Udayavani | Feb 18, 2013
ಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಾದರ್ಶಗಳು ಸಮಾಜದ ಪ್ರತಿಯೋರ್ವರಿಗೂ ಎಲ್ಲ ಕಾಲಕ್ಕೂ ಅನುಕರಣೀಯವಾಗಿವೆ. ಸಮಾಜದ ಸಂಘಟನೆಯೊಂದಿಗೆ ಸಮಾಜದಲ್ಲಿರುವ ಅಶಕ್ತರನ್ನು ಅವರ ಕಷ್ಟದಿಂದ ಮೇಲಕ್ಕೆತ್ತುವ ಜವಾಬ್ದಾರಿ ಎಲ್ಲರದ್ದು ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ನುಡಿದರು.
ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಮತ್ತು ಮಂದಿರ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ ಫೆ. 18ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮಾತನಾಡಿ, ಬಿಲ್ಲವ ಶಕ್ತಿಯ ಪ್ರಭಾವವನ್ನು ಎಲ್ಲೆಡೆ ತೋರಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸಮಾಜದ ಯುವಕರನ್ನು ಮತ್ತು ಮಹಿಳೆಯರನ್ನು ಸಂಘಟಿತರನ್ನಾಗಿಸಿ ಸಮರ್ಪಕ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಸಮಾಜದ ಸಂಘಟನೆಗಳದ್ದಾಗಿದೆ ಎಂದರು.
ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭೋಜ ಅಂಚನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಸಂತ ವಿ. ಸಾಲ್ಯಾನ್, ಉಡುಪಿ ಜಿ.ಪಂ.ನ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಎಲ್ಲೂರು ವಿಶ್ವನಾಥ ಕ್ಷೇತ್ರದ ಆಡಳಿತ ಮೊಕೇಸ್ತರ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಎಲ್ಲೂರು ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರು ಮೌಲಾನಾ ಶೇಖ್ ಮಹಮ್ಮದ್ ಇಬ್ರಿಸ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ - ಕಳತ್ತೂರು, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಂಗಾಧರ ಸುವರ್ಣ, ಜಿ.ಪಂ. ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಗೀತಾಂಜಲಿ ಎಂ. ಸುವರ್ಣ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ, ಡಾ| ಎನ್.ಟಿ. ಅಂಚನ್ ಪಡುಬಿದ್ರಿ, ಸಂಘದ ಗೌರವಾಧ್ಯಕ್ಷ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ಮುದರಂಗಡಿ ಬಿಲ್ಲವ ಸಂಘದ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಂಜೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೋಹನ್ ಕುಮಾರ್ ಕುತ್ಯಾರು ವರದಿ ವಾಚಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸುಂದರಿ ಪೂಜಾರ್ತಿ ವಂದಿಸಿದರು. ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.