Wednesday, May 22, 2013
Last Updated: 1:59:53 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಡಿವಿಎಸ್‌ ಮನವೊಲಿಸಲು ಬಿಜೆಪಿ ಕಸರತ್ತು
    • ಬಿಜೆಪಿ ಹಿರಿಯ ನಾಯಕರಿಂದ ಸಮಸ್ಯೆ ಬಗೆಹರಿಸುವ ಭರವಸೆ

      • Udayavani | Feb 18, 2013

        ಪಕ್ಷದಲ್ಲಿ ಮೂಲೆಗುಂಪು ಮಾಡಿರುವ ಬಗ್ಗೆ ಸದಾನಂದಗೌಡ ಅತೃಪ್ತಿ ಹಿನ್ನೆಲೆ

        ಬಿಜೆಪಿ ಹಿರಿಯ ನಾಯಕರಿಂದ ಸಮಸ್ಯೆ ಬಗೆಹರಿಸುವ ಭರವಸೆ

        ಬೆಂಗಳೂರು:
        ಪಕ್ಷದೊಳಗೆ ತಮ್ಮನ್ನು ಮೂಲೆಗುಂಪು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಉಂಟಾಗಿರುವ ಅಸಮಾಧಾನವನ್ನು ನಿವಾರಿಸುವ ಪ್ರಯತ್ನ ಆಡಳಿತಾರೂಢ ಬಿಜೆಪಿಯಲ್ಲಿ ಆರಂಭವಾಗಿದೆ.

        ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ವಿ.ಸತೀಶ್‌ ಸೋಮವಾರ ನಗರದ ಪಕ್ಷದ ಕೇಂದ್ರ ಕಚೇರಿಯಲ್ಲಿ ಸದಾನಂದಗೌಡರನ್ನು ಕರೆಸಿಕೊಂಡು ಸುದೀರ್ಘ‌ ಸಮಾಲೋಚನೆ ನಡೆಸಿದ್ದು, ಶೀಘ್ರದಲ್ಲೇ ಪರಿಹರಿಸುವ ಭರವಸೆಯನ್ನೂ ನೀಡಿದ್ದಾರೆ.

        ಪ್ರಸಕ್ತ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ತನ್ನ ನೆಲೆ ಉಳಿಸಿಕೊಳ್ಳುವುದು ಬಿಜೆಪಿಗೆ ಅಗತ್ಯವಾಗಿದೆ. ಹೀಗಿರುವಾಗ ಆ ಭಾಗದ ಹಿರಿಯ ನಾಯಕರಾಗಿರುವ ಸದಾನಂದಗೌಡರನ್ನು ಸಮಾಧಾನಪಡಿಸುವುದು ಕೂಡ ಮುಖ್ಯ ಎಂಬ ನಿಲುವಿಗೆ ಪಕ್ಷದ ವರಿಷ್ಠರು ಬಂದಿದ್ದಾರೆ.

        ಆದರೆ, ಕಳೆದ ಹಲವು ದಿನಗಳಿಂದ ಸದಾನಂದಗೌಡರನ್ನು ಪಕ್ಷದ ಪ್ರಮುಖ ನಿರ್ಧಾರಗಳಿಂದ ದೂರ ಇಡುತ್ತಿರುವ ರಾಜ್ಯ ಬಿಜೆಪಿಯ ಇತರ ನಾಯಕರು ಅಷ್ಟು ಸುಲಭವಾಗಿ ವರಿಷ್ಠರ ನಿಲುವಿಗೆ ಸ್ಪಂದಿಸಿ ಸಹಕರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

        ಹಾಗಂತ ಸದಾನಂದಗೌಡರು ಬಿಜೆಪಿ ತೊರೆದು ಬೇರೊಂದು ಪಕ್ಷಕ್ಕೆ ವಲಸೆ ಹೋಗುವ ಮನಸ್ಥಿತಿ ಹೊಂದಿಲ್ಲ. ಪಕ್ಷದಲ್ಲಿನ ಗೊಂದಲಗಳು ಸರಿಹೋಗುತ್ತವೆ ಎಂಬ ವಿಶ್ವಾಸ ಹೊಂದಿದ್ದಾರೆ. ತಮ್ಮ ಅತೃಪ್ತಿಯನ್ನು ಪಕ್ಷದ ಇತರ ವರಿಷ್ಠ ನಾಯಕರ ಗಮನಕ್ಕೂ ತರಲು ಗೌಡರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

        ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಸದಾನಂದಗೌಡರಿಗೆ ರಾಜ್ಯಾಧ್ಯಕ್ಷ ಅಥವಾ ಬೇರೊಂದು ಪ್ರಮುಖ ಸ್ಥಾನದ ಜವಾಬ್ದಾರಿ ನೀಡುವ ಭರವಸೆ ಪಕ್ಷದ ವರಿಷ್ಠರಿಂದ ಲಭಿಸಿತ್ತು. ಆ ಪ್ರಕಾರ ವರಿಷ್ಠರು ಗೌಡರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಒಲವು ತೋರುತ್ತಿದ್ದಂತೆಯೇ ರಾಜ್ಯ ಬಿಜೆಪಿ ನಾಯಕರು ಪ್ರತಿರೋಧ ವ್ಯಕ್ತಪಡಿಸತೊಡಗಿದರು. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವಂತೆ ವರಿಷ್ಠರ ಮೇಲೆ ಒತ್ತಡವನ್ನೂ ತರತೊಡಗಿದರು.

        ಅಂದಿನಿಂದ ಪಕ್ಷದ ಸಂಘಟನೆ ಹಾಗೂ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ಸದಾನಂದಗೌಡರ ಅಭಿಪ್ರಾಯಕ್ಕೆ ರಾಜ್ಯ ಬಿಜೆಪಿ ನಾಯಕರು ಮನ್ನಣೆಯನ್ನೇ ನೀಡಲಿಲ್ಲ. ಅನೇಕ ನಿರ್ಧಾರಗಳನ್ನು ಗೌಡರನ್ನು ಹೊರಗಿಟ್ಟು ತೆಗೆದುಕೊಂಡರು ಎನ್ನಲಾಗಿದೆ.

        ಅಧ್ಯಕ್ಷ ಸ್ಥಾನ ನೀಡುವುದಾಗಿ ನಂತರ ಹಿಂದೆ ಸರಿಯುತ್ತಿರುವುದರ ಬಗ್ಗೆಯೇ ಬೇಸರಗೊಂಡಿದ್ದ ಸದಾನಂದಗೌಡರು ಪಕ್ಷದ ಪ್ರಮುಖ ನಿರ್ಧಾರಗಳಲ್ಲೂ ತಮ್ಮನ್ನು ನಿರ್ಲಕ್ಷಿಸುತ್ತಿರುವುದರ ಬಗ್ಗೆ ಮತ್ತಷ್ಟು ನೊಂದುಕೊಂಡರು ಎಂದು ಅವರ ಆಪ್ತರು ತಿಳಿಸಿದ್ದಾರೆ.

        ಹೀಗಾಗಿಯೇ ಶನಿವಾರ ನಗರದ ಅರಮನೆ ಮೈದಾನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪಕ್ಷದ ಶಾಸಕರು, ಸಂಸದರು, ಪ್ರಮುಖರ ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

        ಇದೀಗ ಸಂಧಾನ ಪ್ರಯತ್ನ ಆರಂಭವಾಗಿದೆ. ಸದಾನಂದಗೌಡರು ಹಿರಿಯ ನಾಯಕ ಸತೀಶ್‌ ಗಮನಕ್ಕೆ ಎಲ್ಲವನ್ನೂ ತಂದಿದ್ದಾರೆ. ವರಿಷ್ಠ ನಾಯಕರೂ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ಸದಾನಂದಗೌಡ ಮತ್ತು ಇತರ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

        ಪಕ್ಷದಲ್ಲಿನ ಕೆಲವು ಘಟನೆಗಳು ನನಗೆ ಬೇಸರ ಉಂಟುಮಾಡಿವೆ. ಇದನ್ನೆಲ್ಲ ವರಿಷ್ಠರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ಆದರೆ, ಬಿಜೆಪಿ ತೊರೆದು ಜೆಡಿಎಸ್‌ ಸೇರುವ ಪ್ರಶ್ನೆಯೇ ಇಲ್ಲ. ಅಂಥ ಸಂದರ್ಭ ಎದುರಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವೆ.
        - ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ

        ಡಿವಿಎಸ್‌ ಮುನಿಸಿಗೆ ಕಾರಣಗಳೇನು?

        - ಪ್ರಮುಖ ಸ್ಥಾನ ನೀಡುವ ವರಿಷ್ಠರ ಭರವಸೆ ಈಡೇರದೇ ಇರುವುದು
        - ಅಧ್ಯಕ್ಷ ಸ್ಥಾನಕ್ಕೆ ಅನಂತಕುಮಾರ್‌ ಬೇರೆ ಹೆಸರುಗಳನ್ನು ಪ್ರಸ್ತಾಪಿಸುತ್ತಿರುವುದು
        - ಅನಂತ್‌ ತಾಳಕ್ಕೆ ತಕ್ಕಂತೆ ರಾಜ್ಯದ ಇತರ ನಾಯಕರು ಕುಣಿಯುತ್ತಿರುವುದು
        - ಪಕ್ಷದ ಪ್ರಮುಖ ನಿರ್ಧಾರಗಳಿಂದ ಉದ್ದೇಶಪೂರ್ವಕವಾಗಿ ತಮ್ಮನ್ನು ಹೊರಗಿಡುತ್ತಿರುವುದು
        - ಪಕ್ಷದ ಹೈಕಮಾಂಡ್‌ ಕೂಡ ಎಲ್ಲವನ್ನೂ ನೋಡಿ ಮಧ್ಯೆ ಪ್ರವೇಶಿಸದೆ ಮೌನ ವಹಿಸಿರುವುದು

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus