್. ರವಿವಾರ ರಾತ್ರಿ ಇಲ್ಲಿನ 'ಬ್ರೆಬೋರ್ನ್ ಸ್ಟೇಡಿಯಂ'ನಲ್ಲಿ ಎದುರಾಳಿ ವೆಸ್ಟ್ ಇಂಡೀಸನ್ನು 114 ರನ್ನುಗಳಿಂದ ಉರುಳಿಸಿ ಆಸ್ಟ್ರೇಲಿಯಕ್ಕೆ 6ನೇ ವಿಶ್ವಕಪ್ ಕೊಡಿಸಿದ ಬಳಿಕ ಅವರು ಪ್ರತಿಕ್ರಿಯಿಸುತ್ತಿದ್ದರು.'ಯಾವತ್ತೂ ಪುರುಷರಗಿಂತ ಮೇಲುಗೈ ಸಾಧಿಸುವುದೊಂದು ಹಿತಾನುಭವ' ಎಂದು ಜೂಡಿ ಖುಷಿಯಿಂದ ನುಡಿದರು. ಇದು ಆಸೀಸ್ ವನಿತೆಯರ ಪಾಲಾದ 6ನೇ ವಿಶ್ವಕಪ್ ಕಿರೀಟ. ಆಸ್ಟ್ರೇಲಿಯದ ಪುರುಷರು ಈವರೆಗೆ 4 ಸಲ ವಿಶ್ವ ಚಾಂಪಿಯನ್ ಆಗಿದ್ದಾರೆ.'ಆದರೆ ಪುರುಷ ತಂಡದ ಸದಸ್ಯರು ಈ ಪಂದ್ಯಾವಳಿಯುದ್ದಕ್ಕೂ ನಮಗೆ ಅಮೋಘ ಬೆಂಬಲ ನೀಡಿರುವುದನ್ನು ಮರೆಯುವಂತಿಲ್ಲ. ಕೆಲವು ಪಂದ್ಯಗಳ ವೇಳೆ ಅವರು ಖುದ್ದಾಗಿ ಹಾಜರಿದ್ದರು. ಇದೊಂದು ಅವಿಸ್ಮರಣೀಯ ಅನುಭವ. ನಾವು ವಿಶ್ವಕಪ್ ಗೆಲ್ಲುತ್ತಿರುವುದು ಇದು ಆರನೇ ಸಲ. ನಾವು ಟಿ-20 ವಿಶ್ವಕಪ್ ಜಯಿಸಿದ ಕೆಲವೇ ತಿಂಗಳಲ್ಲಿ ಇದನ್ನು ಗೆದ್ದಿರುವುದು ವಿಶೇಷ ಹಾಗೂ ಮಹಾನ್ ಸಾಧನೆ ಎನಿಸಿಕೊಳ್ಳುತ್ತದೆ...' ಎಂದು ಜೂಡಿ ಫೀಲ್ಡ್ ಹೇಳಿದರು.ಕೊಲಂಬೋದಲ್ಲಿ ಕಳೆದ ವರ್ಷಾಂತ್ಯ ನಡೆದ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ 4 ರನ್ ಅಂತರದಿಂದ ಇಂಗ್ಲಂಡನ್ನು ಸೋಲಿಸಿ ಚಾಂಪಿಯನ್ ಆಗಿ ಮೂಡಿಬಂದಿತ್ತು. ಆಗಲೂ ಜೂಡಿ ಫೀಲ್ಡ್ ಆಸೀಸ್ ನಾಯಕಿಯಾಗಿದ್ದರು.ಕಳೆದ ವರ್ಷ ಭಾರತ ಪ್ರವಾಸಗೈದು ಒಟ್ಟು 8-1 ಅಂತರದ ಗೆಲುವು ಸಾಧಿಸಿದ್ದು ವಿಶ್ವಕಪ್ ಜಯಭೇರಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂಬುದು ಜೂಡಿ ಅಭಿಪ್ರಾಯ. ಇದರಿಂದ ಭಾರತೀಯ ಉಪಖಂಡದ ಪಿಚ್‌ಗಳಲ್ಲಿ, ಇಲ್ಲಿನ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬುದರ ಸ್ಪಷ್ಟ ಚಿತ್ರಣ ಲಭಿಸಿತು ಎಂಬುದಾಗಿ ಜೂಡಿ ಹೇಳಿದರು.ಅಜೇಯ ಗುರಿ ನಮ್ಮದಾಗಿತ್ತುಅಂತಿಮ ಸೂಪರ್ ಸಿಕ್ಸ್ ಪಂದ್ಯದ ಸೋಲಿನ ಕುರಿತು ಆಸೀಸ್ ನಾಯಕಿ ಪ್ರತಿಕ್ರಿಯಿಸಿದ್ದು ಹೀಗೆ-'ವೆಸ್ಟ್ ಇಂಡೀಸ್ ವಿರುದ್ಧದ ಈ ಸೋಲಿನಿಂದ ನಮಗೆಲ್ಲರಿಗೂ ತೀವ್ರ ನಿರಾಸೆಯಾಗಿತ್ತು. ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ನೆಗೆಯಬೇಕೆಂಬುದು ನಮ್ಮ ಗುರಿಯಾಗಿತ್ತು. ಆದರೆ ವಿಂಡೀಸ್ ಎದುರು ಅನುಭವಿಸಿದ ಸೋಲಿನಿಂದಾಗಿ ಅದೇ ತಂಡದ ವಿರುದ್ಧ ಫೈನಲ್‌ನಲ್ಲಿ ಸಂಪೂರ್ಣ ಪ್ರಭುತ್ವ ಸ್ಥಾಪಿಸಬೇಕೆಂಬ ಯೋಜನೆ ಹಾಕಿಕೊಂಡೆವು. ಇದಕ್ಕಾಗಿ ಆಟದ ಮಟ್ಟದಲ್ಲಿ ತುಸು ಸುಧಾರಣೆ ಅಗತ್ಯವಿತ್ತು. ಎಲ್ಲರೂ ಇದರಲ್ಲಿ ಯಶಸ್ವಿಯಾದರು. ಹೀಗಾಗಿ ಈ ಯಶಸ್ಸು ಇಡೀ ತಂಡಕ್ಕೆ ಸಲ್ಲುತ್ತದೆ...'ಬ್ಯಾಟಿಂಗ್ ಸಮಸ್ಯೆಯಿತ್ತುಸರಣಿಯುದ್ದಕ್ಕೂ ಬ್ಯಾಟಿಂಗ್ ಸಮಸ್ಯೆ ತಂಡವನ್ನು ಕಾಡಿತ್ತು ಎಂಬುದನ್ನು ಕಾಂಗರೂ ನಾಯಕಿ ಅಲ್ಲಗಳೆಯಲಿಲ್ಲ. ಆದರೆ ಫೈನಲ್‌ನಲ್ಲಿ ಇದು ಯೋಜಿತ ರೀತಿಯಲ್ಲೇ ಸಾಗಿದ್ದನ್ನು ಪ್ರಶಂಸಿಸದೆ ಉಳಿಯಲಿಲ್ಲ. 'ಸ್ಕೋರ್‌ಬೋರ್ಡ್‌ನಲ್ಲಿ 260 ರನ್ ಟಾರ್ಗೆಟ್ ದಾಖಲಾದದ್ದು ನಿಜಕ್ಕೂ ಅಮೋಘ ಸಾಧನೆ. ಫೈನಲ್ ಮಟ್ಟಿಗೆ ಇದೊಂದು ದೊಡ್ಡ ಹಾಗೂ ಸವಾಲಿನ ಮೊತ್ತ...' ಎಂದರು.ನಿರಾಸೆಗೊಳಿಸದ ಪೆರ್ರಿಗಾಯಾಳಾಗಿ ಸೂಪರ್ ಸಿಕ್ಸ್ ಹಂತದ ಎಲ್ಲ ಪಂದ್ಯಗಳಿಂದ ಹೊರಗುಳಿದಿದ್ದ ಪ್ರಧಾನ ಬೌಲರ್ ಎಲಿಸ್ ಪೆರ್ರಿ ಅವರಿಗಾಗಿ 17ರ ಹರೆಯದ ಹೋಲಿ ಫರ್ಲಿಂಗ್ ಅವರನ್ನು ಹೊರಗಿರಿಸಬೇಕಾದದ್ದು ನಿಜಕ್ಕೂ ಕಠಿನ ನಿರ್ಧಾರವಾಗಿತ್ತು; ಆಯ್ಕೆಗೆ ಎಲ್ಲ 15 ಮಂದಿ ಲಭ್ಯರಿದ್ದುದರಿಂದ ತಂಡವನ್ನು ಅಂತಿಮಗೊಳಿಸುವುದು ದೊಡ್ಡ ಸವಾಲೆನಿಸಿತು ಎಂಬುದಾಗಿ ಫೀಲ್ಡ್ ಹೇಳಿದರು.ಫರ್ಲಿಂಗ್ 4 ಪಂದ್ಯಗಳಿಂದ 9 ವಿಕೆಟ್ ಉರುಳಿಸಿದ್ದರು. ಆದರೆ ಪ್ರಶಸ್ತಿ ಕಾಳಗದಲ್ಲಿ ಪೆರ್ರಿ 19ಕ್ಕೆ 3 ವಿಕೆಟ್ ಕಿತ್ತು ತಮ್ಮ ಮೇಲಿನ ನಂಬಿಕೆಯನ್ನು ಉಳಿಸಿಕೊಂಡದ್ದನ್ನು ಮರೆಯುವಂತಿಲ್ಲ. ಅವರು ವಿಂಡೀಸಿನ ಮೊದಲ 3 ವಿಕೆಟ್‌ಗಳನ್ನು ಬಹಳ ಬೇಗ ಉಡಾಯಿಸಿ ತಂಡದ ದೊಡ್ಡ ಅಂತರದ ಜಯಕ್ಕೆ ಅಡಿಪಾಯ ನಿರ್ಮಿಸಿದರು. ಆದರೆ ಪೆರ್ರಿ ಆರಂಭದಲ್ಲಿ ಸರಿಯಾದ ರನ್‌ಅಪ್ ಪಡೆಯುವಲ್ಲಿ ವಿಫಲರಾದಾಗ ತನ್ನ ಎದೆ ಢವಗುಟ್ಟತೊಡಗಿತು ಎಂದು ಜೂಡಿ ತಮ್ಮ ಅನುಭವವನ್ನು ಹೇಳಿಕೊಂಡರು.ತವರಿನ ಸೋಲು ಬೇಸರ ಮೂಡಿಸಿತ್ತು'2009ರಲ್ಲಿ ಆತಿಥೇಯ ತಂಡವಾಗಿದ್ದುಕೊಂಡು ನಾವು ನಿರಾಶದಾಯಕ ಪ್ರದರ್ಶನ ನೀಡಿದ್ದು ಬಹಳ ಬೇಸರ ಉಂಟುಮಾಡಿತ್ತು. ಹೀಗಾಗಿ ಅಂದಿನಿಂದಲೇ ಮುಂದಿನ ವಿಶ್ವಕಪ್‌ಗಾಗಿ ಕಠಿನ ಅಭ್ಯಾಸ ನಡೆಸಲಾರಂಬಿಸಿದೆವು. ಕ್ರಿಕೆಟ್ ಆಸ್ಟ್ರೇಲಿಯ ಎಲ್ಲ ರೀತಿಯಲ್ಲೂ ನಮ್ಮ ನೆರವಿಗೆ ನಿಂತಿತು. ಈ ಜಯದಲ್ಲಿ 4 ವರ್ಷಗಳ ಸತತ ದುಡಿಮೆ, ಅಪಾರ ಪರಿಶ್ರಮವಿದೆ. ಈ ಯಶಸ್ಸಿನಲ್ಲಿ ಎಲ್ಲರೂ ಪಾಲುದಾರರು...' ಎಂದು ಜೂಡಿ ಫೀಲ್ಡ್$Õ ಹೆಮ್ಮೆಯಿಂದ ಹೇಳಿದರು.