Tuesday, May 21, 2013
Last Updated: 9:25:55 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೆಪಿಸಿಸಿ ಪದಾಧಿಕಾರಿಗಳ ಆಕ್ಷೇಪ
      • Udayavani | Feb 18, 2013

        ಬೆಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡುವ ವಿಚಾರದಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿದ ಪಕ್ಷದ ನಾಯಕತ್ವವನ್ನು ಕೆಪಿಸಿಸಿ ಪದಾಧಿಕಾರಿಗಳೇ ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆಯಿತು.

        ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕೆಲವು ಪದಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ವಿಚಾರದಲ್ಲಿ ಸರ್ಕಾರಕ್ಕೆ ಸಹಕಾರ ನೀಡಲು ಮುಂದಾಗಿದ್ದರ ಔಚಿತ್ಯವನ್ನು ಪ್ರಶ್ನಿಸಿದರು.

        ಸ್ಥಳೀಯ ಸಂಸ್ಥೆಗಳ ಚುನಾವಣೆ ಸರಿಯಾದ ಸಮಯಕ್ಕೆ ನಡೆಯಬೇಕು ಎಂಬುದು ದಿ. ರಾಜೀವ್‌ ಗಾಂಧಿ ಅವರ ಕನಸು. ಇದಕ್ಕಾಗಿಯೇ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು. ವಸ್ತುಸ್ಥಿತಿ ಹೀಗಿರುವಾಗ ರಾಜೀವ್‌ ಗಾಂಧಿ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

        ಇದಕ್ಕೆ ಪ್ರತಿಯಾಗಿ ವೇದಿಕೆಯಲ್ಲಿದ್ದ ನಾಯಕರು 'ರಾಜ್ಯದಲ್ಲಿ ಪ್ರಭುತ್ವ ವಿರೋಧಿ ಅಲೆ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಪಕ್ಷಕ್ಕೆ ಅನುಕೂಲಕರವಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆದರೇ ಪಕ್ಷದ ಮುನ್ನೆಡೆಗೆ ತಡೆಯೊಡ್ಡುವ ಸಾಧ್ಯತೆಯಿತ್ತು. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಮುಂದಕ್ಕೆ ಹೋಗಲಿ ಎಂಬ ಬಯಕೆಯಿತ್ತೇ ಹೊರತು ಸರ್ಕಾರದೊಂದಿಗೆ ಕಾಂಗ್ರೆಸ್‌ ಸೇರಿಕೊಂಡಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.

        ಪಕ್ಷೇತರರ ಸೇರ್ಪಡೆಗೆ ಮಲ್ಲಾಜಮ್ಮ ವಿರೋಧ

        ಪಕ್ಷೇತರರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಕೆಪಿಸಿಸಿ ನಡೆಗೆ ಕಾಂಗ್ರೆಸ್‌ ನಾಯಕಿ ಮಲ್ಲಾಜಮ್ಮ ಸಭೆಯಲ್ಲೇ ವಿರೋಧ ವ್ಯಕ್ತಪಡಿಸಿದರು. ನಿಷ್ಟಾವಂತರನ್ನು ಕಡೆಗಣಿಸಿ ವಲಸಿಗರಿಗೆ ಅವಕಾಶ ನೀಡುವುದು ಸರಿಯಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು ಎಂದು ಉದ್ವೇಗದಿಂದ ಅವರು ಹೇಳಲು ಹೊರಟಾಗ ಇತರ ನಾಯಕರು ಅವರನ್ನು ಸಮಾಧಾನ ಪಡಿಸಿದರು ಎನ್ನಲಾಗಿದೆ.

        ಆದರೆ, ಮಲ್ಲಾಜಮ್ಮ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಸಭೆಯಲ್ಲಿ ನೀಡಿದ ಒಂದು ಹೇಳಿಕೆ ಬಗ್ಗೆ ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಆರ್‌.ವಿ. ದೇವರಾಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಕೆಲ ಕಾಲ ಗೊಂದಲಮಯ ವಾತಾವರಣವೂ ನಿರ್ಮಾಣವಾಗಿತ್ತು.

        ಸ್ಥಳೀಯ ಸಂಸ್ಥೆ ಚುನಾವಣೆಗೆ ಅರ್ಹರಿಗೆ ಟಿಕೆಟ್‌ ನೀಡಬೇಕು. ಮಧ್ಯರಾತ್ರಿಯಲ್ಲಿ ಟಿಕೆಟ್‌ ನೀಡುವ ಪ್ರವೃತ್ತಿ ಈ ಬಾರಿ ಇರಬಾರದು ಎಂದು ಮಲ್ಲಾಜಮ್ಮ ಹೇಳಿದ ಮಾತಿಗೆ ದೇವರಾಜ್‌ ತೀವ್ರವಾಗಿ ಆಕ್ಷೇಪಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು ಎಂದು ಮೂಲಗಳು ಹೇಳಿವೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus