Thursday, June 20, 2013
Last Updated: 12:15:14 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವೀರಶೈವ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣ
      • Udayavani | Feb 18, 2013

        ಒಗ್ಗಟ್ಟಿನಿಂದ ಮಾತ್ರ ಸಮಾಜಕ್ಕೆ ಯಶಸ್ಸು: ಮಾಜಿ ಸಿಎಂ ಬಿ.ಎಸ್‌.ವೈ

        ಹಗರಿಬೊಮ್ಮನಹಳ್ಳಿ:
        ಯಾವುದೇ ಸಮುದಾಯಕ್ಕೆ ಸಂಘಟನೆ, ಹೋರಾಟ ಮತ್ತು ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

        ಪಟ್ಟಣದ ಹರ ದೇಗುಲದ ಬಳಿ ನಡೆದ ವೀರಶೈವ ಪಂಚಮಸಾಲಿ ಜಗದ್ಗುರುಗಳ 5 ನೇ ಪೀಠಾರೋಹಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಸಮಾಜವನ್ನು ಒಡೆಯುವ ಕೆಲಸಗಳು ಎಲ್ಲ ಕಡೆಗಳಿಂದಲೂ ನಡೆಯುತ್ತಲೇ ಇವೆ. ಪಂಚಮಸಾಲಿ ಸಮಾಜ ಒಗ್ಗಟ್ಟಿನಿಂದಲೇ ಯಶಸ್ಸು ಸಾಧಿಸುತ್ತಾ ಬಂದಿದೆ. ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜದ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಸಾಹಸ, ಕಿಚ್ಚು, ಹೋರಾಟ ಮನೋಭಾವ, ಸಂಘಟನಾ ಶಕ್ತಿಯನ್ನು ಇಂದಿಗೂ ಕಾಣಬಹುದಾಗಿದೆ. ಸಮಾಜದ ಪರಿವರ್ತನೆ ಮಹಿಳೆಯರಿಂದ ಮಾತ್ರ ಸಾಧ್ಯ. ನಾಡಿನಲ್ಲಿ ಧರ್ಮ ಸಂಸ್ಕೃತಿ, ಆಚಾರ, ವಿಚಾರ ಉಳಿದಿರಲು ಮಹಿಳೆಯರು ಪ್ರತಿದಿನ ಮಾಡುವ ಪೂಜಾ ಪುನಸ್ಕಾರಗಳು ಕಾರಣ. ಪಂಚಮಸಾಲಿಯಂತಹ ಬಲಾಡ್ಯ ಸಮಾಜ ತುಳಿತಕ್ಕೊಳಗಾದ ದುರ್ಬಲರ ಅಭಿವೃದ್ಧಿ ಮಾಡಲಿ ಎಂದರು.

        12 ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜವಾದದ ನಾಡು ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಶರಣರು ನುಡಿದಂತೆ ನಡೆದರು. ನಡೆದು ತೋರಿಸಿ ಆದರ್ಶದ ದಾರ್ಶನಿಕರಾಗಿದ್ದರು. ಜರ್ಮನ್‌ ದೇಶದ ಶ್ರೇಷ್ಠ ಲೇಖಕ ಮಾರ್ಕ್ಸ್ವೆಲ್‌ ಭಾರತದ ಕಾವಿ ಪರಂಪರೆ ಬಗ್ಗೆ ವಿಶೇಷ ಗೌರವದ ಮಾತುಗಳನ್ನಾಡಿದ್ದಾನೆ. ಶಕ್ತಿ ಇರುವುದನ್ನು ಬರೆದಿದ್ದಾನೆ. ಪ್ರಪಂಚದಲ್ಲೇ ಭಾರತೀಯ ಸಂಸ್ಕ ೃತಿ ವಿಶಿಷ್ಟವಾದದ್ದು ಎಂಬುದಕ್ಕೆ ಇದೊಂದು ನಿದರ್ಶನ. ಅದರಲ್ಲೂ ಕರ್ನಾಟಕದಲ್ಲಿರುವ ವೀರಶೈವ ಧರ್ಮ ಸಮಾನತೆಯನ್ನು, ಪುರಷರಂತೆ ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಿದ್ದನ್ನು ಕಾಣಬಹುದಾಗಿದೆ ಎಂದು ಹೇಳಿದರು.

        ನಾನು ಸಾಮಾನ್ಯ ಮಾಜಿ ಶಾಸಕ: ಮಾಜಿ ಶಾಸಕನಾದ ತನಗೆ ರಾಜ್ಯದ ಬಹುದೊಡ್ಡ ಪಂಚಮಸಾಲಿ ಸಮಾಜ ಪೀಠಾರೋಹಣ ವರ್ಷಾಚರಣೆ ಸಮಾರಂಭದ ಉದ್ಘಾಟನೆ ಕಾರ್ಯ ನೀಡಿದ್ದಕ್ಕಾಗಿ ಸಮಾಜಕ್ಕೆ ಸದಾ ಋಣಿಯಾಗಿರುತ್ತೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಪಂಚಮಸಾಲಿ ಸಮಾಜದ ಜೊತೆಯಲ್ಲಿರುವುದಾಗಿ, ತಾನು ಮುಖ್ಯಮಂತ್ರಿಯಾಗಿದ್ದಾಗ ಎರಡು ಹೆಜ್ಜೆ ಮುಂದೆ ಹೋಗಿ ಈ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು.

        ರಾಜ್ಯದಲ್ಲಿರುವ ಯಾವುದೇ ನೀರಾವರಿ ಯೋಜನೆಗಳು ಫಲಪ್ರದವಾಗಬೇಕೆಂದಿದ್ದಲ್ಲಿ ನದಿ ನೀರು ಸಮುದ್ರಸೇರಿ ಪೋಲಾಗಬಾರದು, ಪ್ರತಿ ಹನಿಯೂ ಸದ್ಬಳಕೆಯಾಗಬೇಕು. ಕೆರೆಕಟ್ಟೆಗಳು ತುಂಬಿ ಅಂತರ್ಜಲ ಅಭಿವೃದ್ಧಿಯಾಗಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಮಾಲವಿ ಜಲಾಶಯಕ್ಕೆ ನೀರು ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

        ಶಿಳ್ಳೆ ಕೇಕೆ: ಮಾಜಿ ಸಿಎಂ ಯಡಿಯೂರಪ್ಪ ವೇದಿಕೆಯತ್ತ ಆಗಮಿಸುತ್ತಿದ್ದಂತೆಯೇ ಚಪ್ಪಾಳೆ ಶಿಳ್ಳೆ ಕೇಕೆ ಕರತಾಡನದ ಮೂಲಕ ಜನ ಸ್ವಾಗತ ಕೋರಿದರು.

        ಶೋಭಾ ಮೇಡಂ ಮಾತನಾಡ್ರಿ: ಕಾರ್ಯಕ್ರಮದಲ್ಲಿ ಹಾಜರಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಭಾಷಣ ಮಾಡದೆ ನೆರೆದ ಬಹುತೇಕರಿಗೆ ನಿರಾಶೆ ಮೂಡಿಸಿದರು. ಅಭಿಮಾನಿಗಳು ಮಾತನಾಡಬೇಕೆಂದು ಒತ್ತಾಯಿಸಿದರಾದರೂ, ಸಮಯದ ಅಭಾವದಿಂದ ಮಾತನಾಡದೆ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ನಿರ್ಗಮಿಸಿದರು.

        ಶಾಸಕ ನೇಮಿರಾಜನಾಯ್ಕ, ಪಂಚಮಸಾಲಿ ಸಮಾಜದ ಸೇವೆಗೆ ಬದ್ಧ, ಸದಾ ಸಿದ್ಧ ಎಂದರು. ಸಮಾಜದ ಅಧ್ಯಕ್ಷ ಬಸವರಾಜ ದಿಂಡೂರು ಮುಂದಿನ ದಿನಗಳಲ್ಲಿ ಪಂಚಮಸಾಲಿ ವಿಭಾಗೀಯ ಪೀಠಗಳನ್ನು ಸ್ಥಾಪಿಸುವ ಕುರಿತ ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ತಮ್ಮದೆ ಸಮುದಾಯದ ನಾಯಕರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದರು. ನಿಕಟಪೂರ್ವ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ತಾಲೂಕಿನ ಮಾಲವಿ ಜಲಾಶಯಕ್ಕೆ ನೀರು ತರುವ ಕುರಿತಂತೆ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾವುದು. ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸುವುದು, ಕೇಂದ್ರ ಸರ್ಕಾರದಲ್ಲಿ ಓಬಿಸಿಗೆ ಸೇರಿಸುವುದು ಪ್ರಮುಖ ಬೇಡಿಕೆಯಾಗಿದ್ದು ಇದಕ್ಕಾಗಿ ಶ್ರಮಿಸುವುದಾಗಿ ಹೇಳಿದರು.

        ಸಮಾಜದ ಹರಿಹರ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಧ್ವಜಾರೋಹಣ ನೆರವೇರಿಸಿ, ಮಾಜಿ ಸಿಎಂ ಯಡಿಯೂರಪ್ಪರಿಗೆ ಗೌರವ ಸನ್ಮಾನ ಮಾಡಿದರು. ಜಿಲ್ಲಾಧ್ಯಕ್ಷ ಬಪ್ಪಖಾನ್‌ ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್‌, ಕಾರ್ಯದರ್ಶಿ ಯು.ಪಿ. ವೀರನಗೌಡ ಉಪಸ್ಥಿತರಿದ್ದರು. ಪ್ರೊ|ಶೈಲಜಾ ಶಿವಕುಮಾರ್‌ ನಿರ್ವಹಿಸಿದರು.

        ವೀರಶೈವ ಪಂಚಮಸಾಲಿ ಸಮಾಜದ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳ 5ನೇ ವರ್ಷದ ಪೀಠಾರೋಹಣ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯಿತು. ಅನೇಕ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಪಾಲ್ಗೊಂಡು ಶ್ರೀಗಳಿಗೆ ಹೂಮಳೆಗೈದರು.

        ತರಳಬಾಳು ಜಗದ್ಗುರು ಡಾ|ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಕನಕಗುರು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಆರೂಢಮಠದ ಮಾತೆ ಯೋಗೀಶ್ವರಿ ತಾಯಿ ದಿವ್ಯ ನೇತೃತ್ವ ವಹಿಸಿದ್ದರು. ಸಮಾಜದ ಸಂಸ್ಥಾಪಕ ಅಧ್ಯಕ್ಷ ಪ್ರೊ|ಬಿ.ಎಂ. ಹನುಮನಾಳ, ರಾಜ್ಯ ಉಪಾಧ್ಯಕ್ಷ ಬಿ.ನಾಗನಗೌಡ, ಪ್ರಧಾನ ಕಾರ್ಯದರ್ಶಿ ವಿ.ಆರ್‌. ತೋಟದ್‌ ಇತರರು ಇದ್ದರು.

        ಇದಕ್ಕೂ ಮೊದಲು ಜಗದ್ಗುರುಗಳನ್ನು ಬೆಳ್ಳಿಯ ಅಶ್ವಾರೂಢ ರಥದಲ್ಲಿ ಕುಳ್ಳಿರಿಸಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

        ಈ ಸಂದರ್ಭದಲ್ಲಿ ಅನೇಕ ವಾದ್ಯವೃಂದಗಳು, ಜಾನಪದ ಮೇಳಗಳು ಪಾಲ್ಗೊಂಡಿದ್ದವಲ್ಲದೆ, ಮಹಿಳೆಯರು ಕಳಸ ಕುಂಭ ಹೊತ್ತು ಹೆಜ್ಜೆ ಹಾಕಿದರು. ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus