ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೇ ಮೆಟ್ಟಿಲನ್ನಾಗಿಸಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯತಾಯ ಮತ್ತೂಮ್ಮೆ ಜಯಭೇರಿ ಬಾರಿಸುವ ಸಂಬಂಧ ಆಡಳಿತಾರೂಢ ಬಿಜೆಪಿಯ ಮಹತ್ವದ ಸಭೆ ಮಂಗಳವಾರ ನಡೆಯಲಿದೆ.ಮಧ್ಯಾಹ್ನ 2.30ಕ್ಕೆ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ ಈ ಸಭೆ ನಡೆಯಲಿದ್ದು, ಹಿರಿಯ ನಾಯಕರೂ ಸೇರಿದಂತೆ ಎಲ್ಲ ಸಚಿವರು ಹಾಗೂ ಪಕ್ಷದ ಸಂಸದರು ಪಾಲ್ಗೊಳ್ಳಲಿದ್ದಾರೆ.ಶನಿವಾರ ಶಾಸಕರು, ಸಂಸದರು ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ್ದ ಬಿಜೆಪಿ ನಾಯಕರು, ಮಂಗಳವಾರದ ಸಭೆಯಲ್ಲಿ ಚುನಾವಣಾ ಪ್ರಚಾರ ತಂತ್ರಗಳನ್ನು ರೂಪಿಸುವ ಸಾಧ್ಯತೆಯಿದೆ. ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಚಿವರು ಹಾಗೂ ಸಂಸದರ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಹೊರಿಸುವ ಸಂಭವವೂ ಇದೆ.