Udayavani | Feb 18, 2013
ಮಂಗಳೂರು: ಭವಿಷ್ಯದ ಸುಭದ್ರ, ಪ್ರಗತಿಶೀಲ ವ್ಯವಸ್ಥೆ ರೂಪಿಸಲು ಬ್ಯಾಂಕ್‌ಗಳು ವಿತ್ತೀಯ, ತಾಂತ್ರಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ದೂರದರ್ಶಿತ್ವದೊಂದಿಗೆ ನಿರ್ವಹಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾ|ಮೂ| ಎಂ.ಎನ್. ವೆಂಕಟಾಚಲಯ್ಯ ಕರೆ ನೀಡಿದರು.
ಕರ್ಣಾಟಕ ಬ್ಯಾಂಕಿನ 89ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ಸೋಮವಾರ ಇಲ್ಲಿ ಅವರು ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬ್ಯಾಂಕಿಂಗ್ ಎಂಬ ಬಗ್ಗೆ ಸ್ಥಾಪಕರ ದಿನಾಚರಣಾ ಉಪನ್ಯಾಸವಿತ್ತರು. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ 90 ವರ್ಷಗಳ ಪರಂಪರೆಯ ಕರ್ಣಾಟಕ ಬ್ಯಾಂಕಿನ ಸಾಧನೆ ಅಭಿನಂದನೀಯ ಎಂದು ಅವರು ಶ್ಲಾಘಿಸಿದರು.
ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರ
ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಯನ್ನು ವಿಶ್ಲೇಷಿಸಿದ ಅವರು ಸ್ವಾತಂತ್ರೊÂàತ್ತರದ ಎರಡು ದಶಕಗಳ ಅನಂತರ ದೇಶದಲ್ಲಿ ಬ್ಯಾಂಕಿಂಗ್ ಉದ್ದಿಮೆಗೆ ಭದ್ರ ಬುನಾದಿಯೊಂದು ದೊರಕಿತು. 1969ರಲ್ಲಿ 14 ಹಾಗೂ 1980ರಲ್ಲಿ 6 ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡಿತು. 1969ರಲ್ಲಿ 8,262 ರಷ್ಟಿದ್ದ ಬ್ಯಾಂಕ್ ಶಾಖೆಗಳು 2012ರ ವೇಳೆಗೆ 97,111ಕ್ಕೆ ಏರಿವೆ. ಇದರಲ್ಲಿ 61,289 ಶಾಖೆಗಳು ಗ್ರಾಮೀಣ ಹಾಗೂ ಅರೆಪಟ್ಟಣಗಳಲ್ಲಿವೆ. ಮಾರುಕಟ್ಟೆ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಿಗೆ ಸ್ಥಿತ್ಯಂತರಗೊಂಡಿರುವುದನ್ನು ಇದು ಸೂಚಿಸುತ್ತದೆ. ಇದರ ಪರಿಣಾಮವಾಗಿ 1969ರಲ್ಲಿ 60,000 ಜನಸಂಖ್ಯೆಗೆ ಒಂದರಷ್ಟಿದ್ದ ಶಾಖೆ ಇಂದು 13,000ಕ್ಕೆ ಒಂದಕ್ಕೆ ಮುಟ್ಟಿದೆ ಎಂದರು. ಆದ್ಯತಾ ವಲಯಕ್ಕೆ ಸಾಲ ನೀತಿಯಲ್ಲಿ ಕ್ಷಿಪ್ರ ಬದಲಾವಣೆಗಳು ಆಗಿ 1969ರಲ್ಲಿ ಕೇವಲ 15 ಬಿಲಿಯ ರೂಪಾಯಿಯಷ್ಟು ಇದ್ದ ಸಾಲ ಪ್ರಮಾಣ 2012ರ ವೇಳೆಗೆ 15000 ಬಿಲಿಯ ರೂಪಾಯಿಗೆ ಏರಿದೆ ಎಂದರು.

ವಿಶ್ವದಲ್ಲಿ ತಂತ್ರಜ್ಞಾನಗಳು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿವೆೆ. ಪ್ರಸ್ತುತ ವಿಶ್ವ ಸಿದ್ಧಾಂತಗಳ ಆಧಾರದ ಬದಲು ತಂತ್ರಜ್ಞಾನದ ಆಧಾರದಲ್ಲಿ ಪ್ರತ್ಯೇಕತೆಯನ್ನು ಪಡೆದುಕೊಂಡಿದೆ. ಭೂತಕಾಲ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶಕವಲ್ಲ. ಇಂದಿನ ಪ್ರಗತಿಯ ದರಕ್ಕೆ ಹೋಲಿಸಿದರೆ 20ನೇ ಶತಮಾನದ ಪ್ರಗತಿ 100 ವರ್ಷದ ಪ್ರಗತಿಯಲ್ಲ. ಕೇವಲ 20 ವರ್ಷ ಪ್ರಗತಿ ಎಂದು ಲೆಕ್ಕ ಹಾಕಬಹುದು. 21ನೇ ಶತಮಾನದ ಪ್ರಗತಿ ಗತಿಯನ್ನು ನೋಡಿದರೆ ಇದು 20 ಶತಮಾನಕ್ಕಿಂತ 1,000 ಪಾಲು ಅಧಿಕವಾಗಲಿದೆ ಎಂದವರು ಹೇಳಿದರು.
ಅವಕಾಶಗಳು ಮತ್ತು ಸವಾಲುಗಳು
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿವಿಧ ತಂತ್ರಜ್ಞಾನಗಳು ಪರಿಚಯಿಸಲ್ಪಡುತ್ತಿವೆೆ. ಇದರಲ್ಲಿ ಮೊಬೈಲ್ ಬ್ಯಾಂಕಿಂಗ್ ಮುಂಚೂಣಿಯಲ್ಲಿದೆ. ಭಾರತದಲ್ಲಿ 310 ದಶಲಕ್ಷ ಉಳಿತಾಯ ಖಾತೆಗಳಿವೆ ಎಂದು ಹೇಳಲಾಗುತ್ತಿದೆ. ಗಣನೀಯ ಪ್ರಮಾಣದ ಜನತೆಗೆ ಇನ್ನೂ ಕೂಡ ಬ್ಯಾಂಕಿಂಗ್ ಸೇವೆ ತಲುಪಿಲ್ಲ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ಆದುದರಿಂದ ಬ್ಯಾಂಕಿಂಗ್ ಸೇವೆ ವಿಸ್ತರಣೆಗೆ ವಿಪುಲ ಅವಕಾಶಗಳಿವೆ. ಭಾರತದಲ್ಲಿ 675 ದಶಲಕ್ಷ ಸಕ್ರಿಯ ಮೊಬೈಲ್ ಸಂಪರ್ಕಗಳಿವೆ ಎಂದು ಅಂದಾಜಿಸಲಾಗಿದೆ. ಮೊಬೈಲ್ ಬ್ಯಾಂಕಿಂಗ್ ಒಟ್ಟು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಫೋಟಕ ಪ್ರಗತಿ ಮತ್ತು ಪರಿವರ್ತನೆಗಳನ್ನು ಸೃಷ್ಟಿಸಲಿದೆ. ಮೊಬೈಲನ್ನು ಅನುಸರಿಸು ಇಲ್ಲವೆ ಮಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದವರು ಅಭಿಪ್ರಾಯಪಟ್ಟರು.
ಪ್ರಗತಿಯ ಜತೆಜತೆಗೆ ವಂಚನೆ ಹಾಗೂ ಅಪರಾಧಗಳ ಪ್ರಮಾಣವು ಹೆಚ್ಚಾಗುತ್ತಿದೆ. ಸೈಬರ್ ಕ್ರೈಂಗಳ ಗಂಭೀರ ಬೆದರಿಕೆ ಇದೆ ಎಂದವರು ವಿಶ್ಲೇಷಿಸಿದರು.
ಆಶಯಗಳ ಸಾಕಾರ: ಅನಂತಕೃಷ್ಣ
ಬದ್ಧತೆ, ಪ್ರಾಮಾಣಿಕ ಸೇವೆಯ ಮೂಲಕ ಕರ್ಣಾಟಕ ಬ್ಯಾಂಕ್ ನಿರಂತರ ಪ್ರಗತಿಪಥದಲ್ಲಿ ಮುನ್ನಡೆಯುತ್ತಾ ಸ್ಥಾಪಕರ ಆಶಯಗಳ ಸಾಕಾರದಲ್ಲಿ ಯಶಸ್ವಿಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ವಿವರಿಸಿದರು.
ಯಶಸ್ವಿ ಮತ್ತು ಸಾರ್ಥಕ ಸೇವೆಯ 89 ವರ್ಷಗಳನ್ನು ಪೂರೈಸಿ 90ನೇ ವರ್ಷಕ್ಕೆ ಬ್ಯಾಂಕ್ ಪಾದಾರ್ಪಣೆ ಮಾಡುತ್ತಿದೆ. ಸ್ಥಾಪಕರ ದೂರದರ್ಶಿತ್ವ ಮತ್ತು ಹಾಕಿಕೊಟ್ಟ ಭದ್ರ ಬುನಾದಿ, ಅಧ್ಯಕ್ಷರು ಹಾಗೂ ನಿರ್ದೇಶಕರ ದಕ್ಷ ಮಾರ್ಗದರ್ಶನ, ಗ್ರಾಹಕರು, ಶೇರುದಾರರ ಪೋತ್ಸಾಹ, ಸಿಬಂದಿಗಳ ಶ್ರಮದ ಫಲವಾಗಿ ಕರ್ಣಾಟಕ ಬ್ಯಾಂಕ್ ಎಲ್ಲ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ ಎಂದರು.
65,000 ಕೋ.ರೂ. ವ್ಯವಹಾರ ಗುರಿ: ಪಿ. ಜಯರಾಮ್ ಭಟ್
ಸ್ವಾಗತಿಸಿ ಪ್ರಸ್ತಾವನೆಗೈದ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್ ಅವರು, ಕರ್ಣಾಟಕ ಬ್ಯಾಂಕ್ 524 ಶಾಖೆಗಳು ಹಾಗೂ 476 ಎಟಿಎಂಗಳು ಸೇರಿದಂತೆ 1,000 ಸೇವಾ ಕೇಂದ್ರಗಳನ್ನು ಹೊಂದಿದೆ. 2013ರ ಮಾರ್ಚ್ ಅಂತ್ಯದ ವೇಳೆಗೆ ಶಾಖೆಗಳ ಸಂಖ್ಯೆಯನ್ನು 550ಕ್ಕೆ ಹಾಗೂ ಒಟ್ಟು ವ್ಯವಹಾರವನ್ನು 65,000 ಕೋ.ರೂ.ಗೆ ಏರಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. 68 ಲಕ್ಷ ಗ್ರಾಹಕರನ್ನು ಬ್ಯಾಂಕ್ ಹೊಂದಿದೆ ಎಂದು ವಿವರಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಅರ್ಪಣಾ ಸೇವೆಯ ಹೆಗ್ಗಳಿಕೆ
ಕರ್ಣಾಟಕ ಬ್ಯಾಂಕ್ 89 ವರ್ಷಗಳ ಅರ್ಪಣಾ ಸೇವೆಯ ಹೆಗ್ಗಳಿಕೆಯನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಬಲಿಷ್ಠಗೊಳ್ಳುತ್ತಾ ಬಂದಿದೆ. ಬ್ಯಾಂಕಿನ ಪ್ರಗತಿಪಥಕ್ಕೆ ಮಾರ್ಗದರ್ಶನ ನೀಡಿದ ಸ್ಥಾಪಕರನ್ನು ಹಾಗೂ ನಿಷ್ಠಾವಂತ ವೃತ್ತಿಪರರ ಯಶಸ್ವಿ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಮರ್ಪಣಾ ಮನೋಭಾವದ ವೃತ್ತಿಪರ ಬ್ಯಾಂಕರ್‌ಗಳನ್ನು ಒಳಗೊಂಡಿರುವ ಪ್ರಸ್ತುತ ಆಡಳಿಮಂಡಳಿ ಉತ್ಕೃಷ್ಟ ಮಟ್ಟದ ದಕ್ಷತೆ ಹಾಗೂ ಮೌಲ್ಯಗಳೊಂದಿಗೆ ಬ್ಯಾಂಕನ್ನು ಇನ್ನಷ್ಟು ಎತ್ತರಕ್ಕೇರಿಸುವಲ್ಲಿ ಸಫಲತೆಯನ್ನು ಪಡೆದಿದೆ. ದೇಶಾದ್ಯಂತ 524 ಶಾಖೆಗಳು, 1,16,060 ಶೇರುದಾರರು, 68 ಲಕ್ಷ ಗ್ರಾಹಕರು ಹೊಂದಿದ್ದು ಸಾಧನೆಯನ್ನು ಅಭಿನಂದಿಸುತ್ತಿದ್ದೇನೆ ಎಂದು ನ್ಯಾ| ವೆಂಕಟಾಚಲಯ್ಯ ಹೇಳಿದರು.
ಕರ್ಣಾಟಕ ಹೆಸರಿನ ಹಿಂದೆ
ಕರ್ಣಾಟಕ ಬ್ಯಾಂಕ್ ಎಂದು ಹೇಗೆ ನಾಮಕರಣವಾಯಿತು ಎಂದು ಬಹಳಷ್ಟು ಮಂದಿ ನನ್ನಲ್ಲಿ ವಿಚಾರಿಸಿದ್ದುಂಟು. ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಳ್ಳುವ ಮೊದಲೇ 50 ವರ್ಷಗಳ ಹಿಂದೆ ಕರ್ಣಾಟಕ ಬ್ಯಾಂಕ್ ಸ್ಥಾಪನೆಯಾಗಿತ್ತು.
ಇದು ಸ್ಥಾಪಕರ ದೂರದರ್ಶಿತ್ವ, ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ. ಈಗಿನ ಕಾಸರಗೋಡು, ದ.ಕ. ಹಾಗೂ ಉಡುಪಿ ಸೇರಿ ಸೌತ್ ಕೆನರಾ ಎಂದು ಕರೆಯಲ್ಪಡುತ್ತಿತ್ತು ಮತ್ತು ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ಈ ಪ್ರಾಂತ್ಯದಲ್ಲಿ ಬಹಳಷ್ಟು ಆರ್ಥಿಕ ಸಂಸ್ಥೆಗಳು ಕೆನರಾ ಹೆಸರಿನಲ್ಲಿ ಸ್ಥಾಪನೆಯಾಗಿತ್ತು. ಕಿಟೆಲ್ ಅವರು ತಾನು ರಚಿಸಿರುವ ಶಬ್ದಕೋಶದಲ್ಲಿ ಕನ್ನಡ ಮಾತನಾಡುವ ಪ್ರದೇಶವನ್ನು ಕರ್ಣಾಟ ದೇಶ ಎಂದು ನಮೂದಿಸಿದ್ದರು. ಕನ್ನಡ ಮಾತನಾಡುವ ಪ್ರದೇಶಗಳನ್ನು ಸಮಗ್ರವಾಗಿ ವ್ಯಾಪಿಸುವ ದೃಷ್ಟಿಯಲ್ಲಿಟ್ಟುಕೊಂಡು ಕರ್ಣಾಟಕ ಬ್ಯಾಂಕ್ ಎಂಬುದಾಗಿ ನಾಮಕರಣಗೊಂಡಿತು ಎಂಬುದಾಗಿ ನಾನು ಕಂಡುಕೊಂಡ ಅಂಶಗಳಿಂದ ತಿಳಿದುಕೊಂಡಿದ್ದೇನೆ ಎಂದು ಅನಂತಕೃಷ್ಣ ವಿವರಿಸಿದರು.