ಮುಂಬಯಿ : 'ನನ್ನ ತಾಯಿ ಹುಟ್ಟಿದ ದೇಶವಾದ ಇಂಗ್ಲಂಡ್‌ನಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದೆ. ಇದೀಗ ತಂದೆ ಹಾಗೂ ನನಗೆ ಜನ್ಮ ನೀಡಿದ ಭಾರತದಲ್ಲಿ ಕ್ರಿಕೆಟ್ ವಿದಾಯ ಘೋಷಿಸುತ್ತಿದ್ದೇನೆ...' ಹೀಗೆಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದವರು ಪುಣೆ ಮೂಲದ, ಆಸ್ಟ್ರೇಲಿಯದ ಆಲ್‌ರೌಂಡರ್ ಲೀಸಾ ಸ್ಥಾಲೇಕರ್.ರವಿವಾರ ರಾತ್ರಿ ಆಸ್ಟ್ರೇಲಿಯ 6ನೇ ಸಲ ವಿಶ್ವಕಪ್ ಎತ್ತಿದ ಬೆನ್ನಲ್ಲೇ ಲೀಸಾ ಪ್ರಕಟಿಸಿದ ಈ ನಿರ್ಧಾರ ಕಾಂಗರೂಗಳ ಸಂಭ್ರಮವನ್ನು ಮಂಕಾಗಿಸಿದ್ದು ಸುಳ್ಳಲ್ಲ. 'ಆದರೆ ವಿಶ್ವಕಪ್ ವಿಜೇತ ತಂಡದ ಸದಸ್ಯೆಯಾಗಿ, ತವರಾದ ಭಾರತದಲ್ಲೇ ಕ್ರಿಕೆಟ್ ವಿದಾಯ ಘೋಷಿಸುವುದಕ್ಕಿಂತ ಮಿಗಿಲಾದ ಅವಕಾಶ ಬೇರೊಂದಿಲ್ಲ. ಇದೊಂದು ವಿಶೇಷ ಅನುಭವ. ಸ್ಮರಣೀಯ ಗಳಿಗೆ...' ಎಂದು ಲೀಸಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಸಮರದಲ್ಲಿ 33ರ ಹರೆಯದ ಲೀಸಾ ಬ್ಯಾಟಿಂಗ್‌ನಲ್ಲಿ ವಿಫಲರಾದರೂ (12), 20 ರನ್ನಿಗೆ 2 ವಿಕೆಟ್ ಉಡಾಯಿಸುವುದರ ಜತೆಗೆ ಒಂದು ಕ್ಯಾಚ್ ಕೂಡ ಸಂಪಾದಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ.'ವಿಶ್ವಕಪ್ ಆಡಲು ಹೊರಡುವ ಮೊದಲೇ ನಾನು ವಿದಾಯದ ನಿರ್ಧಾರ ಮಾಡಿದ್ದೆ. ಆದರೆ ತಂಡದಲ್ಲಿ ಯಾರಿಗೂ ತಿಳಿಸಿರಲಿಲ್ಲ. ತನ್ನ ಕುಟುಂಬದವರಲ್ಲಿ ಹಾಗೂ ಕೆಲವೇ ಮಂದಿ ಆತ್ಮೀಯ ಸ್ನೇಹಿತರಲ್ಲಿ ಹೇಳಿಕೊಂಡಿದ್ದೆ. ವಿದಾಯ ಎನ್ನುವುದು ಯಾವತ್ತೂ ಭಾವುಕವಾಗಿರುತ್ತದೆ. ಕ್ರಿಕೆಟೇ ನನ್ನ ಬದುಕಾಗಿತ್ತು. ನಾನು 10ರ ಹರೆಯದಲ್ಲೇ ಕ್ರಿಕೆಟ್ ಆಡಲಾರಂಭಿಸಿದೆ. 20ಕ್ಕೂ ಹೆಚ್ಚು ವರ್ಷ ನಿರಂತರವಾಗಿ ಈ ಕ್ರೀಡೆಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಇನ್ನು ಮುಂದೆ ನನ್ನ ಬದುಕನ್ನು ಬೇರೆಯದೇ ರೀತಿಯಲ್ಲಿ ಆನಂದಿಸಲು ಹೆಚ್ಚುವರಿ ಸಮಯ ಲಭಿಸಿದಂತಾಗಿದೆ...' ಎಂದು 2005ರ ವಿಶ್ವಕಪ್ ವಿಜೇತ ತಂಡದ ಸದಸ್ಯೆಯೂ ಆಗಿರುವ ಲೀಸಾ ಹೇಳಿದರು.'2005ರ ತಂಡದಲ್ಲಿ ಸಾಕಷ್ಟು 'ಲೆಜೆಂಡ್ಸ್' ಇದ್ದರೆ, ಈಗಿನದು ಪ್ರತಿಭಾನ್ವಿತ ಯುವತಿಯರ ತಂಡ. ಇವರು ದೇಶದ ಕ್ರಿಕೆಟನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದನ್ನು ಕಾಣಲು ನಾನು ಬಯಸುತ್ತೇನೆ. ಹಾಗೆಯೇ ನಾಳಿನ ಕ್ರಿಕೆಟ್ ದಂತಕತೆಗಳೊಂದಿಗೆ ಆಡಿದ ಕ್ಷಣಗಳನ್ನೂ ಮೆಲುಕು ಹಾಕುತ್ತಿರುತ್ತೇನೆ...' ಎಂದರು.ಪುಣೆಯಲ್ಲಿ ಜನನ1979ರ ಆಗಸ್ಟ್ 13ರಂದು ಪುಣೆಯಲ್ಲಿ ಜನಿಸಿದ ಲೀಸಾ ಕಾರ್ಪಿನಿ ಸ್ಥಾಲೇಕರ್ ವನಿತಾ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. 2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಲೀಸಾ 8 ಟೆಸ್ಟ್, 125 ಏಕದಿನ, 54 ಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 416 ರನ್, ಏಕದಿನದಲ್ಲಿ 2,728 ರನ್ ಹಾಗೂ ಟಿ-ಟ್ವೆಂಟಿಯಲ್ಲಿ 769 ರನ್ ಗಳಿಸಿದ್ದಾರೆ. ಹಾಗೆಯೇ ಈ 3 ಪ್ರಕಾರಗಳ ಕ್ರಿಕೆಟ್‌ನಲ್ಲಿ ಕ್ರಮವಾಗಿ 23; 146 ಹಾಗೂ 60 ವಿಕೆಟ್ ಉರುಳಿಸಿದ್ದಾರೆ.ಏಕದಿನದಲ್ಲಿ ಸಾವಿರ ರನ್ ಹಾಗೂ 100 ವಿಕೆಟ್ ಸಂಪಾದಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬುದು ಲೀಸಾ ಪಾಲಿನ ಬಹು ದೊಡ್ಡ ಹೆಗ್ಗಳಿಕೆ. ನಿವೃತ್ತಿಯ ವೇಳೆ ವಿಶ್ವದ ನಂ.1 ಟಿ-20 ಆಲ್‌ರೌಂಡರ್, ನಂ.1 ಬೌಲರ್ ಹಾಗೂ ಏಕದಿನದ ನಂ.2 ಆಲ್‌ರೌಂಡರ್ ಹಾಗೂ ನಂ.2 ಬೌಲರ್ ಆಗಿರುವುದು ಲೀಸಾ ಜನಪ್ರಿಯತೆಗೆ ಸಾಕ್ಷಿ.ತನ್ನನ್ನು ಈ ಎತ್ತರಕ್ಕೆ ಏರಿಸಿದ ಕ್ರಿಕೆಟಿಗೆ ಏನಾದರೂ ಮರಳಿ ನೀಡಿ ಋಣ ಸಂದಾಯ ಮಾಡಬೇಕೆಂಬುದು 'ಕ್ರಿಕೆಟ್ ನ್ಯೂ ಸೌತ್ ವೇಲ್ಸ್' ಪರ ಜೂನಿಯರ್‌ಗಳಿಗೆ ತರಬೇತಿಯನ್ನೂ ನೀಡುತ್ತಿರುವ ಲೀಸಾ ಹಂಬಲ.