ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮುಂಬೈಗೆ ಸಂಚರಿಸುವ ರಾಜ್ಯದ ಜನರ ಅನುಕೂಲಕ್ಕಾಗಿ ಚಾಲುಕ್ಯ ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿಯಿಂದ ನೇರವಾಗಿ ಮುಂಬೈಗೆ ಓಡಿಸಬೇಕೆಂದು ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಕೇಂದ್ರ ರೈಲ್ವೆ ಸಚಿವ ಪವನ್ ಕುಮಾರ ಬನ್ಸಲ್ ಅವರನ್ನು ಒತ್ತಾಯಿಸಿದ್ದಾರೆ.ಪ್ರಸ್ತುತ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಪಾಂಡಿಚೇರಿಯಿಂದ ಮುಂಬೈಗೆ ಸಾಗುತ್ತದೆ. ರೈಲು ಭರ್ತಿಯಾಗಿ ಬರುವುದರಿಂದ ಹುಬ್ಬಳ್ಳಿಯಿಂದ ಮುಂಬೈಗೆ ಹೋಗುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಚಾಲುಕ್ಯ ಎಕ್ಸ್‌ಪ್ರೆಸ್ ರೈಲನ್ನು ಮುಂಬೈಯಿಂದ ಹುಬ್ಬಳ್ಳಿವರೆಗೆ ಓಡಿಸಬೇಕೆಂದು ಕೋರಿದ್ದಾರೆ.ಹುಬ್ಬಳ್ಳಿ-ಗುಲ್ಬರ್ಗ ಸಂಪರ್ಕ ಕಲ್ಪಿಸಿ: ಬ್ರಾಡ್‌ಗೆàಜ್ ಕಾಮಗಾರಿ ಪೂರ್ಣಗೊಂಡು ದಶಕ ಗತಿಸಿದರೂ ನೈರುತ್ಯ ರೈಲ್ವೆ ವಲಯ ಕೇಂದ್ರ ಹುಬ್ಬಳ್ಳಿ ಹಾಗೂ ಗುಲ್ಬರ್ಗ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಒದಗಿಸಲಾಗಿಲ್ಲ. ಉಭಯ ನಗರಗಳ ಜನರ ಅನುಕೂಲಕ್ಕಾಗಿ ನೂತನ ರೈಲು ವ್ಯವಸ್ಥೆ ಕಲ್ಪಿಸಬೇಕು. ಗುಲ್ಬರ್ಗ ನಗರವು ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಇರುವುದರಿಂದ ಉಭಯ ವಲಯಗಳ ಪ್ರಧಾನ ವ್ಯವಸ್ಥಾಪಕರು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ರೈಲು ಸೇವೆ ಒದಗಿಸಲು ಮುಂದಾಗಬೇಕು.ವ್ಯವಸ್ಥಾಪಕರ ಸಭೆ ಮಾಡಿ: ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ, ಮಧ್ಯ ರೈಲ್ವೆ ಹಾಗೂ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಸಭೆ ಆಯೋಜಿಸಿ ಸಮಸ್ಯೆಗಳನ್ನು ಬಗೆಹರಿಸುವುದು ಅವಶ್ಯವಾಗಿದೆ. ಎಲ್ಲ ವ್ಯವಸ್ಥಾಪಕರ ಸಭೆ ಹುಬ್ಬಳ್ಳಿಯಲ್ಲಿ ಸಚಿವ ಬನ್ಸಲ್‌ರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಯಬೇಕು. ಇದರಿಂದ ಹಲವಾರು ಸಮಸ್ಯೆಗಳು ಪರಿಹಾರಗೊಂಡು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.ರಾಜ್ಯ ರಾಜಧಾನಿಯಿಂದ ದೇಶದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸದ್ಯ ವಾರಕ್ಕೆ ಮೂರು ದಿನ ಮಾತ್ರ ಸಂಚರಿಸುತ್ತಿದ್ದು, ಇದನ್ನು ಪ್ರತಿ ದಿನ ಸಂಚರಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಮಿತ್ತಲ್‌ಗೆ ಕೋರಿಕೆ: ಹುಬ್ಬಳ್ಳಿ ಹಾಗೂ ಲೋಂಡಾ ಮಾರ್ಗದಲ್ಲಿ ಅಳ್ನಾವರದಿಂದ ದಾಂಡೇಲಿವರೆಗೆ ಗೇಜ್ ಪರಿವರ್ತನೆಯಾಗುವುದು ಅವಶ್ಯವಾಗಿದೆ. ಅಳ್ನಾವರದಿಂದ ದಾಂಡೇಲಿವರೆಗಿನ 28 ಕಿ.ಮೀ. ಬ್ರಾಡ್‌ಗೆàಜ್‌ಗೆ ಪರಿವರ್ತಿಸದಿದ್ದರಿಂದ ಅಲ್ಲಿನ ಜನರು ರೈಲು ಸೇವೆಯಿಂದ ವಂಚಿತರಾಗಬೇಕಾಗಿದೆ. ಕೂಡಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಡಾ| ಪಾಟೀಲ ಪುಟ್ಟಪ್ಪ ರೈಲ್ವೆ ಮಂಡಳಿ ಅಧ್ಯಕ್ಷ ವಿನಯ ಮಿತ್ತಲ್‌ರಲ್ಲಿ ಕೋರಿದ್ದಾರೆ.