Udayavani | Feb 18, 2013
ಗೋವಾ : ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ರಾಬಿನ್ ಉತ್ತಪ್ಪ ಅವರ ಬಿರುಸಿನ ಶತಕಗಳ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 47 ರನ್‌ಗಳ ಜಯ ದಾಖಲಿಸಿದೆ. ಇದರೊಂದಿಗೆ ಸತತ 4 ಜಯದೊಂದಿಗೆ ಅಜೇಯವಾಗಿ ಉಳಿದಿರುವ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 305 ರನ್ ಗಳಿಸಿದರೆ, ಕಠಿನ ಗುರಿ ಬೆಂಬತ್ತಿದ ಹೈದರಾಬಾದ್ ಎಸ್.ಎಲ್. ಅಕ್ಷಯ್ ಮತ್ತು ನಾಯಕ ಸ್ಟುವರ್ಟ್ ಬಿನ್ನಿ ದಾಳಿಗೆ ತತ್ತರಿಸಿ 46.4 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟಾಯಿತು.

ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ (84 ರನ್, 76 ಎಸೆತ, 8 ಬೌಂಡರಿ) ಮತ್ತು ನಾಯಕ ಬಿ. ಸಂದೀಪ್ (72 ರನ್, 77 ಎಸೆತ, 2 ಬೌಂಡರಿ, 1 ಸಿಕ್ಸರ್) ತೃತೀಯ ವಿಕೆಟಿಗೆ 140 ರನ್ ಪೇರಿಸಿ ಹೈದರಾಬಾದ್ ತಂಡವನ್ನು ಆಧರಿಸಿದರು. ಆದರೆ ಇವರಿಬ್ಬರು ಔಟಾಗುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿತು. ಕರ್ನಾಟಕ ಪರ ಮಧ್ಯಮ ವೇಗಿಗಳಾದ ಅಕ್ಷಯ್ ಮತ್ತು ಬಿನ್ನಿ ತಲಾ 4 ವಿಕೆಟ್ ಪಡೆದು ಗಮನ ಸೆಳೆದರು.

ಇದಕ್ಕೂ ಮುನ್ನ ರಾಹುಲ್ ಮತ್ತು ಉತ್ತಪ್ಪ ಕರ್ನಾಟಕಕ್ಕೆ ಅಮೋಘ ಆರಂಭ ಒದಗಿಸಿದರು. ವೈಯಕ್ತಿಕ ಶತಕ ಬಾರಿಸಿದ ಈ ಜೋಡಿ ಮೊದಲ ವಿಕೆಟಿಗೆ 206 ರನ್ ಪೇರಿಸಿ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿತು. ರಾಹುಲ್ 107 ಎಸೆತಗಳಲ್ಲಿ 110 ರನ್ ಸಿಡಿಸಿದರೆ (9 ಬೌಂಡರಿ), ಉತ್ತಪ್ಪ 108 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ 103 ರನ್ ಚಚ್ಚಿದರು. 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಮನೀಷ್ ಪಾಂಡೆ 42 ರನ್ ಗಳಿಸಿದರು. ಅನಂತರದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ-9 ವಿಕೆಟಿಗೆ 305 (ರಾಹುಲ್ 110, ಉತ್ತಪ್ಪ 103, ಮನೀಷ್ ಪಾಂಡೆ 42, ಆಶಿಶ್ ರೆಡ್ಡಿ 88ಕ್ಕೆ 3, ಚಾಮ ಮಿಲಿಂದ್ 57ಕ್ಕೆ 2). ಹೈದರಾಬಾದ್ 46.4 ಓವರ್‌ಗಳಲ್ಲಿ 258 (ಹನುಮ ವಿಹಾರಿ 84, ಬಿ. ಸಂದೀಪ್ 72, ಬೆಂಜಮಿನ್ ಥಾಮಸ್ 24, ಎಸ್.ಎಲ್. ಅಕ್ಷಯ್ 50ಕ್ಕೆ 4, ಸ್ಟುವಟ್ ಬಿನ್ನಿ 56ಕ್ಕೆ 4).