ಎಸ್. ಲಕ್ಷ್ಮೀನಾರಾಯಣ | Feb 18, 2013
ಬೆಂಗಳೂರು: ಅಕ್ಕಿ ಬೆಲೆ ಗಗನಕ್ಕೇರಿರುವುದು ಹಾಗೂ 2 ರೂ. ದರದಲ್ಲಿ ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದೀಗ ಪಡಿತರ ಚೀಟಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಒತ್ತಡ ತಾಳಲಾರದ ಆಹಾರ ಮತ್ತು ನಾಗರೀಕ ಇಲಾಖೆಯು ಮತ್ತೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಲು ಸಜ್ಜಾಗಿದೆ.
ಏಕೆಂದರೆ, ಪಡಿತರ ಚೀಟಿ ಎಂದರೆ ತಾತ್ಸಾರ ಭಾವನೆ ಹೊಂದಿದ್ದವರೂ ಕೂಡ ಈಗ ಅದನ್ನು ಪಡೆದುಕೊಳ್ಳಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಗೆ ಎಡತಾಕುತ್ತಿದ್ದು, ಬಿಪಿಎಲ್ ಕಾರ್ಡ್‌ಗಳಿಗಷ್ಟೇ ಅಲ್ಲದೆ ಎಪಿಎಲ್ ಕಾರ್ಡ್‌ಗಳಿಗೂ ಬೇಡಿಕೆ ಉಂಟಾಗಿದೆ. ಆದ್ದರಿಂದ ಎರಡನೇ ಹಂತದಲ್ಲಿ ಆನ್‌ಲೈನ್ ನೋಂದಣಿ ಪ್ರಾರಂಭಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಜ್ಜಾಗುತ್ತಿದ್ದು, ರಾಜ್ಯದಲ್ಲಿ ಇನ್ನೂ ಸುಮಾರು 7 ರಿಂದ 8 ಲಕ್ಷ ಕುಟುಂಬಗಳು ಪಡಿತರ ಕಾರ್ಡ್ ಪಡೆಯದ ಅಂದಾಜು ಮಾಡಲಾಗಿದೆ.
ಆನ್‌ಲೈನ್ ನೋಂದಣಿ ಪ್ರಕ್ರಿಯೆಗೆ ಪೂರ್ವಬಾವಿಯಾಗಿ ಸಾಫ್ಟ್ವೇರ್ ಟೆಸ್ಟಿಂಗ್ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ನೋಂದಣಿ ಪ್ರಾರಂಭಿಸಲಾಗುವುದು. ಎರಡನೇ ಹಂತದ ನೋಂದಣಿಗೆ ಕಾಲ-ಮಿತಿ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಹರೀಶ್‌ಗೌಡ ತಿಳಿಸುತ್ತಾರೆ.
ಆನ್‌ಲೈನ್ ಮೂಲಕ ಮಾತ್ರ ನೋಂದಣಿಗೆ ಅವಕಾಶವಿರಲಿದೆ. ಆನ್‌ಲೈನ್ ಮೂಲಕವಾದರೂ ಯಾವುದೇ ತೊಂದರೆ ಇಲ್ಲದೆ ನೋಂದಣಿ ಮಾಡ ಬಹುದಾದ ಸರಳೀಕರಣ ವ್ಯವಸ್ಥೆ ರೂಪಿಸಲಾಗುವುದು ಎಂದು ಅವರು ಹೇಳುತ್ತಾರೆ.
ಬೋಗಸ್
ಆನ್‌ಲೈನ್ ಮೂಲಕ ಹೊಸ ಕಾರ್ಡ್‌ಗಳ ವಿತರಣೆಯ ಜತೆಗೆ ಬೋಗಸ್ ಕಾರ್ಡ್‌ಗಳ ಪತ್ತೆ ಕಾರ್ಯವನ್ನೂ ಆಹಾರ ಮತ್ತು ನಾಗರಿಕ ಇಲಾಖೆ ಆರಂಭಿಸಿದೆ.
ಈಗಾಗಲೇ 50 ಲಕ್ಷ ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇನ್ನೂ 10 ಲಕ್ಷ ಬೋಗಸ್ ಕಾರ್ಡ್‌ಗಳಿರುವ ಅಂದಾಜು ಮಾಡಲಾಗಿದೆ. ಅವುಗಳನ್ನೂ ಪತ್ತೆ ಹಚ್ಚಿ ರದ್ದುಪಡಿಸಲಾಗುವುದು. ಪಡಿತರ ವಿತರಣೆ ಮಳಿಗೆಗಳಲ್ಲಿ ಪಡಿತರ ಕಾರ್ಡ್‌ದಾರರ ಕುಟುಂಬದ ವಿವರ ಒಳಗೊಂಡ ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸುತ್ತಿರುವುದರಿಂದ ಬೋಗಸ್ ಕಾರ್ಡ್ ಪತ್ತೆ ಹಚ್ಚಲು ನೆರವಾಗಲಿದೆ. ಪಡಿತರ ಪಡೆಯಲು ಬರುವವರು ಬೆಳರಚ್ಚು ದಾಖಲಿಸುವುದು ಕಡ್ಡಾಯವಾಗಲಿದ್ದು ನಕಲಿ ಕಾರ್ಡ್ ಹೊಂದಿರುವವರು ಪಡಿತರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್.ಜೀವರಾಜ್ ತಿಳಿಸುತ್ತಾರೆ.
ಹೊಸ ಕಾರ್ಡ್‌ಗಳ ವಿತರಣೆ ಮಾಡುವಂತೆ ರಾಜ್ಯದ ಎಲ್ಲ ಕಡೆಗಳಿಂದಲೂ ಬೇಡಿಕೆಯಿದೆ. ಹೀಗಾಗಿ ಮತ್ತೆ ನೋಂದಣಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಫೆಬ್ರವರಿ ಮಾಸಾಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಆನ್‌ಲೈನ್ ನೋಂದಣಿ ಪ್ರಾರಂಭಗೊಳ್ಳಲಿದೆ ಎಂದು ಅವರು ಹೇಳುತ್ತಾರೆ.
ಜನಗಣತಿ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಕುಟುಂಬಗಳ ಸಂಖ್ಯೆ 1.32 ಕೋಟಿ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿತರಿಸಿರುವ ಪಡಿತರ ಕಾರ್ಡ್‌ಗಳ ಸಂಖ್ಯೆ 1,35,51,275. ಇದರಲ್ಲಿ 8 ರಿಂದ 10 ಲಕ್ಷ ಬೋಗಸ್ ಕಾರ್ಡ್‌ಗಳಿರಬಹುದು ಎಂದು ಅಂದಾಜಿಸಲಾಗಿದೆ.
ಇದರ ನಡುವೆ ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ 31.09 ಲಕ್ಷ ಅರ್ಜಿ ಸ್ವೀಕರಿಸಲಾಗಿತ್ತಾದರೂ ಸಮರ್ಪಕ ದಾಖಲೆ ಕೊರತೆ ಹಾಗೂ ಇತರೆ ಕಾರಣಗಳಿಗಾಗಿ 18.64 ಲಕ್ಷ ಅರ್ಜಿ ತಿರಸ್ಕರಿಸಿ 8.05 ಲಕ್ಷ ಪಡಿತರ ಚೀಟಿ ವಿತರಿಸಲಾಗಿದೆ. 3.8 ಲಕ್ಷ ಪಡಿತರ ಚೀಟಿಗಳು ವಿತರಣೆಗೆ ಸಿದ್ಧವಾಗಿವೆ. ಇನ್ನೂ 51 ಸಾವಿರ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ.
ಡಿಮ್ಯಾಂಡ್ ಯಾಕೆ?
*ಬಿಪಿಎಲ್ ಕಾರ್ಡ್‌ದಾರರಿಗೆ ಪ್ರಸ್ತುತ ಪ್ರತಿ ಕೆಜಿ 3 ರೂ. ದರದಲ್ಲಿ ಯೂನಿಟ್‌ಗೆ (ಕುಟುಂಬದ ಸದಸ್ಯರ ಸಂಖ್ಯೆ ಆಧರಿಸಿ)4 ಕೆಜಿ ನೀಡಲಾಗುತ್ತಿದೆ. ಏಪ್ರಿಲ್‌ನಿಂದ 2 ರೂ. ದರದಲ್ಲಿ ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಎಪಿಎಲ್ ಕಾರ್ಡ್‌ದಾರರಿಗೆ ತಿಂಗಳಿಗೆ ಪ್ರತಿ ಕೆಜಿ 10 ರೂ. ದರದಲ್ಲಿ 9 ಕೆಜಿ ನೀಡಲಾಗುತ್ತಿದ್ದು ಅದನ್ನು 13 ಕೆಜಿಗೆ ಏರಿಸುವ ಬಗ್ಗೆಯೂ ಚಿಂತನೆಯಿದೆ. ಪಡಿತರ ಅಕ್ಕಿ ಎಂದು ಮೂಗು ಮುರಿಯುತ್ತಿದ್ದವರೂ ಇದೀಗ ಬೆಲೆ ಏರಿಕೆಯಿಂದ ಇಡ್ಲಿ, ದೋಸೆ, ರೊಟ್ಟಿ, ನುಚ್ಚುಗಾದರೂ ಬಳಕೆ ಮಾಡಿಕೊಳ್ಳಬಹುದು ಎಂದು ಕಾರ್ಡ್ ಪಡೆಯಲು ಮುಂದಾಗಿದ್ದಾರೆ.