Udayavani | Feb 18, 2013
ಬಾಳೆಹೊನ್ನೂರು: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ಚುನಾವಣಾ ಪ್ರಣಾಳಿಕೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಜಾಗ್ರ ಹೋಬಳಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ಬಾರಿ ಮಂಡಿಸಿದ ಬಜೆಟ್‌ನ ಹಣವೇ ಖರ್ಚಾಗಿಲ್ಲ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ 56 ಲಕ್ಷ ಕೋಟಿ ರೂ. ಸಾಲತಂದು ಅಭಿವೃದ್ಧಿ ನಡೆಸಿದ್ದರು. ಆದರೆ ಬಿಜೆಪಿ ಸರ್ಕಾರ 1.29 ಲಕ್ಷ ಸಾವಿರ ಕೋಟಿ ಸಾಲತಂದು ಅಭಿವೃದ್ಧಿ ನಡೆಸುತ್ತಿದೆ. ಸಾಲತಂದ ಹಣ ಮಠಮಂದಿರಗಳಿಗೆ ದಾನಮಾಡುತ್ತಿದೆ. ಇದು ಮುಂದಿನ ವಿಧಾನಸಭೆ ಚುನಾವಣೆ ಗಿಮಿಕ್ ಆಗಿದೆ ಎಂದು ಲೇವಡಿ ಮಾಡಿದರು.
ಬೆಂಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯ ಸೀಗೋಡು ಸಮೀಪ ನವೋದಯ ವಿದ್ಯಾಲಯಕ್ಕೆ ನಿರ್ಮಿಸುತ್ತಿರುವ ಮೇಲ್ಸೇತುವೆ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಪರ್ತಕರ್ತರು ಪ್ರಶ್ನಿಸಿದಾಗ, ಸಿಪಿಡಬುÉ Âಡಿ ಮುಖ್ಯಕಾರ್ಯ ಅಭಿಯಂತರೊಂದಿಗೆ ಚರ್ಚಿಸಿ ಕಾಮಗಾರಿ ಮತ್ತೆ ಆರಂಭಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಅನುದಾನದಲ್ಲಿ ಬಿದರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವ್ಯರ್ಥ ಚೆಕ್ ಡ್ಯಾಂ ಬಗ್ಗೆ ಗಮನಸೆಳೆದಾಗ, ಸಂಬಂಧಪಟ್ಟ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ, ತಪ್ಪಿಸಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಶೃಂಗೇರಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಡಿಪೋ ಪ್ರಾರಂಭಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಡೀಪೋ ಪ್ರಾರಂಭವಾದಲ್ಲಿ ಉದ್ಯೋಗ ಸೃಷ್ಟಿ ಆಗುವುದಲ್ಲದೇ ರಾಜ್ಯ ಹಾಗೂ ಹೊರ ರಾಜ್ಯದಿಂದ ಶೃಂಗೇರಿಗೆ ಬರುವ ಭಕ್ತರಿಗೆ ಅನುಕೂಲವಾಗುವುದೆಂದು ತಿಳಿಸಿದರು.
ಚರ್ಚೆ ನಡೆಸಿಲ್ಲ: ಶೃಂಗೇರಿ ಕ್ಷೇತ್ರದ ವಿಧಾನಸಭಾ ಅಭ್ಯರ್ಥಿ ಆಯ್ಕೆ ಕುರಿತು ಇನ್ನು ಹೈಕಮಾಂಡ್ ಜೊತೆ ಚರ್ಚೆ ನಡೆಸಿಲ್ಲ. ಸದ್ಯಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಚುನಾವಣೆಗೆ ಒತ್ತು ನೀಡಲಾಗಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ಕೆಪಿಸಿಸಿ ಸದಸ್ಯರಾದ ಹಸನಬ್ಬ ಹಾಗೂ ತನಗೆ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಪಕ್ಷದ ಸಂಘಟನೆ ಹಾಗೂ ಚುನಾವಣೆಯಲ್ಲಿ ಪಕ್ಷದ ಜಯಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಚನ್ನಕೇಶವ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಎಸ್ ಜಯಪ್ರಕಾಶ್, ಗ್ರಾ.ಪಂ. ಸದಸ್ಯರಾದ ಬಿ.ಕೆ.ಮಧುಸೂದನ್, ಮಹಮ್ಮದ್ ಹನೀಫ್, ವಾಟ್‌ಕುಡಿಗೆ ಮಹೇಶ್ ಇದ್ದರು.